Home Blog Page 84

ಜೂ. 13: ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ: ವಿಜಯೇಂದ್ರ

ಶಿವಮೊಗ್ಗ: ಜನವಿರೋಧಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಸರಕಾರದ ವಿರುದ್ಧ ಬೃಹತ್ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಪ್ರಕಟಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನವಿರೋಧಿ ಕಾಂಗ್ರೆಸ್ ಸರಕಾರ ಕಿತ್ತೊಗೆಯುವ ವರೆಗೂ ಹೋರಾಟ ಮುಂದುವರೆಸಲು ನಿರ್ಧರಿಸಿದ್ದೇವೆ. ಜೂನ್ 13ರಂದು ಬೆಂಗಳೂರು ಮಹಾನಗರದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಇದೆ. ಬಿಜೆಪಿ ಕಾರ್ಯಕರ್ತರು, ಘಟನೆಯಲ್ಲಿ ನೊಂದ ಕುಟುಂಬಗಳ ಸದಸ್ಯರು, ನೊಂದವರು ಬರಲಿದ್ದಾರೆ. ಸುಮಾರು 15- 20 ಸಾವಿರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಲಿದ್ದಾರೆ ಎಂದು ವಿವರಿಸಿದರು.
ಆರ್‍ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ, 11 ಸಾವಿನ ಸಂಬಂಧ ದುರ್ಘಟನೆಯಲ್ಲಿ ಆರೋಪಿ ನಂಬರ್ 1 ಆರ್‍ಸಿಬಿ ಅಲ್ಲ; ಆರ್‍ಸಿಬಿ, ಕೆಎಸಿಎ, ಡಿಎನ್‍ಎ ಅವರು ಕೂಡ ಆರೋಪಿಗಳೇ ಆಗಿದ್ದಾರೆ. ಮುಖ್ಯಮಂತ್ರಿಗಳೇ ಆರೋಪಿ ನಂಬರ್ 1, ಉಪ ಮುಖ್ಯಮಂತ್ರಿಗಳು ಎಡರನೇ ಆರೋಪಿ, ಕೈಕಟ್ಟಿ ಕುಳಿತಿದ್ದ ಗೃಹ ಸಚಿವ ಪರಮೇಶ್ವರ್ ಅವರು ಆರೋಪಿ ನಂಬರ್ 3; ನಂತರದ ಹೊಣೆಗಾರರು ಆರ್‍ಸಿಬಿ, ಕೆಎಸಿಎ, ಡಿಎನ್‍ಎ ಎಂದು ತಿಳಿಸಿದರು.

ಸರಕಾರಕ್ಕೆ ಕ್ಲೀನ್ ಚಿಟ್ ಪಡೆಯಲೆಂದೇ..
ಕರ್ತವ್ಯನಿರತ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಈ ಪ್ರಕರಣದ ತನಿಖೆ ನಡೆಸಬೇಕೆಂದು ಬಿಜೆಪಿ ಆಗ್ರಹಿಸಿತ್ತು. ಸಿಐಡಿ ತನಿಖೆಗೆ ಕೊಟ್ಟರು. ಮತ್ತೊಂದು ಕಡೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಗೆ ಆದೇಶಿಸಿದ್ದಾರೆ. ಅವರಿಗೆ ಬೇಕಾದವರನ್ನು ನೇಮಿಸಿ ರಾಜ್ಯ ಸರಕಾರಕ್ಕೆ ಕ್ಲೀನ್ ಚಿಟ್ ಕೊಟ್ಟು ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ ಹೊಣೆಯಿಂದ ತಪ್ಪಿಸಿಕೊಳ್ಳಲೆಂದೇ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಸರಕಾರಕ್ಕೆ ಕಿಂಚಿತ್ತಾದರೂ ಮಾನಮರ್ಯಾದೆ ಇದ್ದರೆ ಹೈಕೋರ್ಟ್‍ನ ಸಿಟ್ಟಿಂಗ್ ನ್ಯಾಯಮೂರ್ತಿಗಳಿಂದ ಈ ಪ್ರಕರಣದ ತನಿಖೆ ನಡೆಸಲಿ ಎಂದು ವಿಜಯೇಂದ್ರ ಅವರು ಆಗ್ರಹಿಸಿದರು.

