ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು (Surgical Society of Bengaluru) (SSB) ವತಿಯಿಂದ ಆಯೋಜಿಸಿರುವ ಐದು ದಿನಗಳ ರಾಷ್ಟ್ರೀಯ ಶಸ್ತ್ರಚಿಕಿತ್ಸಾ ಸಮ್ಮೇಳನ ‘ಎಸ್‌ಎಸ್‌ಬಿಕಾನ್–2026’ (SSBCON-2026) ಬೆಂಗಳೂರಿನ ಹೋಟೆಲ್ ಕ್ಯಾಪಿಟಲ್‌ನಲ್ಲಿ ಆರಂಭಗೊಂಡಿದೆ. ರೊಬೋಟಿಕ್ ಶಸ್ತ್ರಚಿಕಿತ್ಸೆ, ಕೃತಕ` ಬುದ್ಧಿಮತ್ತೆ (AI), ಆಧುನಿಕ ಚಿಕಿತ್ಸಾ ವಿಧಾನಗಳು ಹಾಗೂ ವೈದ್ಯಕೀಯ ತಂತ್ರಜ್ಞಾನಗಳ ಬೆಳವಣಿಗೆ ಈ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿವೆ. ಖ್ಯಾತ ವೈದ್ಯಕೀಯ ತಜ್ಞರಾದ ಡಾ. ಹನುಮಯ್ಯ ಮತ್ತು ಪ್ರೊ. ಎಂ. ಆದಿಕೇಶವಲು ಅವರ ಸ್ಮರಣಾರ್ಥ ಆಯೋಜಿಸಿರುವ ಸಮ್ಮೇಳನವನ್ನು ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಬಿಕಾನ್–2026 ಸ್ಮರಣ ಸಂಚಿಕೆ(Special Edition) ಹಾಗೂ ಸಮ್ಮೇಳನದ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ಅಧ್ಯಕ್ಷ ಡಾ. ಸುನಿಲ್ ಕುಮಾರ್ ವಿ., ಗೌರವ ಕಾರ್ಯದರ್ಶಿ ಡಾ. ವಿಕ್ರಮ್ ಬಿಳಿಗಿರಿ, ಡಾ. ಸಿ.ಎಸ್. ರಾಜನ್, ಡಾ. ಚಲ್ಲಾಣಿ, ಡಾ. ಎಂ.ಜಿ. ಭಟ್, ಡಾ. ಎಚ್.ವಿ. ಶಿವರಾಮ್, ಡಾ. ರಾಜಶೇಖರ್ ಸಿ. ಜಾಕಾ ಹಾಗೂ ಡಾ. ಹರೀಶ್ ಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸಂಪತ್ ಕುಮಾರ್ ಕೆ. ಮತ್ತು ಡಾ. ಕೆ.ವಿ. ವೀರೇಂದ್ರ ಕುಮಾರ್ ಸ್ಮಾರಕ ಉಪನ್ಯಾಸ ನೀಡಿದರು. ಮಾತನಾಡಿದ ಅಧ್ಯಕ್ಷ ಡಾ. ಸುನಿಲ್ ಕುಮಾರ್ ವಿ., 53 ವರ್ಷಗಳ ಇತಿಹಾಸ ಹೊಂದಿರುವ ಸಂಸ್ಥೆಯು 1,800ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಕರ ಸದಸ್ಯತ್ವ ಹೊಂದಿದ್ದು, ಯುವ ವೈದ್ಯರಿಗೆ ಆಧುನಿಕ ತಂತ್ರಜ್ಞಾನ ಮತ್ತು ಚಿಕಿತ್ಸಾ ವಿಧಾನಗಳ ಕುರಿತು ಜ್ಞಾನ ಹಾಗೂ ತರಬೇತಿ ನೀಡುವುದು ಪ್ರಮುಖ ಉದ್ದೇಶವಾಗಿದೆ ಎಂದರು.
ಗೌರವ ಕಾರ್ಯದರ್ಶಿ ಡಾ. ವಿಕ್ರಮ್ ಬಿಳಿಗಿರಿ ಮಾತನಾಡಿ, ರೊಬೋಟಿಕ್ ಸರ್ಜರಿ, AI ಮತ್ತು ಕನಿಷ್ಠ ಗಾಯದ ಶಸ್ತ್ರಚಿಕಿತ್ಸಾ ವಿಧಾನಗಳು ರೋಗಿಗಳ ಸುರಕ್ಷತೆ, ಚಿಕಿತ್ಸೆಯ ಗುಣಮಟ್ಟ ಹಾಗೂ ಶೀಘ್ರ ಚೇತರಿಕೆಗೆ ಸಹಕಾರಿಯಾಗಿವೆ. ವೈದ್ಯರು ನಿರಂತರವಾಗಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು. ಐದು ದಿನಗಳ ಸಮ್ಮೇಳನದಲ್ಲಿ 100ಕ್ಕೂ ಹೆಚ್ಚು ವೈದ್ಯರು ಭಾಗವಹಿಸಲಿದ್ದು, ತಜ್ಞರ ಉಪನ್ಯಾಸ, ಸಂವಾದ ಮತ್ತು ಜ್ಞಾನ ವಿನಿಮಯ ಕಾರ್ಯಕ್ರಮಗಳು ನಡೆಯಲಿವೆ. ಗುಣಮಟ್ಟದ ವೈದ್ಯಕೀಯ ಸೇವೆ ಹಾಗೂ ಶಸ್ತ್ರಚಿಕಿತ್ಸಾ ಕ್ಷೇತ್ರದ ಪ್ರಗತಿಗೆ ಈ ಸಮ್ಮೇಳನ ಮಹತ್ವದ ವೇದಿಕೆಯಾಗಲಿದೆ.

