Home Blog Page 8

GKVKಯಲ್ಲಿ ವಿಭಿನ್ನ ‘ರೈತ ಸಂತೆ’ ಸಂಭ್ರಮ: ಜನಮನ ಸೆಳೆದ ನೇರಳೆ ಜೂಸ್ – ಎತ್ತಿನ ಬಂಡಿ ಸವಾರಿ

BENGALURU : ಬೆಂಗಳೂರಿನ ಜಿ.ಕೆ.ವಿ.ಕೆ (GKVK) ಆವರಣದ ಗಣಪತಿ ದೇವಸ್ಥಾನದ ಸಮೀಪವಿರುವ ಗುಂಡು ತೋಪಿನಲ್ಲಿ ಈ ತಿಂಗಳ ‘ರೈತ ಸಂತೆ’ಯನ್ನು (Raitha Santhe) ಅತ್ಯಂತ ವಿಭಿನ್ನ ಹಾಗೂ ಯಶಸ್ವಿಯಾಗಿ ನಡೆಯಿತು. ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಆಯೋಜಿಸಲಾಗಿದ್ದ ಈ ಸಂತೆಯು ನವೀನ ಉತ್ಪನ್ನಗಳು ಮತ್ತು ವೈವಿಧ್ಯಮಯ ಗ್ರಾಮೀಣ ಚಟುವಟಿಕೆಗಳ ಮೂಲಕ ನಗರವಾಸಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಗ್ರಾಹಕರನ್ನು ಆಕರ್ಷಿಸಿದ ವಿಶೇಷ ಉತ್ಪನ್ನಗಳು ಈ ಬಾರಿಯ ರೈತ ಸಂತೆಯಲ್ಲಿ ರೈತರು ನೇರವಾಗಿ ತಂದು ಮಾರಾಟ ಮಾಡಿದ ಹಲವು ವಿಶಿಷ್ಟ ಉತ್ಪನ್ನಗಳು ಸಾರ್ವಜನಿಕರ ವಿಶೇಷ ಗಮನ ಸೆಳೆದವು.

GKVK - RAITHA SANTHE, BENGALURU

ನೇರಳೆ ಜೂಸ್ ಶಾಟ್ಸ್: ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ, ನೈಸರ್ಗಿಕ ರುಚಿ ಮತ್ತು ತಾಜಾತನದಿಂದ ಕೂಡಿದ ಈ ಆರೋಗ್ಯಪೂರ್ಣ ಪಾನೀಯ ಬೇಸಿಗೆಗೆ ಉತ್ತಮ ಪೌಷ್ಟಿಕ ಆಹಾರವಾಗಿ ಮೆಚ್ಚುಗೆ ಪಡೆಯಿತು. ಸ್ವೀಟ್ ಕಾರ್ನ್ ಸುಲಿಯುವ ಯಂತ್ರ: ಸಿಹಿ ಜೋಳದ ಕಾಳುಗಳನ್ನು ವೇಗವಾಗಿ ಮತ್ತು ಸುಲಭವಾಗಿ ಬೇರ್ಪಡಿಸುವ ಈ ಯಂತ್ರವು ರೈತರ ಸಮಯ ಮತ್ತು ಶ್ರಮವನ್ನು ಉಳಿಸುವ ತಂತ್ರಜ್ಞಾನವಾಗಿ ಸಾರ್ವಜನಿಕರ ಆಸಕ್ತಿಗೆ ಕಾರಣವಾಯಿತು.

ಮಳ್ಳು ಬದನೆಕಾಯಿ: ದೂರದ ವಿಜಯಪುರದಿಂದ ರೈತ ಮಹಿಳೆಯರು ತಂದಿದ್ದ ಪಾರಂಪರಿಕ ಅಡುಗೆಗಳ ವಿಶೇಷ ತರಕಾರಿಯಾದ ಮಳ್ಳು ಬದನೆಕಾಯಿ ನಾಟಿ ಬೆಳೆಗಳ ಮಹತ್ವವನ್ನು ಪರಿಚಯಿಸಿತು.

ಇತರ ನೈಸರ್ಗಿಕ ಉತ್ಪನ್ನಗಳು: ರಾಸಾಯನಿಕ ಮುಕ್ತ ‘ಪರಿಸರ ಸ್ನೇಹಿ ಆಯುರ್ವೇದಿಕ್ ಹೇರ್ ಡೈ’, ಪೌಷ್ಟಿಕಾಂಶ ಸಮೃದ್ಧ ‘ಮಲ್ಟಿ ಮಿಲೆಟ್ಸ್ ಮಿಶ್ರಣ’, ವಿಟಮಿನ್-ಸಿ ಯುಕ್ತ ‘ಬೆಟ್ಟದ ನೆಲ್ಲಿಕಾಯಿ’, ತಾಜಾ ಮಾವು, ಹಲಸು ಹಾಗೂ ನಾಟಿ ಸೌತೆಕಾಯಿ ಗ್ರಾಹಕರನ್ನು ಭಾರೀ ಪ್ರಮಾಣದಲ್ಲಿ ಸೆಳೆದವು.

ಇವುಗಳೊಂದಿಗೆ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಸಾವಯವ ಗೊಬ್ಬರಗಳು, ಜೈವಿಕ ಕೀಟನಾಶಕಗಳು, ಅಲಂಕಾರಿಕ ಗಿಡಗಳು, ಜೇನು ಕೃಷಿ ಉತ್ಪನ್ನಗಳು ಮತ್ತು ಅಲಂಕಾರಿಕ ಮೀನುಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯೂ ಇಲ್ಲಿದ್ದವು. ಮೃಗಾಲಯ ಪ್ರೇಮಿಗಳ ಸಂತೆ ವಾತಾವರಣದ ನಡುವೆ ಹಮ್ಮಿಕೊಳ್ಳಲಾಗಿದ್ದ ಎತ್ತಿನ ಬಂಡಿ ಸವಾರಿ ನಗರದ ಮಕ್ಕಳನ್ನು ವಿಶೇಷವಾಗಿ ಆಕರ್ಷಿಸಿತು.

‘ಕೃಷಿ ಪರಿಸರದೆಡೆಗೆ ನಮ್ಮ ನಡಿಗೆ’ಗೆ ಅಭೂತಪೂರ್ವ ಯಶಸ್ಸು ರೈತ ಸಂತೆಯ ಅಂಗವಾಗಿ ಆಯೋಜಿಸಲಾಗಿದ್ದ “ಕೃಷಿ ಪರಿಸರದೆಡೆಗೆ ನಮ್ಮ ನಡಿಗೆ” ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಭಾರಿ ಸ್ಪಂದನೆ ವ್ಯಕ್ತವಾಯಿತು.

ವೈದ್ಯರು, ಐಟಿ ಉದ್ಯೋಗಿಗಳು, ಗೃಹಿಣಿಯರು, ಯುವಕರು ಮತ್ತು ಹಿರಿಯರು ಸೇರಿದಂತೆ 150ಕ್ಕೂ ಹೆಚ್ಚು ನಗರವಾಸಿಗಳು ಸ್ವಯಂಪ್ರೇರಿತರಾಗಿ ಭಾಗವಹಿಸಿ, ಜಿ.ಕೆ.ವಿ.ಕೆ.ಯ ಹಸಿರು ಪರಿಸರದಲ್ಲಿ 6 ಕಿಲೋಮೀಟರ್ ನಡಿಗೆ ನಡೆಸಿದರು.

ನಡಿಗೆಯ ಸಂದರ್ಭದಲ್ಲಿ ಕೃಷಿ ಸಂಬಂಧಿತ ವಿಷಯಗಳ ಸಮಗ್ರ ಮಾಹಿತಿಯನ್ನು ಪಡೆದ ಸಾರ್ವಜನಿಕರು, ನಂತರ ರೈತ ಸಂತೆಗೆ ಭೇಟಿ ನೀಡಿ ವೈವಿಧ್ಯಮಯ ಉತ್ಪನ್ನಗಳನ್ನು ಖರೀದಿಸಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್.ವಿ. ಸುರೇಶ, ವಿಸ್ತರಣಾ ನಿರ್ದೇಶಕರಾದ ಡಾ. ವೈ.ಎನ್. ಶಿವಲಿಂಗಯ್ಯ, ಸಂಶೋಧನಾ ನಿರ್ದೇಶಕರಾದ ಡಾ. ಮುಡಲಗಿರಿಯಪ್ಪ ಹಾಗೂ ಸಹ ವಿಸ್ತರಣಾ ನಿರ್ದೇಶಕರಾದ ಡಾ. ಕೆ.ಪಿ. ರಘುಪ್ರಸಾದ್ ಸೇರಿದಂತೆ ಹಲವು ಉನ್ನತಾಧಿಕಾರಿಗಳು ಉಪಸ್ಥಿತರಿದ್ದರು.

ಮಕ್ಕಳಿಗಾಗಿ ವಿನೂತನ ಬೇಸಿಗೆ ಶಿಬಿರ

ಬೆಂಗಳೂರು, ಮೇ 24 (ಕರ್ನಾಟಕ ವಾರ್ತೆ):

ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿ ತರಬೇತಿ ಘಟಕದ ವತಿಯಿಂದ ಮೇ 25 ರಿಂದ 29 ರವರೆಗೆ ಮಕ್ಕಳಿಗಾಗಿ ವಿನೂತನ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದೆ.

ಈಗಾಗಲೇ ಎರಡು ಬೇಸಿಗೆ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಇದೀಗ ಅಂತಿಮ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. “ಮಕ್ಕಳಿಗೆ ಬಿತ್ತನೆಯಿಂದ ಬೆಳೆಯವರೆಗೆ-ಕೃಷಿ ಪಯಣ”  ಎಂದು ಶಿಬಿರಕ್ಕೆ ಹೆಸರಿಡಲಾಗಿದೆ. ಈ ಶಿಬಿರದಲ್ಲಿ 8 ರಿಂದ 14 ವರ್ಷ ವಯಸ್ಸಿನ ಮಕ್ಕಳು ಭಾಗವಹಿಸಬಹುದು. ನಗರದ ಮಕ್ಕಳಿಗೆ ಕೃಷಿಯ ನೈಜ ಅನುಭವ ನೀಡಲು ಇದೊಂದು ಉತ್ತಮ ಅವಕಾಶವಾಗಿದೆ.

ಹೆಚ್ಚಿನ ಮಾಹಿತಿಗಾಗಿ 98443 80742 ಮತ್ತು 85532 15997 ಸಂಪರ್ಕಿಸಬಹುದುಎಂದು ಪ್ರಕಟಣೆ ತಿಳಿಸಿದೆ.

Yummy Boiled Rice Ganji: ಮಂಗಳೂರಿನ ಕುಚ್ಚಲಕ್ಕಿ ಗಂಜಿ-ಮಾವಿನ ಮಿಡಿ ಉಪ್ಪಿನಕಾಯಿಗೆ ಫಿದಾ ಆಗೋದು ಗ್ಯಾರಂಟಿ!

ನಮ್ಮ ಹೆಮ್ಮೆಯ ಕರ್ನಾಟಕದಲ್ಲಿ ವಿವಿಧ ಪ್ರದೇಶಗಳಲ್ಲಿ ಮನುಷ್ಯರು ತಮ್ಮ ದೇಹವನ್ನು ತಂಪುಗೊಳಿಸಲು ವಿಶಿಷ್ಟ ಆಹಾರ ಪದ್ಧತಿಗಳನ್ನು ಅನುಸರಿಸುತ್ತಾರೆ. ಉತ್ತರ ಕರ್ನಾಟಕದ ಕಡೆ ಬಿಸಿಲಿಗೆ ‘ಜೋಳದ ಅಂಬಲಿ’ ಎಷ್ಟು ಪ್ರಸಿದ್ಧಿಯೋ, ಇತ್ತ ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ಬೇಸಿಗೆಯ ಬೇಗೆಯನ್ನು ನೀಗಿಸಲು ‘ರಾಗಿ ಅಂಬಲಿ ಅಥವಾ ರಾಗಿ ಮುದ್ದೆ ಊಟ’ ಎಷ್ಟು ಜನಪ್ರಿಯವೋ, ಅದೇ ರೀತಿ ಕರಾವಳಿ ಮತ್ತು ಮಂಗಳೂರು ಭಾಗದ ಜನರ ಮನೆಮನದ ಶಕ್ತಿ ಹಾಗೂ ನೆಮ್ಮದಿಯ ಆಹಾರ ಎಂದರೆ ಅದು “ಕುಚ್ಚಲಕ್ಕಿ ಗಂಜಿ ಮತ್ತು  ಚಟ್ನಿ”.
ಕರಾವಳಿ ಮತ್ತು ತುಳುನಾಡಿನ ಪ್ರತಿಯೊಬ್ಬರ ಮನೆಯಲ್ಲೂ ಅತ್ಯಂತ ಇಷ್ಟಪಟ್ಟು ಉಣ್ಣುವ ಈ ಗಂಜಿ ಊಟ, ಕೇವಲ ಹಸಿವನ್ನು ನೀಗಿಸುವ ಆಹಾರ ಮಾತ್ರವಲ್ಲ; ಅದು ನಮ್ಮ ಮಣ್ಣಿನ ಪರಂಪರೆ ಮತ್ತು ನೆಮ್ಮದಿಯ ಜೀವನದ ಸಂಕೇತವಾಗಿದೆ. ಮಣ್ಣಿನ ಒಲೆಯ ಉರಿಯಲ್ಲಿ, ಸಾಂಪ್ರದಾಯಿಕ ಮಡಿಕೆಯಲ್ಲಿ ಹದವಾಗಿ ಬೆಂದ ದಪ್ಪ ಕಂದು ಅಕ್ಕಿಯ (Mangalore Boiled Rice) ಬಿಸಿಬಿಸಿಯಾದ ಗಂಜಿಯು ಇಡೀ ದೇಹಕ್ಕೆ ತಂಪು ನೀಡುವುದಲ್ಲದೆ, ದಿನಪೂರ್ತಿ ದಣಿದ ದೇಹಕ್ಕೆ ಬೇಕಾದ ದೈಹಿಕ ಶಕ್ತಿಯನ್ನು (Energy) ಅತ್ಯಂತ ವೇಗವಾಗಿ ಒದಗಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ (Easy digestion), ಹೊಟ್ಟೆಯನ್ನು ಹಗುರವಾಗಿಸುವ ಅತ್ಯುತ್ತಮ ಆರೋಗ್ಯಕರ ಆಹಾರವಾಗಿದೆ.

​ಈ ಸರಳ ಗಂಜಿ ಊಟದ ಅಸಲಿ ಅದ್ಭುತ ಅಡಗಿರುವುದು ಅದರ ವಿಶಿಷ್ಟವಾದ ನೈಸರ್ಗಿಕ ಕಾಂಬಿನೇಷನ್‌ನಲ್ಲಿ! ಬಿಸಿ ಹಬೆ ಏಳುವ ಗಂಜಿಗೆ ಒಂದು ಚಮಚ ಶುದ್ಧವಾದ ಹಸುವಿನ ತುಪ್ಪ ಸೇರಿಸಿ, ಅದರ ಜೊತೆಗೆ ಕಲ್ಲಿನ ರುಬ್ಬುಗುಂಡಿನಲ್ಲಿ ಸಾಂಪ್ರದಾಯಿಕವಾಗಿ ಅರೆದ ಘಮಘಮಿಸುವ ತೆಂಗಿನಕಾಯಿ ಕೆಂಪು ಚಟ್ನಿ (ತೆಂಗಿನತುರಿ, ಒಣಮೆಣಸು, ಹುಣಸೆಹಣ್ಣು ಮತ್ತು ಈರುಳ್ಳಿಯ ಮಿಶ್ರಣ) ನೆಂಚಿಕೊಂಡು ತಿನ್ನುತ್ತಿದ್ದರೆ ಸಿಗುವ ತೃಪ್ತಿ ಹಾಗೂ ನೈಜ ಸುಖಕ್ಕೆ ಬೇರೆ ಯಾವುದೇ ರಾಜಶಾಹಿ ಔತಣಗಳೂ ಸಾಟಿಯಾಗಲಾರವು.

ಇದರೊಂದಿಗೆ ಗರಿಗರಿಯಾಗಿ ಸುಟ್ಟ ಅಥವಾ ಕರಿದ ಹಪ್ಪಳ, ಮಜ್ಜಿಗೆ ಮೆಣಸು ಮತ್ತು ನಾಲಿಗೆಗೆ ಚುರುಕು ಮುಟ್ಟಿಸುವ ಖಾರವಾದ ಉಪ್ಪಿನಕಾಯಿ ಇದ್ದರೆ ಈ ಗ್ರಾಮೀಣ ಊಟದ ಸವಿ ಸಂಪೂರ್ಣಗೊಳ್ಳುತ್ತದೆ. ದೇಹದ ರೋಗನಿರೋಧಕ ಶಕ್ತಿಯನ್ನು ಕಾಪಾಡುವ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಪರೋಕ್ಷವಾಗಿ ನೆರವಾಗುತ್ತದೆ.
ಈ ನೈಸರ್ಗಿಕ ಆಹಾರವು ಇಂದಿನ ಆಧುನಿಕ ದಿನಗಳಲ್ಲೂ ಪ್ರತಿಯೊಬ್ಬರಿಗೂ ಒಪ್ಪುವಂತಹ ಅತ್ಯುತ್ತಮ ‘ಹೆಲ್ತಿ ಡಯಟ್’ ಆಗಿದೆ. ಕರಾವಳಿಯ ಈ ಗತ ವೈಭವದ ಆಹಾರವನ್ನು ನಮ್ಮ ದೈನಂದಿನ ಬದುಕಿನ ಭಾಗವಾಗಿಸಿಕೊಂಡು, ನೈಸರ್ಗಿಕ ಆರೋಗ್ಯದ ಸವಿಯನ್ನು ನಮ್ಮದಾಗಿಸಿಕೊಳ್ಳೋಣ.
ಕರಾವಳಿ ಕಡೆಯ ಈ ಗಂಜಿ ಊಟ ಅಂದ್ರೆ  ಯಾರಿಗೆಲ್ಲ ಪಂಚಪ್ರಾಣ? ಗಂಜಿ ಲವರ್ಸ್ ಎಲ್ಲರೂ ಒಂದು ಲೈಕ್ ಕೊಡಿ ನೋಡೋಣ!
“ಕರಾವಳಿಯ ಈ ಅಮೃತದಂತಹ ಕುಚ್ಚಲಕ್ಕಿ ಗಂಜಿಯನ್ನು ನೀವು ಯಾವುದರ ಜೊತೆ ಸವಿಯಲು ಇಷ್ಟಪಡುತ್ತೀರಿ? ನಿಮ್ಮ ಮನೆಯ ಸ್ಪೆಷಲ್ ಕಾಂಬಿನೇಷನ್ ಅನ್ನು ಮರೆಯದೆ ಕಮೆಂಟ್ ಮಾಡಿ!” (ಮೂಲ: ಅಡುಗೆ ಮನೆ ಪೋಸ್ಟ್)

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವಿಶ್ವ ಆಮೆ ದಿನಾಚರಣೆ: ವಿಶೇಷ ಪೋಸ್ಟ್ ಕಾರ್ಡ್‍ಗಳ ಬಿಡುಗಡೆ

ಬೆಂಗಳೂರಿನ ಪ್ರಸಿದ್ಧ ಬನ್ನೇರುಘಟ್ಟ ಜೈವಿಕ (Bannerghatta Biological Park) ಉದ್ಯಾನವನದಲ್ಲಿ (ಬಿಬಿಪಿ) ಮೇ 23 ರಂದು ವಿಶ್ವ ಆಮೆ ದಿನವನ್ನು (World Turtle Day) ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಭಾರತೀಯ ಅಂಚೆ ಇಲಾಖೆ (ಇಂಡಿಯಾ ಪೋಸ್ಟ್), ಪೋಸ್ಟ್ ಕ್ರಾಸಿಂಗ್ ವೆಲ್ಫೇರ್ ಸೊಸೈಟಿ ಆಫ್ ಇಂಡಿಯಾ (Post Crossing Welfare Society of India) ಹಾಗೂ ಪೋಸ್ಟ್ ಕಾಡ್ರ್ಸ್ ವಿಲ್ಲೆ (PostCards Ville) ಸಂಸ್ಥೆಗಳ ಸಹಯೋಗದಲ್ಲಿ ಈ ವಿಶೇಷ ಸಂವಾದಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಆಚರಣೆಯ ಪ್ರಮುಖ ಆಕರ್ಷಣೆಯಾಗಿ, ಆಮೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಒಂಬತ್ತು ಶೈಕ್ಷಣಿಕ ಪೋಸ್ಟ್‍ಕಾರ್ಡ್‍ಗಳನ್ನು ಬಿಡುಗಡೆ ಮಾಡಲಾಯಿತು. ಈ ಪೋಸ್ಟ್ ಕಾರ್ಡ್‍ಗಳಲ್ಲಿ ನೆಲದ ಆಮೆಗಳು, ಕಡಲಾಮೆಗಳು, ಸಿಹಿನೀರಿನ ಆಮೆಗಳು ಪ್ರಮುಖವಾಗಿವೆ.

