ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆಗಳಲ್ಲಿ ಮಕ್ಕಳು ಮಾದಕ ವ್ಯವನಿಗಳಾಗದಂತೆ ನೋಡಿಕೊಳ್ಳುವುದು ಅಗತ್ಯ: ಡಾ. ಶಿವರಾತ್ರಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ
ಬೆಂಗಳೂರು: ಅತ್ಯಂತ ಮಹತ್ವಾಕಾಂಕ್ಷೆಯಿಂದ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಿಗೆ ಸೇರಿಸಲು ಪೋಷಕರು ಹಾತೊರೆಯುತ್ತಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದ ಶಾಲೆಗಳಿಗೆ ಸೇರಿದರೆ ಮಕ್ಕಳು ಮಾದಕ ವ್ಯಸನಿಗಳಾಗುವ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ ಎಂದು ಶ್ರೀ ಸುತ್ತೂರು ಮಠದ ಜಗದ್ಗುರು ಡಾ. ಶಿವರಾತ್ರಿ ದೇಶಿಕೇಂದ್ರ ಶಿವಾಚಾರ್ಯ(Dr.Shivaraatri Deseekendra Shivacharya) ಮಹಾಸ್ವಾಮೀಜಿ ಹೇಳಿದ್ದಾರೆ.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ 34 ವರ್ಷಗಳ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಕಡಬಮ್ಸ್ ಗ್ರೂಪ್ನ 34ನೇ ವಾರ್ಷಿಕೋತ್ಸವದಲ್ಲಿ ಶ್ರೀ ಕಡಬಮ್ಸ್ ಅಶ್ವತ್ಥನಾರಾಯಣ ರೆಸಿಡೆನ್ಶಿಯಲ್ ಎಲ್ಡರ್ ಕೇರ್ ಬ್ಲಾಕ್ ಪರಿಕಲ್ಪನೆಯನ್ನು ಅನಾವರಣಗೊಳಿಸಿ, ಶ್ರೀ ಮೇಘಲಾಲ್ ಕೃಷ್ಣಮೂರ್ತಿ ಸ್ಮರಣಾರ್ಥ ನಿರ್ಮಿಸಿರುವ ‘ಆದ್ಯಾ – ಭೋಜನ ಶಾಲೆ ಉದ್ಘಾಟಿಸಿ, ವಿವಿಧ ಕ್ಷೇತ್ರಗಳ ಸಾಧಕರಿಗೆ ಬ್ರೈಟ್ ಸ್ಟಾರ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಮಾದಕ ವ್ಯಸನ ಹೆಚ್ಚಿರುವ ದಿನಗಳಲ್ಲಿ ನಾವಿದ್ದೇವೆ. ಮದ್ಯಪಾನ, ಮಾದಕ ವ್ಯಸನಕ್ಕೆ ನಾನಾ ಕಾರಣಗಳಿವೆ. ಒಮ್ಮೆ ಚಟಕ್ಕೆ ಬಿದ್ದರೆ ವಾಪಸ್ ಕರೆ ತರುವುದು ಸವಾಲಿನ ಕೆಲಸ. ಮಾನಸಿಕ ಸಮಸ್ಯೆಯನ್ನು ಕೂಡ ಈಗ ಗುಣಪಡಿಸಬಹುದಾಗಿದೆ. ಮಾನಸಿಕ ಆರೋಗ್ಯ ಸಮಸ್ಯೆ ನಿವಾರಣೆಯಲ್ಲಿ ಕಡಂಬಮ್ಸ್ ಅತ್ಯುತ್ತಮ ಸಂಸ್ಥೆಯಾಗಿ ಹೊರ ಹೊಮ್ಮಿದೆ ಎಂದು ಹೇಳಿದರು.
ಶ್ರೀ ವಾಸವಿ ಪೀಠದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ದೈಹಿಕ ಆರೋಗ್ಯದಷ್ಟೇ ಮಾನಸಿಕ ನೆಮ್ಮದಿ ಮತ್ತು ಭಾವನಾತ್ಮಕ ಸುರಕ್ಷತೆಯೂ ಪ್ರತಿಯೊಬ್ಬರ ಹಕ್ಕು. ಹಿರಿಯರನ್ನು ಕೇವಲ ಆರೈಕೆಯ ಅಗತ್ಯವಿರುವವರಾಗಿ ನೋಡುವ ಬದಲು, ಅವರ ಅನುಭವ ಮತ್ತು ಜ್ಞಾನವನ್ನು ಗೌರವಿಸುವ ವಾತಾವರಣ ನಿರ್ಮಿಸುವ ಅಗತ್ಯವಿದೆ. ಗುಣಮಟ್ಟದ ಆರೋಗ್ಯ ಸೇವೆಯೊಂದಿಗೆ ಮಾನವೀಯ ಸ್ಪರ್ಶವನ್ನು ಉಳಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂದರು.
