ಬೆಂಗಳೂರಿನ ಪ್ರಸಿದ್ಧ ಬನ್ನೇರುಘಟ್ಟ ಜೈವಿಕ (Bannerghatta Biological Park) ಉದ್ಯಾನವನದಲ್ಲಿ (ಬಿಬಿಪಿ) ಮೇ 23 ರಂದು ವಿಶ್ವ ಆಮೆ ದಿನವನ್ನು (World Turtle Day) ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಭಾರತೀಯ ಅಂಚೆ ಇಲಾಖೆ (ಇಂಡಿಯಾ ಪೋಸ್ಟ್), ಪೋಸ್ಟ್ ಕ್ರಾಸಿಂಗ್ ವೆಲ್ಫೇರ್ ಸೊಸೈಟಿ ಆಫ್ ಇಂಡಿಯಾ (Post Crossing Welfare Society of India) ಹಾಗೂ ಪೋಸ್ಟ್ ಕಾಡ್ರ್ಸ್ ವಿಲ್ಲೆ (PostCards Ville) ಸಂಸ್ಥೆಗಳ ಸಹಯೋಗದಲ್ಲಿ ಈ ವಿಶೇಷ ಸಂವಾದಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಆಚರಣೆಯ ಪ್ರಮುಖ ಆಕರ್ಷಣೆಯಾಗಿ, ಆಮೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಒಂಬತ್ತು ಶೈಕ್ಷಣಿಕ ಪೋಸ್ಟ್‍ಕಾರ್ಡ್‍ಗಳನ್ನು ಬಿಡುಗಡೆ ಮಾಡಲಾಯಿತು. ಈ ಪೋಸ್ಟ್ ಕಾರ್ಡ್‍ಗಳಲ್ಲಿ ನೆಲದ ಆಮೆಗಳು, ಕಡಲಾಮೆಗಳು, ಸಿಹಿನೀರಿನ ಆಮೆಗಳು ಪ್ರಮುಖವಾಗಿವೆ.
ಇವುಗಳ ಚಿತ್ರಣ ಹಾಗೂ ಈ ವಿಭಿನ್ನ ಜಾತಿಯ ಜೀವಿಗಳ ನಡುವೆ ಇರುವ ಶಾರೀರಿಕ ಮತ್ತು ಪರಿಸರ ವಿಜ್ಞಾನದ ವ್ಯತ್ಯಾಸಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ಒಳಗೊಳ್ಳಲಾಗಿದೆ.
ಸಾರ್ವಜನಿಕರು ಆಮೆ ಸಂರಕ್ಷಣಾ ಪ್ರಯತ್ನಗಳಿಗೆ ಹೇಗೆ ಕೈಜೋಡಿಸಬಹುದು ಎಂಬುದನ್ನು ಮನದಟ್ಟು ಮಾಡಲು ‘ರೌಂಡ್‍ಗ್ಲಾಸ್ ಸಸ್ಟೈನ್’ ಸಹಯೋಗದೊಂದಿಗೆ ಸಿದ್ಧಪಡಿಸಲಾದ ವಿಶೇಷ ಕಿರು ಸಂರಕ್ಷಣಾ ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು.
ಇದರ ಜೊತೆಗೆ, ಉದ್ಯಾನವನದ ಸರೀಸೃಪ ವಿಭಾಗದಲ್ಲಿ ಏಳು ಜೀವಿ ಗಾತ್ರದ ಕಡಲಾಮೆ ಮಾದರಿಗಳನ್ನು ಸಾರ್ವಜನಿಕ ವೀಕ್ಷಣೆಗೆ ಇಡಲಾಗಿತ್ತು. ಇದು ಪ್ರವಾಸಿಗರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ವಿವಿಧ ಆಮೆ ಪ್ರಭೇದಗಳು, ಪರಿಸರ ವ್ಯವಸ್ಥೆಯಲ್ಲಿ ಅವು ನಿರ್ವಹಿಸುವ ಪ್ರಮುಖ ಪಾತ್ರಗಳು ಮತ್ತು ಅವುಗಳ ವಿಶಿಷ್ಟ ರೂಪಾಂತರಗಳ ಬಗ್ಗೆ ಆಳವಾದ ಜ್ಞಾನವನ್ನು ಪಡೆಯಲು ಉತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟಿತು.
ಪ್ರಕೃತಿ ಮತ್ತು ವನ್ಯಜೀವಿಗಳ ಉಳಿವಿಗಾಗಿ ಇಂತಹ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮಗಳು ಇಂದಿನ ದಿನಗಳಲ್ಲಿ ಅತ್ಯಂತ ಅವಶ್ಯಕವಾಗಿವೆ ಎಂದು ಕಾರ್ಯಕ್ರಮದಲ್ಲಿ ಗಣ್ಯರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಉಪ ಮುಖ್ಯ ಪೋಸ್ಟ್‍ಮಾಸ್ಟರ್ ದಿನೇಶ್ ನಾರಾಯಣ್ ಹಾಗೂ ಬೆಂಗಳೂರು ದಕ್ಷಿಣದ ಅಂಚೆ ಕಚೇರಿಗಳ ಸಹಾಯಕ ಅಧೀಕ್ಷಕರಾದ ಶ್ರೀಮತಿ ನಳಿನಿ ಎನ್ ಭಾಗವಹಿಸಿದ್ದರು. ಇವರೊಂದಿಗೆ ಬಿಬಿಪಿಯ ಉಪ ನಿರ್ದೇಶಕರಾದ ಕುಮಾರಿ ಅನುಷಾ, ಪಶುವೈದ್ಯಕೀಯ ಸೇವೆಗಳ ಉಪ ನಿರ್ದೇಶಕರಾದ ಡಾ. ಪ್ರಯಾಗ್, ವಲಯ ಅರಣ್ಯ ಅಧಿಕಾರಿ ಆನಂದ್ ಮದನೆ ಹಾಗೂ ಉಪ ವಲಯ ಅರಣ್ಯ ಅಧಿಕಾರಿಗಳಾದ ಶ್ರೀಮತಿ ಅರ್ಪಿತಾ ಮತ್ತು ಮಹೇಶ್ ಉಪಸ್ಥಿತರಿದ್ದರು.