ಇವುಗಳ ಚಿತ್ರಣ ಹಾಗೂ ಈ ವಿಭಿನ್ನ ಜಾತಿಯ ಜೀವಿಗಳ ನಡುವೆ ಇರುವ ಶಾರೀರಿಕ ಮತ್ತು ಪರಿಸರ ವಿಜ್ಞಾನದ ವ್ಯತ್ಯಾಸಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ಒಳಗೊಳ್ಳಲಾಗಿದೆ.

ಸಾರ್ವಜನಿಕರು ಆಮೆ ಸಂರಕ್ಷಣಾ ಪ್ರಯತ್ನಗಳಿಗೆ ಹೇಗೆ ಕೈಜೋಡಿಸಬಹುದು ಎಂಬುದನ್ನು ಮನದಟ್ಟು ಮಾಡಲು ‘ರೌಂಡ್‍ಗ್ಲಾಸ್ ಸಸ್ಟೈನ್’ ಸಹಯೋಗದೊಂದಿಗೆ ಸಿದ್ಧಪಡಿಸಲಾದ ವಿಶೇಷ ಕಿರು ಸಂರಕ್ಷಣಾ ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು.

ಇದರ ಜೊತೆಗೆ, ಉದ್ಯಾನವನದ ಸರೀಸೃಪ ವಿಭಾಗದಲ್ಲಿ ಏಳು ಜೀವಿ ಗಾತ್ರದ ಕಡಲಾಮೆ ಮಾದರಿಗಳನ್ನು ಸಾರ್ವಜನಿಕ ವೀಕ್ಷಣೆಗೆ ಇಡಲಾಗಿತ್ತು. ಇದು ಪ್ರವಾಸಿಗರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ವಿವಿಧ ಆಮೆ ಪ್ರಭೇದಗಳು, ಪರಿಸರ ವ್ಯವಸ್ಥೆಯಲ್ಲಿ ಅವು ನಿರ್ವಹಿಸುವ ಪ್ರಮುಖ ಪಾತ್ರಗಳು ಮತ್ತು ಅವುಗಳ ವಿಶಿಷ್ಟ ರೂಪಾಂತರಗಳ ಬಗ್ಗೆ ಆಳವಾದ ಜ್ಞಾನವನ್ನು ಪಡೆಯಲು ಉತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟಿತು.

ಪ್ರಕೃತಿ ಮತ್ತು ವನ್ಯಜೀವಿಗಳ ಉಳಿವಿಗಾಗಿ ಇಂತಹ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮಗಳು ಇಂದಿನ ದಿನಗಳಲ್ಲಿ ಅತ್ಯಂತ ಅವಶ್ಯಕವಾಗಿವೆ ಎಂದು ಕಾರ್ಯಕ್ರಮದಲ್ಲಿ ಗಣ್ಯರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಉಪ ಮುಖ್ಯ ಪೋಸ್ಟ್‍ಮಾಸ್ಟರ್ ದಿನೇಶ್ ನಾರಾಯಣ್ ಹಾಗೂ ಬೆಂಗಳೂರು ದಕ್ಷಿಣದ ಅಂಚೆ ಕಚೇರಿಗಳ ಸಹಾಯಕ ಅಧೀಕ್ಷಕರಾದ ಶ್ರೀಮತಿ ನಳಿನಿ ಎನ್ ಭಾಗವಹಿಸಿದ್ದರು. ಇವರೊಂದಿಗೆ ಬಿಬಿಪಿಯ ಉಪ ನಿರ್ದೇಶಕರಾದ ಕುಮಾರಿ ಅನುಷಾ, ಪಶುವೈದ್ಯಕೀಯ ಸೇವೆಗಳ ಉಪ ನಿರ್ದೇಶಕರಾದ ಡಾ. ಪ್ರಯಾಗ್, ವಲಯ ಅರಣ್ಯ ಅಧಿಕಾರಿ ಆನಂದ್ ಮದನೆ ಹಾಗೂ ಉಪ ವಲಯ ಅರಣ್ಯ ಅಧಿಕಾರಿಗಳಾದ ಶ್ರೀಮತಿ ಅರ್ಪಿತಾ ಮತ್ತು ಮಹೇಶ್ ಉಪಸ್ಥಿತರಿದ್ದರು.

ಜಾಣಜಾಣೆಯರ ನಗೆ ಹಬ್ಬ– ಕಲಾವಿದರಿಗೆ 10 ಲಕ್ಷ ರೂ. ಉಚಿತ ಆರೋಗ್ಯ ವಿಮಾ ಪಾಲಿಸಿ 

 ಬೆಂಗಳೂರು: ಜಾಣಜಾಣೆಯರ ಸಾಹಿತಿ ಕಲಾವಿದರ ಟ್ರಸ್ಟ್ ವತಿಯಿಂದ “ಜಾಣಜಾಣೆಯರ ನಗೆ ಉತ್ಸವ”, (Jana Janeyara Utsava) ಟ್ರಸ್ಟ್ ಉದ್ಘಾಟನೆ ಹಾಗೂ ಕಲಾವಿದರ ನೆರವಿಗಾಗಿ ಆರೋಗ್ಯ ವಿಮಾ ಯೋಜನೆ (Free Insurance Policy) ಚಾಲನೆ ಕಾರ್ಯಕ್ರಮವು ಮೇ 31ರಂದು ಸಂಜೆ 5 ಗಂಟೆಗೆ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ (Chowdaiah Memorial Hall) ಅದ್ದೂರಿಯಾಗಿ ನಡೆಯಲಿದೆ ಎಂದು ಚೌಡಯ್ಯ ಮೆಮೋರಿಯಲ್ ಹಾಲ್ ಕಾರ್ಯದರ್ಶಿ ಡಾ. ಸುಮ ಸುಧೀಂದ್ರ ಮಾಧ್ಯಮಕ್ಕೆ ಮಾಹಿತಿ ನೀಡಿದರು. 
ಈ ಕುರಿತು ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಹಾಸ್ಯ ಕಲಾವಿದ ಎಂ.ಎಸ್. ನರಸಿಂಹಮೂರ್ತಿ, ಚೌಡಯ್ಯ ಮೆಮೋರಿಯಲ್ ಹಾಲ್ ಕಾರ್ಯದರ್ಶಿ ಡಾ. ಸುಮ ಸುಧೀಂದ್ರ, ಟ್ರಸ್ಟಿ ಉದಯ್ ಎಂ., ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ ಗೀತಾ ಸುರತ್ಕಲ್ , ಮೀನಾ ರವರು ಮಾಧ್ಯಮ ಉದ್ದೇಶಿಸಿ ಮಾತನಾಡಲಿದ್ದಾರೆ. ಕಳೆದ 30 ವರ್ಷಗಳಿಂದ ಜಾಣಜಾಣೆಯರು ಸಂಸ್ಥೆ ರಾಜ್ಯಾದ್ಯಂತ ನಗೆಜಾಗರಣೆ ಮತ್ತು ನಗೆ ಉತ್ಸವಗಳನ್ನು ಆಯೋಜಿಸಿ ಜನಮನ ಗೆದ್ದಿದೆ. ಭರತನಾಟ್ಯ, ಶಾಸ್ತ್ರೀಯ ಸಂಗೀತ, ಯಕ್ಷಗಾನ, ಮಿಮಿಕ್ರಿ ಸೇರಿದಂತೆ ವಿವಿಧ ಕಲಾ ಪ್ರಕಾರಗಳನ್ನು ಸದಭಿರುಚಿಯ ಹಾಸ್ಯದೊಂದಿಗೆ ಜನರಿಗೆ ತಲುಪಿಸುವ ಮೂಲಕ ಸಂಸ್ಥೆ ವಿಶಿಷ್ಟ ಗುರುತನ್ನು ಪಡೆದಿದೆ. ವಯೋಸಹಜ ಆರೋಗ್ಯ ಸಮಸ್ಯೆಗಳು ಅನೇಕ ಕಲಾವಿದರನ್ನು ಸಂಕಷ್ಟಕ್ಕೆ ತಳ್ಳುತ್ತಿರುವ ಹಿನ್ನೆಲೆಯಲ್ಲಿ ಬಡ ಹಾಗೂ ಅಶಕ್ತ ಕಲಾವಿದರಿಗೆ ನೆರವಾಗುವ ಉದ್ದೇಶದಿಂದ “ಜಾಣಜಾಣೆಯರ ಸಾಹಿತಿ ಕಲಾವಿದರ ಟ್ರಸ್ಟ್” ಸ್ಥಾಪನೆಯಾಗಿದೆ. ಪಂಚವೀಣಾ ಖ್ಯಾತಿಯ ಅಂತಾರಾಷ್ಟ್ರೀಯ ವೀಣಾ ವಿದುಷಿ ಡಾ. ಸುಮ ಸುಧೀಂದ್ರ ಟ್ರಸ್ಟ್‌ಗೆ ಕೈಜೋಡಿಸಿದ್ದು, ಸಮಾಜ ಸೇವಾ ನಿರತ ಸಚಿವರಾದ ದಿನೇಶ್ ಗುಂಡೂರಾವ್, ಎಂ.ಆರ್. ಸೀತಾರಾಮ್, ಎಂ. ಕೃಷ್ಣಪ್ಪ, ಡಿ.ಕೆ. ಸುರೇಶ್, ಪ್ರಿಯಾಕೃಷ್ಣ, ರಕ್ಷ ರಾಮಯ್ಯ ಹಾಗೂ ಹಿರಿಯ ವಕೀಲ ಚಂದ್ರಮೌಳಿ ಮಾರ್ಗದರ್ಶನದಲ್ಲಿ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ.
Jana Janeyara Utsava, Chowdaiah Memorial Hall, Malleswaram, Free Insurance Policy
ಉದ್ಘಾಟನಾ ದಿನವಾದ ಮೇ 31ರಂದು 60 ಕಲಾವಿದರಿಗೆ ತಲಾ 10 ಲಕ್ಷ ರೂ. ಮೌಲ್ಯದ ಆರೋಗ್ಯ ವಿಮಾ ಪಾಲಿಸಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಮೂರು ಗಂಟೆಗಳ ನಿರಂತರ ನಗೆರಸದೌತಣ ನೀಡಲು ರಾಜ್ಯದ ಖ್ಯಾತ ಹಾಸ್ಯ ಕಲಾವಿದರು ಭಾಗವಹಿಸಲಿದ್ದಾರೆ. ಮಿಮಿಕ್ರಿ ದಯಾನಂದ್, ಪ್ರೊ. ಎಂ. ಕೃಷ್ಣಗೌಡ, ಮಿಮಿಕ್ರಿ ಗೋಪಿ, ಗಂಗಾವತಿ ಪ್ರಾಣೇಶ್, ವೈ.ವಿ. ಗುಂಡೂರಾವ್, ಕೋಗಳಿ ಕೊಟ್ರೇಶ್, ಕಿರ್ಲೋಸ್ಕರ್ ಸತ್ಯ, ಶಿವಾರ ಉಮೇಶ್, ಪ್ರಹ್ಲಾದಾಚಾರ್ಯ ಹಾಗೂ ಎಂ.ಎಸ್. ನರಸಿಂಹಮೂರ್ತಿ ವಿಶೇಷ ನಗೆಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದು, ಐಪಿಎಲ್‌ನಲ್ಲಿ ಜನಪ್ರಿಯತೆ ಪಡೆದ ಡ್ರಮ್ಸ್ ದೇವ್ ವಿಶೇಷ ಪ್ರದರ್ಶನ ನೀಡಲಿದ್ದಾರೆ. ಮಿಮಿಕ್ರಿ ದಯಾನಂದ್ ಅವರ ಸಂಪೂರ್ಣ ತಂಡವೂ ರಂಜನಾ ಕಾರ್ಯಕ್ರಮ ನೀಡಲಿದೆ. 
ಕಲಾವಿದರ ನೆರವಿಗಾಗಿ ಈ ಕಾರ್ಯಕ್ರಮವನ್ನು ಸಹಾಯಾರ್ಥ ಟಿಕೆಟ್ ಪ್ರದರ್ಶನವಾಗಿ ಆಯೋಜಿಸಲಾಗಿದ್ದು, ಸಾರ್ವಜನಿಕರು ‘ಬುಕ್ ಮೈ ಶೋ’ (Book My Show) ಮೂಲಕ ಟಿಕೆಟ್ ಖರೀದಿಸಿ ಕಲಾವಿದರಿಗೆ ಬೆಂಬಲ ನೀಡಬಹುದು. ಮೇ 31ರಂದು ಸಂಜೆ 5 ಗಂಟೆಗೆ ಆರಂಭವಾಗುವ ಈ ನಗೆಹಬ್ಬ ಪ್ರೇಕ್ಷಕರನ್ನು ಮನರಂಜಿಸುವುದರ ಜೊತೆಗೆ ಅಶಕ್ತ ಕಲಾವಿದರಿಗೆ ಹೊಸ ಭರವಸೆ ಮತ್ತು ಚೈತನ್ಯ ನೀಡಲಿದೆ ಎಂದು ತಿಳಿಸಿದರು.

Credit Score and Health Loan Tips: ಚಿಕಿತ್ಸೆಗಾಗಿ ಸಾಲ ಬೇಕಾ? ಹಾಗಾದರೆ ನಿಮ್ಮ ಕ್ರೆಡಿಟ್ ಸ್ಕೋರ್ ಆರೋಗ್ಯ ಕಾಪಾಡಿಕೊಳ್ಳಿ!

