ಕರ್ನಾಟಕದ ಮಾದಕವಸ್ತು ಮುಕ್ತ ಪ್ರಯತ್ನವನ್ನು ಶ್ಲಾಘಿಸಿದ ಉಪರಾಷ್ಟ್ರಪತಿ
ಬೆಂಗಳೂರು, ಜೂನ್ 28, 2026: ಕರ್ನಾಟಕದಲ್ಲಿ ತಂಬಾಕು ಹಾಗೂ ಮಾದಕವಸ್ತು ಸಂಬಂಧಿತ ಉತ್ಪನ್ನಗಳನ್ನು ನಿಯಂತ್ರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಟ್ಟಿರುವ ದಿಟ್ಟ ಹೆಜ್ಜೆ ಶ್ಲಾಘನೀಯ ಎಂದು ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು.
ನಶಾಮುಕ್ತ ಭಾರತ ಅಭಿಯಾನ, ರಾಗಾಆವಿವಿಯ 31ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಅಂತರಾಷ್ಟ್ರೀಯ ಮಾದಕವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕರ್ನಾಟಕವನ್ನು ಮಾದಕವಸ್ತು ಮುಕ್ತ ರಾಜ್ಯವನ್ನಾಗಿ ಮಾಡುವ ಮುಖ್ಯಮಂತ್ರಿ ಅವರ ಬದ್ಧತೆಯ ಬಗ್ಗೆ ಸಂತೋಷ ಎನಿಸಿದೆ. ಈ ನಿರ್ಣಾಯಕ ಸಾರ್ವಜನಿಕ ಆರೋಗ್ಯ ಉಪಕ್ರಮದಲ್ಲಿ ರಾಜ್ಯಕ್ಕೆ ಯಶಸ್ಸು ದೊರಕಲಿ ಎಂದು ಹಾರೈಸಿದರು.
ನಶಾ ಮುಕ್ತ ಭಾರತ ಮತ್ತು ಯುವ ಶುದ್ಧಿ ಅಭಿಯಾನ ಉನ್ನತ ಶಿಕ್ಷಣದ ಮೂಲ ಉದ್ದೇಶದೊಂದಿಗೆ ನಿಕಟ ಸಂಬಂಧ ಹೊಂದಿವೆ. ವಿಶ್ವವಿದ್ಯಾಲಯಗಳ ಕೆಲಸ ಕೇವಲ ಪದವಿಗಳನ್ನು ನೀಡುವುದಲ್ಲ, ರಾಷ್ಟ್ರದ ಭವಿಷ್ಯದ ನಾಯಕರ ಮನೋಭಾವ ಮತ್ತು ಮೌಲ್ಯಗಳನ್ನು ರೂಪಿಸುವುದಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಈ ಹೊಣೆಗಾರಿಕೆಗೆ ಬದ್ಧರಾಗಿರುವುದು ಮಹತ್ವದ ಸಂಗತಿ ಎಂದು ಹೇಳಿದರು.
ಮಾದಕವಸ್ತು ದುರುಪಯೋಗದ ಬದಲಾಗುತ್ತಿರುವ ಪರಿಸ್ಥಿತಿಯ ಕುರಿತು ಮಾತನಾಡಿದ ಉಪರಾಷ್ಟ್ರಪತಿಗಳು, ಸಿಂಥೆಟಿಕ್ ಡ್ರಗ್ಸ್, ಡಿಸೈನರ್ ಮಾದಕ ವಸ್ತುಗಳು ಹಾಗೂ ಅಕ್ರಮ ಆನ್ಲೈನ್ ಜಾಲಗಳಂತಹ ಅಪಾಯಕಾರಿ ಹೊಸ ಪ್ರವೃತ್ತಿಗಳು ಯುವ ಮನಸ್ಸುಗಳನ್ನು ಗುರಿಯಾಗಿಸುತ್ತಿವೆ. ಇಂತಹ ವ್ಯಸನದ ವಿರುದ್ಧದ ಹೋರಾಟ ಕೇವಲ ಕಾನೂನು ಕ್ರಮಗಳಿಗೆ ಸೀಮಿತವಾಗಬಾರದು, ಅದನ್ನು ಗಂಭೀರ ಸಾರ್ವಜನಿಕ ಆರೋಗ್ಯ ಅಗತ್ಯವಾಗಿ ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟರು.
