ವೈವಿಧ್ಯಮಯ ಕಥಾಹಂದರಗಳ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಸನ್ ಉದಯ, ಇತ್ತೀಚೆಗಷ್ಟೇ ‘ಭಾಗ್ಯವಂತರು’ (Bhagyavantaru) ಧಾರವಾಹಿ ಯಶಸ್ಸಿನ ಬಳಿಕ ಮತ್ತೊಂದು ವಿಭಿನ್ನ ಕಥೆಯೊಂದಿಗೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ. ಸ್ನೇಹದ ನಿಜವಾದ ಅರ್ಥ, ಗೆಳತನದ ಬಾಂಧವ್ಯ ಮತ್ತು ಅದರ ಮಹತ್ವವನ್ನು ಹೃದಯಸ್ಪರ್ಶಿಯಾಗಿ ಬಿಂಬಿಸುವ ‘ಗೆಳತಿ ಗಾಯತ್ರಿ’ (Gelathi Gayathri) ಧಾರವಾಹಿ (Serial) ಇದೇ ಆಗಸ್ಟ್ 17ರಿಂದ ಸೋಮವಾರದಿಂದ ಶನಿವಾರ ಸಂಜೆ 7ಕ್ಕೆ ಪ್ರಸಾರವಾಗುತ್ತಿದೆ
‘ಗೆಳತಿ ಗಾಯತ್ರಿ’ ಇಬ್ಬರು ಆತ್ಮೀಯ ಗೆಳತಿಯರ ಭಾವನಾತ್ಮಕ ಪಯಣದ ಕಥೆ.
ಬಾಲ್ಯದಲ್ಲಿ ಪಾರ್ವತಿಗೆ ಸಿಕ್ಕ ಮೊದಲ ಸ್ನೇಹಿತೆ ಗಾಯತ್ರಿ. ಎರಡು ಜಡೆ ಹುಡುಗಿಯರು ಕೈತುತ್ತಿನಿಂದ ಕನವರಿಕೆಯವರೆಗೆ ಜೊತೆಗೆ ಆಡಿ ನಲಿದವರು. ಕಾಲ ಸರಿದಂತೆ ಕಾರಣಾಂತರದಿಂದ ದೂರವಾದಾಗ ಪಾರ್ವತಿಗೆ ಕಾಡುವಂತೆ ನೆನಪಾಗುತ್ತಿರುವವಳು ಗಾಯತ್ರಿ. ಶ್ರೀಮಂತ ಕುಟುಂಬದಲ್ಲಿ ಸುಖಸಂಸಾರ ನಡೆಸುತ್ತಿರುವ ಪಾರ್ವತಿಗೆ ಪ್ರೀತಿಯ ಪತಿ, ಮುದ್ದಾದ ಮಗಳು ಎಲ್ಲವೂ ಇದ್ದರೂ, ಗಾಯತ್ರಿಯನ್ನು ಕಾಣುವ ಹಂಬಲ ಕಡಿಮೆಯಾಗೇ ಇಲ್ಲ.
ತನ್ನ ಜೊತೆ ಬಾಲ್ಯದಲ್ಲಿ ಕಣ್ಣಾಮುಚ್ಚಾಲೆಯಾಡಿದ ಗೆಳತಿಯನ್ನು ಹುಡುಕಲು ಒದ್ದಾಡುತ್ತಿರುವ ಪಾರ್ವತಿಯ ಒದ್ದಾಟಕ್ಕೆ ಉತ್ತರವಾಗಿ ಗಾಯತ್ರಿ ವಾಪಸ್ಸು ಬರುತ್ತಾಳಾ? ತನ್ನ ಗೆಳತಿ ತನಗೆ ಮತ್ತೆ ಸಿಗ್ತಾಳೆ ಅನ್ನೋ ಪಾರ್ವತಿಯ ನಂಬಿಕೆ ಕೊನೆಗೂ ಫಲ ನೀಡುತ್ತದೆಯಾ? ವರ್ಷಗಳ ಬಳಿಕ ಈ ಇಬ್ಬರು ಗೆಳತಿಯರು ಮತ್ತೆ ಒಂದಾಗುತ್ತಾರಾ? ಅವರ ಅನನ್ಯ ಸ್ನೇಹಕ್ಕೆ ವಿಧಿ ಯಾವ ಹೊಸ ತಿರುವು ನೀಡಲಿದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಿದೆ ‘ಗೆಳತಿ ಗಾಯತ್ರಿ’.
ಪಾರ್ವತಿಯಾಗಿ, ಹೆಸರಾಂತ ನಟಿ ವೈಷ್ಣವಿ ಗೌಡ, ಗಾಯತ್ರಿಯಾಗಿ ಕೃತ್ತಿಕಾ ನಟಿಸುತ್ತಿದ್ದಾರೆ. ಬಹುಮುಖ ಪ್ರತಿಭೆ ನಾಗಾರ್ಜುನ ನಾಯಕನಾಗಿ ನಟಿಸುತ್ತಿದ್ದು, ಪದ್ಮಿನಿ ಮತ್ತು ರಾಘು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಹೆಸರಾಂತ ನಿರ್ಮಾಣ ಸಂಸ್ಥೇ, ಶ್ರೀ ಜೈ ಮಾತಾ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಧಾರಾವಾಹಿಗೆ ಯಶವಂತ ಪಾಂಡು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜೆ.ಜಯಮ್ಮ, ಮಿಲನ ಪ್ರಕಾಶ್ ಮತ್ತು ತಶ್ವಿನಿ ನಿರ್ಮಾಪಕರಾಗಿ, ಡಿ.ಓ.ಪಿಯಾಗಿ ಅನಂತ ಗೌಡ ಕಾರ್ಯನಿರ್ಹಿಸಲಿದ್ದಾರೆ. ವಿಕಾಸ ನೇಗಿಲೋಣಿ ಚಿತ್ರಕಥೆ ಮತ್ತು ಅಭಿಜ್ಞಾ ಸಂಭಾಷಣೆ ಹೊಣೆ ಹೊತ್ತಿದ್ದಾರೆ.
ಸ್ನೇಹ, ನೆನಪು, ಪ್ರೀತಿ, ನಿರೀಕ್ಷೆ, ಕನವರಿಕೆ ಮತ್ತು ಭಾವನೆಗಳ ಸಂಗಮವಾಗಿ, ಪ್ರತಿಯೊಬ್ಬರ ಹೃದಯ ತಟ್ಟುವ ‘ಗೆಳತಿ ಗಾಯತ್ರಿ’ ಸನ್ ಉದಯದಲ್ಲಿ ಇದೇ ಆಗಸ್ಟ್ 17 ಸೋಮವಾರದಿಂದ ಸಂಜೆ 7ಕ್ಕೆ ಪ್ರಸಾರವಾಗುತ್ತಿದೆ

