ಹಲಾಲ್ ಮಾಂಸ ನೀಡಲು ನಿರಾಕರಿಸಿದ್ದಕ್ಕೆ ಸಿಖ್ ರೆಸ್ಟೋರೆಂಟ್ ಮಾಲೀಕನಿಗೆ ಬೆದರಿಕೆ! ಕುಟುಂಬಕ್ಕೆ ಜೀವಭಯ; ಮುಚ್ಚುವಂತೆ ಪ್ರತಿಭಟನೆ!!
ಲಂಡನ್: ಪಶ್ಚಿಮ ಲಂಡನ್ನ ಹ್ಯಾಮರ್ಸ್ಮಿತ್ನಲ್ಲಿ (Hammersmith) ಸಿಂಗ್’ಸ್ ಡೈನಿಂಗ್ (Singh’s Dining) ಎಂಬ ಭಾರತೀಯ ರೆಸ್ಟೋರೆಂಟ್ (Restaurant) ನಡೆಸುತ್ತಿರುವ ಸಿಖ್ ಬಾಣಸಿಗ ಹರ್ಮನ್ ಸಿಂಗ್ ಕಪೂರ್, ಹಲಾಲ್ ಮಾಂಸ ನೀಡಲು ನಿರಾಕರಿಸಿದ ಕಾರಣ ತಮ್ಮ ಕುಟುಂಬದ ವಿರುದ್ಧ ಹಲವು ತಿಂಗಳಿಂದ ಬೆದರಿಕೆ, ಕಿರುಕುಳ ಹಾಗೂ ಹಿಂಸಾತ್ಮಕ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
ತಮ್ಮ ಸಿಖ್ ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿ ರೆಸ್ಟೋರೆಂಟ್ನಲ್ಲಿ ಜಟ್ಕಾ ಮಾಂಸವನ್ನು ಮಾತ್ರ ನೀಡುತ್ತಿರುವ ಕಪೂರ್, ರೆಸ್ಟೋರೆಂಟ್ನ ಮುಂಭಾಗದಲ್ಲಿ “Proudly Non-Halal” (ನಾವು ಹೆಮ್ಮೆಯಿಂದ ಹಲಾಲ್ ಅಲ್ಲದ ಮಾಂಸ ನೀಡುತ್ತೇವೆ) ಎಂಬ ಫಲಕವನ್ನೂ ಹಾಕಿದ್ದಾರೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕೆಲವರು ತಮ್ಮ ರೆಸ್ಟೋರೆಂಟ್ ಹಾಗೂ ಕುಟುಂಬವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ನವೆಂಬರ್ 13ರಂದು ರೆಸ್ಟೋರೆಂಟ್ ಹೊರಭಾಗದಲ್ಲಿ ಗುಂಪೊಂದು ಪ್ರತಿಭಟನೆ ನಡೆಸಿದ್ದು, “ಅಲ್ಲಾಹು ಅಕ್ಬರ್” ಮತ್ತು “ಫ್ರೀ, ಫ್ರೀ ಪ್ಯಾಲೆಸ್ಟೈನ್” ಎಂಬ ಘೋಷಣೆಗಳನ್ನು ಕೂಗುತ್ತಾ ರೆಸ್ಟೋರೆಂಟ್ ಮುಚ್ಚಬೇಕು ಹಾಗೂ ಕಪೂರ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದೆ. ಪ್ರತಿಭಟನಾಕಾರರಲ್ಲಿ ಕೆಲವರು ರೆಸ್ಟೋರೆಂಟ್ ಒಳಗೆ ನುಗ್ಗಲು ಯತ್ನಿಸಿದ್ದು, ಈ ವೇಳೆ ಕಪೂರ್ ಅವರ ಪುತ್ರಿ ಸಮಯಪ್ರಜ್ಞೆಯಿಂದ ಶಟರ್ ಮುಚ್ಚಿದ್ದರಿಂದ ಅವರು ಒಳನುಗ್ಗಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.