ನಿಜವಾದ ಯುವ ಶುದ್ಧೀಕರಣ (ಯುವ ಶುದ್ಧಿ) ಕೇವಲ ಮಾದಕ ವಸ್ತುಗಳನ್ನು ದೂರ ಇಡುವುದುದರಿಂದ ಮುಕ್ತವಾಗುವುದಲ್ಲ; ಅದು ಚಿಂತನೆಯ ಶುದ್ಧತೆ, ಗುರಿಯ ಸ್ಪಷ್ಟತೆ ಮತ್ತು ವಿನಾಶಕಾರಿ ಪ್ರಭಾವಗಳನ್ನು ತಿರಸ್ಕರಿಸುವ ನೈತಿಕ ಸ್ಥೈರ್ಯದಿಂದ ಸಾಧ್ಯವಾಗುತ್ತದೆ ಎಂದು ವಿವರಿಸಿದರು. ಆರೋಗ್ಯ ವೃತ್ತಿಪರರ ಮೇಲೆ ಸಮಾಜ ಅಗಾಧ ನಂಬಿಕೆಯನ್ನಿಟ್ಟಿದೆ. ಪ್ರತಿಯೊಬ್ಬ ಆರೋಗ್ಯ ಪದವೀಧರರೂ ವೈದ್ಯಕೀಯ ಸೇವೆ ನೀಡುವುದಕ್ಕೆ ಸಜ್ಜುಗೊಳ್ಳುವ ಜೊತೆಗೆ, ಸಹಾನುಭೂತಿಯುಳ್ಳ ಆರೋಗ್ಯ ರಾಯಭಾರಿಗಳಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಶಿಕ್ಷಣ, ಸಂಶೋಧನೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ಕೊಡುಗೆ ಅಪಾರ: ರಾಜ್ಯಪಾಲರು
ಬೆಂಗಳೂರು, ಜೂನ್ 28, 2026: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ಕಳೆದ ಮೂರು ದಶಕಗಳಲ್ಲಿ ಆರೋಗ್ಯ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಹಾಗೂ ಸಾರ್ವಜನಿಕ ಆರೋಗ್ಯ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಕರ್ನಾಟಕ ಹಾಗೂ ದೇಶದ ಆರೋಗ್ಯ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ಈ ಸಂದರ್ಭದಲ್ಲಿ ಭಾರತದ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರ ಉಪಸ್ಥಿತಿಯು ವಿಶ್ವವಿದ್ಯಾಲಯ ಕುಟುಂಬಕ್ಕೆ ಹಾಗೂ ಕರ್ನಾಟಕ ರಾಜ್ಯಕ್ಕೆ ವಿಶೇಷ ಗೌರವ ತಂದಿದೆ ಎಂದು ರಾಜ್ಯಪಾಲರು ಹೇಳಿದರು.
“1996ರಲ್ಲಿ ಸ್ಥಾಪಿತವಾದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ಇಂದು ದೇಶದ ಅತಿದೊಡ್ಡ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಬೆಳೆದಿದ್ದು, ಸುಮಾರು 1,450ಕ್ಕೂ ಹೆಚ್ಚು ಕಾಲೇಜುಗಳನ್ನು ಸಂಯೋಜಿಸಿಕೊಂಡಿದೆ. ಇದುವರೆಗೆ 8 ಲಕ್ಷಕ್ಕೂ ಹೆಚ್ಚು ಆರೋಗ್ಯ ವೃತ್ತಿಪರರನ್ನು ದೇಶಕ್ಕೆ ನೀಡಿರುವುದು ವಿಶ್ವವಿದ್ಯಾಲಯದ ಗಮನಾರ್ಹ ಸಾಧನೆಯಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ-2020ರ ಆಶಯಗಳಿಗೆ ಅನುಗುಣವಾಗಿ ವಿಶ್ವವಿದ್ಯಾಲಯವು ಬಹುಶಿಸ್ತೀಯ ಶಿಕ್ಷಣ, ಭಾರತೀಯ ಜ್ಞಾನ ಪರಂಪರೆ, ಸಂಶೋಧನೆ, ಡಿಜಿಟಲ್ ಶಿಕ್ಷಣ, ಕೃತಕ ಬುದ್ಧಿಮತ್ತೆಯ ಬಳಕೆ, ಕೌಶಲ್ಯಾಭಿವೃದ್ಧಿ, ನಾವೀನ್ಯತೆ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುತ್ತಿರುವುದು ಸಂತಸ ತಂದಿದೆ ಎಂದು ಅವರು ತಿಳಿಸಿದರು.