ನಿಮ್ಮ ಸಾಲದ ಅರ್ಜಿಗೆ ಬ್ಯಾಂಕ್ “ಹೌದು” ಎನ್ನುವುದಕ್ಕೂ ಮುನ್ನ ನೋಡುವ ಮೊದಲ ವಿಷಯವೇ ನಿಮ್ಮ ಕ್ರೆಡಿಟ್ ಸ್ಕೋರ್. ಆದರೆ ಅನೇಕರು ತಮ್ಮ ಸಾಲದ ಅರ್ಜಿ ತಿರಸ್ಕೃತವಾದ ನಂತರವೇ ಅದರ ಮಹತ್ವವನ್ನು ಅರಿಯುತ್ತಾರೆ. ಆ ಮೇಲೆ ಭೂಕಂಪವಾದ ಅನುಭವಕ್ಕೆ ತುತ್ತಾಗುತ್ತಾರೆ.
ಕ್ರೆಡಿಟ್ ಸ್ಕೋರ್ ಎಂದರೇನು?
ಕ್ರೆಡಿಟ್ ಸ್ಕೋರ್ ಎಂದರೆ 300 ರಿಂದ 900 ರವರೆಗಿನ ಸಂಖ್ಯೆ. ಇದು ಸಾಲ ಮರುಪಾವತಿ ಕುರಿತಾದ ನಿಮ್ಮ ಆರ್ಥಿಕ ಶಿಸ್ತನ್ನು ತೋರಿಸುತ್ತದೆ. ಸ್ಕೋರ್ ಹೆಚ್ಚಿದ್ದಷ್ಟೂ, ಬ್ಯಾಂಕ್ ನಿಮಗೆ ಕಡಿಮೆ ಬಡ್ಡಿ ದರದಲ್ಲಿ, ತ್ವರಿತವಾಗಿ ಸಾಲ ನೀಡುವ ವಿಶ್ವಾಸ ವ್ಯಕ್ತಪಡಿಸುತ್ತದೆ.
ಭಾರತದಲ್ಲಿ ಆರ್‌ಬಿಐ ಪರವಾನಗಿ ಪಡೆದ ನಾಲ್ಕು ಕ್ರೆಡಿಟ್ ಬ್ಯೂರೋಗಳಿವೆ: ಸಿಬಿಲ್‌, ಎಕ್ಸ್‌ಪೀರಿಯನ್, ಈಕ್ವಿಫ್ಯಾಕ್ಸ್ ಮತ್ತು ಕ್ರಿಫ್‌ ಹೈ ಮಾರ್ಕ್. ಬ್ಯಾಂಕ್‌ಗಳು ಸಾಮಾನ್ಯವಾಗಿ ಸಿಬಿಲ್‌ ಸ್ಕೋರ್ ಅನ್ನು ಗಣನೆಗೆ ತೆಗೆದುಕೊಳ್ಳುತ್ತವೆ.
ಕ್ರೆಡಿಟ್ ಸ್ಕೋರ್ ಹೇಗೆ ಲೆಕ್ಕ ಹಾಕುವುದು?
ಕ್ರೆಡಿಟ್ ಸ್ಕೋರ್ ಲೆಕ್ಕಾಚಾರ ಹಾಕುವಾಗ ಮೇಲಿನ ನಾಲ್ಕೂ ಬ್ಯೂರೋಗಳು ಈ 5 ಅಂಶಗಳನ್ನು ಮುಖ್ಯವಾಗಿ ನೋಡುತ್ತವೆ:
1. ಸಮಯಕ್ಕೆ ಸರಿಯಾಗಿ ಮಾಸಿಕ ಕಂತು ಕಟ್ಟುವುದಕ್ಕೆ ನಿಗದಿಪಡಿಸುವ ಅಂಕ – 35 % : ತಿಂಗಳ ಕಂತು ಒಂದು ದಿನ ತಡವಾದರೂ ಸ್ಕೋರ್ 50-100 ಅಂಕ ಕಡಿಮೆಯಾಗುತ್ತಾ ಹೋಗುತ್ತದೆ.
2. ಸಾಲದ ಹಸಿವು ಹೆಚ್ಚಾಗಿದ್ದರೆ ಅಪಾಯ – 30% : ಸಾಲ ಪಡೆಯುವ ಮಿತಿ ₹1 ಲಕ್ಷ ಇದ್ದರೆ, ₹ 30,000 ಕ್ಕಿಂತ ಕಡಿಮೆ ಸಾಲ ಪಡೆಯಿರಿ. ಅದೇ 30% ಕ್ಕಿಂತ ಹೆಚ್ಚು ಸಾಲ ಪಡೆದರೆ “ಕ್ರೆಡಿಟ್ ಹಸಿವು ಹೆಚ್ಚು” ಎಂದು ಪರಿಗಣಿಸಲಾಗುತ್ತದೆ.
3. ಕ್ರೆಡಿಟ್ ಇತಿಹಾಸ ಎಷ್ಟು ಹಳೆಯದು – 15% : ಕ್ರೆಡಿಟ್ ಸ್ಕೋರ್ ಎಂಬುದು 10 ವರ್ಷ ಹಳೆಯ ನಿಮ್ಮ ಆರ್ಥಿಕ ಶಿಸ್ತನ್ನು ತೋರಿಸುತ್ತದೆ. ಹಾಗಾಗಿ ಆತುರಕ್ಕೆ ಬಿದ್ದು ನೀವೇನಾದರೂ ಹಳೆಯ ಸಾಲದ ಲೆಕ್ಕ ಚುಕ್ತ ಮಾಡಿಬಿಟ್ಟರೆ ನಿಮ್ಮ ಸ್ಕೋರ್‌ ಜೋಪಾನ ಎಂದಲ್ಲ.
4. ಸಾಲದ ಮಿಶ್ರಣ – 10% : ಗೃಹ ಸಾಲದಂತಹ ಸುರಕ್ಷಿತ ಸಾಲ ಮತ್ತು ವೈಯಕ್ತಿಕ ಸಾಲದಂತಹ ಅಸುರಕ್ಷಿತ ಸಾಲ ಎರಡೂ ಇದ್ದರೆ ಉತ್ತಮ.
5. ಹೊಸ ಸಾಲದ ಅರ್ಜಿಗಳು – 10% : 2–3 ತಿಂಗಳಲ್ಲಿ 4–5 ಬ್ಯಾಂಕುಗಳಲ್ಲಿ ಸಾಲಕ್ಕಾಗಿ ಅರ್ಜಿ ಹಾಕಿದರೆ ಸ್ಕೋರ್ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ.
ಕ್ರೆಡಿಟ್ ಸ್ಕೋರ್ ಎಷ್ಟು ಇದ್ದರೆ ಒಳ್ಳೆಯದು? ಈ ಬಗ್ಗೆ ಡಾ. ಭಾಸ್ಕರ್‌ ಅಧ್ವೆಂತ ಅವರು ನೀಡುವ ಸ್ಕೋರ್‌ ಸಲಹೆ ಹೀಗಿದೆ:
1. 750–900 ಅತ್ಯುತ್ತಮ: ಹೀಗಿದ್ದರೆ ವೈದ್ಯಕೀಯ ಸಾಲ ತಕ್ಷಣವೇ ಮಂಜೂರಾಗುತ್ತದೆ. ಇದರ ಮೇಲೆ ಬಡ್ಡಿಯೂ ಕಡಿಮೆ ಇರುತ್ತದೆ.
2. 700–749 ಉತ್ತಮ: ಸಾಲ ಸಿಗುತ್ತದೆ. ಆದಾಯ ದಾಖಲೆ ಕೇಳಬಹುದು.
3. 650–699 ಸಾಧಾರಣ: ಬಡ್ಡಿ ಹೆಚ್ಚು. ಸಹ-ಅರ್ಜಿದಾರ ಬೇಕಾಗಬಹುದು.
4, 650 ಕ್ಕಿಂತ ಕಡಿಮೆಯಿದ್ದರೆ ಕಳಪೆ: ಸಾಲ ತಿರಸ್ಕಾರ ಸಾಧ್ಯತೆ ಹೆಚ್ಚು.
ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಸರಿಪಡಿಸಿಕೊಳ್ಳಿ. ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ “ಮೆಡಿಕಲ್ ಲೋನ್” ಅಥವಾ “ಹೆಲ್ತ್ EMI” ಸೌಲಭ್ಯ ಪಡೆಯುವಾಗಲೂ ಬ್ಯಾಂಕ್‌ಗಳು 700+ ಸ್ಕೋರ್‌ ಅನ್ನು ನಿರೀಕ್ಷಿಸುತ್ತವೆ. ವೈದ್ಯಕೀಯ ತುರ್ತು ಸಂದರ್ಭದಲ್ಲಿ ಸ್ಕೋರ್ ಕಡಿಮೆ ಇದ್ದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ವಿಳಂಬವಾಗಬಹುದು ಎಂದು ಎಚ್ಚರಿಸುತ್ತಾರೆ ಡಾ. ಭಾಸ್ಕರ್‌ ಅಧ್ವೆಂತ.

ಸ್ಕೋರ್ ಅನ್ನು ಉಚಿತವಾಗಿ ನೋಡುವುದು ಹೇಗೆ?

RBI ನಿಯಮದಂತೆ, ವರ್ಷಕ್ಕೆ ಒಮ್ಮೆ ಕ್ರಿಬಿಲ್‌ ಅಥವಾ ಎಕ್ಸ್‌ಪೀರಿಯನ್ ವೆಬ್‌ಸೈಟ್‌ನಲ್ಲಿ ಉಚಿತವಾಗಿ ನಿಮ್ಮ ಸಂಪೂರ್ಣ ಕ್ರೆಡಿಟ್ ವರದಿಯನ್ನು ಪಡೆಯದುಕೊಳ್ಳಬಹುದು. ಅದಕ್ಕೆ ನಿಮ್ಮ ಪ್ಯಾನ್‌ ನಂಬರ್‌ ಬೇಕಾಗುತ್ತದೆ. ಮತ್ತು ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ಪ್ರತಿ ತಿಂಗಳು ಉಚಿತ ಸ್ಕೋರ್ ಅಪ್‌ಡೇಟ್ ಸಹ ಲಭ್ಯ.
ಕ್ರೆಡಿಟ್ ಸ್ಕೋರ್ ಕುರಿತಾದ ಸಾಮಾನ್ಯ ತಪ್ಪು ಕಲ್ಪನೆಗಳು:
1. “ಸಾಲವೇ ಮಾಡಿಲ್ಲ, ಹಾಗಾಗಿ ಸ್ಕೋರ್ ಚೆನ್ನಾಗಿದೆ”: ತಪ್ಪು.
ಕ್ರೆಡಿಟ್ ಇತಿಹಾಸ ಇಲ್ಲದಿದ್ದರೆ “NH/NA” ಎಂದು ಬರುತ್ತದೆ. ಬ್ಯಾಂಕ್‌ಗೆ ನಿಮ್ಮನ್ನು ನಂಬಲು ಆಧಾರವೇ ಇರುವುದಿಲ್ಲ.
2. “ಸಂಬಳ ಜಾಸ್ತಿ ಇದ್ದರೆ ಸ್ಕೋರ್ ಜಾಸ್ತಿ”: ಸಂಬಳವನ್ನು ಬ್ಯೂರೋ ನೋಡುವುದೇ ಇಲ್ಲ. ₹20,000 ಸಂಬಳದವರು 800 ಸ್ಕೋರ್ ಹೊಂದಬಹುದು, ₹2 ಲಕ್ಷ ಸಂಬಳದವರು 650 ಸ್ಕೋರ್ ಹೊಂದಿರಬಹುದು.

3. “ಒಂದೇ ಬಾರಿಗೆ ಸಾಲ ಸೆಟಲ್‌ಮೆಂಟ್‌ ಮಾಡಿದರೆ ಮುಗಿಯಿತು”: “ಸೆಟಲ್ಡ್‌” ಎಂಬ ದಾಖಲೆ ನಿಮ್ಮ ಕ್ರೆಡಿಟ್ ಸ್ಕೋರಿನ 7 ವರ್ಷದ ವರದಿಯಲ್ಲಿ ಬಾಕಿ ಉಳಿದಿರುತ್ತದೆ. ಪೂರ್ತಿ ಹಣ ಕಟ್ಟಿ “ಕ್ಲೋಸ್ಡ್” ಮಾಡಿಸಿ.

ಆರೋಗ್ಯ ಮತ್ತು ಹಣಕಾಸು: ಸಂಬಂಧ ಏನು?

1. ವೈದ್ಯಕೀಯ ತುರ್ತು: ನಿಮ್ಮ ಆರೋಗ್ಯ ಹದಗೆಟ್ಟು ಹಠಾತ್ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕೆಂದರೆ ಲಕ್ಷಾಂತರ ರೂಪಾಯಿ ಬೇಕಾಗಬಹುದು. ಅಂತಹ ತುರ್ತು ಸಂದರ್ಭಗಳಲ್ಲಿ 750+ ಕ್ರೆಡಿಟ್ ಸ್ಕೋರ್ ಇದ್ದರೆ ಹತ್ತೇ ನಿಮಿಷದಲ್ಲಿ ಹೆಲ್ತ್ ಲೋನ್‌ ಮಂಜೂರಾಗುತ್ತದೆ.

2. ಮಾನಸಿಕ ಒತ್ತಡ: ಕ್ರೆಡಿಟ್‌ ಸ್ಕೋರ್‌ ಕಳಪೆಯಾಗಿದ್ದು ಸಾಲ ತಿರಸ್ಕಾರವಾದರೆ ಅಥವಾ ಹೆಚ್ಚಿನ ಬಡ್ಡಿದರದ ಸಾಲ ಮಂಜೂರಾದರೆ ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
3. ಉತ್ತಮ ಸ್ಕೋರ್ = ನೆಮ್ಮದಿಯ ನಿದ್ರೆ ಎಂಬುದು ನಿಮ್ಮ ಆರೋಗ್ಯ ಮಂತ್ರವಾಗಿರಲಿ.
4. ವೃದ್ಧಾಪ್ಯ ಯೋಜನೆ: ನಿವೃತ್ತಿಯ ನಂತರ ಧುತ್ತನೆ ಎದುರಾಗುವ ಆರೋಗ್ಯ ಸಮಸ್ಯೆಗಗಳಿಗೆ, ಶಸ್ತ್ರಚಿಕಿತ್ಸೆಗೆ ಹಣ ಉಳಿತಾಯ ಮಾಡಿರುವುದು ಮತ್ತು ಉತ್ತಮ ಕ್ರೆಡಿಟ್ ಸ್ಕೋರ್ ಎರಡೂ ಸಹ ಬೇಕು.

ಡಾ. ಭಾಸ್ಕರ್ ಅಧ್ವೆಂತ ಅವರು ಕೊಡುವ 5 ಆರೋಗ್ಯಕರ ಸಲಹೆಗಳು:

1. ನೀವು ಕಟ್ಟಬೇಕಿರುವ ಸಾಲದ ಕಂತಿಗೆ ಅಲಾರಂ ಇರಿಸಿ: ಶಸ್ತ್ರಚಿಕಿತ್ಸೆ ಆದನಂತರ ಮುಂಚಿನ ಅರೋಗ್ಯ ಸ್ಥಿತಿಗೆ ತಲುಪಲು ಫಿಸಿಯೋಥೆರಪಿ ಅತ್ಯಗತ್ಯ. ಆದರೆ ಫಿಸಿಯೋಥೆರಪಿಯನ್ನು ನಗಣ್ಯ ಎಂದು ಪರಿಭಾವಿಸಿ ಕೆಲವರು ಅದನ್ನು ತಪ್ಪಿಸುತ್ತಾರೆ. ಈ EMI ಎಂಬುದು ಸಹ ನಿಮ್ಮ ಕ್ರೆಡಿಟ್‌ ಸ್ಕೋರ್‌ನಲ್ಲಿ ಜರೂರತ್ತು ಹೊಂದಿರುತ್ತದೆ. ಹಾಗಾಗಿ ಅದನ್ನು ತಪ್ಪಿಸಬೇಡಿ.
2. ಸಾಲ‌ದ ಕಂತನ್ನು ಪೂರ್ತಿಯಾಗಿ ಕಟ್ಟಿ: “ಮಿನಿಮಮ್‌ ಡ್ಯೂ” ಕಟ್ಟಿದರೆ ಬಡ್ಡಿ ಮತ್ತು ಸ್ಕೋರ್ ಎರಡಕ್ಕೂ ಹಾನಿಯುಂಟಾಗುತ್ತದೆ.
3. ವರ್ಷಕ್ಕೆ 2 ಬಾರಿ ಕ್ರೆಡಿಟ್‌ ವರದಿ ನೋಡಿ: ತಪ್ಪು ದಾಖಲೆ ನುಸುಳಿದ್ದರೆ 30 ದಿನದಲ್ಲಿ ಬ್ಯೂರೋಗೆ ದೂರು ನೀಡಿ ಸರಿಪಡಿಸಿಕೊಳ್ಳಿ.
4. ಹಳೆಯ ಕ್ರೆಡಿಟ್‌ ವರದಿಯನ್ನು ಉಳಿಸಿಕೊಳ್ಳಿ: ನೀವು ಪಡೆದ ಮೊದಲ ಸಾಲ ಕುರಿತಾದ ಕ್ರೆಡಿಟ್‌ ವರದಿ ನಿಮ್ಮ “ಹಣಕಾಸಿನ ಜನ್ಮ ಪ್ರಮಾಣಪತ್ರ” ಇದ್ದಂತೆ!
5. ತುರ್ತು ನಿಧಿ ಕ್ರೋಡೀಕರಿಸಿಟ್ಟುಕೊಳ್ಳಿ: 3 ತಿಂಗಳ ಸಾಲದ ಕಂತಿಗೆ ಸಮನಾದ ಹಣವನ್ನು ಎಫ್‌.ಡಿ. ಯಲ್ಲಿಡಿ. ವೈದ್ಯಕೀಯ ತುರ್ತಿನಲ್ಲಿ ಸಾಲ ಪಡೆಯಬೇಕಾದರೆ ಅನಗತ್ಯ ಕಿರಿಕಿರಿ ತಪ್ಪಿಸಬಹುದು.

ಡಾ. ಭಾಸ್ಕರ್ ಅಧ್ವೆಂತ ಅವರ ಬದ್ಧತೆ:

ನಾವು ಕೇವಲ ಭೌತಿಕವಾಗಿ ಶಸ್ತ್ರಚಿಕಿತ್ಸೆ ನೀಡುವುದಲ್ಲ, ರೋಗಿಗಳ ಸಂಪೂರ್ಣ ಯೋಗಕ್ಷೇಮಕ್ಕೆ ಬದ್ಧರು. ಹಣಕಾಸಿನ ಒತ್ತಡವು ರೋಗ ಗುಣವಾಗುವುದನ್ನು ವಿಳಂಬ ಮಾಡುತ್ತದೆ. ಹಾಗಾಗಿ ನಾವು ಹಣಕಾಸಿನ ಆರೋಗ್ಯದ ಬಗ್ಗೆಯೂ ಜಾಗೃತಿ ಮೂಡಿಸುತ್ತೇವೆ.

ನೆನಪಿಡಿ: ದೇಹದ ನೋವಿಗೆ ವೈದ್ಯರು ಇರುತ್ತಾರೆ. ಆದರೆ, ಹಣಕಾಸಿನ ನೋವು ಬರದಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಈ ಲೇಖನ ಕೇವಲ ಮಾಹಿತಿ ಮತ್ತು ಜಾಗೃತಿಗಾಗಿ. ವೈಯಕ್ತಿಕ ಹಣಕಾಸು ಸಲಹೆಗೆ ಪ್ರಮಾಣೀಕೃತ ಸಲಹೆಗಾರರನ್ನು ಮತ್ತು ಸಾಲದ ಅರ್ಹತೆಗೆ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ. ಹಣಕಾಸನ್ನು ಜೋಪಾನವಾಗಿ ನೋಡಿಕೊಳ್ಳಿ.

ನಿತ್ಯ ಪಂಚಾಂಗ 24.05.2026 SUNDAY ಭಾನುವಾರ

ಸೂರ್ಯಸಿದ್ಧಾಂತ ನಿತ್ಯ ಪಂಚಾಂಗ 24.05.2026 SUNDAY.ಭಾನುವಾರ
ಸಂವತ್ಸರ: ಪರಾಭವ
SAMVATSARA : PARABHAVA.
ಆಯಣ: ಉತ್ತರಾಯಣ
AYANA: UTTARAYANA.
ಋತು: ಗ್ರೀಷ್ಮ
RUTHU: GREESHMA.
ಮಾಸ: ಅಧಿಕ ಜೇಷ್ಠ
MAASA: ADHIKA JYESHTHA.
ಪಕ್ಷ: ಶುಕ್ಲ
PAKSHA: SHUKLA.
ತಿಥಿ: ಅಷ್ಟಮಿ
TITHI: ASHTAMI.
ಶ್ರದ್ದಾತಿಥಿ: ನವಮಿ
SHRADDHA TITHI: NAVAMI.
ವಾಸರ: ಆದಿತ್ಯವಾಸರ
VAASARA: ADITYAVAASARA.
ನಕ್ಷತ್ರ: ಮಾಘ
NAKSHATRA: MAGHA
ಯೋಗ: ವ್ಯಾಘಾತ
YOGA: VYAGHATA.
ಕರಣ: ಬವ
KARANA: BAVA.
ಸೂರ್ಯೋದಯ (Sunrise): 05:54
ಸೂರ್ಯಸ್ತ (Sunset): 06:54
ರಾಹುಕಾಲ (RAHU KAALA) : 04:30PM To 06:00PM.
ದಿನವಿಶೇಷ SPECIAL EVENT
24.05.2026
ದುರ್ಗಾಷ್ಟಮಿ.