ಸಿಎಂ, ಡಿಸಿಎಂ ನಡುವೆ ಪೈಪೋಟಿ..
ಸಿಎಂ, ಡಿಸಿಎಂ ನಡುವೆ ಪೈಪೋಟಿ ಇತ್ತು. ತಮ್ಮ ಜನಪ್ರಿಯತೆಗಾಗಿ ವಿಧಾನಸೌಧದ ಮುಂದೆ ಮುಖ್ಯಮಂತ್ರಿ ಕಾರ್ಯಕ್ರಮ ಆಯೋಜಿಸಿದ್ದರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಏರ್ಪಡಿಸಿದ್ದರು ಎಂದು ಪ್ರಶ್ನೆಗೆ ಉತ್ತರಿಸಿದರು. ಇವರ ಗೊಂದಲದಿಂದ ಬಲಿ ಆದುದು ಯಾರು? ಯಾರ ಮರ್ಯಾದೆ ಹೋಗಿದೆ? ಎಂದು ವಿಜಯೇಂದ್ರ ಅವರು ಕೇಳಿದರು.


ಚಿನ್ನಸ್ವಾಮಿ ಸ್ಟೇಡಿಯಂ ವಿಚಾರದಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಸಿಎಂ, ಡಿಸಿಎಂ ನಡುವೆ ಸಂಬಂಧವೇ ಇಲ್ಲದ ಸರಕಾರ ಎಂದು ಮುಖ್ಯಮಂತ್ರಿಗಳು ಹೇಳಿಕೆ ಕೊಡಲಿ ಎಂದು ಅವರು ಒತ್ತಾಯಿಸಿದರು.