ಈ ವರ್ಷದ ಸಂಸ್ಥಾಪನಾ ದಿನವನ್ನು ಮಾದಕ ರಹಿತ ಭಾರತ ಸಮ್ಮೇಳನ ಹಾಗೂ ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆಯೊಂದಿಗೆ ಸಂಯೋಜಿಸಿ ಆಚರಿಸಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ರಾಜ್ಯಪಾಲರು ಹೇಳಿದರು.
ಭಾರತವು ಯುವಶಕ್ತಿಯ ರಾಷ್ಟ್ರವಾಗಿದ್ದು, ದೇಶದ ಅಭಿವೃದ್ಧಿಗೆ ಯುವಜನರ ಶಕ್ತಿಯೇ ಪ್ರಮುಖ ಆಧಾರವಾಗಿದೆ. ಆದ್ದರಿಂದ ಯುವಜನರನ್ನು ಆರೋಗ್ಯವಂತರಾಗಿ, ಜಾಗೃತರಾಗಿ ಹಾಗೂ ಮಾದಕ ವ್ಯಸನದಿಂದ ಮುಕ್ತರಾಗಿ ಬೆಳೆಸುವುದು ಸಮಾಜದ ಎಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಮಾದಕ ವ್ಯಸನವು ವೈಯಕ್ತಿಕ ಸಮಸ್ಯೆ ಮಾತ್ರವಲ್ಲದೆ ಸಾಮಾಜಿಕ, ಆರ್ಥಿಕ ಹಾಗೂ ಆರೋಗ್ಯ ಕ್ಷೇತ್ರಗಳಿಗೂ ಸವಾಲಾಗಿದೆ. ಈ ಪಿಡುಗಿನ ನಿರ್ಮೂಲನೆಗೆ ಸರ್ಕಾರ, ಶಿಕ್ಷಣ ಸಂಸ್ಥೆಗಳು, ಪೋಷಕರು, ಸ್ವಯಂಸೇವಾ ಸಂಘಟನೆಗಳು ಹಾಗೂ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದು ಅವರು ಕರೆ ನೀಡಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ “ಮಾದಕ ದ್ರವ್ಯ ಮುಕ್ತ ಭಾರತ” ಸಂಕಲ್ಪವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬ ನಾಗರಿಕರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಕುಟುಂಬ ಹಾಗೂ ಸಮಾಜದಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಆರೋಗ್ಯಕರ ಹಾಗೂ ಸದೃಢ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಯುವಜನರನ್ನು ಮಾದಕ ವ್ಯಸನದಿಂದ ದೂರವಿಡಲು ರಾಜ್ಯ ಸರ್ಕಾರ, ಶಿಕ್ಷಣ ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು ಹಾಗೂ ಸಮಾಜದ ವಿವಿಧ ವಲಯಗಳು ಕೈಗೊಂಡಿರುವ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಈ ಕುರಿತು ಕಾರ್ಯಕ್ರಮವನ್ನು ಆಯೋಜಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ದಿಶಾಬೋಧ್ ಪ್ರತಿಷ್ಠಾನ ಹಾಗೂ ಮಾದಕ ವಸ್ತು ನಿಯಂತ್ರಣ ಬ್ಯೂರೋವನ್ನು ಅಭಿನಂದಿಸಿದರು.