ಪತ್ರಕರ್ತರ ವೃತ್ತಿ ಬದುಕಿನ ನೆನಪುಗಳಲ್ಲಿ ಮಿಂದೆದ್ದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಪ್ರಭಾಕರ್

ಬೆಂಗಳೂರು: ಯಾವುದೇ ವ್ಯಕ್ತಿ ಯಾವುದೇ ಕ್ಷೇತ್ರದಲ್ಲಿರಲಿ ಮೊದಲು ತಾಳ್ಮೆ, ಸಮಾಧಾನ ಮತ್ತು ಕೇಳುವ ವ್ಯವಧಾನ ಇದ್ದರೆ ಮಾತ್ರ ಅಂತಹ ಸಾಧಕ ವ್ಯಕ್ತಿ ಮಾಡಬಲ್ಲ. ಈ ಮೂರೂ ಗುಣಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಾನು ರೂಢಿಸಿಕೊಂಡಿದ್ದೇನೆ. ಕೋಲಾರ ಜಿಲ್ಲೆಯ ಜನ, ರಾಜ್ಯದ ಎಲ್ಲ ಪತ್ರಕರ್ತರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲವೆಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ (K.V.Prabhakar) ಹೇಳಿದರು.
ಇಲ್ಲಿನ ಕೆಜಿ ರಸ್ತೆಯ ಕಂದಾಯ ಭವನದ 3ನೇ ಮಹಡಿಯಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮಾಧ್ಯಮ- ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅದು 2013ರ ಸಮಯ. ಆಗ ಕನ್ನಡಪ್ರಭದಲ್ಲಿದ್ದ ನನಗೆ ಮಾಜಿ ರಾಮಚಂದ್ರಪ್ಪನವರು ಕರೆ ಮಾಡಿ ಸಿಎಂ ಅವರನ್ನು ಭೇಟಿಯಾಗುವಂತೆ ಹೇಳಿದರು. ವಿಶ್ವೇಶ್ವರ ಭಟ್ ಅವರಿಗೆ ಈ ವಿಷಯ ತಿಳಿಸಿದೆ. ಅವರ ಅನುಮತಿಯ ಮೇರೆಗೆ ಸಿಎಂ ಅವರನ್ನು ಭೇಟಿಯಾದೆ. ನಮ್ಮ ಜೊತೆ ಇದ್ದು ಮಾಧ್ಯಮ ನಿರ್ವಹಣೆ ಮಾಡುವಂತೆ ಸಿಎಂ ಹೇಳಿದರು.
ನಾನು ಒಂದು ವಾರ ಟೈಮ್ ಕೊಡಿ ಸರ್. ಎಷ್ಟು ಸಂಬಳ ಕೊಡ್ತೀರಿ ಸರ್? ಅಂತ ಕೇಳಿದೆ. ಏನು ಈ ಹುಡುಗ ಹೀಗೆ ಮಾತನಾಡ್ತಾನೆ? ಅಂತ ಸಿಎಂ ಕೇಳಿದ್ರು. ‘ಪತ್ರಿಕೆ ಬಿಡು, ನಮ್ಮೊಂದಿಗೆ ಬಂದು ಕೆಲಸ ಮಾಡು. ಇವರಿಗೆ ಸಂಬಳ ನಿಗದಿ ಮಾಡಿ’ ಅಂತ ಜೊತೆಗೆ ಇದ್ದ ಕೆಲ ಅಧಿಕಾರಿಗಳಿಗೆ ಹೇಳಿದರು. ಈ ವಿಷಯ ವಿಶ್ವೇಶ್ವರ್ ಭಟ್ ಅವರಿಗೆ ತಿಳಿಸಿದೆ. ಭಟ್ಟರು ಅನುಮತಿ ನೀಡಿದರು. ಆಗ ಸಿಎಂ ಅವರ ಮಾಧ್ಯಮ ಸಂಯೋಜಕನಾದೆ ಎಂದರು.

ಸಿದ್ದರಾಮಯ್ಯ ಅವರ ನೆರಳಿನೊಂದಿಗೆ 13 ವರ್ಷ ಕಳೆದಿದ್ದೇನೆ. ಅವರಿಂದ ಮೊಟ್ಟ ಮೊದಲು ನಾನು ಕಲಿತದ್ದು ತಾಳ್ಮೆ ಮತ್ತು ಸಮಾಧಾನ. 2013 ರಿಂದ 2018ರವರೆಗೆ ಅವರಿಂದ ಕಲಿಯಲು ಸಾಕಷ್ಟು ಸಮಯಾವಕಾಶ ಲಭಿಸಿತು. ಸಿಎಂ ಅವರಿಗೆ ಮೊದಲು ನನ್ನ ಧನ್ಯವಾದಗಳು ಸಲ್ಲುತ್ತವೆ ಎಂದರು.

ಪತ್ರಕರ್ತರ ಜೊತೆ ಇರುವಾಸೆ:
ಈ ಹೊಣೆಗಾರಿಕೆ ದೊರೆತಾಗ ಹೇಗೆ ನಿಭಾಯಿಸುವುದು? ಎನ್ನುವ ಪ್ರಶ್ನೆ ಕಾಡಿತು. ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಅವರನ್ನು ಭೇಟಿಯಾದೆ. ನಡುವೆ ಅಧಿಕಾರದಲ್ಲಿಲ್ಲದಿದ್ದಾಗ ಸಿದ್ದರಾಮಯ್ಯನವರು ಈಗೇನು ಮಾಡುತ್ತೀಯಪ್ಪ? ಅಂತ ಕೇಳಿದರು. ಕಷ್ಟ, ಸುಖ ಏನಾದರಾಗಲಿ ಸರ್… ನಾನು ನಿಮ್ಮೊಂದಿಗೆ ಇರುತ್ತೇನೆ ಎಂದೆ. ನನ್ನನ್ನು ಚೆನ್ನಾಗಿ ನೋಡಿಕೊಂಡರು ಎಂದರು.

ಸದಾ ಜೊತೆಯಲ್ಲಿದ್ದೇನೆ:
ಅಧಿಕಾರ ಇದ್ದಾಗ, ಇಲ್ಲದೆ ಇದ್ದಾಗಲೂ ಅವರ ಜೊತೆಯಲ್ಲಿಯೇ ಇದ್ದೇನೆ. 2023ರಲ್ಲಿ ಸಿದ್ದರಾಮಯ್ಯನವರು ಮತ್ತೆ ಸಿಎಂ ಆದರು. ನನಗೆ ಈ ಸ್ಥಾನ ಕರುಣಿಸಿದ್ದಾರೆ. ಎಲ್ಲ ಪತ್ರಕರ್ತರೂ ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಈ ಸ್ಥಾನಕ್ಕೆ ಬಂದಮೇಲೆ ಸಿಎಂ ಜೊತೆ ಕುಳಿತುಕೊಂಡು ಮನವಿ ಪತ್ರ ಸ್ವೀಕರಿಸುವುದೇ? ಅಥವಾ ಪತ್ರಕರ್ತರಿಗೆ ಏನಾದರೂ ನೆರವು ಮಾಡುವುದೇ? ಎನ್ನುವ ಪ್ರಶ್ನೆ ಕಾಡಿತು. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ಸಹಾಯ ಮಾಡಲು ಪ್ರಯತ್ನ ಮಾಡಿದ್ದೇನೆ ಎಂದರು.

ಕೆಯುಡಬ್ಲೂೃಜೆಗೆ ಕೃತಜ್ಞತೆ:
ಪತ್ರಕರ್ತರ ದುಃಖ, ದುಮ್ಮಾನಗಳನ್ನು ಅರಿತಿದ್ದೇನೆ. ನಾನು ಸಿಎಂ ಮೀಡಿಯಾ ಅಡ್ವೈಸರ್ ಆಗಿದ್ದರೂ ನಿಮ್ಮೊಂದಿಗೆ ಇರುವ ಹಪ ಹಪಿ ನನ್ನದು. ಈ ವಿಷಯದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂೃಜೆ)ದವರಿಗೆ ಧನ್ಯವಾದಗಳನ್ನು ಸಲ್ಲಿಸಬೇಕು. ವಿಶೇಷವಾಗಿ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ಜೊತೆಯಲ್ಲಿ ಇಡೀ ರಾಜ್ಯ ಸುತ್ತಿದ್ದೇನೆ. ಇದು ಸರ್ಕಾರ ಮತ್ತು ಸಂಘಟನಗಳ ನಡುವೆ ಸೇತುವೆಯಾಗಿ ಕೆಲಸ ಮಾಡಲು ಅನುಕೂಲವಾಗಿದೆ ಎಂದು ಹೇಳಿದರು.

ಬಸ್ ಪಾಸ್, ಆರೋಗ್ಯ ಸಂಜೀವಿನಿ:
ಪತ್ರಕರ್ತನಾಗಿ ನಾನು ಎಂಜಾಯ್ ಮಾಡಬಹುದಿತ್ತು. ಬದಲಾಗಿ ಪತ್ರಕರ್ತರಿಗೆ ಏನಾದರೂ ಕೊಡಬೇಕು ಎನ್ನಿಸಿದಾಗ ಬಸ್ ಪಾಸ್ ಸೌಲಭ್ಯ ಮತ್ತು ಸಿಎಂ ಆರೋಗ್ಯ ಸಂಜೀವಿನಿ ಯೋಜನೆ ರೂಪಿಸುವಲ್ಲಿ ನನಗೆ ಆತ್ಮತೃಪ್ತಿ ಇದೆ. ಇದರಲ್ಲಿರುವ ಕಠಿಣ ಷರತ್ತುಗಳನ್ನು ತೆಗೆದು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ವಾರದಲ್ಲಿಯೇ ಈ ಬಗ್ಗೆ ಗುಡ್ ನ್ಯೂಸ್ ಬರಲಿದೆ ಎಂದರು.

ನಾನು ಲ್‌ಟಿನಲ್ಲಿ ಬಂದವನಲ್ಲ:
ನಾನು ನೇರವಾಗಿ ಲಿಫ್ಟ್ ಹತ್ತಿಕೊಂಡು ಬಂದು ಪತ್ರಕರ್ತನಾದವನಲ್ಲ. ಒಂದೊಂದಾಗಿ ಮೆಟ್ಟಿಲುಗಳನ್ನು ಹತ್ತಿಕೊಂಡು ಈ ಸ್ಥಾನಕ್ಕೆ ಬಂದವನು. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಅತ್ಯಂತ ಅವಶ್ಯ. ಮೊದಲು ನಾನು ಕೋಲಾರವಾಣಿ ಪತ್ರಿಕೆಯಲ್ಲಿ ಕೆಲಸ ಮಾಡಿ, ಆ ಪರಿವಾರದಲ್ಲಿ ಊಟ ಮಾಡಿ ಬೆಳೆದಿದ್ದೇನೆ. ಸೈಕಲ್‌ನಲ್ಲಿ ಪತ್ರಿಕೆಗಳನ್ನು ಪೇರಿಸಿಕೊಂಡು ಪತ್ರಿಕೆಗಳನ್ನು ವಿತರಿಸುವ ಕೆಲಸ ಮಾಡಿದ್ದೇನೆ. ಅವರೊಂದಿಗೆ ಕುಟುಂಬದ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಬೆಂಗಳೂರಿಗೆ ಬರಲು ಹಿರಿಯ ಪತ್ರಕರ್ತರಾದ ವಾಸುದೇವ ಹೊಳ್ಳ, ಮಂಜುನಾಥ್, ಗೋಪಿನಾಥ್ ಮತ್ತಿತರರು ಕಾರಣ. ಅವರ ಪ್ರೀತಿ, ವಾತ್ಸಲ್ಯ ಎಂದಿಗೂ ಮರೆಯಲಾರೆ ಎಂದು ಪ್ರಭಾಕರ್ ಹೇಳಿದರು.

ಸ್ವಾತಂತ್ರವನ್ನು ಪ್ರಶ್ನಿಸಿಲ್ಲ:
ವಿದ್ಯುನ್ಮಾನ ಸುದ್ದಿ ವಾಹಿನಿಗಳಲ್ಲಿ ಸಿಎಂ ಕುರಿತ ಹಲವು ಸುದ್ದಿಗಳು ಪ್ರಕಟವಾಗುತ್ತಿರುತ್ತವೆ. ಸಿಎಂ ಆಗಲಿ, ನಾನಾಗಲೀ ಅವರ ಮಾಧ್ಯಮ ಸ್ವಾತಂತ್ರ್ಯವನ್ನು ಎಂದಿಗೂ ಪ್ರಶ್ನೆ ಮಾಡಿಲ್ಲ. ನನಗೆ ತಿಳಿದಷ್ಟು ಅವರಿಗೆ ಮನವರಿಕೆ ಮಾಡಿಕೊಟ್ಟಿರುತ್ತೇನೆ. ಆದರೂ ಸಿಎಂ ಕುರಿತ ಕೆಲವು ಸುದ್ದಿಗಳು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಇರುತ್ತವೆ. ಅಂತಹ ಸುದ್ದಿಗಳನ್ನು ಎಂದಿಗೂ ಬ್ಲಾಕ್ ಮಾಡುವ ಕೆಲಸ ಸಿಎಂ ಆಗಲಿ, ನಾನಾಗಲೀ ಮಾಡಿಲ್ಲ ಎಂದರು.

CM Siddaramaiah Media Advisor KV Prabhakar Remembers his experience

ಸತೋಷವಾಯಿತು:
ಬೀದರಿನಿಂದ ಓರ್ವ ಪತ್ರಕರ್ತರು ನನ್ನೊಂದಿಗೆ ಮಾತನಾಡಿ ಕಂಗ್ರ್ಯಾಟ್ಸ್ ಹೇಳಿದರು. ನನಗೇನಾದರೂ ವಿಶೇಷ ಪ್ರಶಸ್ತಿ ಅಥವಾ ವಿಧಾನ ಪರಿಷತ್ ಸದಸ್ಯನ ಸ್ಥಾನಮಾನ ಸಿಕ್ಕಿತಾ? ಅಂತ ಆಲೋಚಿಸಿದೆ. ನನಗೆ ಕಂಗ್ರ್ಯಾಟ್ಸ್ ಹೇಳಿದಿರಿ? ಅಂತ ಕೇಳಿದೆ. ಅದಕ್ಕವರು ಸರ್, ನೀವು ಸಿಎಂ ಮಾಧ್ಯಮ ಸಲಹೆಗಾರರಾಗಿ ಇಂದಿಗೆ ಮೂರು ವರ್ಷ ಆಯ್ತು ಸಾರ್. ಹೀಗಾಗಿ ನಿಮಗೆ ಅಭಿನಂದನೆಗಳನ್ನು ಹೇಳಿದೆ. ಆಗ ಎಲ್ಲವೂ ನೆನಪಾಯಿತು.

ನಿಜಕ್ಕೂ ಸಂತೋಷವಾಯ್ತು:
ಅಂದೇ ಶಿವಾನಂದ ತಗಡೂರು ಬೆಳಿಗ್ಗೆಯೇ ಪೋನ್ ಮಾಡಿದ್ದರು. ನೀವು ನಮ್ಮ ಸಂಘಕ್ಕೆ ಬರಬೇಕು ಅಂದರು. ಯಾಕೆ? ಅಂತ ಕೇಳಿದೆ. ನಿಮಗೆ ಸನ್ಮಾನಿಸಬೇಕು. ಈ ನೆಪದಲ್ಲಿ ನಿಮ್ಮ ಜೊತೆಗೆ ಮಾಧ್ಯಮ ಸಂವಾದ ಮಾಡಬೇಕು ಎಂದರು. ನಾನೇನು ಕಡೆದು ಕಟ್ಟೆ ಹಾಕಿದ್ದೇನೆ ಬಿಡಿ ಅಂದೆ. ಈಗ ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ನಿಮ್ಮೆಲ್ಲರನ್ನೂ ನೋಡಿದಾಗ ನಿಜಕ್ಕೂ ಸಂತೋಷವಾಯಿತು ಎಂದು ಹೆಮ್ಮೆಯ ಭಾವ ವ್ಯಕ್ತಪಡಿಸಿದರು.

ಕೆವಿಪಿ ಅವರಲ್ಲಿ ತಾಯ್ತನ ಇದೆ:
ಆಶಯ ನುಡಿಗಳನ್ನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಕೆ.ವಿ.ಪ್ರಭಾಕರ್ ಅವರು ಸಿಎಂ ಮಾಧ್ಯಮ ಸಲಹೆಗಾರರಾದಾಗ 3 ವರ್ಷದ ಹಿಂದೆ ಇದೇ ಸಭಾಂಗಣದಲ್ಲಿ ಆಹ್ವಾನಿಸಿ ಸನ್ಮಾನಿಸಿ, ಅಭಿನಂದಿಸಿದ್ದೆವು. ಈಗ ಮೂರು ವರ್ಷ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇಂದು ಇದೇ ವೇದಿಕೆಯಲ್ಲಿ ಸನ್ಮಾನಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದರು.

ಗರ್ವ, ದರ್ಪ ತೋರದ ಕೆವಿಪಿ:
ಕಳೆದ ಮೂರು ವರ್ಷದಲ್ಲಿ ಕೆಯುಡಬ್ಲ್ಯೂಜೆ ಗೆ ಕೆ.ವಿ.ಪ್ರಭಾಕರ್ ನೆರವು ನೀಡಿದ್ದಾರೆ. ಕಚೇರಿಯ ಅಭಿವೃದ್ಧಿಗೆ ಸಹಾಯ ಮಾಡಿದ್ದಾರೆ. ಪತ್ರಕರ್ತರ ಮನಸ್ಸಿನ ಬೇಗುದಿ ಅರಿತಿರುವ ಪ್ರಭಾಕರ್ ಅವರು, ನಮ್ಮ ನಿಮ್ಮ ಹಾಗೆ ಸಾಮಾನ್ಯ ಪತ್ರಕರ್ತರಾಗಿ ಇಂದು ಇಷ್ಟು ದೊಡ್ಡ ಸ್ಥಾನದಲ್ಲಿದ್ದಾರೆ. ಬದುಕಿನ ಹಾದಿಯಲ್ಲಿ ಕೆ.ವಿ.ಪ್ರಭಾಕರ್ ಎಂದಿಗೂ ಎಡವಿ ಬಿದ್ದಿಲ್ಲ. ಇವತ್ತಿಗೂ ಅವರಲ್ಲಿ ಗರ್ವ, ದರ್ಪಗಳು ಇಲ್ಲ. ಸೌಮ್ಯ ಭಾವ ಮತ್ತು ತಾಯ್ತನದ ಪ್ರೀತಿ ಇದೆ. ಸಾಮಾನ್ಯ ಪತ್ರಕರ್ತನೊಬ್ಬ ವಿಧಾನಸೌಧದ ಕುರ್ಚಿಯಲ್ಲಿ ಕುಳಿತುಕೊಂಡಿರುವುದನ್ನು ಕಣ್ತುಂಬಿಕೊಳ್ಳುವುದೇ ಸಂಭ್ರಮ ಎಂದರು.

