ಬಸವನಗುಡಿ ವಿಧಾನಸಭಾ ಕ್ಷೇತ್ರದ ಗಿರಿನಗರದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ 517ನೇ (Kempegowda Jayanthi) ಜನ್ಮದಿನೋತ್ಸವವನ್ನು ಸರಳ, ಅರ್ಥಪೂರ್ಣ ಹಾಗೂ ಗೌರವಯುತವಾಗಿ ಆಚರಿಸಲಾಯಿತು. ಕಲಾರಂಗ ಟ್ರಸ್ಟ್‌ನ (Kalaranga Trust) ಅಧ್ಯಕ್ಷರಾದ ಎಲ್. ಜೀವನ್ (L.Jeevan) ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಲ್. ಜೀವನ್ ಅವರು, ನಾಡಪ್ರಭು ಶ್ರೀ ಕೆಂಪೇಗೌಡರು ಕೇವಲ ಬೆಂಗಳೂರಿನ ನಿರ್ಮಾತೃ ಮಾತ್ರವಲ್ಲ, ದೂರದೃಷ್ಟಿಯ ಆಡಳಿತಗಾರರಾಗಿದ್ದರು. ಕೋಟೆ, ಪೇಟೆಗಳು, ಕೆರೆಗಳು, ದೇವಾಲಯಗಳು ಹಾಗೂ ಸುಸಂಘಟಿತ ನಗರ ಯೋಜನೆಯ ಮೂಲಕ ಅವರು ಬೆಂಗಳೂರಿನ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿದ್ದು, ಅವರ ದೂರದೃಷ್ಟಿಯ ಫಲವಾಗಿ ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು.
ನಾಡಿನ ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಜನಕಲ್ಯಾಣದ ಬಗ್ಗೆ ಕೆಂಪೇಗೌಡರು ಹೊಂದಿದ್ದ ಆದರ್ಶಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿದ್ದು, ಅವರ ಜೀವನ ಮತ್ತು ಸಾಧನೆಗಳು ಎಲ್ಲರಿಗೂ ಸ್ಫೂರ್ತಿದಾಯಕವಾಗಿವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಗಿರಿನಗರದ ನಾಗರಿಕರು, ಕಲಾರಂಗ ಟ್ರಸ್ಟ್‌ನ ಸದಸ್ಯರು, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿ ನಾಡಪ್ರಭು ಶ್ರೀ ಕೆಂಪೇಗೌಡರಿಗೆ ಗೌರವ ನಮನ ಸಲ್ಲಿಸಿದರು.