ಕಿಂಚಿತ್ ಅಮಲು ಪದಾರ್ಥ ಬೆರೆಸಿದರೂ ಪಾನ್ ಮಸಾಲಾ, ಗುಟ್ಕಾ ನಿಷೇಧ: ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ
ಮಾದಕದ್ರವ್ಯ ಮುಕ್ತ ಕರ್ನಾಟಕ ರೂಪಿಸುವುದು ನಮ್ಮ ಗುರಿ | ಕರ್ನಾಟಕ ದೇಶದ ವೈದ್ಯಕೀಯ ರಾಜಧಾನಿ
ಕಿಂಚಿತ್ ಅಮಲು ಪದಾರ್ಥ ಬೆರಕೆ ಮಾಡಿದರೂ ಕರ್ನಾಟಕದಲ್ಲಿ ಎಲ್ಲ ರೀತಿಯ ಪಾನ್ ಮಸಾಲಾ, ಗುಟ್ಕಾ ಮಾರಾಟ ನಿಷೇಧ ಮಾಡುವುದಾಗಿ ಸಿಎಂ ಡಿ.ಕೆ ಶಿವಕುಮಾರ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಣದಲ್ಲಿ ಏರ್ಪಡಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 31 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಪಾನ್ ಮಸಾಲಾ, ಗುಟ್ಕಾ, ಅಡಿಕೆ ಮತ್ತಿತರ ಪದಾರ್ಥಗಳಲ್ಲಿ ಅಮಲು ಬರುವ ವಸ್ತುಗಳನ್ನು ಬೆರಕೆ ಮಾಡಿ ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದು ನಿಜವೇ ಆಗಿದ್ದರೆ, ತಕ್ಷಣ ನಿಲ್ಲದಿದ್ದರೆ ಎಲ್ಲ ರೀತಿಯ ಪಾನ್ ಮಸಾಲಾ, ಗುಟ್ಕಾ ಪದಾರ್ಥಗಳ ಮಾರಾಟವನ್ನು ಕರ್ನಾಟಕದಲ್ಲಿ ನಿಷೇಧ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
*ಮಾದಕದ್ರವ್ಯ ಮುಕ್ತ ಕರ್ನಾಟಕ ರೂಪಿಸುವುದು ನಮ್ಮ ಗುರಿ*
ಮಾದಕದ್ರವ್ಯ ಮುಕ್ತ ಕರ್ನಾಟಕ ರೂಪಿಸುವುದು ನಮ್ಮ ಗುರಿ. ಅದಕ್ಕಾಗಿ ನಾವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಇಂದು ನೀವೆಲ್ಲರೂ ಸೇರಿ ನಶೆ ಮುಕ್ತ ಭಾರತ ಸಮಾವೇಶ ಹಮ್ಮಿಕೊಂಡಿರುವುದನ್ನು ನಾನು ಸ್ವಾಗತಿಸುತ್ತೇನೆ. ನೀವೆಲ್ಲರೂ ಇದರ ರಾಯಭಾರಿಗಳು. ಮಾದಕ ವ್ಯಸನ ತಡೆಯುವಿಕೆ ದೊಡ್ಡ ಸವಾಲಾಗಿದ್ದು, ನಾವೆಲ್ಲರೂ ಒಂದಾಗಿ ಸೇರಿ, ಯುವ ಪೀಳಿಗೆ ಈ ವ್ಯಸನದ ಸುಳಿಗೆ ಸಿಲುಕದಂತೆ ತಡೆಯೋಣ. ಇದು ಎಲ್ಲರ ಕರ್ತವ್ಯವಾಗಿದೆ. ನೀವು ಜೀವ ರಕ್ಷಣೆಯ ವೃತ್ತಿ ಆಯ್ಕೆ ಮಾಡಿಕೊಂಡಿದ್ದು, ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.
*ರಾಜೀವ್ ಗಾಂಧಿ ವಿವಿಯನ್ನು ಆರಂಭಿಸಿದ ವೀರಪ್ಪ ಮೊಯ್ಲಿ ಅವರಿಗೆ ಧನ್ಯವಾದ*
“ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ದೇಶದಲ್ಲೇ ಅತಿ ದೊಡ್ಡ ಆರೋಗ್ಯ ವಿವಿಯಾಗಿದ್ದು, ಅತಿ ಹೆಚ್ಚು ವೈದ್ಯರನ್ನು ತಯಾರು ಮಾಡಿದೆ. ನಮ್ಮ ರಾಜ್ಯದಲ್ಲಿ 70 ಮೆಡಿಕಲ್ ಕಾಲೇಜುಗಳಿದ್ದು, ದೇಶದ ಬೇರೆ ಯಾವುದೇ ರಾಜ್ಯದಲ್ಲಿ ಇಷ್ಟು ಮೆಡಿಕಲ್ ಕಾಲೇಜುಗಳಿಲ್ಲ. ಈ ರಾಜೀವ್ ಗಾಂಧಿ ವಿವಿಯನ್ನು ಆರಂಭಿಸಿದ ವೀರಪ್ಪ ಮೊಯ್ಲಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದರು.