ರಾಜ್ಯದ ಗೌರವವನ್ನೂ ಹಾಳು ಮಾಡಿದ್ದಾರೆ..
ವಿಧಾನಸೌಧದ ಮುಂದೆ ರಾಜಕಾರಣಿಗಳ ಉಪಟಳ ತಡೆಯಲು ಸಾಧ್ಯವಾಗದೆ ಆರ್‍ಸಿಬಿ ಅಭಿಮಾನಿಗಳು ವಿಧಾನಸೌಧದ ಮೆಟ್ಟಿಲ ಬಳಿ ಚಪ್ಪಲಿ, ಕಲ್ಲು ತೂರಿದ್ದಾರೆ. ಇವರಿಗೆ ಸೆಲ್ಫಿ ಚಟ, ಜನಪ್ರಿಯತೆಯ ಚಟ ಇತ್ತು. ರಾಜ್ಯದ ಗೌರವವನ್ನೂ ಹಾಳು ಮಾಡಿದ್ದಾರೆ ಎಂದು ಟೀಕಿಸಿದರು.
ಮಾನ್ಯ ರಾಜ್ಯಪಾಲರನ್ನು ತಪ್ಪು ದಾರಿಗೆ ಎಳೆದು ಅವರನ್ನೂ ಕೂರಿಸಿಕೊಂಡಿದ್ದರು. ವಿಧಾನಸೌಧದಲ್ಲಿ ಕಾರ್ಯಕ್ರಮ ಮಾಡಲು ನಾವು ಹೇಳಿದ್ದೇವಾ? ನಾವು ಮೆರವಣಿಗೆಗೆ ಅವಕಾಶ ಕೋರಿದ್ದೆವು. ಮೆರವಣಿಗೆ ಮಾಡಿದ್ದರೆ ಬಹುಶಃ ದುರ್ಘಟನೆ ನಡೆಯುತ್ತಿರಲಿಲ್ಲ ಎಂದು ಪ್ರಶ್ನೆಗೆ ಉತ್ತರ ನೀಡಿದರು. ನಾವು ಅಭಿಮಾನಿಗಳ ಪರವಾಗಿ ಕರೆ ಕೊಟ್ಟಿದ್ದೇವೆ. ಆದರೆ, ಸರಕಾರಕ್ಕೆ ಜವಾಬ್ದಾರಿ ಇಲ್ಲವೇ ಎಂದು ಕೇಳಿದರು. ಕಾನೂನು- ಸುವ್ಯವಸ್ಥೆ ಸರಕಾರದ ಹೊಣೆಯಲ್ಲವೇ? ಅದು ವಿಪಕ್ಷದ ಜವಾಬ್ದಾರಿಯೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ರಾಜ್ಯ ಸರಕಾರ ದಪ್ಪ ಚರ್ಮದ್ದು..
ದೇಶದ- ನಾಡಿನ ಜನರ ಭಾವನೆಯನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ತಿಳಿಸುವ ಉದ್ದೇಶದಿಂದ ಇವತ್ತು ಸಿಎಂಗೆ ಬಹಿರಂಗ ಪತ್ರ ಬರೆದಿರುವುದಾಗಿ ಅವರು ಹೇಳಿದರು. ಪ್ರಾಣ ಕಳಕೊಂಡ, ನೊಂದ ಕುಟುಂಬಗಳ ಸದಸ್ಯರ ಭಾವನೆಯು ರಾಜ್ಯದ ಸಿಎಂ, ಡಿಸಿಎಂ, ರಾಜ್ಯ ಸರಕಾರಕ್ಕೆ ಅರ್ಥ ಆಗಬೇಕೆಂಬ ನಿಟ್ಟಿನಲ್ಲಿ ಪತ್ರ ಬರೆದುದಾಗಿ ಸ್ಪಷ್ಟಪಡಿಸಿದರು. ಪತ್ರ ನೋಡಿ ಮುಖ್ಯಮಂತ್ರಿಗಳು ಸ್ಪಂದಿಸುವ ವಿಶ್ವಾಸ ನನಗಿಲ್ಲ; ರಾಜ್ಯ ಸರಕಾರ ದಪ್ಪ ಚರ್ಮದ್ದು ಎಂದು ವಿಜಯೇಂದ್ರ ಅವರು ವ್ಯಂಗ್ಯವಾಡಿದರು.

ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ ಭಾರತ- ಪ್ರಲ್ಹಾದ್ ಜೋಶಿ

ಶೀಘ್ರವೇ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ವಿಶ್ವಾಸ

ಬೆಂಗಳೂರು: ಭಾರತವು ಇದೀಗ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ 11 ವರ್ಷಗಳ ಸಾಧನೆ ಸಂಬಂಧ ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಟ್ರಿಲಿಯನ್ ದೇಶವಾಗಲು ಸುಮಾರು 30-40 ವರ್ಷ ಬೇಕಾಯಿತು. 2 ಟ್ರಿಲಿಯನ್ ದೇಶವಾಗಲು ಸುಮಾರು 62-63 ವರ್ಷವೇ ಬೇಕಾಯಿತು. ಸ್ಥಿರತೆಯ ಪರಿಣಾಮವಾಗಿ 2 ಟ್ರಿಲಿಯನ್‍ನಿಂದ 4 ಟ್ರಿಲಿಯನ್ ಗೂ ಹೆಚ್ಚು ಸಾಧನೆ ಮಾಡಿದ್ದೇವೆ ಎಂದು ವಿವರಿಸಿದರು. ಸ್ಥಿರ ಸರಕಾರದ ಪರಿಣಾಮವಾಗಿ ಸಮರ್ಥ ಸರಕಾರ- ಆಡಳಿತ ನೀಡಲು ಸಾಧ್ಯವಾಗಿದೆ. ಸ್ಥಿರ ಸರಕಾರವು ಎಲ್ಲ ಕ್ಷೇತ್ರಗಳಲ್ಲಿ ಸಾಧನೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.

