ಬೆಂಗಳೂರು: ಭಾರತದಲ್ಲಿ ಅತಿಹೆಚ್ಚು ಆಸ್ತಮಾ ರೋಗಿಗಳು ಇರುವ ನಗರಗಳಲ್ಲಿ ಬೆಂಗಳೂರು ಕೂಡಾ ಒಂದೆಂದು ಪ್ರಮುಖವಾಗಿ ಗುರುತಿಸಲಾಗುತ್ತದೆ. ಅದರಲ್ಲಿ ಮಕ್ಕಳಲ್ಲಿಯೂ ಆಸ್ತಮಾ ಸಮಸ್ಯೆ ಸಾಮಾನ್ಯವಾಗಿ ಕಂಡುಬರುತ್ತಿದೆ. ಆದರೆ, ವಿಶಿಷ್ಟ ಪ್ರಕರಣವೊಂದರಲ್ಲಿ, ಪೋಷಕರು ತಮ್ಮ ಮಗುವಿಗೆ ಆಸ್ತಮಾ ಆಗಿದೆ ಎಂದು ವೈದ್ಯರ ಬಳಿ ತೆರಳಿದಾಗ ಇದು ಬೇರೆಯದ್ದೇ ಗಂಭೀರ ಸಮಸ್ಯೆ ಎಂಬುದು ಬೆಳಕಿಗೆ ಬಂದಿದೆ. ಅಪಾಯಕಾರಿ ಮೊನಚಾದ ಪಿನ್ ಮಗುವಿನ ಶ್ವಾಸನಾಳದ ಒಳಭಾಗದಲ್ಲಿ ಸಿಲುಕಿಕೊಂಡಿರುವುದು ಈ ವೇಳೆ ಪತ್ತೆಯಾಗಿದೆ.
ಯಶವಂತಪುರದ ಸ್ಪರ್ಶ್ ಆಸ್ಪತ್ರೆಯ, ಮಕ್ಕಳ ಶ್ವಾಸಕೋಶ ತಜ್ಞರಾದ ಡಾ. ಗಣೇಶ್ ಪ್ರತಾಪ್ ಅವರು ಈ ಕುರಿತು ಮಾಹಿತಿ ನೀಡುತ್ತಾ, 8 ವರ್ಷದ ಬಾಲಕನನ್ನು ತೀವ್ರ ಮತ್ತು ನಿರಂತರ ಕೆಮ್ಮು ಹಾಗೂ ಉಸಿರಾಟದ ವೇಳೆ ಉಬ್ಬಸದಂತಹ ಶಬ್ದ (ವೀಜಿಂಗ್) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆತರಲಾಯಿತು. ಆರಂಭದಲ್ಲಿ ಇದು ತೀವ್ರ ಆಸ್ತಮಾ ಎಂಬಂತೆ ಕಂಡುಬಂದರೂ, ವಾಸ್ತವದಲ್ಲಿ ಅದು ಬೇರೆಯದ್ದೆ ಸಮಸ್ಯೆಯಾಗಿತ್ತು, ಎಂದು ಹೇಳಿದರು.
ಬಾಲಕನಿಗೆ ಎಕ್ಸ್-ರೇ ಮತ್ತು ಹೈ-ರೆಸಲ್ಯೂಷನ್ ಸಿಟಿ ಸ್ಕ್ಯಾನ್ |(chest X-ray and a high-resolution CT scan) ಸೇರಿದಂತೆ ವಿವಿಧ ಪರೀಕ್ಷೆಗಳನ್ನು ನಡೆಸಲಾಯಿತು. ಈ ಪರೀಕ್ಷೆಗಳ ವರದಿಯಲ್ಲಿ ಶ್ವಾಸಕೋಶಕ್ಕೆ ಗಾಳಿಯನ್ನು ಸಾಗಿಸುವ ಶ್ವಾಸನಾಳಗಳ ಜಾಲದೊಳಗೆ ಒಂದು ಮೊನಚಾದ ವಸ್ತು ಸಿಲುಕಿಕೊಂಡಿದ್ದು, ಅದು ಗಾಳಿ ಸಾಗಲು ಭಾಗಶಃ ಅಡ್ಡಿಪಡಿಸುತ್ತಿರುವುದು ಪತ್ತೆಯಾಗಿದೆ.
ಈ ಕುರಿತು ವಿವರಿಸಿದ ಡಾ. ಗಣೇಶ್ ಪ್ರತಾಪ್, ಆ ತೀಕ್ಷ್ಣ ವಸ್ತು ಸ್ಥಳಾಂತರಗೊಂಡರೆ ಪ್ರಮುಖ ರಕ್ತನಾಳಕ್ಕೆ ಹಾನಿಯಾಗುವ ಅಥವಾ ಸಂಪೂರ್ಣವಾಗಿ ಆಮ್ಲಜನಕದ ಪೂರೈಕೆಯನ್ನು ತಡೆಯುವ ಅಪಾಯವಿತ್ತು. ಹೀಗಾಗಿ ತಕ್ಷಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಸಾಮಾನ್ಯ ಅನಸ್ತೀಷಿಯಾ ನೀಡಿ ತುರ್ತು ಬ್ರಾಂಕೋಸ್ಕೋಪಿ ಪ್ರಕ್ರಿಯೆಯನ್ನು ನಡೆಸಲಾಯಿತು. ಬ್ರಾಂಕೋಸ್ಕೋಪಿ ವೇಳೆ, ಶ್ವಾಸನಾಳದ ಒಳಭಾಗದಲ್ಲಿ ಮೊನಚಾದ ಪುಶ್ ಪಿನ್ ಗಟ್ಟಿಯಾಗಿ ಸಿಲುಕಿಕೊಂಡಿದ್ದು, ಗಾಳಿಯ ಹರಿವಿಗೆ ಅಡ್ಡಿಯಾಗಿರುವುದು ಕಂಡುಬಂದಿತು. ಶ್ವಾಸಕೋಶದ ಸೂಕ್ಷ್ಮ ಒಳಪದರಕ್ಕೆ ಯಾವುದೇ ಹಾನಿಯಾಗದಂತೆ ಅತ್ಯಂತ ಎಚ್ಚರಿಕೆಯಿಂದ ಹಾಗೂ ಸುಧಾರಿತ ಬ್ರಾಂಕೋಸ್ಕೋಪಿಕ್ ತಂತ್ರಜ್ಞಾನವನ್ನು ಬಳಸಿ ಪಿನ್ ಅನ್ನು ಯಶಸ್ವಿಯಾಗಿ ಹೊರತೆಗೆದುಹಾಕಲಾಯಿತು, ಎಂದು ಹೇಳಿದರು.