*ಕರ್ನಾಟಕ ದೇಶದ ವೈದ್ಯಕೀಯ ರಾಜಧಾನಿ*
“ವೈದ್ಯಕೀಯ ಶಿಕ್ಷಣ ಎಲ್ಲರಿಗೂ ಸಿಗುವಂತೆ ಆಗಬೇಕು. ಬೆಂಗಳೂರಿನ ಹವಾಮಾನ ದೇಶದ ಬೇರೆ ಯಾವುದೇ ಭಾಗದಲ್ಲಿ ಇಲ್ಲ. ಹೀಗಾಗಿ ಇದನ್ನು ಹವಾನಿಯಂತ್ರಿತ ನಗರ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಇರುವಷ್ಟು ಆಸ್ಪತ್ರೆ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಕರ್ನಾಟಕ ದೇಶದಲ್ಲಿ ವೈದ್ಯಕೀಯ ರಾಜಧಾನಿಯೂ ಆಗಿದೆ. ಈ ವಿವಿ ಬೆಂಗಳೂರು ದಕ್ಷಿಣ ಜಿಲ್ಲೆಯ ನೂತನ ಕ್ಯಾಂಪಸ್ ಗೆ ಸ್ಥಳಾಂತರವಾಗಲಿದೆ” ಎಂದು ತಿಳಿಸಿದರು.

ವಿಶ್ವವ್ಯಾಪಿ ಆರೋಗ್ಯ ಸೇವೆ ನೈತಿಕ ಅಗತ್ಯ: ಎಸ್. ಅಬ್ದುಲ್ ನಜೀರ್
ಆಂಧ್ರ ಪ್ರದೇಶದ ಗೌರವಾನ್ವಿತ ರಾಜ್ಯಪಾಲರು ಹಾಗೂ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶ್ರೀ ಎಸ್. ಅಬ್ದುಲ್ ನಜೀರ್ ಮಾತನಾಡಿ, ವಿಶ್ವವ್ಯಾಪಿ ಆರೋಗ್ಯ ಸೇವೆ ಒಂದು ಮಹತ್ವದ ನೈತಿಕ ಅಗತ್ಯವಾಗಿದೆ ಎಂದು ಹೇಳಿದರು.
ಆರೋಗ್ಯ ಸೂಕ್ಷ್ಮತೆಗಳು ಕೇವಲ ವೈದ್ಯಕೀಯ ಸವಾಲುಗಳಲ್ಲ, ಅವು ವ್ಯಾಪಕ ಸಾಮಾಜಿಕ ಅಸಮಾನತೆಯ ಪ್ರತಿಬಿಂಬಗಳಾಗಿವೆ. ಒಂದು ರಾಷ್ಟ್ರದ ಆರೋಗ್ಯ ವ್ಯವಸ್ಥೆ ಅದರ ಸಾಮಾಜಿಕ ನ್ಯಾಯದ ಬದ್ಧತೆಯನ್ನು ಪ್ರತಿಬಿಂಬಿಸುವ ಕನ್ನಡಿ ಎಂದು ಅವರು ಅಭಿಪ್ರಾಯಪಟ್ಟರು.
ಗುಣಮಟ್ಟದ ಆರೋಗ್ಯ ಸೇವೆಗೆ ಪ್ರವೇಶವು ಹಣ ಅಥವಾ ವಿಶೇಷಾಧಿಕಾರದಿಂದ ನಿರ್ಧಾರವಾಗಬಾರದು. ಪ್ರತಿಯೊಬ್ಬ ವಿದ್ಯಾರ್ಥಿಯ ಶ್ರದ್ಧೆ, ಸಾಮರ್ಥ್ಯ, ಪ್ರಯತ್ನ ಹಾಗೂ ಅರ್ಹತೆಯ ಆಧಾರದ ಮೇಲೆ ನಿರ್ಧಾರವಾಗಬೇಕು ಎಂದು ತಿಳಿಸಿದರು.
ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳು ಕೇವಲ ಶೈಕ್ಷಣಿಕ ಶ್ರೇಷ್ಠತೆಯನ್ನಷ್ಟೇ ಅಲ್ಲದೆ ಮೌಲ್ಯಗಳನ್ನು ರೂಪಿಸುವುದು ಮತ್ತು ಸಾರ್ವಜನಿಕ ನೀತಿಯನ್ನು ಪ್ರಭಾವಿಸುವುದರತ್ತ ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದರು. ಇದಕ್ಕಾಗಿ ಪಠ್ಯಕ್ರಮ ಸುಧಾರಣೆಗಳನ್ನು ಮಾಡಬೇಕು ಹಾಗೂ ವಿದ್ಯಾರ್ಥಿಗಳನ್ನು ತರಗತಿಗಳಿಂದ ಹೊರಗೆ ಕರೆದೊಯ್ಯಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ಗ್ರಾಮೀಣ ಸಮುದಾಯಗಳು, ನಗರ ಸ್ಲಂಗಳ್ಗಳು, ಪುನಶ್ಚೇತನ ಕೇಂದ್ರಗಳು, ಪ್ಯಾಲಿಯೇಟಿವ್ ಕೇರ್ ಸೌಲಭ್ಯಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮಯ ಕಳೆಯಬೇಕು. ರೋಗ, ಬಡತನ, ಅಂಗವೈಕಲ್ಯ ಮತ್ತು ಸಾಮಾಜಿಕ ಬಹಿಷ್ಕಾರದ ವಿರುದ್ಧ ಹೋರಾಡುತ್ತಿರುವ ಜನರ ನೈಜ ಜೀವನ ಪರಿಸ್ಥಿತಿಗಳನ್ನು ಅವರು ನೇರವಾಗಿ ಅನುಭವಿಸಬೇಕು. ಇಂತಹ ಅನುಭವಗಳು ನಿಜವಾದ ಸಹಾನುಭೂತಿಯನ್ನು ರೂಪಿಸುತ್ತವೆ ಎಂದು ಅವರು ವಿವರಿಸಿದರು.
ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದರೂ ಆರೋಗ್ಯ ಸೇವೆಯ ಮೂಲ ತತ್ವ ಅಡಗಿರುವುದು ಮಾನವೀಯತೆಯಲ್ಲೇ. ಯಾವುದೇ ಯಂತ್ರವೂ ಸಹಾನುಭೂತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಅದು ಸಹಾನುಭೂತಿಯ ಪರ್ಯಾಯವಾಗಲಾರದು. ಯಾವುದೇ ತಾಂತ್ರಿಕ ಸಾಧನೆಯೂ ದಯೆಯ ಮಹತ್ವವನ್ನು ಕಡಿಮೆ ಮಾಡಲಾರದು ಎಂದು ನ್ಯಾಯಮೂರ್ತಿ ನಜೀರ್ ಹೇಳಿದರು.
ಇದು ನಮ್ಮ ನಿರಂತರ ಹೋರಾಟ: ಕುಲಪತಿ ಡಾ. ಭಗವಾನ್
ಇದೊಂದು ಮಹತ್ವದ ಹಾಗೂ ಐತಿಹಾಸಿಕ ಕಾರ್ಯಕ್ರಮ. ಯಾವುದೇ ಒಂದು ದಿನಕ್ಕೆ, ಒಂದು ಮಾಸಕ್ಕೆ ಸೀಮಿತವಾದುದಲ್ಲ. ಇದು ನಮ್ಮ ನಿರಂತರ ಹೋರಾಟ. 31 ವರ್ಷಗಳ ಸುದೀರ್ಘ ಹಾಗೂ ಶ್ರೀಮಂತ ಇತಿಹಾಸ ಹೊಂದಿರುವ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವೊಂದು ನಶಾಮುಕ್ತ ಭಾರತ ಅಭಿಯಾನವನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ, ಚಳವಳಿಯ ರೂಪದಲ್ಲಿ ನಿರಂತರವಾಗಿ ಒಂದು ವರ್ಷಗಳ ಕಾಲ ಮುನ್ನಡೆಸಿಕೊಂಡು ಹೋಗುತ್ತಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂದು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಭಗವಾನ್ ಬಿ.ಸಿ. ಹೇಳಿದರು.
ರಾಜ್ಯದ ಉದ್ದಗಲಕ್ಕೂ ವ್ಯಾಪಿಸುತ್ತಿರುವ ನಶಾಮುಕ್ತ ಭಾರತ– ನಶಾಮುಕ್ತ ಕರ್ನಾಟಕ – ನಶಾಮುಕ್ತ ಕ್ಯಾಂಪಸ್ ಹಾಗೂ ಅಂಗಾಂಗದಾನ ಜಾಗೃತಿ ಅಭಿಯಾನ ಆರಂಭವಾದ ಒಂದು ವರ್ಷದ ಅವಧಿಯಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ.