ಸರ್ಕಾರ ಮತ್ತು ಪತ್ರಕರ್ತರ ನಡುವಿನ ಸೂಕ್ಷ್ಮ ಸಂಘರ್ಷಗಳನ್ನು ಬಗೆಹರಿಸಿದ್ದಾರೆ. ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ, ಆರೋಗ್ಯ ವಿಮೆ ದೊರಕಿಸಿಕೊಡುವಲ್ಲಿ ಶ್ರಮಿಸುತ್ತಿದ್ದಾರೆ. ಕೆಯುಡಬ್ಲ್ಯೂಜೆ ಕಚೇರಿ ಸಭಾಂಗಣ ನವೀಕರಣ ಸೇರಿ, ಇವರ ಅವಧಿಯಲ್ಲಿ ಪತ್ರಕರ್ತರಿಗೆ ಸಾಕಷ್ಟು ಅನುಕೂಲತೆಗಳು ಆಗಿವೆ. ಪತ್ರಿಕಾ ವಿತರಕರಿಗೆ ವಿಮಾ ಯೋಜನೆ, ವಿತರಕರು ಮತ್ತು ಛಾಯಾಗ್ರಾಹಕರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಿದ ಹೆಗ್ಗಳಿಕೆ ಇವರದು ಎಂದರು.

ಇವರಲ್ಲಿ ಸಾಮರ್ಥ್ಯ ಇದೆ:
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯಿಷಾ ಖಾನ್ ಮಾತನಾಡಿ, ಕೆ.ವಿ.ಪ್ರಭಾಕರ್ ನಡೆದು ಬಂದ ಹಾದಿ ಸುಲಭದ್ದಲ್ಲ. ನನಗೆ ಮೂವರು ಪ್ರಭಾಕರ್ ಗೊತ್ತಿದ್ದಾರೆ. ಅವರಲ್ಲಿ ಎಲ್ ಟಿ ಟಿ ಇ ಪ್ರಭಾಕರ್ ಅಂತ ಹೆಸರು ಪ್ರಸ್ತಾಪಿಸುತ್ತಲೇ ಸಭೆಯಲ್ಲಿದ್ದ ಪತ್ರಕರ್ತರ ಮುಖದಲ್ಲಿ ನಗೆಯ ಅಲೆ ತೇಲಿ ಬಂದಿತು. ನಂತರ ಕನ್ನಡ ಚಿತ್ರರಂಗದ ಟೈಗರ್ ಪ್ರಭಾಕರ್ ಹೆಸರು ಹೇಳಿ…. ಬಳಿಕ ಕೆ.ವಿ.ಪ್ರಭಾಕರ್ ಸಿಎಂ ಅಂತ ಬ್ರಾಕೆಟ್ ನಲ್ಲಿ ಹಾಕ್ತೀವಲ್ಲ ಆ ಪ್ರಭಾಕರ್ ಗೊತ್ತು. ನನ್ನ ಮೊಬೈಲ್ ನಲ್ಲಿ ಪ್ರಭಾಕರ್ ಸಿಎಂ ಅಂತ ಹೆಸರು ಹಾಕಿಕೊಂಡಿರುವೆ ಎಂದಾಗ ಸಭೆಯಲ್ಲಿದ್ದವರೆಲ್ಲ ನಕ್ಕರು.
ನಾನು 20 ರಾಜ್ಯಗಳಲ್ಲಿ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದೇನೆ. ಕರ್ನಾಟಕದಲ್ಲಿ ಫ್ರೀ ಜರ್ನಲಿಸಂ ಇದೆ. ಪತ್ರಕರ್ತರು ಇಲ್ಲಿ ಸೇಫ್. ಇಲ್ಲಿನ ಸಿಎಂ ಪತ್ರಕರ್ತರಿಗೆ ತುಂಬಾ ಅವಕಾಶಗಳನ್ನು ನೀಡಿದ್ದಾರೆ. ನಿಜಕ್ಕೂ ನನಗೆ ಖುಷಿಯ ವಿಚಾರ. ಸೈಕಲ್ ಮೇಲೆ ಪೇಪರ್ ಗಳನ್ನಿಟ್ಟು ಮನೆ ಮನೆಗೆ ಪತ್ರಿಕೆ ಹಂಚುತ್ತಿದ್ದ ಪ್ರಭಾಕರ್ ವಿಧಾನಸೌಧಕ್ಕೆ ಬಂದಿದ್ದಾರೆ ಎಂದು ಸ್ಮರಿಸಿದರು.

ಬಾರೋ ಸಾಧನ ಕೇರಿಗೆ:
ಸಂವಾದ ಕಾರ್ಯಕ್ರಮಕ್ಕೂ ಮುನ್ನ ಪಂಕಜ ಅವರು ವರಕವಿ ದ.ರಾ.ಬೇಂದ್ರೆ ಅವರ ಪ್ರಸಿದ್ಧ ಕವನ ‘ಬಾರೋ ಸಾಧನ ಕೇರಿಗೆ’ ಎನ್ನುವ ಅರ್ಥಪೂರ್ಣ ಭಾವಗೀತೆಯನ್ನು ಹಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ್ ಸ್ವಾಗತಿಸಿದರು. ರಾಜ್ಯ ಖಜಾಂಚಿಗಳಾದ ವಾಸುದೇವ ಹೊಳ್ಳ, ಕೆರಗೋಡು ಮತ್ತಿತರರು ಇದ್ದರು. ನಂತರ, ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದ ಪತ್ರಿಕಾ ಸಂಪಾದಕರು, ಹಿರಿಯ ವರದಿಗಾರರು, ಪತ್ರಕರ್ತರು, ಮುದ್ರಣ ಹಾಗೂ ವಿದ್ಯುನ್ಮಾನ ಪತ್ರಿಕೋದ್ಯಮದ ಪ್ರತಿಭೆಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು. ಬಳಿಕ ಕೆ.ವಿ.ಪ್ರಭಾಕರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

Remembering Chamayya Mestru: ಕೆ.ಎಸ್. ಅಶ್ವಥ್ ನೆನಪು: ಇದು ಚಾಮಯ್ಯ ಮಾಸ್ತರ್‌ರ ಸಮಸ್ತ ಅಭಿಮಾನಿಗಳಿಗಾಗಿ!

ಹಿಂದಿನ ವಾರ್ತಾ ಇಲಾಖೆಯ ಸಜ್ಜನ ನಿರ್ದೇಶಕ ಡಾ. ಕೆ. ಪುಟ್ಟಸ್ವಾಮಿ ಅವರ ಬರಹ ಇದು. ಚಾಮಯ್ಯ ಮಾಸ್ತರ್‌ರ ಫ್ಯಾನ್ಸ್‌ ತಮ್ಮ ಸಜ್ಜನ ನಟನ ಬಗ್ಗೆ ಮೆಲುಕು ಹಾಕಬಹುದು. ಮುಂದೆ ಲೇಖನ ಓದಿಕೊಳ್ಳಿ…

ಸರಳತೆ, ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಬದುಕು ಸಾಧಿಸಿ, ವೃತ್ತಿಯಲ್ಲಿ ಘನತೆ ಮೆರೆದ ಕೆ.ಎಸ್. ಅಶ್ವಥ್ ಅವರು 1955 ರಿಂದ 2007 ರವರೆಗೆ ಸುಮಾರು 275 ಚಿತ್ರಗಳಲ್ಲಿ ನಟಿಸಿ, ಪಾತ್ರ ಮತ್ತು ಬದುಕಿನಲ್ಲಿ ‘ನಮ್ಮವರೇ’ ಆಗಿದ್ದರು. ನಮ್ಮ ಸಂಸ್ಕೃತಿಯ ವಕ್ತಾರನಂತಿದ್ದರು. ಈ ಹಿಂದೆ ನಡೆದ ಚಲನಚಿತ್ರೋತ್ಸವ ಸಂದರ್ಭದಲ್ಲಿ ‘ಶತಮಾನೋತ್ಸವ ಸ್ಮರಣೆ’ಗೆ ಭಾಜನರಾಗಿದ್ದರು …

ಕನ್ನಡ ಚಲನಚಿತ್ರರಂಗ ಕಂಡ ಅತ್ಯಂತ ಸಜ್ಜನಿಕೆಯ ಕಲಾವಿದ ಕೆ.ಎಸ್. ಅಶ್ವಥ್. ತೆರೆಯ ಮೇಲೆ ಸಂಯಮ, ವಿನಯ, ತ್ಯಾಗಶೀಲ ಹಿರಿಯನಾಗಿ ನಟಿಸಿದಂತೆಯೇ ಅಶ್ವಥ್ ಅವರು ಶಾಶ್ವತವಾಗಿ ಹಿರಿಯಣ್ಣನಾಗಿಯೇ ತೆರೆಯಾಚೆಗೂ ಉಳಿದವರು. ಒಬ್ಬ ಕಲಾವಿದನಿಗೆ ಇಮೇಜೊಂದು ಅಂಟಿಕೊಂಡರೆ ಅದರಿಂದ ಹೊರಬರಲು ಏನೇ ಪ್ರಯತ್ನಿಸಿದರೂ ಭಾರತೀಯ ಚಲನಚಿತ್ರ ಸಂದರ್ಭದಲ್ಲಿ ಅಸಾಧ್ಯ ಎನ್ನುವ ನಂಬಿಕೆಗೆ ಅಶ್ವಥ್ ದೊಡ್ಡ ಉದಾಹರಣೆ ಎನಿಸಿದರು. ಅವರು ಕೊನೆಯವರೆಗೂ- ಕೆಲವು ಅಪವಾದಗಳನ್ನು ಹೊರತುಪಡಿಸಿದರೆ- ಸಜ್ಜನ ವ್ಯಕ್ತಿಯ ಹಲವು ರೂಪಗಳಲ್ಲೇ ಕನ್ನಡಿಗರನ್ನು ಸೂರೆಗೊಂಡರು. ತಮಗಂಟಿದ ಇಮೇಜಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಅರಸಿಬಂದ ಪಾತ್ರಗಳಲ್ಲಿ ತನ್ಮಯರಾಗಿ ನಟಿಸಿದ ಅಶ್ವಥ್ ಅವರು ಪೋಷಕ ಪಾತ್ರಗಳಿಗೆ ಹೊಸ ಭಾಷ್ಯ ಬರೆದರು. ತಮಿಳಿನಲ್ಲಿ ಕಲಾವಿದ ಮೇಜರ್ ಸುಂದರ್ ರಾಜನ್, ತೆಲುಗಿನಲ್ಲಿ ಗುಮ್ಮಡಿ ಮತ್ತು ಮಲಯಾಳಂನಲ್ಲಿ ತಿಲಕನ್ ಹೇಗೆ ಆಯಾ ಭಾಷೆಯ ಸಿನೆಮಾಗಳ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ತಮ್ಮದೇ ಸ್ಥಾನವೊಂದನ್ನು ಸ್ಥಾಪಿಸಿಕೊಂಡು ಅಭಿಮಾನಿ ವೃಂದವನ್ನು ಗಳಿಸಿದರೋ; ಹಾಗೆಯೇ ಕನ್ನಡದಲ್ಲಿ ಅಶ್ವಥ್ ಅವರು ಕನ್ನಡ ಚಲನಚಿತ್ರರಂಗದಲ್ಲಿ ಭದ್ರ ಸ್ಥಾನವೊಂದನ್ನು ಗಳಿಸಿಕೊಂಡಿದ್ದರು. ತಾರಾಗಣದಲ್ಲಿ ಅಶ್ವಥ್ ಅವರು ಇದ್ದರೆಂದರೆ ಒಂದು ಪರಿಶುದ್ಧ ಸಂಯಮಪೂರ್ಣ ಅಭಿನಯದ ಚಿತ್ರ ನೋಡುವ ನಿರೀಕ್ಷೆ ಪ್ರೇಕ್ಷಕರಲ್ಲಿರುತ್ತಿತ್ತು. ಬಹುತೇಕ ಸಂದರ್ಭದಲ್ಲಿ ಅವರ ನಿರೀಕ್ಷೆ ಹುಸಿಯಾಗುತ್ತಿರಲಿಲ್ಲ.

ಸರಿ ಸುಮಾರು ರಾಜ್, ಕಲ್ಯಾಣ್, ಉದಯಕುಮಾರ್‌ರವರು ಚಿತ್ರರಂಗ ಪ್ರವೇಶಿಸಿದ ಕಾಲದಲ್ಲೇ ನಾಯಕ ನಟರಾಗಿ ಆಗಮಿಸಿದ ಕೆ.ಎಸ್. ಅಶ್ವಥ್ ಕನ್ನಡ ಚಿತ್ರರಂಗ ಕಂಡ ಮೇರು ಪ್ರತಿಭೆ. ಸರಳತೆ, ಸಜ್ಜನಿಕೆ ಮತ್ತು ಶಿಸ್ತಿಗೆ ಹೆಸರಾದ ಕರಗದಹಳ್ಳಿ ಸುಬ್ಬರಾಯಪ್ಪ ಅಶ್ವಥ್ ಅವರು ನಾಯಕನಟರಾಗಿ ಹೆಚ್ಚು ಕಾಲ ಉಳಿಯಲಿಲ್ಲ. ಬಹುಬೇಗನೆ ಅವರು ಪೋಷಕ ಪಾತ್ರಗಳಲ್ಲಿ ಭದ್ರವಾದ ನೆಲೆ ಕಂಡುಕೊಂಡರು. ಅಶ್ವಥ್ ಅವರ ಹಿರಿಯರು ಹೊಳೆನರಸೀಪುರ ತಾಲೂಕಿನ ಕರಗದಹಳ್ಳಿಗೆ ಸೇರಿದವರು. ಮೈಸೂರಿನಲ್ಲಿ 25.03.1925ರಲ್ಲಿ ಜನಿಸಿದ ಅಶ್ವಥ್ ಅವರು ಇಂಟರ್‌ಮೀಡಿಯೆಟ್‌ವರೆಗೆ ಶಿಕ್ಷಣ ಪಡೆದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ ಅವರ ವ್ಯಾಸಂಗಕ್ಕೆ ಸ್ವಾತಂತ್ರ್ಯ ಸಂಗ್ರಾಮ ಅಡ್ಡಬಂತು. ವ್ಯಾಸಂಗ ನಿಲ್ಲಿಸಿದ ನಂತರ ಅವರು ಆಹಾರ ಇಲಾಖೆಯಲ್ಲಿ ಗುಮಾಸ್ತರಾಗಿ, ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಟೆನೋ ಆಗಿ ಉದ್ಯೋಗಿಯಾದರು.

ಆರಂಭದಿಂದಲೂ ಅವರ ಒಲವು ಅಭಿನಯದ ಕಡೆಗಿತ್ತು. ಕಡೆಗೆ, ಆಕಾಶವಾಣಿಯಲ್ಲಿ ಸ್ವಲ್ಪ ಕಾಲ ನಾಟಕ ವಿಭಾಗದಲ್ಲಿದ್ದ ಅವರ ಆತ್ಮೀಯ ಸ್ನೇಹಿತರಾಗಿದ್ದ ಎನ್.ಎಸ್. ವಾಮನರಾಯರು ಅವರಿಗೆ ಅಭಿನಯದಲ್ಲಿ ತರಬೇತಿ ನೀಡಿದರು. ಬಳಿಕ ಅವರು ಹವ್ಯಾಸಿ ರಂಗಭೂಮಿಯಲ್ಲಿ ಎನ್. ಮೂರ್ತಿರಾವ್, ಪರ್ವತವಾಣಿ ಮೊದಲಾದವರ ನಾಟಕಗಳಲ್ಲಿ ಪಾತ್ರ ನಿರ್ವಹಿಸಿ, ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ರೇಡಿಯೋ ನಾಟಕ ಮತ್ತು ಹವ್ಯಾಸಿ ರಂಗಭೂಮಿಯ ಅನುಭವದಿಂದಲೋ ಏನೋ ಅವರ ಅಭಿನಯ ಅಬ್ಬರವಿಲ್ಲದ ಸಂಯಮಪೂರ್ಣ ಭಾವಾಭಿವ್ಯಕ್ತಿಗೆ ಒಲಿಯಿತೆಂದು ಕಾಣುತ್ತದೆ. ಅದು ಸಿನೆಮಾ ಮಾಧ್ಯಮಕ್ಕೆ ಸೂಕ್ತವಾದ ಅಭಿನಯದ ಮಜಲು. ಆದರೂ ಸರ್ಕಾರಿ ನೌಕರಿ ಮಾಡುತ್ತಾ ಹವ್ಯಾಸಕ್ಕಾಗಿ ನಾಟಕದಲ್ಲಿ ಪಾತ್ರ ಮಾಡುತ್ತಿದ್ದ ಅವರು ಚಿತ್ರರಂಗ ಸೇರಿದ್ದು ತೀರಾ ಅನಿರೀಕ್ಷಿತ. ಖ್ಯಾತ ಚಲನಚಿತ್ರ ನಿರ್ಮಾಪಕ ಕೆ. ಸುಬ್ರಮಣ್ಯಂ ಅವರು ಅಶ್ವಥ್ ಅವರ ಅಭಿನಯವನ್ನು ಮೆಚ್ಚಿ 1955ರಲ್ಲಿ ನಿರ್ಮಾಣವಾದ ‘ಸ್ತ್ರೀರತ್ನ’ ಚಿತ್ರದಲ್ಲಿ ಅವರನ್ನು ನಾಯಕ ಪಾತ್ರದಲ್ಲಿ ಪರಿಚಯಿಸಿದರು. ಅದು ಭಾಗಶಃ ವರ್ಣದಲ್ಲಿದ್ದ ಚಿತ್ರ.

‘ಸ್ತ್ರೀರತ್ನ’ ಚಿತ್ರ ಬಿಡುಗಡೆಯ ನಂತರ ಸರ್ಕಾರಿ ನೌಕರಿ ತೊರೆದು ಅಭಿನಯವನ್ನೇ ವೃತ್ತಿ ಮಾಡಿಕೊಳ್ಳುವ ಬಹುದೊಡ್ಡ ನಿರ್ಧಾರವನ್ನು ಹಿತೈಷಿಗಳ ವಿರೋಧದ ನಡುವೆಯೇ ಅಶ್ವಥ್ ಅವರು ಮಾಡಿದರು. ಆದರೆ ಆ ಕಾಲದಲ್ಲಿ ಈಗಿನಷ್ಟು ಕನ್ನಡ ಚಿತ್ರಗಳೂ ತಯಾರಾಗುತ್ತಿರಲಿಲ್ಲ. ತಯಾರಾದ ಚಿತ್ರಗಳಿಗೆ ಈಗಿರುವಷ್ಟು ದೊಡ್ಡ ಮಾರುಕಟ್ಟೆಯೂ ಇರಲಿಲ್ಲ. ಆದರೂ ಅಭಿನಯವನ್ನೇ ವೃತ್ತಿ ಮಾಡಿಕೊಳ್ಳಲು ಅವರು ಮದರಾಸಿನಲ್ಲಿ ನೆಲೆಸಿದರು. ‘ಸ್ತ್ರೀರತ್ನ’ದ ನಂತರ ‘ಕಚದೇವಯಾನಿ’, ‘ಕೋಕಿಲವಾಣಿ'(1956) ಮತ್ತು ‘ಚಿಂತಾಮಣಿ'(1957) ಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದರು. ಅವರ ಮೊದಲ ನಾಲ್ಕು ಚಿತ್ರಗಳಲ್ಲಿ ನಾಯಕಿಯಾಗಿದ್ದವರು ಅದೇ ಅವಧಿಯಲ್ಲಿ ಚಲನಚಿತ್ರರಂಗ ಪ್ರವೇಶಿಸಿದ್ದ ಬಿ. ಸರೋಜಾದೇವಿ. 1958ರಲ್ಲಿ ಬಿಡುಗಡೆಯಾದ ‘ಅಣ್ಣತಂಗಿ’ ಚಿತ್ರದಲ್ಲಿ ಎರಡನೇ ನಾಯಕನಾಗಿ ಅಭಿನಯಿಸಿದ ಅಶ್ವಥ್ ಒಂದು ಡ್ಯೂಯೆಟ್ ಕೂಡ ಹಾಡಿದರು. ಪ್ರಾಯಶಃ ‘ಶಿವಲಿಂಗಸಾಕ್ಷಿ’ ಅವರು ನಾಯಕನಾಗಿ ಅಭಿನಯಿಸಿದ ಕೊನೆಯ ಚಿತ್ರ.

