ಬೆಂಗಳೂರು : ಕರ್ನಾಟಕ ಯಕ್ಷಗಾನ ಅಕಾಡೆಮಿಯು(Karnataka Yakshagana Academy) 2026ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ವಾರ್ಷಿಕ ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಹಾಗೂ ದತ್ತಿನಿಧಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.
2026ನೇ ಆಗಸ್ಟ್ 12 ರಂದು ಅಕಾಡೆಮಿಯಲ್ಲಿ ನೆರವೇರಿದ ಸರ್ವ ಸದಸ್ಯರ ಸಭೆಯಲ್ಲಿ ಸರ್ಕಾರದ ನಿಯಮಾನುಸಾರ ವಿವಿಧ ವಿಭಾಗಗಳಲ್ಲಿ ಸಾಧನೆಗೈದ ಹಿರಿಯ ವಿದ್ವಾಂಸರು ಹಾಗೂ ಕಲಾವಿದರನ್ನು ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪುರಸ್ಕೃತರ ವಿವರ:
ಪಾರ್ತಿಸುಬ್ಬ ಪ್ರಶಸ್ತಿ: ಯಕ್ಷಗಾನ ಕ್ಷೇತ್ರದ ಹಿರಿಯ ವಿದ್ವಾಂಸರಾದ ತೀರ್ಥಹಳ್ಳಿಯ ಎಂ.ಕೆ. ರಮೇಶ ಆಚಾರ್ಯ ಅವರು ಅಕಾಡೆಮಿಯ ಅತ್ಯುನ್ನತ ಪಾರ್ತಿಸುಬ್ಬ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯು 1,00,000/- ರೂ. ನಗದು, ಪ್ರಶಸ್ತಿ ಫಲಕ, ಪ್ರಮಾಣಪತ್ರ, ಹಾರ, ಶಾಲು, ಪೇಟ ಹಾಗೂ ಫಲತಾಂಬೂಲಗಳನ್ನು ಒಳಗೊಂಡಿರುತ್ತದೆ.
ವಾರ್ಷಿಕ ಗೌರವ ಪ್ರಶಸ್ತಿ: ಕ್ಷೇತ್ರದ 5 ಜನ ಸಾಧಕರಾದ ಜಪ್ಪು ದಯಾನಂದ ಶೆಟ್ಟಿ, ಸಿರಿಬಾಗಿಲು ರಾಮಕೃಷ್ಣಮಯ್ಯ, ಪದ್ಮನಾಭ ಉಪಾಧ್ಯಾಯ, ಮಹಾಬಲ ದೇವಾಡಿಗ ಮತ್ತು ದೊಡ್ಡಮಲ್ಲಯ್ಯ ಇವರುಗಳನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ ತಲಾ 50,000/- ರೂ. ನಗದು ಹಾಗೂ ಗೌರವ ಸನ್ಮಾನ ನೀಡಲಾಗುವುದು.
ಯಕ್ಷಸಿರಿ ವಾರ್ಷಿಕ ಪ್ರಶಸ್ತಿ: ಒಟ್ಟು 10 ಜನ ಕಲಾವಿದರಾದ ವೇ. ರಾಘವೇಂದ್ರ ಆಸ್ರಣ್ಣ, ಶ್ರೀಮತಿ ಪೂರ್ಣಿಮಾ ಯತೀಶ್ ರೈ, ಶ್ರೀಮತಿ ದುರ್ಗಾಪರಮೇಶ್ವರಿ ಕುಕ್ಕಿಲ, ಉಜಿರೆ ನಾರಾಯಣ ಪೂಜಾರಿ, ವಿದ್ವಾನ್ ಲಕ್ಷ್ಮೀ ನಾರಾಯಣ ಉಪಾಧ್ಯ, ಹೆರಿಯ ನಾಯ್ಕ, ರಾಮಗೌಡ ಗುಣವಂತೆ, ಪಡೆ ಕುಮಾರ, ಸುರೇಶ ಕುಪ್ಪೆಪದವು ಮತ್ತು ಶಿವಯ್ಯ ಅವರು ಯಕ್ಷಸಿರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರಿಗೆ ತಲಾ 25,000/- ರೂ. ನಗದು ಸಹಿತ ಸನ್ಮಾನ ಪತ್ರ ನೀಡಲಾಗುತ್ತದೆ.
ದತ್ತಿನಿಧಿ ಪ್ರಶಸ್ತಿಗಳು:
ದಿ. ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಗೆ ಭೀಮಣ್ಣ ಆಯ್ಕೆಯಾಗಿದ್ದಾರೆ.
ಡಾ. ತಲ್ಲೂರು ಶಿವರಾಮ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ದತ್ತಿನಿಧಿ ಪ್ರಶಸ್ತಿಗೆ ಪ್ರೊ. ಎಂ.ಎನ್. ವೆಂಕಟೇಶ ಆಯ್ಕೆಯಾಗಿದ್ದಾರೆ.
ಈ ಎರಡೂ ದತ್ತಿನಿಧಿ ಪ್ರಶಸ್ತಿಗಳು ತಲಾ 25,000/- ರೂ. ನಗದು ಮತ್ತು ಸನ್ಮಾನಗಳನ್ನು ಒಳಗೊಂಡಿವೆ ಎಂದು ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
