ಬೆಂಗಳೂರು, ಜು. 29: ಶ್ರೀ ಭಗವಾನ್ ಮಹಾವೀರ ಜೈನ್ (Bhagawan Mahaveer Jain College) ಸಂಜೆ ಕಾಲೇಜಿನ ಸಂಸ್ಕೃತ (Sanskrit) ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ವ್ಯಾಸಪೂರ್ಣಿಮೆ (Vyasa Poornima) ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರು “ವ್ಯಾಸ ಮಹರ್ಷಿ ಮತ್ತು ಭಾರತೀಯ ಜ್ಞಾನ ಪರಂಪರೆ” ವಿಷಯದ ಕುರಿತು ಉಪನ್ಯಾಸ ನೀಡಿದರು. ವೇದಗಳು, ಪುರಾಣಗಳು ಹಾಗೂ ಮಹಾಭಾರತದ ಮೂಲಕ ವ್ಯಾಸ ಮಹರ್ಷಿಗಳು ಮಾನವಕುಲಕ್ಕೆ ನೀಡಿರುವ ಅಮೂಲ್ಯ ಕೊಡುಗೆಯನ್ನು ವಿಶ್ಲೇಷಿಸಿದ ಅವರು, ಭಾರತೀಯ ಸಂಸ್ಕೃತಿಯ ಭದ್ರ ಬುನಾದಿಯಾಗಿರುವ ಗುರು-ಶಿಷ್ಯ ಪರಂಪರೆಯ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ್ ಕೆ.ಎಂ. ಅವರು ವ್ಯಾಸಪೂರ್ಣಿಮೆಯ ಮಹತ್ವವನ್ನು ವಿವರಿಸಿ, ಸಂಸ್ಕೃತ ಅಧ್ಯಯನದ ಮೂಲಕ ವಿದ್ಯಾರ್ಥಿಗಳು ಭಾರತೀಯ ಜ್ಞಾನ, ಸಂಸ್ಕೃತಿ ಹಾಗೂ ಪರಂಪರೆಯೊಂದಿಗೆ ನಿಕಟ ನಂಟು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಸುನೀಲ್ ಕೆ.ಎಸ್. ಅವರು ಕಾರ್ಯಕ್ರಮದ ಸಂಯೋಜನೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಕೃತ ಸಾಹಿತ್ಯ ಹಾಗೂ ಭಾರತೀಯ ಜ್ಞಾನ ಪರಂಪರೆಯ ಸಂರಕ್ಷಣೆ ಮತ್ತು ಪ್ರಸಾರದಲ್ಲಿ ಜೈನ್ ಸಮೂಹ ಸಂಸ್ಥೆಯ ಕೊಡುಗೆ ಗಮನಾರ್ಹವಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಭಾಷಾ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