1960ರ ನಂತರ ಅಶ್ವಥ್ ಅವರು ನಿಧಾನವಾಗಿ ಪೋಷಕ ಪಾತ್ರಗಳಿಗೆ ಸರಿದರು. ಇದೊಂದು ಬಗೆಯಲ್ಲಿ ಅವರ ಪ್ರತಿಭೆಯ ಪ್ರಕಾಶನಕ್ಕೆ ಅವಕಾಶ ಮಾಡಿಕೊಟ್ಟಿತೆಂದೇ ಹೇಳಬೇಕು. ಅಲ್ಲಿಂದಾಚೆಗೆ ಅವರು ವಿಭಿನ್ನ ಬಗೆಯ ಪಾತ್ರಗಳಿಗೆ ಜೀವ ತುಂಬುತ್ತಾ ಕನ್ನಡ ಪ್ರೇಕ್ಷಕರಿಗೆ ತೀರಾ ಪರಿಚಿತರಾದರು. ಅಶ್ವಥ್ ಅವರು ಇದ್ದರೆಂದರೆ ಉತ್ತಮ ಅಭಿನಯವಿದೆ ಎಂದೇ ಭಾವಿಸುವಂತಾಯಿತು. ಪಂತುಲು ಅವರ ‘ಗಾಳಿಗೋಪುರ’ ಚಿತ್ರದಿಂದ ಶಾಶ್ವತವಾಗಿ ಪೋಷಕ ಪಾತ್ರಗಳಿಗೆ ಮೀಸಲಾದ ಅಶ್ವಥ್ ಅವರಿಗೆ ಆ ಚಿತ್ರ ಅಪಾರ ಕೀರ್ತಿಯನ್ನು ತಂದುಕೊಟ್ಟಿತು. ಆ ಚಿತ್ರದಲ್ಲಿ ಅವರು ರಾಜ್ ಅವರ ತಂದೆಯ ಪಾತ್ರದಲ್ಲಿ ನಟಿಸಿದರು.

ಆರಂಭದಲ್ಲಿ ಹೆಚ್ಚಾಗಿ ತಯಾರಾಗುತ್ತಿದ್ದ ಭಕ್ತಿ ಪ್ರಧಾನ ಮತ್ತು ಪೌರಾಣಿಕ ಚಿತ್ರಗಳಲ್ಲಿ ಅಶ್ವಥ್ ಅವರು ಹೆಚ್ಚು ಕಡಿಮೆ ‘ನಾರದ’ನ ಪಾತ್ರಕ್ಕೆ ಮೀಸಲಾದರು. (ಮಹಿಷಾಸುರ ಮರ್ದಿನಿ, ಸ್ವರ್ಣಗೌರಿ, ಭಕ್ತಪ್ರಹ್ಲಾದ, ದಶಾವತಾರ, ನಾಗಾರ್ಜುನ ಮುಂತಾದವು). ಸಾಮಾಜಿಕ ಚಿತ್ರಗಳ ಯುಗ ಆರಂಭವಾದ ನಂತರ ಕೌಟುಂಬಿಕ ಚಿತ್ರಗಳೇ ಪ್ರಧಾನವಾಗಿ ತಯಾರಾಗುತ್ತಿದ್ದವು. ಅಂತಹ ಚಿತ್ರಗಳಲ್ಲಿ ತಂದೆ, ಅಣ್ಣ, ಮಲಮಗನಾಗಿ ನೋಯುವ ಪಾತ್ರಗಳು ಅನಿವಾರ್ಯವಾಗಿದ್ದವು. ಆಗ ಅಶ್ವಥ್‌ರವರು ಅಂಥ ಪೋಷಕ ಪಾತ್ರಗಳನ್ನು ನಿರ್ವಹಿಸಲು ಬೇಡಿಕೆಯ ನಟರಾದರು.

ಪಾತ್ರ ಯಾವುದೇ ಇರಲಿ, ಅದನ್ನು ಸಂಪೂರ್ಣ ಅರ್ಥ ಮಾಡಿಕೊಂಡು ಅದರ ಅಂತರಂಗವನ್ನು ಶೋಧಿಸಿ ಅಭಿವ್ಯಕ್ತಿಗೊಳಿಸುವ ಕಲೆ ಅಶ್ವಥ್ ಅವರಿಗೆ ದಕ್ಕಿತ್ತು. ಆದುದರಿಂದಲೇ ಕುಟುಂಬದ ಯಜಮಾನ, ಒಲವಿನ ಸೋದರ, ಜವಾಬ್ದಾರಿಯ ತಂದೆ ಮುಂತಾದ ಸಜ್ಜನಿಕೆಯ ಪಾತ್ರಗಳ ಜೊತೆಗೆ ಖಳನಾಯಕ, ಹಾಸ್ಯ ಪಾತ್ರಗಳಲ್ಲೂ ಅವರು ಸಹಜಾಭಿನಯ ನೀಡಿದರು.

ಅಶ್ವಥ್ ಅವರ ಪ್ರತಿಭೆಯ ಅಭಿವ್ಯಕ್ತಿಗೆ ವಿಶಾಲ ಹರಹಿನ ಪಾತ್ರಗಳೇ ಆಗಬೇಕೆಂಬ ಕಟ್ಟುಪಾಡು ಇರಲಿಲ್ಲ. ಸಣ್ಣ ಪಾತ್ರವೂ ಚಿರಕಾಲ ನೆನಪಿನಲ್ಲುಳಿಯುವಂತೆ ಮಾಡಬಲ್ಲ ಮಾಂತ್ರಿಕ ಶಕ್ತಿ ಅವರಿಗಿತ್ತು. ‘ಶುಭ ಮಂಗಳ’ ಚಿತ್ರದ ಗೂರಲು ರೋಗದ ವೈದ್ಯನ ಪಾತ್ರದಲ್ಲಿನ ಅವರ ಅಭಿನಯ ಈ ಮಾತಿಗೆ ಸಾಕ್ಷಿ.

ನಮ್ಮ ಪೋಷಕ ಪಾತ್ರಗಳು ಬಹುತೇಕ ಪಾತ್ರ ಪೋಷಣೆಯಿಲ್ಲದೆ ಸೊರಗುವುದೇ ಜಾಸ್ತಿ. ಆದರೆ ನಟರಾದ ಟಿ.ಎನ್. ಬಾಲಕೃಷ್ಣ, ನರಸಿಂಹರಾಜು ಮತ್ತು ಅಶ್ವಥ್ ಅವರ ವಿಷಯದಲ್ಲಿ ಹಾಗಾಗಲಿಲ್ಲ. ಅವರ ಅಭಿನಯ ಪ್ರತಿಭೆಗೆ ತಕ್ಕಂತೆ ಸತ್ವಪೂರ್ಣ ಪಾತ್ರಗಳನ್ನು ನಿರ್ದೇಶಕರು ರೂಪಿಸಿ ಅವರಲ್ಲಿನ ಪ್ರತಿಭಾ ಪ್ರಕಾಶನಕ್ಕೆ ಅನುವು ಮಾಡಿಕೊಟ್ಟರು. ಕನ್ನಡಿಗರ ಪಾಲಿಗೆ ಇದು ಪುಣ್ಯ ವಿಶೇಷವೇ ಸರಿ. ವಿಶೇಷವಾಗಿ ಎರಡನೇ ತಲೆಮಾರಿನ ನಿರ್ದೇಶಕರಾದ ಪುಟ್ಟಣ್ಣ, ಸಿದ್ಧಲಿಂಗಯ್ಯ, ವೈ.ಆರ್. ಸ್ವಾಮಿ, ದೊರೆ ಭಗವಾನ್‌ರವರಿಗೆ ಅಶ್ವಥ್ ಅಚ್ಚುಮೆಚ್ಚಿನವರಾಗಿದ್ದರು.

ಅಶ್ವಥ್ ಅವರು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಶ್ವಥ್‌ರವರು ಅಭಿನಯದ ಚಿರಕಾಲ ನೆನಪಿನಲ್ಲಿ ಉಳಿಯುವ ಪಾತ್ರಗಳು ಹಲವು ಚಿತ್ರಗಳಲ್ಲಿವೆ. ‘ಬೆಳ್ಳಿಮೋಡ’ ಚಿತ್ರದ ಸದಾಶಿವರಾಯರ ಪಾತ್ರ ಅಂಥದೊಂದು. ಹೆಂಡತಿ ಮತ್ತು ಒಬ್ಬಳೇ ಮಗಳಿರುವ ಸುಖದ ಸಂಸಾರದಲ್ಲಿ ತುಂಟತನವನ್ನೇ ಮೈಗೂಡಿಸಿಕೊಂಡ ತಂದೆಯಾಗಿ, ಹೆಂಡತಿ ಸಾಯುವಾಗ ಹಳೆಯ ತುಂಟಲೋಕಕ್ಕೆ ಜಾರುವಾಗಿನ ಸನ್ನಿವೇಶದಲ್ಲಿ ಅವರ ಅಭಿನಯ ಅಮೋಘ ಎನ್ನುವ ಮಟ್ಟದಲ್ಲಿದೆ. ‘ನಾಗರಹಾವು’ ಚಿತ್ರದ ಚಾಮಯ್ಯ ಮೇಷ್ಟ್ರು ಪಾತ್ರದಲ್ಲಿ ಅಶ್ವಥ್ ಅವರು ಪಾತ್ರದಲ್ಲೇ ಲೀನವಾಗಿದ್ದರು. ಸಂತಾನವಿಲ್ಲದ ಮೇಷ್ಟ್ರು ತನ್ನ ಪ್ರೀತಿಯ ತಂಟೆಕೋರ ವಿದ್ಯಾರ್ಥಿಯೊಬ್ಬನೊಡನೆ ಬೆಳೆಸಿಕೊಳ್ಳುವ ಮಾನವೀಯ ಸಂಬಂಧಗಳು; ಅವುಗಳಿಂದ ಎದುರಾಗುವ ಸಾಮಾಜಿಕ ತೊಡರುಗಳು ಮತ್ತು ಸಾಮಾಜಿಕ ಸಂಬಂಧಗಳ ಸಿಕ್ಕು ಬಿಡಿಸುವ ಯತ್ನದಲ್ಲಿ ದುರಂತ ಕಾಣುವ ಪಾತ್ರವನ್ನು ಅಶ್ವಥ್ ನಿರ್ವಹಿಸಿದ ರೀತಿ ಬೆರಗುಗೊಳಿಸಿತ್ತು. ‘ನಾಗರಹಾವು’ ಚಿತ್ರದ ಯಶಸ್ಸಿಗೆ ಅಶ್ವಥ್‌ರ ಅಭಿನಯವೂ ಸಾಥಿಯಾಗಿತ್ತು.
ಅಂಥ ಮತ್ತೊಂದು ಮಹತ್ವದ ಪಾತ್ರ ‘ಸರ್ವಮಂಗಳ’ದ ಉಬ್ಬು ಹಲ್ಲಿನ ಸುಬ್ಬರಾಯನ ಪಾತ್ರ. ತನಗಿಂತಲೂ ಕಿರಿಯಳಾದ ಸರ್ವಮಂಗಳೆಯನ್ನು ಬಯಸಿ ಮದುವೆಯಾಗಿ ಅವಳನ್ನು ಅಪಾರವಾಗಿ ಪ್ರೀತಿಸುವ ಕುರೂಪಿ ಸುಬ್ಬರಾಯ ಕೊನೆಗೆ ಅವಳಿಗಾಗಿ ಮರುಗುವ, ನಟರಾಜ-ಮಂಗಳೆಯರ ನಡುವಿನ ಸಂಬಂಧ ತಿಳಿದೂ ಪರಿತಪಿಸುವ, ಅಸಹಾಯಕ ವ್ಯಕ್ತಿಯ ಪಾತ್ರವನ್ನು ಅಶ್ವಥ್ ಅವರು ನಿಭಾಯಿಸಿರುವ ರೀತಿಯೇ ಅಚ್ಚರಿ ಮೂಡಿಸುತ್ತದೆ. ಅಶ್ವಥ್‌ರವರ ಸುಂದರ ಮುಖವನ್ನು ಕುರೂಪಿ ಪಾತ್ರಕ್ಕೆ ಸರಿಹೊಂದಿಸಲು ಹೆಣಗಾಡುತ್ತಿರುವಾಗ ಉಬ್ಬುಹಲ್ಲನ್ನು ಸ್ವತ: ಅಶ್ವಥ್‌ರವರೇ ಅಳವಡಿಸಿಕೊಂಡರಂತೆ! ಪಾತ್ರದ ಸರ್ವ ಲಕ್ಷಣವನ್ನು ಅರಿಯಲು ಅಶ್ವಥ್‌ರವರು ಪಡುತ್ತಿದ್ದ ಪ್ರಯತ್ನಕ್ಕೆ ಅದು ಸಾಕ್ಷಿ. ‘ಗೆಜ್ಜೆಪೂಜೆ’ ಚಿತ್ರದಲ್ಲಿ ಸಂಪ್ರದಾಯ ಕುಟುಂಬದ ಯಜಮಾನವಾಗಿಯೂ ಮಾನವೀಯ ಸಂಬಂಧಗಳಿಗೆ ತುಡಿವ ವ್ಯಕ್ತಿಯಾಗಿ ಅಶ್ವಥ್ ನೀಡಿದ ಅಭಿನಯವೂ ಅಷ್ಟೆ ಸಂಯಮಪೂರ್ಣವಾಗಿತ್ತು.

ಅಶ್ವಥ್‌ರವರ ಪ್ರತಿಭೆಯ ಮತ್ತೊಂದು ಮುಖ ಕನ್ನಡಿಗರಿಗೆ ಪರಿಚಯವಾದದ್ದು ‘ಕಸ್ತೂರಿ ನಿವಾಸ’ ಚಿತ್ರದಲ್ಲಿ. ಒಂದೆಡೆ ರಾಜ್, ಮತ್ತೊಂದೆಡೆ ಜಯಂತಿ ಅವರು ಮೇರು ಮಟ್ಟದ ಅಭಿನಯವನ್ನು ಆ ಚಿತ್ರದಲ್ಲಿ ನೀಡಿದ್ದರೆ, ಅಶ್ವಥ್ ಸೇವಕ ರಾಮಯ್ಯನ ಪಾತ್ರದ ಮೂಲಕ ತಮ್ಮ ಸಹಜಾಭಿನಯದಿಂದಲೇ ಅಭಿನಯಕ್ಕೊಂದು ಹೊಸ ಭಾಷ್ಯ ಬರೆದರು. ‘ಕಸ್ತೂರಿ ನಿವಾಸ’ದ ಏಳು-ಬೀಳುಗಳಿಗೆ ಸಾಕ್ಷಿಯಾಗುತ್ತಾ, ತನ್ನ ಯಜಮಾನನ ದುರಂತದ ಹಾದಿಯನ್ನು ಹಿಂಬಾಲಿಸುತ್ತಾ ಸಾಗುವ ರಾಮಯ್ಯನ ಸಂಕೀರ್ಣ ಮನಸ್ಥಿತಿಗೆ ಅಶ್ವಥ್ ಕನ್ನಡಿ ಹಿಡಿದಿದ್ದರು. ಕಡತ ಎತ್ತಿಕೊಂಡು ನಡುಬಗ್ಗಿಸಿ ಯಜಮಾನನನ್ನು ಹಿಂಬಾಲಿಸುತ್ತಾ, ಯಜಮಾನನಿಗೆ ಹಾಲು ನೀಡಿ ಅವನ ಅಂತರಂಗವನ್ನು ಅರಿಯಲು ತಣ್ಣಗೆ ಪ್ರಯತ್ನಿಸುತ್ತಾ ಸಂಯಮಮೂರ್ತಿಯಾದ ರಾಮಯ್ಯ, ಯಜಮಾನನ ಸಾವಿನ ನಂತರ ಅಬ್ಬರಿಸುವ ಪರಿ ನಿಜಕ್ಕೂ ಪಾತ್ರವೊಂದರ ಒಳತೋಟಿಗಳನ್ನು ಸಮರ್ಥವಾಗಿ ಬಿಂಬಿಸುವಷ್ಟು ಸಶಕ್ತವಾಗಿವೆ. ‘ಸರ್ವಮಂಗಳ’ ಚಿತ್ರದ ಕುರೂಪಿ ಸುಬ್ಬರಾಯನ ಪಾತ್ರ ಹಾಗೂ ‘ಉಯ್ಯಾಲೆ’ಯ ಪುಸ್ತಕದ ಹುಳು ಶೇಷಗಿರಿ ಅವರ ಅಪ್ರತಿಮ ಪ್ರತಿಭೆಗೆ ಸಾಕ್ಷಿಯಾದ ಇನ್ನೆರಡು ಪಾತ್ರಗಳು. ಹಾಗೆಯೆ ವಂಶ ಪ್ರತಿಷ್ಠೆಗಾಗಿ ಕೊಲೆ ಮಾಡಿ ಬಳಿಕ ಪಾಪಪ್ರಜ್ಞೆಯಲ್ಲಿ ನೋಯುವ ತಂದೆ ಮತ್ತು ನ್ಯಾಯಾಧೀಶನಾಗಿ ಕ್ರಮವಾಗಿ ‘ಸೀತಾ’ ಮತ್ತು ‘ನ್ಯಾಯವೇ ದೇವರು’ ಚಿತ್ರಗಳಲ್ಲಿ ಅಶ್ವಥ್ ಅವರು ನೀಡಿರುವ ಮನೋಜ್ಞ ಅಭಿನಯ ಮರೆಯುವುದು ಸಾಧ್ಯವೆ?