ಪಿನ್ ಅನ್ನು ಹೊರತೆಗೆದ ತಕ್ಷಣ ಮಗುವಿನ ಶ್ವಾಸನಾಳ ಸಂಪೂರ್ಣವಾಗಿ ತೆರೆಯಿತು. ನಿರಂತರವಾಗಿ ಕಾಡುತಿದ್ದ ಕೆಮ್ಮು ಕೂಡಲೇ ನಿಂತು ಹೋಯಿತು. ಉಬ್ಬಸದಂತಹ ಶಬ್ದ ಸಂಪೂರ್ಣವಾಗಿ ಮಾಯವಾಗಿ, ಉಸಿರಾಟದ ಪ್ರಕ್ರಿಯೆ ಸಹಜ ಸ್ಥಿತಿಗೆ ಮರಳಿತು. ಅದು ಮಗುವಿಗೂ ಹಾಗೂ ಕುಟುಂಬದವರಿಗೂ ದೊಡ್ಡ ನಿರಾಳತೆಯ ಕ್ಷಣವಾಗಿತ್ತು, ಎಂದು ಡಾ. ಗಣೇಶ್ ಪ್ರತಾಪ್ ಹೇಳಿದರು.
ಚಿಕಿತ್ಸೆಯ ಬಳಿಕ ಬಾಲಕನ ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈ ಪ್ರಕರಣವು ಪೋಷಕರಿಗೆ ಮಹತ್ವದ ಪಾಠವಾಗಿದ್ದು, ಮಕ್ಕಳ ಶ್ವಾಸಕೋಶ ಚಿಕಿತ್ಸಾ ವಿಭಾಗದಲ್ಲಿ ನಾವು ಅನುಸರಿಸುವ ಪ್ರಮುಖ ನಿಯಮವೆಂದರೆ ಎಲ್ಲಾ ಉಬ್ಬಸ (openness) ಸಮಸ್ಯೆಗಳು ಆಸ್ತಮಾ ಕಾರಣದಿಂದಲೇ ಆಗುವುದಿಲ್ಲ ಎಂಬುದು, ಎಂದು ಡಾ. ಗಣೇಶ್ ಪ್ರತಾಪ್ ಹೇಳಿದರು.
ಹಿಂದೆ ಯಾವುದೇ ಅಲರ್ಜಿ ಅಥವಾ ಆಸ್ತಮಾ ಇತಿಹಾಸವಿಲ್ಲದ ಆರೋಗ್ಯವಂತ ಮಗು ಏಕಾಏಕಿ ತೀವ್ರ ಕೆಮ್ಮು ಅಥವಾ ಉಬ್ಬಸದ ಲಕ್ಷಣಗಳನ್ನು ತೋರಿದರೆ, ಅದನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಮಕ್ಕಳಿಗೆ ಗೊತ್ತಾಗದಂತೆ ಅಥವಾ ಆಟವಾಡುವ ವೇಳೆ ಸಣ್ಣ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುವ ಪ್ರವೃತ್ತಿ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಶ್ವಾಸನಾಳದೊಳಗೆ ವಸ್ತು ಸಿಲುಕಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ” ಎಂದು ಅವರು ತಿಳಿಸಿದರು.
ಮಗುವಿನ ಎದೆಯೊಳಗೆ ಸಿಲುಕಿಕೊಂಡಿರುವ ಚೂಪಾದ ಪಿನ್ ಒಂದು ಟಿಕಿಂಗ್ ಟೈಮ್ ಬಾಂಬ್ನಂತೆ. ಇಂತಹ ಸಂದರ್ಭಗಳಲ್ಲಿ ತಕ್ಷಣ ಚಿಕಿತ್ಸೆ ನೀಡುವುದು ಮಗುವಿನ ಜೀವ ಉಳಿಸುವುದರ ಜೊತೆಗೆ, ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಶ್ವಾಸಕೋಶದ ಶಾಶ್ವತ ಗಾಯಗಳು, ದೀರ್ಘಕಾಲದ ಸೋಂಕುಗಳು ಹಾಗೂ ಇತರೆ ಗಂಭೀರ ತೊಂದರೆಗಳನ್ನು ತಡೆಯಲು ಸಹ ಸಹಕಾರಿ,”(Dr Ganesh Pratap) ಎಂದು ಡಾ. ಗಣೇಶ್ ಪ್ರತಾಪ್ ಹೇಳಿದರು