ರಕ್ಷಣಾ ವ್ಯವಸ್ಥೆಯ ಸುಧಾರಣೆ
ರಕ್ಷಣಾ ವ್ಯವಸ್ಥೆಯ ಸುಧಾರಣೆಯೂ ಪ್ರಮುಖ ಸಂಗತಿ. ರಕ್ಷಣಾ ವಿಭಾಗದ ಮುಖ್ಯಸ್ಥರ ಹುದ್ದೆ (ಸಿಡಿಎಸ್) ಕುರಿತಂತೆ ನಿರ್ಧರಿಸಲಾಗದ ಸರಕಾರ ಹಿಂದೆ ನಮ್ಮಲ್ಲಿತ್ತು. ಗಡಿ ಭಾಗದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡಿದರೆ ಅದನ್ನು ನಮ್ಮ ಶತ್ರು ದೇಶಗಳು ಬಳಸಿಕೊಳ್ಳುತ್ತವೆ ಎಂದು ಅಂತೋಣಿಯವರು ಸಂಸತ್ತಿನಲ್ಲೇ ಅಧಿಕೃತ ಹೇಳಿಕೆ ನೀಡಿದ್ದರು. ಗಡಿ ಭಾಗದ ಮೂಲಸೌಕರ್ಯದಿಂದ ಸಿಡಿಎಸ್ ವರೆಗೆ ಸಮರ್ಥ ನಿರ್ಧಾರ ಮಾಡಿದ್ದೇವೆ. ಸಿಡಿಎಸ್ ಪರಿಣಾಮವಾಗಿ ಆಪರೇಷನ್ ಸಿಂದೂರ, ಈ ಕಾರ್ಯಾಚರಣೆ ಬಳಿಕ ಪಾಕಿಸ್ತಾನದ ನಡವಳಿಕೆಗೆ ದಿಟ್ಟ ಉತ್ತರ ನೀಡಲು ಸಾಧ್ಯವಾಯಿತು ಎಂದು ಪ್ರಲ್ಹಾದ್ ಜೋಶಿ ಅವರು ಹೇಳಿದರು.
3 ರಕ್ಷಣಾ ದಳಗಳ ಸಮನ್ವಯತೆಯ ಮೂಲಕ ಭಯೋತ್ಪಾದನೆಗೆ ಸಂಬಂಧಿಸಿದ 9 ಸ್ಥಳಗಳನ್ನು ಗುರುತಿಸಿ ಅದೇ ಜಾಗಕ್ಕೆ ಕ್ಷಿಪಣಿ ದಾಳಿ ಮಾಡಲು ಸಾಧ್ಯವಾಗಿದೆ. ರಕ್ಷಣಾ ಕ್ಷೇತ್ರದ ಎಲ್ಲ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ನಾವು 5 ಸಾವಿರ ಉತ್ಪನ್ನಗಳನ್ನು ಮೇಡ್ ಇನ್ ಇಂಡಿಯ, ಮೇಕ್ ಇನ್ ಇಂಡಿಯದಲ್ಲಿ ಉತ್ಪಾದಿಸುತ್ತಿದ್ದೇವೆ. 25 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಮತ್ತಿತರ ಉತ್ಪನ್ನಗಳನ್ನು ರಫ್ತು ಮಾಡಿದ್ದು, ಈ ದೇಶದಲ್ಲಿ ಇದೇ ಮೊದಲು ಎಂದು ನುಡಿದರು.