ಅರವತ್ತು ಎಪ್ಪತ್ತು ಎಂಬತ್ತರ ದಶಕದ ಚಲನಚಿತ್ರಗಳನ್ನು ನೋಡುತ್ತಾ ಬೆಳೆದ ಪ್ರೇಕ್ಷಕರಿಗೆ ಬೇರೆ ಬೇರೆಯ ನಾಯಕ – ನಾಯಕಿಯರ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಾಣಸುತ್ತಿದ್ದ ಮೂವರು ನಟರೆಂದರೆ ಟಿ.ಎನ್. ಬಾಲಕೃಷ್ಣ, ಟಿ.ಆರ್. ನರಸಿಂಹರಾಜು ಮತ್ತು ಕೆ.ಎಸ್. ಅಶ್ವಥ್. ಈ ಮೂವರು ಮಹಾಮಹಿಮ ಕಲಾವಿದರಲ್ಲಿ ನರಸಿಂಹರಾಜು ಅವರ ವೃತ್ತಿಯ ಅವಧಿ ಕಡಿಮೆಯಿತ್ತು, ನಿಜ. ಆದರೆ ಪೋಷಕ ಮತ್ತು ಹಾಸ್ಯಪಾತ್ರಗಳಲ್ಲಿ ವಿಜೃಂಭಿಸುತ್ತಿದ್ದ ಈ ಮೂವರು ಕಲಾವಿದರು ಕನ್ನಡ ಚಿತ್ರರಂಗದಲ್ಲಿ ಕಲಾವಿದರ ಅಭಿನಯ ನೈಪುಣ್ಯ ಮತ್ತು ರಂಜನೆಯ ಸೀಮೆಯನ್ನು ವಿಸ್ತರಿಸಿ ಚಿತ್ರವೊಂದರ ಯಶಸ್ಸಿನಲ್ಲಿ ಭಾಗಿಯಾಗುತ್ತಿದ್ದರು. ಅದರಲ್ಲೂ ಅಶ್ವಥ್ ಅವರು ಗಂಭೀರ ಪಾತ್ರಗಳಲ್ಲಿಯೇ ಪ್ರೇಕ್ಷಕರನ್ನು ಹಿಡಿದಿಡುತ್ತಿದ್ದರು. ಮನೆಯ ಹಿರಿಯಣ್ಣನಾಗಿ, ತಂದೆಯಾಗಿ, ನೆರೆಮನೆಯ ಹಿರಿಯ ಸಜ್ಜನನಾಗಿ, ಗುರುವಾಗಿ ಅಥವಾ ಅಜ್ಜನಾಗಿ ತನಗಿಂತ ಕಿರಿಯರ ಶ್ರೇಯೋಭಿವೃದ್ಧಿಯನ್ನು ಬಯಸುವ ವ್ಯಕ್ತಿಯಾಗಿ ಅಶ್ವಥ್ ಅವರು ಪ್ರೇಕ್ಷಕರ ಮನ ಗೆದ್ದಿದ್ದರು. ಅವರು ಮಂತ್ರಿಯ ಪಾತ್ರ ಮಾಡುತ್ತಿದ್ದರೇ ಹೊರತು ರಾಜನ ಪಾತ್ರವಲ್ಲ. ಅಕಸ್ಮಾತ್ ರಾಜನ ಪಾತ್ರ ಮಾಡಿದರೂ ಚಿತ್ರದ ನಾಯಕ ಯುವರಾಜನೋ ಅಥವಾ ಇನ್ನೊಂದು ರಾಜ್ಯದ ರಾಜನೋ ಆಗಿರುತ್ತಿದ್ದ. ನಿರ್ದೇಶಕರು ಅಶ್ವಥ್ ಅವರಿಗೆ ಸದಾ ಅಂಥ ಪಾತ್ರವನ್ನೇ ಮೀಸಲಿಡುತ್ತಿದ್ದರು. ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದಿರುವುದು ಸಹ ಅಶ್ವಥ್ ಅವರ ಅಂಥ ಪಾತ್ರಗಳೇ!

ಅಶ್ವಥ್ ಅವರು ಇಂಥ ಪಾತ್ರಗಳಲ್ಲೇ ಅಭಿನಯಿಸಿರುವುದಕ್ಕೆ ಅಥವಾ ಅಂಥ ಪಾತ್ರಗಳನ್ನೇ ನಿರ್ದೇಶಕರು ಹೆಚ್ಚು ನೀಡಿರುವುದಕ್ಕೆ ಕಾರಣಗಳೇನಿರಬಹುದು? ಉತ್ತರ ಅಷ್ಟು ಸರಳವಲ್ಲ, ನಿಜ. ಆದರೆ ಅವರ ಬಹುತೇಕ ಇಂಥ ಪಾತ್ರಗಳನ್ನು ಮರು ಅವಲೋಕನಕ್ಕೆ ತೆಗೆದುಕೊಂಡಾಗ ಅವರು ಅಭಿನಯಿಸಿದ ಪ್ರತಿಯೊಂದು ಪಾತ್ರಕ್ಕೂ ಅವರು ತಂದುಕೊಟ್ಟ ‘ಘನತೆ’ ಕಾರಣವಿರಬಹುದು ಎನಿಸುತ್ತದೆ. ಛಿದ್ರವಾದ ತನ್ನ ಮಗಳ ಸಂಸಾರವನ್ನು ಕಂಡು ಅಸಹಾಯಕನಾಗುವ ತಂದೆಯ ಮನಸ್ಥಿತಿ (ಶರಪಂಜರ); ತಮ್ಮನ ಅನುಚಿತ ವರ್ತನೆಯಿಂದ ಕಂಗೆಟ್ಟ ಅಣ್ಣ (ಕರುಣೆಯೆ ಕುಟುಂಬದ ಕಣ್ಣು); ಹಣದಾಸೆಗೆ ಬಿದ್ದ ಮಗ (ಸಂಧ್ಯಾರಾಗ); ಮಮತೆಯನ್ನು ಧಾರೆಯೆರೆದು ಬೆಳೆಸಿದ ಸಾಕುಮಗ ತೊರೆದುಹೋಗುವ ಸಂದರ್ಭ (ಬಂಗಾರದ ಪಂಜರ); ಅಗಲಿದ ಮಕ್ಕಳನ್ನು ಮತ್ತೆ ಕೂಡಿಕೊಳ್ಳಲು ಯತ್ನಿಸುವ ತಂದೆ(ತಂದೆ ಮಕ್ಕಳು); ಮಗನಿಂದ ತ್ಯಜಿಸಲ್ಪಟ್ಟ ತಂದೆಯ ದೈನ್ಯತೆ(ಮಗ ಮೊಮ್ಮಗ)- ಇಂಥ ಅನೇಕ ಭಾವ ತೀವ್ರತೆಯ ಸನ್ನಿವೇಶಗಳಲ್ಲಿ ಅಶ್ವಥ್ ಅವರು ಪಾತ್ರದ ವ್ಯಕ್ತಿತ್ವವನ್ನು ಕುಗ್ಗಿಸದೆ ಘನತೆಯಿಂದ ನಿರ್ವಹಿಸುವ ರೀತಿಯು ಪ್ರೇಕ್ಷಕರಲ್ಲಿ ಸಹಾನುಭೂತಿಯುಕ್ಕುವಂತೆ ಮಾಡುತ್ತದೆ. ಅಬ್ಬರಿಸದೆ, ನೋವನ್ನು ನುಂಗಿ ಆಸೆಯ ಭವಿಷ್ಯದತ್ತ ಮೊಗಮಾಡುವ ವ್ಯಕ್ತಿತ್ವವೊಂದನ್ನು ಅವರು ತಮ್ಮ ಪಾತ್ರದಲ್ಲಿ ಸೃಷ್ಟಿಸುತ್ತಾರೆ. ಸಂಯಮವೇ ಹಿಮಾಲಯವಾದ ಮುಖಭಾವ, ಕರುಣೆಯನ್ನು ತುಂಬಿಕೊಂಡ ಕಣ್ಣು ಮತ್ತು ಭಾವಪೂರ್ಣ ದೇಹಭಾಷೆಯಿಂದ ಅಶ್ವಥ್ ಅವರು ಪಾತ್ರಕ್ಕೊಂದು ಆರಾಧಿಸುವ ಘನತೆಯನ್ನು ತಂದುಕೊಡುತ್ತಾರೆ.

ಅಶ್ವಥ್ ಅವರು ಮಧ್ಯಮವರ್ಗದಲ್ಲಿ ನಡೆಯುವ ಕಥನಗಳಲ್ಲಿ ಹಿರಿಯನ ವಿವಿಧ ಅವತಾರಗಳಲ್ಲಿ ಅಥವಾ ಬಡತನದ ಕುಟುಂಬದ ನೊಂದ ಹಿರಿಯನ ಪಾತ್ರಗಳಲ್ಲಿ ಹೆಚ್ಚು ಟೈಪ್‌ಕ್ಯಾಸ್ಟ್ ಪಾತ್ರಗಳಲ್ಲಿ ಕಾಣಿಸಿಕೊಂಡದ್ದು ನಿಜ. ಆದರೆ ಅಶ್ವಥ್ ಅವರು ನಿರ್ವಹಿಸಿದ ಇಂಥ ಸ್ಟೀರಿಯೋಟೈಪ್ ಪಾತ್ರಗಳ ಹಿನ್ನೆಲೆಗೂ ಒಂದು ಸಾಂಸ್ಕೃತಿಕ ಮಹತ್ವವಿದೆ. ಅದು ಬಡತನ, ಅಡೆತಡೆಗಳ ನಡುವೆಯೂ ವ್ಯಕ್ತಿ ಘನತೆಗೆ ಕುಂದು ಬಾರದಂತೆ ಬದುಕುವ ಹಂಬಲದ ಪಾತ್ರಗಳು. ಬಡತನ ಶಾಪವಲ್ಲ: ನಮ್ಮ ನೈತಿಕ ಸ್ಥೈರ್ಯವನ್ನು ಪರೀಕ್ಷಿಸಲು ಬರುವ ದಾಳಿಗಳು ಎಂದು ಬಗೆದು ಎದುರಿಸುವ ಪಾತ್ರಗಳು. ಅನ್ಯಾಯದ ನಡುವೆಯೂ ಮರ್ಯಾದೆಯಿಂದ ಬಾಳಲು ಯತ್ನಿಸಿ ಸಫಲವಾಗುವ ಪಾತ್ರಗಳು. ಸೀಮಿತ ಸಂಪನ್ಮೂಲ, ಸೀಮಿತ ಶಕ್ತಿಯ ನಡುವೆಯೂ ತಾನು, ತನ್ನನ್ನು ಅವಲಂಬಿಸಿದ ಮತ್ತು ನೆರೆಹೊರೆಯವರನ್ನು ಸಹ ಸಂತಸದಿಂದ ಇರಿಸಬೇಕೆಂಬ ಹಂಬಲದ ಪಾತ್ರಗಳು. ಭಾರತದ ಹಳ್ಳಿ ಪಟ್ಟಣಗಳಲ್ಲಿ ಇಂಥ ಹಂಬಲದ ಕೋಟ್ಯಾನುಕೋಟಿ ಜನರನ್ನು ಪ್ರತಿನಿಧಿಸಿದ ಪಾತ್ರಗಳಿಂದಲೇ ಅಶ್ವಥ್ ಅವರು ಪ್ರೇಕ್ಷಕರ ಭಾವಭಿತ್ತಿಯಲ್ಲಿ ಶಾಶ್ವತವಾಗಿ ನೆಲೆಗೊಂಡು, ಪಾಲಿಗೆ ಮರೆಯಬಾರದ ನಟರಾಗಿ ಉಳಿದಿರುವುದು.

ಪ್ರೇಕ್ಷಕರೊಡನೆ ನೇರವಾಗಿ ಸಂವಾದಕ್ಕಿಳಿಯುವಷ್ಟು ಸಹಜವಾಗಿ ಪಾತ್ರನಿರ್ವಹಿಸುತ್ತಿದ್ದ ಅಶ್ವಥ್‌ರವರ ಪ್ರತಿಭೆಗೆ ಸವಾಲಾಗಬಲ್ಲ ಪಾತ್ರಗಳ ಸೃಷ್ಟಿ ಕೊನೆಕೊನೆಗೆ ಕಡಿಮೆಯಾಗಿ ಹೋಯಿತು. ಪ್ರೇಕ್ಷಕರ ಅಭಿರುಚಿಯಂತೆಯೇ ನಿರ್ದೇಶಕರು ಪೋಷಕ ಪಾತ್ರಗಳನ್ನು ಕಡೆಗಣಿಸಿದರು. ನಾಯಕ-ನಾಯಕಿಯರೇ ವಿಜೃಂಭಿಸತೊಡಗಿದ ನಂತರ ಅಶ್ವಥ್‌ರವರಂಥ ಅಭಿಜಾತ ನಟರು ಬೇಡವಾದರು. ಕೊನೆಗೆ ಚಲನಚಿತ್ರರಂಗದ ವರ್ತನೆಯಿಂದ ಬೇಸತ್ತು ನಾಲ್ಕು ದಶಕಗಳ ಚಿತ್ರರಂಗದ ಕರಳುಬಳ್ಳಿಯನ್ನು 1995ರಲ್ಲಿ ಕತ್ತರಿಸಿಕೊಂಡರು. ಪಾತ್ರ ಮತ್ತು ಬದುಕಿನಲ್ಲಿ ‘ನಮ್ಮವರೇ’ ಆಗಿದ್ದ, ನಮ್ಮ ಸಂಸ್ಕೃತಿಯ ವಕ್ತಾರನಂತಿದ್ದ ಅಶ್ವಥ್‌ರವರ ನಿರ್ಧಾರ ಕನ್ನಡ ಚಿತ್ರರಂಗ ನಮ್ಮತನದಿಂದ ದೂರ ಸರಿದಿದ್ದ ವಿದ್ಯಮಾನಕ್ಕೆ ಸಂಕೇತವೆನಿಸಿತ್ತು.

ಅಶ್ವಥ್ ಅವರು ಚಿತ್ರರಂಗದಂದ ದೂರವಾದರೂ ಅವರ ಆತ್ಮೀಯರಾಗಿದ್ದ ಡಾ. ರಾಜ್ ಅವರ ಒತ್ತಾಯಕ್ಕೆ ಕಟ್ಟುಬಿದ್ದು ಮತ್ತೆ ಅಭಿನಯಿಸಲು ಪ್ರಾರಂಭಿಸಿದರೂ ಹೆಚ್ಚು ದಿನ ಮುಂದುವರೆಸಲಿಲ್ಲ. ಸರಳತೆ, ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಬದುಕು ಸಾಧಿಸಿ, ವೃತ್ತಿಯಲ್ಲಿ ಘನತೆ ಮೆರೆದ ಅವರು 2007ರಿಂದ ಅಭಿನಯಕ್ಕೆ ಕೊನೆ ಹೇಳಿದರು. 1955ರಿಂದ 2007ರವರೆಗೆ ಸುಮಾರು 275 ಚಿತ್ರಗಳಲ್ಲಿ ನಟಿಸಿದ ಅಶ್ವಥ್ ಅವರ ವೃತ್ತಿಜೀವನದ ಮತ್ತೊಂದು ಮಹತ್ವದ ಸಂಗತಿಯೆಂದರೆ ಮೇರುನಟ ರಾಜ್ ಅವರ ಜೊತೆಯಲ್ಲಿ 94 ಚಿತ್ರಗಳಲ್ಲಿ ತೆರೆಯನ್ನು ಹಂಚಿಕೊಂಡದ್ದು.
ತಮಗಿಂತ ಕಿರಿಯವರಾದ ರಾಜ್ ಅವರ ಅಗಲಿಕೆ ಅವರಿಗೆ ಅಪಾರ ನೋವು ಕೊಟ್ಟಿತ್ತು. ಕರ್ನಾಟಕ ಸರ್ಕಾರ ಸ್ಥಾಪಿಸಿರುವ, ಕಲಾವಿದರೊಬ್ಬರ ಜೀವಮಾನ ಸಾಧನೆಯನ್ನು ಗೌರವಿಸಲು ನೀಡುವ ‘ಡಾ. ರಾಜಕುಮಾರ್ ಪ್ರಶಸ್ತಿ’ಯ ಮೊದಲ ಪುರಸ್ಕಾರಕ್ಕೆ (1993-94)ಅಶ್ವಥ್ ಅವರನ್ನೇ ಆರಿಸಿದ್ದು ಔಚಿತ್ಯಪೂರ್ಣವಾಗಿತ್ತು. ಅವರು ಕಲಾರಂಗಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ತುಮಕೂರು ವಿಶ್ವವಿದ್ಯಾಲಯವು 2008ರಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದ್ದು ಸಹ ಅರ್ಥಪೂರ್ಣವಾಗಿತ್ತು.

ತಮ್ಮ ವಿಶ್ರಾಂತ ಜೀವನವನ್ನು ಮೈಸೂರಿನಲ್ಲಿಯೇ ಕಳೆದ ಅಶ್ವಥ್ ಅವರು 2011ರ ಜನವರಿ ಆದಿಯಲ್ಲಿ ಕಾಶಿಗೆ ತೆರಳಿ ವಾಪಸ್ಸು ಬಂದ ನಂತರ ಅಸ್ವಸ್ಥರಾದರು. ಜನವರಿ 18ರ ಮೂಂಜಾನೆಯಲ್ಲಿ ಅವರು ಕೊನೆಯುಸಿರೆಳೆದರು. ಅಲ್ಲಿಗೆ ಕನ್ನಡ ಚಲನಚಿತ್ರರಂಗದ ಉಜ್ವಲ ಅಧ್ಯಾಯವೊಂದು ತೆರೆಯ ಮರೆಗೆ ಸರಿಯಿತು. (ಲೇಖಕರು: ಡಾ. ಕೆ. ಪುಟ್ಟಸ್ವಾಮಿ).

“ಮಕ್ಕಳ ಆಟ ಇನ್ ತೋಟ” ವಿಶೇಷ ಬೇಸಿಗೆ ಶಿಬಿರ

ಬೇಸಿಗೆ ಶಿಬಿರ ಮಕ್ಕಳಿಗೆ ಪ್ರಕೃತಿಯ ಪಾಠಶಾಲೆ – ಡಾ.ಎಸ್.ವಿ.ಸುರೇಶ
BENGALURU : ಬೇಸಿಗೆ  ಶಿಬಿರವು ಮಕ್ಕಳಿಗೆ ಪ್ರಕೃತಿಯ ಪಾಠಶಾಲೆಯಾಗಿದೆ. ವಿವಿಧ ಗಿಡಗಳು, ಹಣ್ಣುಗಳು ಹಾಗೂ ಪಕ್ಷಿಗಳನ್ನು ಕಂಡು ಮಕ್ಕಳು ಹೊಸ ವಿಚಾರಗಳನ್ನು ಕಲಿತಿದ್ದಾರೆ. ಈ ರೀತಿಯ ಬೇಸಿಗೆ ಶಿಬಿರಗಳು (Summer Camps) ಮಕ್ಕಳಿಗೆ ಪಠ್ಯಪುಸ್ತಕದ ಹೊರಗಿನ ಬದುಕಿನ ಪಾಠಗಳನ್ನು ಕಲಿಸುವ ನೈಜ ಅನುಭವದ ಶಾಲೆಯಾಗಿದೆ ಎಂದು ಕೃಷಿ ವಿಶ್ವವಿದ್ಯಾನಿಲಯದ (GKVK) ಗೌರವಾನ್ವಿತ ಕುಲಪತಿಗಳಾದ ಡಾ. ಎಸ್.ವಿ. ಸುರೇಶ (Dr.SV Suresh) ಅವರು ತಿಳಿಸಿದರು.

