ಬೆಂಗಳೂರು, ಜೂನ್ 26: ಇಂದಿನ ದಿನಗಳಲ್ಲಿ ಕಳೆದುಹೋದ ವಸ್ತುಗಳು ಮರಳಿ ಸಿಗುವುದು ಅಪರೂಪ ಎನ್ನುವ ಮಾತಿನ ನಡುವೆ, ರಾಜಾಜಿನಗರದಲ್ಲಿ ನಡೆದ ಒಂದು ಘಟನೆ ಮಾನವೀಯತೆ ಮತ್ತು ಪ್ರಾಮಾಣಿಕತೆ ಇನ್ನೂ ಜೀವಂತವಾಗಿವೆ ಎಂಬುದನ್ನು ಸಾಬೀತುಪಡಿಸಿದೆ.
ಲಕ್ಷ್ಮೀನಾರಾಯಣಪುರದ 9ನೇ ಅಡ್ಡರಸ್ತೆಯ ನಿವಾಸಿಯಾಗಿರುವ 75 ವರ್ಷದ ಪತ್ರಿಕಾ ವಿತರಕ ಕೆ. ಸುಬ್ರಮಣಿ ಅವರಿಗೆ ರಾಜಾಜಿನಗರದ ಬಿಬಿಎಂಪಿ ಸಮುಚ್ಚಯದಲ್ಲಿ ಹಳದಿ ಬಣ್ಣದ ಪರ್ಸ್ ಸಿಕ್ಕಿತ್ತು. ಅದರೊಳಗೆ ಹಣವೂ ಇತ್ತು. ಆದರೆ ಅದು ಯಾರದ್ದು ಎಂಬುದು ತಿಳಿಯದ ಕಾರಣ, ಅದನ್ನು ಮಾಲೀಕರಿಗೆ ತಲುಪಿಸಬೇಕು ಎಂಬ ದೃಢ ಸಂಕಲ್ಪದಿಂದ ಅವರು ಮುಂದೆ ಬಂದರು.
ಅವರ ಜೊತೆಗಿದ್ದ ವ್ಯಕ್ತಿಯೊಬ್ಬರು ಹಣವನ್ನು ಇಬ್ಬರೂ ಹಂಚಿಕೊಳ್ಳೋಣ ಎಂದು ಹೇಳಿದರೂ, ಅದನ್ನು ಒಪ್ಪದ ಸುಬ್ರಮಣಿ ಅವರು ನೇರವಾಗಿ ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್ ಅವರ ಕಚೇರಿಗೆ ತೆರಳಿ ಪರ್ಸ್ ಅನ್ನು ಹಸ್ತಾಂತರಿಸಿದರು.
ಶಾಸಕರು ತಕ್ಷಣವೇ ರಾಜಾಜಿನಗರ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಕಚೇರಿಗೆ ಕರೆಸಿ, ಸುಬ್ರಮಣಿ ಅವರ ಸಮ್ಮುಖದಲ್ಲೇ ಪರ್ಸ್ ಅನ್ನು ಪೊಲೀಸರಿಗೆ ಒಪ್ಪಿಸಿದರು. ಅವರ ಪ್ರಾಮಾಣಿಕತೆಯನ್ನು ಅಭಿನಂದಿಸಿ, ಸ್ಮರಣಿಕೆಯಾಗಿ ಒಂದು ಸಣ್ಣ ಗೌರವವನ್ನೂ ನೀಡಿದರು.
ಸ್ವಲ್ಪ ಸಮಯದ ಬಳಿಕ ಪಾದರಾಯನಪುರ ನಿವಾಸಿ ಶಕೀಲಾ ಅವರು ತಮ್ಮ ತಂದೆ ವಾಹದ್ ಖಾನ್ ಅವರೊಂದಿಗೆ ರಾಜಾಜಿನಗರ ಪೊಲೀಸ್ ಠಾಣೆಗೆ ಬಂದು ತಾವು ಕಳೆದುಕೊಂಡಿದ್ದ ಹಳದಿ ಬಣ್ಣದ ಪರ್ಸ್ ಬಗ್ಗೆ ದೂರು ನೀಡಿದರು. ಪೊಲೀಸರು ಅಗತ್ಯ ಮಾಹಿತಿಯನ್ನು ಪರಿಶೀಲಿಸಿದ ನಂತರ ಅದೇ ಪರ್ಸ್ ಅನ್ನು ಅವರಿಗೆ ಹಿಂತಿರುಗಿಸಿದರು.
ಪರ್ಸ್ನಲ್ಲಿದ್ದ ಹಣವೂ ಯಾವುದೇ ಕೊರತೆಯಿಲ್ಲದೆ ಇದ್ದುದನ್ನು ಕಂಡು ಶಕೀಲಾ ಅವರು ಸಂತಸ ವ್ಯಕ್ತಪಡಿಸಿದರು. ಒಂದು ಕ್ಷಣಕ್ಕೆ ಕಳೆದುಹೋದ ನೆಮ್ಮದಿ ಮತ್ತೆ ಮರಳಿ ಸಿಕ್ಕಂತಾಯಿತು.
ಈ ಘಟನೆಯು ಪ್ರಾಮಾಣಿಕತೆ ಇನ್ನೂ ಸಮಾಜದಲ್ಲಿ ಜೀವಂತವಾಗಿದ್ದು, ಸಾಮಾನ್ಯ ವ್ಯಕ್ತಿಯೂ ಅಸಾಮಾನ್ಯ ಆದರ್ಶವನ್ನು ಸ್ಥಾಪಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಕೆ. ಸುಬ್ರಮಣಿ ಅವರಂತಹ ವ್ಯಕ್ತಿಗಳು ಸಮಾಜಕ್ಕೆ ಭರವಸೆ ಮತ್ತು ನಂಬಿಕೆಯನ್ನು ನೀಡುವ ನಿಜವಾದ ಮಾದರಿಯಾಗಿದ್ದಾರೆ.