ಗದಗ ಜಿಲ್ಲೆಯಿಂದ ಆರಂಭವಾಗಿ ಕೊಪ್ಪಳ, ಬೀದರ್ , ಮಂಗಳೂರು, ಉಡುಪಿ, ಬಾಗಲಕೋಟೆ, ಮೂಡುಬಿದಿರೆ, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ವಿಜಯಪುರ, ಬೆಳಗಾವಿ, ರಾಯಚೂರು, ಬಳ್ಳಾರಿ, ತುಮಕೂರಿನತನಕ 15 ಜಿಲ್ಲೆಗಳನ್ನು ಯಶಸ್ವಿಯಾಗಿ ತಲಿಪಿದೆ. ಇಲ್ಲಿಯವರೆಗೆ ಸುಮಾರು ಒಂದು ಲಕ್ಷಕ್ಕಿಂತ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ನಶಾಮುಕ್ತ ಭಾರತ ಕಟ್ಟುವ ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದರು.
31ನೇ ಸಂಸ್ಥಾಪನಾ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸಲು ಇಂದು ನಡೆದ ಈ ವಿನೂತನ ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರ ಆರೋಗ್ಯ ವಿಜ್ಞಾನ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ನಶಾಮುಕ್ತ ಭಾರತ ಸಂಕಲ್ಪ ಮಾಡಿದ್ದಾರೆ ಎಂದರು.
ಯುವಜನರನ್ನು ಉದ್ದೇಶಿಸಿ ಮಾತನಾಡಿದ ಕುಲಪತಿಗಳು, ವಿದ್ಯಾರ್ಥಿಗಳೇ ಈ ರಾಷ್ಟ್ರೀಯ ಅಭಿಯಾನದ ನಿಜವಾದ ರಾಯಭಾರಿಗಳು ಎಂದು ನೆನಪಿಸಿದರು. “ಸಹಪಾಠಿಗಳ ಒತ್ತಡಕ್ಕೆ ‘ಇಲ್ಲ’ ಎಂದು ದಿಟ್ಟವಾಗಿ ಮತ್ತು ಗಟ್ಟಿಯಾಗಿ ಹೇಳಿದಾಗ ನೀವು ನಿಮ್ಮ ಪೋಷಕರ ಕನಸುಗಳಿಗೆ ‘ಹೌದು’ ಎಂದು ಹೇಳಿದಂತಾಗುತ್ತದೆ. ಜೀವನವನ್ನು ಆಯ್ಕೆಮಾಡಿ, ನಿಮ್ಮ ಭವಿಷ್ಯವನ್ನು ಆಯ್ಕೆಮಾಡಿ; ಕ್ಷಣಿಕ ಸುಖಗಳನ್ನಲ್ಲ” ಎಂದು ಅವರು ಹೇಳಿದರು.
ಇಂತಹ ಮಹತ್ವದ ಸಾಮಾಜಿಕ ಹೊಣೆಗಾರಿಕೆಗಳಿಗೆ ಸಾಮೂಹಿಕ ಪ್ರಯತ್ನ ಅತ್ಯಗತ್ಯ. ಈ ನಿಟ್ಟಿನಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಮಾದಕವಸ್ತು ನಿಯಂತ್ರಣ ಬ್ಯೂರೋ (NCB) ಮತ್ತು ದಿಶಾಬೋಧ್ ಫೌಂಡೇಶನ್ ಸಂಸ್ಥೆಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ವೈದ್ಯಕೀಯ ಶಿಕ್ಷಣ, ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ಯು.ಟಿ ಖಾದರ್, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB), ಝೋನಲ್ ಡೈರೆಕ್ಟರ್ ಸಚಿನ್ ಘೋರ್ಪಡೆ, ವಿವಿ ಕುಲಸಚಿವರಾದ ಶ್ರೀ ಅರ್ಜುನ್ ಒಡೆಯರ್, ಮೌಲ್ಯಮಾಪನ ಕುಲಸಚಿವರಾದ ಡಾ. ರಿಯಾಜ್ ಬಾಷಾ ಎಸ್. , ಹಣಕಾಸು ಅಧಿಕಾರಿ ಶ್ರೀ ಗಂಗಾಧರ ಬಿ. ಕೆ. ಉಪಸ್ಥಿತರಿದ್ದರು.