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ಆವರಣದಲ್ಲಿ ಮಕ್ಕಳ ಕಲಿಕೆಯ ಅಂಗವಾಗಿ ಮೇ 18 ರಿಂದ 22 ರವರೆಗೆ  5 ದಿನಗಳ ಕಾಲ ಆಯೋಜಿಸಲಾಗಿದ್ದ “ಮಕ್ಕಳ ಆಟ ಇನ್ ತೋಟ” ಗಿಡ, ಮರ, ಕೀಟ, ಚಿಟ್ಟೆಗಳ ಜೊತೆ ಒಂದು ವಾರ ಎಂಬ ಶೀರ್ಷಿಕೆಯಡಿಯ ವಿಶೇಷ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಈ ವಿಶೇಷ ಕಾರ್ಯಕ್ರಮದಲ್ಲಿ ತೋಟದಲ್ಲಿ ಮಕ್ಕಳ ಆಟವು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೆ, ಪ್ರಕೃತಿಯೊಂದಿಗೆ ಬೆರೆಯುವ ಅದ್ಭುತ ಅನುಭವವನ್ನು ನೀಡಿತು. ಹಸಿರು ವಾತಾವರಣದಲ್ಲಿ ಗಿಡ, ಮರಗಳು, ಬಣ್ಣ ಬಣ್ಣದ ಚಿಟ್ಟೆಗಳು ಹಾಗೂ ವಿವಿಧ ಕೀಟಗಳೊಂದಿಗೆ ಬೆರೆಯುವ ಮೂಲಕ ಮಕ್ಕಳು ಪ್ರಕೃತಿಯ ಸೌಂದರ್ಯವನ್ನು ಹತ್ತಿರದಿಂದ ಆಸ್ವಾದಿಸಿದರು. ಶಿಬಿರದ ಅವಧಿಯಲ್ಲಿ ಮಕ್ಕಳಿಗೆ ತೋಟದಲ್ಲಿ ಓಡಾಟ, ಗಿಡ ನೆಡುವುದು, ಗಿಡಗಳಿಗೆ ನೀರು ಹಾಕುವುದು, ಸಸ್ಯಗಳ ಆರೈಕೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಡಲಾಯಿತು.

ಶಿಬಿರದ ಕೊನೆಯ ದಿನವಾದ ಇಂದು ಮಕ್ಕಳು ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದ ತೋಟದಲ್ಲಿನ ಹೂ, ಹಣ್ಣು, ಸುಗಂಧದ್ರವ್ಯ ಹಾಗೂ ಔಷಧೀಯ ಸಸ್ಯಗಳ ಬಗ್ಗೆ ತಮಗಿರುವ ಜ್ಞಾನವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಪರಿಸರ ಮಾಲಿನ್ಯ, ಪರಿಸರದ ಅಸಮತೋಲನ ಮತ್ತು ಪ್ರಕೃತಿ ಸಂರಕ್ಷಣೆಯ ಅಗತ್ಯತೆಯನ್ನು ಸರಳವಾಗಿ ಬಿಂಬಿಸುವ, ಪ್ಲಾಸ್ಟಿಕ್ ನಿವಾರಣೆಯಂತಹ ಜಾಗೃತಿ ಮೂಡಿಸುವ ಹಾಗೂ ಗಿಡಗಳನ್ನು ನೆಟ್ಟು ಪರಿಸರವನ್ನು ಹಸಿರಾಗಿಸುವ ಸಂದೇಶವುಳ್ಳ ಅದ್ಭುತ ಮೂಕಾಭಿನಯವನ್ನು ಮಕ್ಕಳು ಪ್ರದರ್ಶಿಸಿದರು. ಈ ಶಿಬಿರದಲ್ಲಿ ಒಟ್ಟು 70 ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಸ್ತರಣಾ ನಿರ್ದೇಶಕರಾದ ಡಾ: ವೈ.ಎನ್. ಶಿವಲಿಂಗಯ್ಯ ಮತ್ತು ಸಹ ವಿಸ್ತರಣಾ ನಿರ್ದೇಶಕರಾದ ಡಾ: ಕೆ.ಪಿ. ರಘುಪ್ರಸಾದ್, ಡಾ: ಸಿ.ಕೆ. ಪ್ರಮಿಳ, ಡಾ: ಪ್ರಹ್ಲಾದ್ ಪಿ ಭಟ್ ಮತ್ತು ಡಾ: ಕೆ. ಪಲ್ಲವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಮದ್ಯದ ಅಂಶ ಆಧಾರಿತ ನೂತನ ಸುಂಕ ವ್ಯವಸ್ಥೆ ಜಾರಿ

ಮುಖ್ಯಮಂತ್ರಿಗಳು 2026-27ನೇ ಸಾಲಿನ ಆಯವ್ಯಯ (Budget Speech) ಭಾಷಣದಲ್ಲಿ ಘೋಷಿಸಿರುವಂತೆ, ಭಾರತದಲ್ಲೇ ಅತ್ಯಂತ ಪ್ರಥಮ ಬಾರಿಗೆ ಮದ್ಯದ ಅಂಶವನ್ನು (Alcohol-in-Beverage – AIB) ಆಧರಿಸಿದ ನೂತನ ಸುಂಕದ ವ್ಯವಸ್ಥೆಯನ್ನು ಮೇ 11, 2026 ರಿಂದ ಕರ್ನಾಟಕ ರಾಜ್ಯಾದ್ಯಂತ ಜಾರಿಗೆ ತರಲಾಗಿದೆ ಎಂದು ರಾಜ್ಯ ಅಬಕಾರಿ ಇಲಾಖೆ (Department of Excise) ಪ್ರಕಟಿಸಿದೆ.

ಜಾಗತಿಕ ಮಟ್ಟದಲ್ಲಿ ಮದ್ಯದ ಅಂಶವನ್ನು ಆಧರಿಸಿ ತೆರಿಗೆ ವಿಧಿಸುವ ಈ ಪದ್ಧತಿಯು ಅತ್ಯಂತ ಯಶಸ್ವಿ ಮತ್ತು ‘ಚಿನ್ನದ ಗುಣಮಟ್ಟ’ (Gold Standard) ಎಂದು ಪರಿಗಣಿಸಲ್ಪಟ್ಟಿದೆ.

ನೂತನ ನೀತಿಯ ಪ್ರಮುಖ ಅಂಶಗಳು:

ಹೊಸ ನೀತಿಯಡಿ ಸರ್ಕಾರದಿಂದ ಮದ್ಯದ ಬೆಲೆ ನಿರ್ಧಾರವಾಗುವುದನ್ನು ಮುಕ್ತಗೊಳಿಸಲಾಗಿದೆ. ಮಾರುಕಟ್ಟೆ ಪರಿಗಣನೆ ಆಧಾರದ ಮೇಲೆ ಮದ್ಯದ ಉತ್ಪನ್ನಗಳನ್ನು ಆಯಾ ಸ್ಲ್ಯಾಬ್‍ಗಳಲ್ಲಿ ನಿರ್ಧರಿಸುವ ಸಂಪೂರ್ಣ ಅಧಿಕಾರವನ್ನು ಈಗ ಉತ್ಪಾದಕರಿಗೆ ನೀಡಲಾಗಿದೆ.

ಸರ್ಕಾರದ ಅಧಿಸೂಚನೆ ಸಂಖ್ಯೆ: FD 14 PES 2026, ದಿನಾಂಕ: 08-05-2026 ರ ಆದೇಶದಂತೆ, ಈ ಹಿಂದೆ ಚಾಲ್ತಿಯಲ್ಲಿದ್ದ 16 ಐ.ಎಂ.ಎಲ್ ಸ್ಲ್ಯಾಬ್‍ಗಳನ್ನು ಪುನರ್ವಿಮರ್ಶಿಸಿ ಹಾಗೂ ತರ್ಕಬದ್ಧಗೊಳಿಸಿ 8 ಸ್ಲ್ಯಾಬ್‍ಗಳಿಗೆ ಇಳಿಸಲಾಗಿದೆ. ರಾಜ್ಯದ ಗ್ರಾಹಕರಿಗೆ ಅಗ್ಗದ ದರದಲ್ಲಿ ಮದ್ಯ ದೊರಕುವಂತೆ ಮಾಡಲು ಕ್ರಮ ವಹಿಸಲಾಗಿದೆ.

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಇರುವ ಮದ್ಯದ ದರಗಳಿಗೆ ಹೋಲಿಸಿದಾಗ, ಕರ್ನಾಟಕದಲ್ಲಿ ಅದಕ್ಕಿಂತ ಕಡಿಮೆ ಇರುವಂತೆ ಹಾಗೂ ತುಲನಾತ್ಮಕವಾಗಿ ಸಮನಾಗಿರುವಂತೆ ನೋಡಿಕೊಳ್ಳಲು ಐ.ಎಂ.ಎಲ್ ಸ್ಲ್ಯಾಬ್‍ಗಳನ್ನು ವೈಜ್ಞಾನಿಕವಾಗಿ ಮರುರಚಿಸಲಾಗಿದೆ.

ಕೆಲವು ಹೆಚ್ಚು ಮಾರಾಟವಾಗುವ ಮದ್ಯ ಮತ್ತು ಬಿಯರ್ ಬ್ರಾಂಡ್‍ಗಳ ಪರಿಷ್ಕøತ ಗರಿಷ್ಠ ಚಿಲ್ಲರೆ ಮಾರಾಟ ಬೆಲೆ ದರ ಪಟ್ಟಿಯನ್ನು (ಅಳತೆವಾರು ಮತ್ತು ಬೆಲೆಯ ಪ್ರಕಾರ) ಪ್ರಕಟಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಪ್ರಕಟಣೆ ತಿಳಿಸಿದೆ.

 

ಬಿಚ್ಚಾಲೆ ಬೃಂದಾವನ ಬಳಿಯ ಗೋಶಾಲೆ ಬೀಗ ಹಾಕಿದ ಅಧಿಕಾರಿಗಳು

2026ರ ರಾಜ್ಯಸಭೆ ದ್ವೈವಾರ್ಷಿಕ ಚುನಾವಣೆಗಳ ವೇಳಾಪಟ್ಟಿ ಪ್ರಕಟ

ಭಾರತ ಚುನಾವಣಾ ಆಯೋಗವು 2026ರ ಜೂನ್ ಮತ್ತು ಜುಲೈ ತಿಂಗಳಲ್ಲಿ ನಿವೃತ್ತಿ ಹೊಂದಲಿರುವ ಒಟ್ಟು 10 ರಾಜ್ಯಗಳ 24 ರಾಜ್ಯಸಭಾ ಸದಸ್ಯರ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಗಳನ್ನು ನಡೆಸಲು ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕರ್ನಾಟಕ ರಾಜ್ಯದ 4 ಪ್ರಮುಖ ಸ್ಥಾನಗಳು ಸೇರಿದಂತೆ ವಿವಿಧ ರಾಜ್ಯಗಳ ನಿವೃತ್ತಿ ಹೊಂದಲಿರುವ ಸದಸ್ಯರ ಖಾಲಿ ಸ್ಥಾನಗಳಿಗೆ ಈ ಕೆಳಗಿನಂತೆ ಚುನಾವಣಾ ಪ್ರಕ್ರಿಯೆಗಳು ಜರುಗಲಿವೆ.

ಚುನಾವಣಾ ವೇಳಾಪಟ್ಟಿಯಂತೆ ಚುನಾವಣಾ ಅಧಿಸೂಚನೆ ಹೊರಡಿಸುವ ದಿನಾಂಕ 01 ಜೂನ್ 2026 (ಸೋಮವಾರ), ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ 08 ಜೂನ್ (ಸೋಮವಾರ) ನಾಮಪತ್ರಗಳ ಪರಿಶೀಲನೆ 09 ಜೂನ್ (ಮಂಗಳವಾರ), ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕ 11 ಜೂನ್ (ಗುರುವಾರ), ಮತದಾನದ ದಿನಾಂಕ 18 ಜೂನ್ (ಗುರುವಾರ), ಮತದಾನದ ಸಮಯ ಬೆಳಿಗ್ಗೆ 09:00 ಗಂಟೆಯಿಂದ ಸಾಯಂಕಾಲ 04:00 ಗಂಟೆಯವರೆಗೆ ಮತಗಳ ಎಣಿಕೆ ಕಾರ್ಯ 18 ಜೂನ್ (ಗುರುವಾರ) ಸಾಯಂಕಾಲ 05:00 ಗಂಟೆಗೆ, ಚುನಾವಣಾ ಪ್ರಕ್ರಿಯೆ 20 ಜೂನ್ (ಶನಿವಾರ) ಪೂರ್ಣಗೊಳ್ಳಲಿದೆ.

ವಿವಿಧ ರಾಜ್ಯಗಳನ್ನು ಪ್ರತಿನಿಧಿಸುತ್ತಿರುವ ಒಟ್ಟು 24 ರಾಜ್ಯಸಭಾ ಸದಸ್ಯರು ಬರುವ 2026ರ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ. ಭಾರತೀಯ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ನಿವೃತ್ತಿ ಪ್ರಕ್ರಿಯೆ ನಡೆಯಲಿದೆ.

ಕರ್ನಾಟಕದ ನಾಲ್ಕು ಪ್ರಮುಖ ನಾಯಕರು ಸೇರಿದಂತೆ ವಿವಿಧ ರಾಜ್ಯಗಳ ನಿವೃತ್ತಿ ಹೊಂದಲಿರುವ ಸದಸ್ಯರ ಅಧಿಕೃತ ವಿವರಗಳು ಈ ಕೆಳಗಿನಂತಿವೆ:

ಕರ್ನಾಟಕ ರಾಜ್ಯದಿಂದ ಒಟ್ಟು 4 ಸದಸ್ಯರು 2026 ರ ಜೂನ್ 25 ರಂದು ನಿವೃತ್ತಿ ಹೊಂದಲಿದ್ದು, ಆ ಸ್ಥಾನಗಳಿಗೂ ಈ ಚುನಾವಣಾ ವೇಳಾಪಟ್ಟಿಯಂತೆ ಮತದಾನ ನಡೆಯಲಿದೆ. ರಾಜ್ಯಸಭೆ ಸದಸ್ಯರಾದ ನಾರಾಯಣ ಕೊರಗಪ್ಪ, ಈರಣ್ಣ ಕಡಾಡಿ, ಹೆಚ್.ಡಿ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಅವರು ನಿವೃತ್ತಿ ಹೊಂದಲಿದ್ದಾರೆ.

ಆಂಧ್ರಪ್ರದೇಶದ ಅಯೋಧ್ಯ ರಾಮಿ ರೆಡ್ಡಿ ಅಲ್ಲಾ, ನತ್ವಾಮಿ ಪರಿಮಳ್, ಪಿಲ್ಲಿ ಸುಭಾಷ್ ಚಂದ್ರ ಬೋಸ್, ಸನಾ ಸತೀಶ್ ಬಾಬು, ಗುಜರಾತ್‍ನ ರಾಮ್‍ಭಾಯ್ ಹರ್ಜಿಭಾಯ್ ಮೊಕರಿಯಾ, ಅಮಿನ್ ನರಹರಿ ಹೀರಾಭಾಯ್, ಗೋಹಿಲ್ ಶಕ್ತಿಸಿನ್ಹಜಿ ಹರಿಚಂದ್ರಸಿನ್ಹಜಿ, ರಮಿಲಾ ಬೆಚರಭಾಯ್ ಬಾರಾ, ರಾಜಸ್ಥಾನದ ನೀರಜ್ ಡಾಂಗಿ, ರಾಜೇಂದ್ರ ಗೆಹ್ಲೋಟ್, ರವನೀತ್ ಸಿಂಗ್, ಮಧ್ಯಪ್ರದೇಶದ ಜಾರ್ಜ್ ಕುರಿಯನ್, ದಿಗ್ವಿಜಯ್ ಸಿಂಗ್, ಸುಮೇರ್ ಸಿಂಗ್ ಸೋಲಂಕಿ, ಜಾಖರ್ಂಡ್ ನ ದೀಪಕ್ ಪ್ರಕಾಶ್ ಮತ್ತು ಶಿಬು ಸೊರೇನ್ (ಶಿಬು ಸೊರೇನ್ ಅವರ ಸ್ಥಾನವು 04.08.2025 ರಿಂದಲೇ ತೆರವಾಗಿದೆ).
ಮಣಿಪುರದ ಮಹಾರಾಜ ಸನಾಜಾವೊಬಾ ಲೀಶೆಂಬಾ ಹಾಗೂ ಮೇಘಾಲಯದ ವಾನ್‍ವೈರಾಯ್ ಖರ್ಲುಖಿ ಅವರು 2026 ರ ಜೂನ್ 21 ರಂದು ನಿವೃತ್ತಿ ಹೊಂದಲಿದ್ದಾರೆ.

ಅರುಣಾಚಲ ಪ್ರದೇಶದ ನಬಮ್ ರೆಬಿಯಾ 2026 ರ ಜೂನ್ 23 ರಂದು ಹಾಗೂ ಮಿಜೋರಾಂನ ಕೆ. ವನ್‍ಲಾಲ್‍ವೇನಾ 2026 ರ ಜುಲೈ 19 ರಂದು ನಿವೃತ್ತಿ ಹೊಂದಲಿದ್ದಾರೆ.

ಬ್ಯಾಲೆಟ್ ಪತ್ರಿಕೆಯಲ್ಲಿ ಆದ್ಯತೆಗಳನ್ನು ಗುರುತಿಸಲು ಚುನಾವಣಾಧಿಕಾರಿಗಳು ಒದಗಿಸುವ ನಿಗದಿತ ವಿಶೇಷ ಸಂಯೋಜಿತ ನೇರಳೆ ಬಣ್ಣದ ಸ್ಕೆಚ್ ಪೆನ್ ಅನ್ನು ಮಾತ್ರ ಬಳಸಬೇಕಾಗಿರುತ್ತದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಪೆನ್ ಬಳಸುವಂತಿಲ್ಲ. ಚುನಾವಣಾ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲು ಹಾಗೂ ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಅಗತ್ಯ ವೀಕ್ಷಕರನ್ನು ನೇಮಿಸಲಾಗುವುದು ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.