ಅಖಿಲ ಭಾರತ ಆರ್ಯ ವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ. ರವಿಶಂಕರ್ ಮಾತನಾಡಿ, ಸಮಾಜದ ವಿವಿಧ ವರ್ಗಗಳೊಂದಿಗೆ ಕೈಜೋಡಿಸಿ ಸೇವಾ ಕಾರ್ಯಗಳನ್ನು ಮುಂದುವರಿಸಬೇಕು. ಮಾನಸಿಕ ಆರೋಗ್ಯ ಮತ್ತು ಹಿರಿಯರ ಆರೈಕೆಯಂತಹ ಸೂಕ್ಷ್ಮ ಕ್ಷೇತ್ರಗಳಲ್ಲಿ ಕಡಬಮ್ಸ್ ಗ್ರೂಪ್ ಕೈಗೊಂಡಿರುವ ಕಾರ್ಯಗಳು ಸಮಾಜದಲ್ಲಿ ಉತ್ತಮ ಬದಲಾವಣೆಗೆ ಕಾರಣವಾಗಲಿವೆ ಎಂದು ಹೇಳಿದರು.
ಕಡಬಮ್ಸ್ ಕಾರ್ಯಕಾರಿ ನಿರ್ದೇಶಕ ಸಂದೇಶ್ ಆರ್. ಕಡಬಮ್ ಮಾತನಾಡಿ, “ಕಡಬಮ್ಸ್ನ ಪಯಣವು ಕೇವಲ ಒಂದು ಸಂಸ್ಥೆಯ ಬೆಳವಣಿಗೆಯ ಕಥೆಯಲ್ಲ; ಇದು ಸಾವಿರಾರು ವ್ಯಕ್ತಿಗಳು ಮತ್ತು ಕುಟುಂಬಗಳ ಬದುಕಿನಲ್ಲಿ ಆಶಾಕಿರಣ ಮೂಡಿಸುವ ಪ್ರಯತ್ನದ ಯಾನವಾಗಿದೆ. ಮುಂದಿನ ಹಂತದಲ್ಲಿ ಮಾನಸಿಕ ಆರೋಗ್ಯದ ಜೊತೆಗೆ ಹಿರಿಯರ ಗೌರವಯುತ ಹಾಗೂ ಗುಣಮಟ್ಟದ ಜೀವನಕ್ಕೂ ಹೆಚ್ಚಿನ ಆದ್ಯತೆ ನೀಡಲಿದ್ದೇವೆ,” ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಡಾ. ಶ್ರೇಯಸ್ ಆರ್. ಕಡಬಮ್ ಮಾತನಾಡಿ, ಆಧುನಿಕ ಚಿಕಿತ್ಸಾ ವಿಧಾನಗಳೊಂದಿಗೆ ಮಾನವೀಯತೆ, ಕುಟುಂಬದ ಪಾಲ್ಗೊಳ್ಳುವಿಕೆ ಮತ್ತು ಪುನರ್ವಸತಿಗೆ ಸಮಾನ ಆದ್ಯತೆ ನೀಡಲಾಗುತ್ತಿದೆ. ಚಿಕಿತ್ಸೆ ಪಡೆದ ವ್ಯಕ್ತಿ ಸಮಾಜದಲ್ಲಿ ಆತ್ಮವಿಶ್ವಾಸದಿಂದ ಸ್ವತಂತ್ರ ಜೀವನ ನಡೆಸುವಂತಾಗುವುದು ಪುನರ್ವಸತಿಯ ಅಂತಿಮ ಗುರಿ ಎಂದರು.
ಕಾರ್ಯಕ್ರಮದ ಕಡಬಮ್ಸ್ ಸಂಸ್ಥೆಯ ಅಧ್ಯಕ್ಷ ರಮೇಶ್ ಕಡಬಮ್, ಉಪಾಧ್ಯಕ್ಷರಾದ ಸುಧಾ ಕಡಬಮ್, ಕಡಬಮ್ಸ್ ಕಾರ್ಯಕಾರಿ ನಿರ್ದೇಶಕ ಸಂದೇಶ್ ಆರ್. ಕಡಬಮ್, ಕಾರ್ಯಕಾರಿ ನಿರ್ದೇಶಕ ಡಾ. ಶ್ರೇಯಸ್ ಆರ್. ಕಡಬಮ್ ಎಂ.ಕೆ. ಸರಸ್ವತಿ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ:* *ಡಾ. ಶಿವರಾತ್ರಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ*

