ಅಯೋಧ್ಯೆಯ ಶ್ರೀರಾಮ ಮಂದಿರವು(Ayodhya Sree Ram Temple) ಕೇವಲ ಒಂದು ಧಾರ್ಮಿಕ ಸ್ಥಳವಲ್ಲ, ಅದು ಜಗತ್ತಿನಾದ್ಯಂತ ಇರುವ ಕೋಟ್ಯಂತರ ಹಿಂದೂಗಳ ಶತಮಾನಗಳ ಬಲಿದಾನ, ದೀರ್ಘಕಾಲದ ಹೋರಾಟ ಮತ್ತು ಶ್ರದ್ಧೆಯ ಪ್ರತೀಕವಾಗಿದೆ. ಮಂದಿರದ ಹುಂಡಿಯಲ್ಲಿನ ಕಾಣಿಕೆಯನ್ನು ದುರುಪಯೋಗಪಡಿಸಿಕೊಳ್ಳುವುದು ಮಹಾಪಾಪವಾಗಿದೆ. ಪ್ರಭು ಶ್ರೀರಾಮನು ಅವರ ಕರ್ಮಕ್ಕೆ ತಕ್ಕ ಶಿಕ್ಷೆಯನ್ನು ನೀಡಿಯೇ ನೀಡುತ್ತಾನೆ. ಆದರೆ, ಸರಕಾರವು ಈ ಪ್ರಕರಣದಲ್ಲಿ ಯಾರು ತಪ್ಪಿತಸ್ಥರೆಂದು ಶೀಘ್ರವಾಗಿ ತನಿಖೆ ನಡೆಸಿ ಸತ್ಯವನ್ನು ಜನತೆಯ ಮುಂದೆ ತರಬೇಕು ಮತ್ತು ತಪ್ಪಿತಸ್ಥರ ಮೇಲೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು (Hindu JanaJagruthi) ಆಗ್ರಹಿಸಿದೆ.
ಯಾವುದೇ ಮಂದಿರದ ಸಮಿತಿಯಲ್ಲಿ ಕೇವಲ ದೇವರ ಭಕ್ತರು ಮಾತ್ರ ಇರಬೇಕು ಎಂದು ನಾವು ಈ ಹಿಂದೆಯೂ ಹಲವು ಬಾರಿ ಒತ್ತಾಯಿಸಿದ್ದೇವೆ. ಭಕ್ತನು ಈಶ್ವರನ ಉಪಾಸಕನಾಗಿರುವುದರಿಂದ, ದೇವನಿಧಿಯನ್ನು ಕದಿಯುವ ವಿಚಾರವನ್ನು ಕನಸಿನಲ್ಲೂ ಮಾಡಲು ಸಾಧ್ಯವಿಲ್ಲ. ನಿಜವಾದ ಅರ್ಥದಲ್ಲಿ ಮಂದಿರಗಳ ಉದ್ಧಾರವಾಗಬೇಕೆಂದರೆ, ಭಗವಂತನ ಅಂತಹ ಭಕ್ತರೇ ಮಂದಿರ ವ್ಯವಸ್ಥೆಯಲ್ಲಿ ಇರಬೇಕು. ಇಂತಹ ಪ್ರಕರಣಗಳಿಂದ ಸರಕಾರವು ‘ಮಂದಿರಗಳ ಸರಕಾರೀಕರಣ’ ಮಾಡಲು ಪ್ರಯತ್ನಿಸುತ್ತದೆ, ಇದನ್ನು ನಾವು ಸದಾ ವಿರೋಧಿಸುತ್ತೇವೆ ಎಂಬ ನಿಲುವನ್ನು ಸಮಿತಿಯು ವ್ಯಕ್ತಪಡಿಸಿದೆ.
ಯಾವ ಸರಕಾರಿ ಅಧಿಕಾರಿಗಳು ಸ್ವತಃ ಭ್ರಷ್ಟರಾಗಿರುತ್ತಾರೋ, ಆಡಳಿತ ಯಂತ್ರದಲ್ಲಿ ಬೇರೂರಿರುವ ಭ್ರಷ್ಟ ವ್ಯವಸ್ಥೆಯ ಭಾಗವಾಗಿರುತ್ತಾರೋ, ಅಂತಹ ಅಧಿಕಾರಿಗಳು ಮಂದಿರ ಸಮಿತಿಯ ಭ್ರಷ್ಟಾಚಾರವನ್ನು ಹೇಗೆ ತಡೆಗಟ್ಟಬಲ್ಲರು? ಆದ್ದರಿಂದ ಧಾರ್ಮಿಕ ಸ್ಥಳಗಳಲ್ಲಿ ಜಾತ್ಯತೀತ ಸರಕಾರದ ಹಸ್ತಕ್ಷೇಪ ಬೇಡವೇ ಬೇಡ. ಮಂದಿರಗಳ ಸರಕಾರೀಕರಣದ ನಂತರ ಮಂದಿರದ ನಿಧಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿರುವ ಅನೇಕ ಉದಾಹರಣೆಗಳು ದೇಶದಲ್ಲಿವೆ. ಈ ದೃಷ್ಟಿಯಿಂದ, ಮಂದಿರದ ಜವಾಬ್ದಾರಿಯನ್ನು ಭಗವಂತನ ಸೇವೆಯೆಂದು ಸ್ವೀಕರಿಸಿ ಕಾರ್ಯನಿರ್ವಹಿಸುವ ಭಗವಂತನ ನಿಜವಾದ ಭಕ್ತರಿಗೆ ಮಂದಿರಗಳ ಆಡಳಿತವನ್ನು ಹಸ್ತಾಂತರಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಅವರು ಅಭಿಪ್ರಾಯಪಟ್ಟಿದ್ದಾರೆ.