ಕಪೂರ್ ಕುಟುಂಬಕ್ಕೆ ಪದೇಪದೇ ಜೀವ ಬೆದರಿಕೆಗಳು ಬಂದಿದ್ದು, ಅಕ್ಟೋಬರ್ 28 ಮತ್ತು ನವೆಂಬರ್ 13ರಂದು ಗಡುವು ನೀಡುವ ರೀತಿಯಲ್ಲಿ ಎಚ್ಚರಿಕೆ ಸಂದೇಶಗಳನ್ನೂ ಕಳುಹಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅವರ ಪತ್ನಿ ಹಾಗೂ ಪುತ್ರಿಗೆ ಲೈಂಗಿಕ ದೌರ್ಜನ್ಯ ಎಸಗುವುದಾಗಿ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ.
ಇದಲ್ಲದೆ, ಈ ಹಿಂದೆ ಕುಟುಂಬದ ಮೇಲೆ ದೈಹಿಕ ಹಲ್ಲೆ, ರೆಸ್ಟೋರೆಂಟ್ನಲ್ಲಿ ಧ್ವಂಸ, ಸಂಘಟಿತವಾಗಿ ನಕಲಿ ಒಂದು ಸ್ಟಾರ್ ವಿಮರ್ಶೆಗಳನ್ನು ನೀಡುವುದು, ವೆಬ್ಸೈಟ್ ಮೇಲೆ ಸೈಬರ್ ದಾಳಿ ಸೇರಿದಂತೆ ಹಲವು ಕಿರುಕುಳದ ಘಟನೆಗಳು ನಡೆದಿವೆ ಎಂದು ಕಪೂರ್ ತಿಳಿಸಿದ್ದಾರೆ. ಆಹಾರ ವಿತರಣೆ ಮಾಡಲು ಬಂದ ಡೆಲಿವರಿ ಚಾಲಕನೊಬ್ಬ ಕುಟುಂಬದವರ ಮೇಲೆ ಉಗುಳಿ, ಪುತ್ರಿಗೆ ಬೆದರಿಕೆ ಹಾಕಿದ ಘಟನೆಯೂ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಎಲ್ಲಾ ಘಟನೆಗಳ ಕುರಿತು ಮೆಟ್ರೋಪಾಲಿಟನ್ ಪೊಲೀಸರಿಗೆ ಹಲವು ಬಾರಿ ಮಾಹಿತಿ ನೀಡಿದ್ದರೂ, ತಮ್ಮ ಕುಟುಂಬದ ಸುರಕ್ಷತೆಯ ಬಗ್ಗೆ ಆತಂಕ ಮುಂದುವರಿದಿದೆ ಎಂದು ಕಪೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಾವು ನಮ್ಮ ಜೀವವನ್ನು ಅಪಾಯಕ್ಕೆ ಸಿಲುಕಿಸಿಕೊಂಡು ರೆಸ್ಟೋರೆಂಟ್ ತೆರೆದಿಡಬೇಕೇ? ಅಥವಾ ಹಲಾಲ್ ಆಹಾರ ನೀಡುವುದಿಲ್ಲ ಎಂಬ ಕಾರಣಕ್ಕೆ ವರ್ಷಗಳ ಶ್ರಮದಿಂದ ಕಟ್ಟಿದ ನಮ್ಮ ಉದ್ಯಮವನ್ನು ಮುಚ್ಚಬೇಕೇ?” ಎಂದು ಪ್ರಶ್ನಿಸಿರುವ ಅವರು, ತಮ್ಮ ಕುಟುಂಬ ಎದುರಿಸುತ್ತಿರುವ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ನಂಬಿಕೆ ಹಾಗೂ ಆಹಾರದ ಆಯ್ಕೆಯ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಈ ಪ್ರಕರಣ ಇದೀಗ ಲಂಡನ್ನಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಕುಟುಂಬದ ಸುರಕ್ಷತೆ ಮತ್ತು ಬೆದರಿಕೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ವ್ಯಕ್ತವಾಗಿದೆ.