ಕಡು ಬಡತನ ಪ್ರಮಾಣವು ಶೇ 21ರಿಂದ ಶೇ 5ಕ್ಕೆ ಇಳಿದಿದೆ. 26 ಕೋಟಿ ಜನರು ಕಡು ಬಡತನ ರೇಖೆಯಿಂದ ಹೊರಕ್ಕೆ ಬಂದಿದ್ದಾರೆ. ಇದು ಭಾರತದ ಏಜೆನ್ಸಿಗಳ ಅಂಕಿ ಅಂಶವಲ್ಲ; ಇದು ವಿಶ್ವ ಬ್ಯಾಂಕಿನ ಅಂಕಿ ಅಂಶಗಳು ಎಂದು ಸ್ಪಷ್ಟಪಡಿಸಿದರು. ಸಮರ್ಥ ನಾಯಕತ್ವ, ಸ್ಥಿರ ಸರಕಾರದ ಪರಿಣಾಮವಾಗಿ ದೇಶದ ರಕ್ಷಣಾ ವ್ಯವಸ್ಥೆ ಬಗ್ಗೆ ಕೂಡ ನಿರ್ದಿಷ್ಟ- ದಿಟ್ಟ ಹೆಜ್ಜೆ ಇಟ್ಟಿದ್ದೇವೆ ಎಂದು ವಿವರ ನೀಡಿದರು. ಇದಕ್ಕೆ ಇತ್ತೀಚಿನ ಆಪರೇಷನ್ ಸಿಂದೂರ ಒಂದು ಉದಾಹರಣೆ ಎಂದು ತಿಳಿಸಿದರು.

ಶೂನ್ಯತೆಯತ್ತ ಭಯೋತ್ಪಾದನಾ ಕೃತ್ಯಗಳು..
ದೇಶದ ಗಡಿ ಪ್ರದೇಶ ಹೊರತುಪಡಿಸಿ ಇತರೆಡೆಗಳಲ್ಲಿ ಭಯೋತ್ಪಾದನಾ ಕೃತ್ಯಗಳು ಬಹುತೇಕ ಶೂನ್ಯವಾಗಿವೆ. ಕಾಶ್ಮೀರದಲ್ಲಿ ಇಂಥ ಘಟನೆಗಳು ನಡೆಯುತ್ತಿವೆ. ಅವುಗಳಿಗೆ ಅತ್ಯಂತ ಪ್ರಖರ- ಸ್ಪಷ್ಟ ಉತ್ತರ ಕೊಟ್ಟಿದ್ದೇವೆ ಎಂದು ಹೇಳಿದರು. ನೇಪಾಳದ ಪಶುಪತಿಯಿಂದ ತಿರುಪತಿವರೆಗೆ ರೆಡ್ ಕಾರಿಡಾರ್ ಮೂಲಕ ಭಾರತದ ಆಡಳಿತವನ್ನು ನೆಲಕಚ್ಚಿಸುವ ತೀರ್ಮಾನ ಉಗ್ರರದ್ದಾಗಿತ್ತು. ಇವತ್ತು ದೇಶದಲ್ಲಿ ಶೇ 70ರಷ್ಟು ನಕ್ಸಲಿಸಂ ಕಡಿಮೆ ಆಗಿದೆ. 2026ರ ಮಾರ್ಚ್ ವೇಳೆಗೆ ಈ ದೇಶದಲ್ಲಿ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ತೊಡೆದುಹಾಕುವ ಕುರಿತು ನಮ್ಮ ಗೃಹ ಸಚಿವರು ಪ್ರಕಟಿಸಿದ್ದಾರೆ ಎಂದು ವಿವರ ನೀಡಿದರು.

