ದಿನಾಂಕ:13/09/2026 ರಂದು ಬೆಳಗ್ಗೆ 00:08 ಗಂಟೆಗೆ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಿಜಿಯೊಂದರಲ್ಲಿ ವಾಸವಿದ್ದ ಓರ್ವ ಯುವತಿಯು ತೀವ್ರ ಮನನೊಂದು ಮಾತ್ರೆಗಳನ್ನು ಸೇವಿಸಿದ್ದು, ಬಳಿಕ ಸ್ವತಃ ನಮ್ಮ-೧೧೨ ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರ ಸಹಾಯ ಕೋರಿರುತ್ತಾರೆ.
ಕೂಡಲೇ ಕಾರ್ಯಪ್ರವೃತ್ತರಾದ ನಮ್ಮ-112 ಸಿಬ್ಬಂದಿಯವರು ಮಾರತ್ತಹಳ್ಳಿ ಪೊಲೀಸ್ ಠಾಣೆಯ ಹೊಯ್ಸಳ-228ರಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ, ರಮೇಶ್ ಹಾಗೂ ಹೆಚ್ಸಿ, ಕುಮಾರ್.ಎಸ್.ಇಟ್ಟಗಿ ರವರಿಗೆ ಮಾಹಿತಿಯನ್ನು ರವಾನಿಸಿದ್ದು, ಕೇವಲ 08 ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿಯ ಸ್ಥಿತಿಯನ್ನು ಪರಿಶೀಲಿಸಿ, ಯಾವುದೇ ವಿಳಂಬವಿಲ್ಲದೆ ತಕ್ಷಣ ವೈದ್ಯಕೀಯ ನೆರವು ಒದಗಿಸಲು ಸ್ನೇಹಿತೆಯೊಂದಿಗೆ ಅವರನ್ನು ಹೊಯ್ಸಳ ವಾಹನದಲ್ಲಿಯೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು, ಅಗತ್ಯ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆಯ ನಂತರ ಯುವತಿಯ ಆರೋಗ್ಯ ಸ್ಥಿತಿ ಸ್ಥಿರಗೊಂಡಿದ್ದು, ಅವರನ್ನು ಸುರಕ್ಷಿತವಾಗಿ ಪಿಜಿಗೆ ಕರೆತಂದು, ಮುಂದಿನ ಆರೈಕೆ ಮತ್ತು ಮೇಲ್ವಿಚಾರಣೆಗಾಗಿ ಪಿಜಿಯ ಕೇರ್ಟೇಕರ್ಗೆ ಒಪ್ಪಿಸಲಾಗಿದೆ.
ಈ ಘಟನೆಯು ಸಂಕಷ್ಟದ ಸಂದರ್ಭಗಳಲ್ಲಿ ನಮ್ಮ-112 ತುರ್ತು ಸಹಾಯವಾಣಿಯನ್ನು ತಕ್ಷಣ ಸಂಪರ್ಕಿಸುವ ಮಹತ್ವವನ್ನು ತೋರಿಸುತ್ತದೆ. ಹೊಯ್ಸಳ ಸಿಬ್ಬಂದಿಯವರ ತ್ವರಿತ ಸ್ಪಂದನೆ, ಸಕಾಲಿಕ ವೈದ್ಯಕೀಯ ನೆರವು ಹಾಗೂ ಸೂಕ್ತ ಆರೈಕೆಯಿಂದ ಯುವತಿಯ ಜೀವವನ್ನು ರಕ್ಷಿಸಲು ಸಹಕಾರಿಯಾಗಿದೆ.

