ದೇಶದ ಕಾನೂನುಗಳನ್ನು ಪರಿಪಾಲಿಸುವ ಜವಾಬ್ದಾರಿಯುತ ನಾಗರಿಕರಾಗಬೇಕು: ಬೆಂಗಳೂರು ವಿವಿ ಕಾನೂನು ಕಾಲೇಜು ಪ್ರಾಂಶುಪಾಲ ಪ್ರೊ. ವಿ. ಸುಧೇಶ್* ವಾಸವಿ ಜ್ಞಾನ ಪೀಠ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ: 320 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಬೆಂಗಳೂರು, ಆ.13: ಸಂವಿಧಾನದ ಮೌಲ್ಯಗಳು, ಹಕ್ಕುಗಳು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿ ಅರಿತು ದೇಶದ ಕಾನೂನುಗಳನ್ನು ಗೌರವಿಸಿ, ಪರಿಪಾಲಿಸುವ ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಯೂನಿವರ್ಸಿಟಿ ಲಾ ಕಾಲೇಜು ಪ್ರಾಂಶುಪಾಲರಾದ ಪ್ರೊ. ವಿ. ಸುಧೇಶ್ ಹೇಳಿದ್ದಾರೆ.
ವಿಜಯನಗರದ ವಾಸವಿ ಜ್ಞಾನ ಪೀಠ ಪ್ರಥಮ ದರ್ಜೆ ಕಾಲೇಜಿನ ಯುಜಿ ಮತ್ತು ಪಿಜಿ ವಿಭಾಗಗಳಿಂದ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪದವಿ ಪ್ರಮಾಣಪತ್ರವಲ್ಲ; ಅದು ನಿಮ್ಮ ಜವಾಬ್ದಾರಿಯ ಆರಂಭ. ಶಿಕ್ಷಣ ಉದ್ಯೋಗ ಪಡೆಯಲು ಮಾತ್ರವಲ್ಲ, ಉತ್ತಮ ಸಮಾಜ ನಿರ್ಮಿಸಲು ಸಹಕಾರಿಯಾಗಬೇಕು. ಕೃತಕ ಬುದ್ಧಿಮತ್ತೆ ವೇಗವಾಗಿ ಬೆಳೆಯುತ್ತಿದ್ದು, ಎಐ ವೇದಿಕೆಗಳನ್ನು ಜ್ಞಾನ ವಿಸ್ತರಣೆಗೆ, ಹೊಸ ಕೌಶಲ್ಯಗಳನ್ನು ಕಲಿಯಲು ಹಾಗೂ ತಮ್ಮ ಶಿಕ್ಷಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ವಾಸವಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಶಿಕ್ಷಣ ತಜ್ಞರಾದ. ಡಿ.ಆರ್. ವಿಜಯಸಾರಥಿ ಮಾತನಾಡಿ, ಪದವಿ ನಂತರ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಯಶಸ್ಸಿನ ಜೊತೆಗೆ ಸಮಾಜದ ಪ್ರಗತಿಗೂ ಕೊಡುಗೆ ನೀಡಬೇಕು. ಉತ್ತಮ ಶಿಕ್ಷಣದ ಮೂಲಕ ಉತ್ತಮ ವೃತ್ತಿಜೀವನ ರೂಪಿಸಿಕೊಂಡು, ಹೆಮ್ಮೆಯ ಸಾಧನೆ ಮಾಡಬೇಕು. ವಿದ್ಯಾರ್ಥಿಗಳ ಉದ್ಯೋಗಾವಕಾಶಗಳಿಗೆ ಹೆಚ್ಚಿನ ಒತ್ತು ನೀಡಿದ್ದು, 20ಕ್ಕೂ ಹೆಚ್ಚು ಕಂಪನಿಗಳ ಮೂಲಕ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ. ಶಿಕ್ಷಣದ ಜೊತೆಗೆ ಅಗತ್ಯ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದೇವೆ ಎಂದರು.
ಸಮಾರಂಭದಲ್ಲಿ ವಿವಿಧ ಪದವಿ ಹಾಗೂ ಸ್ನಾತಕೋತ್ತರ ವಿಭಾಗಗಳ ಒಟ್ಟು 320 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಜೊತೆಗೆ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಅಗ್ರ ಶ್ರೇಯಾಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಾಸವಿ ಜ್ಞಾನ ಪೀಠ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪದ್ಮಾ ವಿ., ವಾಸವಿ ಜ್ಞಾನ ಪೀಠ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