ಕೋವಿಡ್ ನಂತರದÀ ಬೆಳವಣಿಗೆ..
ಜಗತ್ತಿನ ಎಲ್ಲಿಯೇ ಭಾರತೀಯರಿಗೆ ತೊಂದರೆ ಆದರೆ, ಅವರನ್ನು ರಕ್ಷಿಸಿದ್ದೇವೆ. ರಷ್ಯಾ- ಉಕ್ರೇನ್ ಯುದ್ಧ, ಅಪsÀಘಾನಿಸ್ತಾನದ ಸಮಸ್ಯೆ ಆದಾಗ ನಮ್ಮ ಜನರನ್ನು ವಾಪಸ್ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಭಾರತದಲ್ಲಿ ಕೋಟ್ಯಂತರ ಜನರ ಸಾವು ಸಂಭವಿಸುವ ಹಾಗೂ ದೇಶವು ನೆಲಕಚ್ಚುವ ಮಾತುಗಳು ಕೇಳಿ ಬರುತ್ತಿದ್ದವು. ಮೋದೀಜೀ ಅವರ ಹೇಳಿಕೆಯಂತೆ, ಭಾರತವು ಕೋವಿಡೋತ್ತರ ದಿನಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ದೇಶವಾಗಿ ಹೊರಹೊಮ್ಮಿದೆ; ಈಗಲೂ ಅದು ಮುಂದುವರೆದಿದೆ ಎಂದು ವಿಶ್ಲೇಷಿಸಿದರು.
140 ಕೋಟಿ ಜನರಿಗೆ 240 ಕೋಟಿಗಿಂತ ಹೆಚ್ಚು ಡೋಸ್ ಲಸಿಕೆ ಕೊಟ್ಟ ಏಕೈಕ ದೇಶ ಭಾರತ; ಇದಲ್ಲದೆ ರಫ್ತು ಮಾಡಲೂ ಸಾಧ್ಯವಾಗಿದೆ ಎಂದು ತಿಳಿಸಿದರು. ಭಾರತವು ಶೀಘ್ರವೇ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2024ರಲ್ಲಿ ಡಿಜಿಟಲ್ ವ್ಯವಹಾರವು 24 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಇದರಲ್ಲಿ ಯುಪಿಐ ಖಾತೆಗಳ ಪಾಲು ಶೇ 83 ಎಂದರು. ಹಿಂದಿನ ಹಣಕಾಸು ಸಚಿವರು ಈ ವಿಷಯದಲ್ಲಿ ಮೋದಿಯವರನ್ನು ಗೇಲಿ ಮಾಡಿದ್ದರು. ಜನ್ ಧನ್, ಆಧಾರ್ ಮತ್ತು ಮೊಬೈಲ್ ಲಿಂಕ್ ಮೂಲಕ ಇದು ಸಾಧ್ಯವಾಗಿದೆ ಎಂದು ತಿಳಿಸಿದರು. ಫಲಾನುಭವಿಗಳಿಗೆ 44 ಲಕ್ಷ ಕೋಟಿ ರೂಪಾಯಿ ಡಿಬಿಟಿ ಮೂಲಕ ನೇರವಾಗಿ ಖಾತೆಗೆ ವರ್ಗಾವಣೆ ಆಗುತ್ತಿದೆ ಎಂದು ಹೇಳಿದರು. ಇತರ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ ಕುರಿತು ಅವರು ಮಾಹಿತಿ ನೀಡಿದರು.

ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ, ಸಂಸದ ಪಿ.ಸಿ. ಮೋಹನ್, ರಾಜ್ಯಸಭಾ ಸದಸ್ಯ ಜಗ್ಗೇಶ್, ವಿಧಾನಸಭೆಯ ಮುಖ್ಯ ಸಚೇತಕ ದೊಡ್ಡನಗೌಡ ಹೆಚ್. ಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ರಾಜ್ಯ ಉಪಾಧ್ಯಕ್ಷ ರಾಜು ಗೌಡ ನಾಯಕ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ.ರಾಮಮೂರ್ತಿ ಮತ್ತು ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ ಅವರು ಉಪಸ್ಥಿತರಿದ್ದರು.

‘ಬ್ಯಾಟರಾಯನಪುರ ಜನಾಕ್ರೋಶ ಯಾತ್ರೆ’ಗೆ ತಡೆ- ತಮ್ಮೇಶ್ ಗೌಡ ಆಕ್ಷೇಪ

ಬೆಂಗಳೂರು: ‘ಬ್ಯಾಟರಾಯನಪುರ ಜನಾಕ್ರೋಶ ಯಾತ್ರೆ’ ನಡೆಸದಂತೆ ತಡೆದಿರುವುದನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ ಅವರು ತೀವ್ರವಾಗಿ ಖಂಡಿಸಿದ್ದಾರೆ.


ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ, ಪ್ರಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ, ತೆರಿಗೆ ಏರಿಕೆ, ದುರಾಡಳಿತ, ಭ್ರಷ್ಟಚಾರ, ಸ್ವಜನಪಕ್ಷಪಾತ ಹಾಗು ಬ್ಯಾಟರಾಯನಪುರ ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿದುದರ ವಿರುದ್ಧವಾಗಿ ಇಂದು (10 ಜೂನ್ 2025) ‘ಬ್ಯಾಟರಾಯನಪುರ ಜನಾಕ್ರೋಶ ಯಾತ್ರೆ’ ಯ ಹೆಸರಿನಲ್ಲಿ, ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕುರಿತು ಸ್ಥಳೀಯ ಬಿಬಿಎಂಪಿ ಕಚೇರಿಗೆ ಮನವಿ ಸಲ್ಲಿಸಲು ತೆರಳುವಾಗ, ಪೊಲೀಸರು ಹಾಗು ಕೆಲವು ಅಧಿಕಾರಿಗಳು ತಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸದಂತೆ ಹತ್ತಿಕ್ಕುವ ಪ್ರಯತ್ನವಾಗಿದೆ. ಆ ಮೂಲಕ ಜನರ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸದಂತೆ ತಡೆಹಿಡಿಯುವ ವ್ಯವಸ್ಥಿತ ತಂತ್ರ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದರಿಂದ ಒಂದಿಷ್ಟು ಮೂಲಭೂತ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಪ್ರಸ್ತುತ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರವನ್ನು ಕೃಷ್ಣ ಭೈರೇಗೌಡ ಅವರು ಪ್ರತಿನಿಧಿಸುತ್ತಿದ್ದು, ಅವರು ಸರ್ಕಾರದ ಪ್ರಭಾವಿ ಸಚಿವರು ಎನ್ನಿಸಿಕೊಂಡಿದ್ದಾರೆ. ಹಾಗಾದರೆ ಸಚಿವರು ಅಧಿಕಾರದ ಪ್ರಭಾವ ಬಳಸಿ ಇಂಥಹ ಕಾರ್ಯಕ್ರಮ ನಡೆಯದಂತೆ ತಡೆಹಿಡಿದರೇ? ಜನಸಾಮಾನ್ಯರು ಒಕ್ಕೊರಲಿನಿಂದ ಸಮಸ್ಯೆಗಳನ್ನು ವಿರೋಧಿಸುವುದನ್ನು ಹತ್ತಿಕ್ಕುವ ಪ್ರಯತ್ನವಾಗುತ್ತಿದೆಯೇ? ಈ ಕಾರ್ಯಕ್ರಮ ನಡೆದರೆ ಎಲ್ಲಿ ತಮ್ಮ ಕ್ಷೇತ್ರದ ಸಮಸ್ಯೆಗಳ ಗುಟ್ಟು ರಟ್ಟಾಗುತ್ತದೆಯೋ ಎಂಬ ಭಯ ಕೃಷ್ಣ ಭೈರೇಗೌಡರಿಗೆ ಕಾಡುತ್ತಿದೆಯೇ? ಶಾಸಕರಾದವರಿಗೆ ತಮ್ಮ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ಬಗ್ಗೆ ಪ್ರಶ್ನಿಸುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲವೇ? ಎಂದು ಅವರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಜನಸಾಮಾನ್ಯರ ಆಕ್ರೋಶವನ್ನು ಕೇಳಿಸಿಕೊಳ್ಳಲು ಶಾಸಕರು ಸಿದ್ಧರಿಲ್ಲವೇ? ಅಥವಾ ಶಾಸಕರು ಬೇಕೆಂದೇ ಕೇಳಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳಲು ಹೀಗೆಲ್ಲ ಷಡ್ಯಂತ್ರ ಮಾಡಲಾಗುತ್ತಿದೆಯೇ? ಜನಸಾಮಾನ್ಯರಿಗೆ ತಮ್ಮ ಸಮಸ್ಯೆಗಳ ವಿರುದ್ಧ ಆಕ್ರೋಶ ಹೊರಹಾಕುವ ಅವಕಾಶವನ್ನು ಕಸಿಯಲಾಗುತ್ತಿದೆಯೇ? ಈ ಸರ್ಕಾರದ ಅವಧಿಯಲ್ಲಿ ಜನಸಾಮಾನ್ಯರ ಧ್ವನಿಯನ್ನು ಮಟ್ಟಹಾಕುವ ಪ್ರಯತ್ನವಾಗುತ್ತಿದೆಯೇ? ಎಂಬೆಲ್ಲ ಮೂಲಭೂತ ಪ್ರಶ್ನೆಗಳು ನಮ್ಮನ್ನು ಕಾಡುತ್ತಿದೆ. ಈ ಕುರಿತು ಶಾಸಕ, ಸಚಿವರು ಉತ್ತರಿಸಬೇಕು ಎಂದು ವಿನಂತಿಸಿದ್ದಾರೆ.

ಶಾಸಕರ ಸರ್ವಾಧಿಕಾರಿ ಧೋರಣೆ
ಈ ಕುರಿತು ಪ್ರಶ್ನಿಸಿದ್ದಕ್ಕೆ ನನ್ನನ್ನು ಹಾಗೂ ಸ್ಥಳೀಯ ಬಿಜೆಪಿ ಮುಖಂಡರನ್ನು ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ಗೃಹಬಂಧನದಲ್ಲಿ ಇರಿಸಲಾಗಿದೆ. ಶಾಸಕರ ಈ ಸರ್ವಾಧಿಕಾರಿ ಧೋರಣೆಯನ್ನು ನಾವೆಲ್ಲರೂ ಖಂಡಿಸುತ್ತೇವೆ. ಈ ರೀತಿಯ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಹಿಂದೆ ಸರಿಯುವುದೂ ಇಲ್ಲ. ನಮ್ಮನ್ನು ಹತ್ತಿಕ್ಕುವ ಪ್ರಯತ್ನಕ್ಕೆ ತಕ್ಕ ರೀತಿಯಲ್ಲಿ ಉತ್ತರಿಸುತ್ತೇವೆ. ಇದು ಹೀಗೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡುತ್ತಿದ್ದೇವೆ. ನಮ್ಮ ಹೋರಾಟ ನಿರಂತರ. ಜನಸಾಮಾನ್ಯರ ಪರವಾದ ನಮ್ಮ ಹೋರಾಟ ಎಂದೂ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 

ನೀವು ವಿಧಾನಸೌಧಕ್ಕೆ ಮಾತ್ರ ಮುಖ್ಯಮಂತ್ರಿಗಳೇ?

ಸಿಎಂ, ಡಿಸಿಎಂ ತಲೆದಂಡ ಆಗದೆ ವಿರಮಿಸೆವು:
ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ

ಬೆಂಗಳೂರು: ನಗರದಲ್ಲಿ ಆರ್.ಸಿ.ಬಿ. ವಿಜಯೋತ್ಸವದ ವೇಳೆ ಕಾಲ್ತುಳಿತ, 11 ಜನ ಅಮಾಯಕರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರ ತಲೆದಂಡ ಆಗದೆ ನಾವು ವಿರಮಿಸುವುದಿಲ್ಲ ಎಂದು ಎಂದು ರಾಜ್ಯ ವಿಧಾನಪರಿಷತ್ ವಿಪಕ್ಷ ನಾಯಕÀ ಛಲವಾದಿ ನಾರಾಯಣಸ್ವಾಮಿ ಅವರು ಎಚ್ಚರಿಸಿದ್ದಾರೆ.ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕ ಆರ್.ಅಶೋಕ್, ನಮ್ಮ ಶಾಸಕರು ವಿರಮಿಸುವ ಪ್ರಶ್ನೆಯೇ ಇಲ್ಲ ಎಂದು ನುಡಿದರು. ಈ ರಾಜ್ಯದ ಗೌರವ ಎತ್ತಿ ಹಿಡಿಯುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಆದ ಕಾರ್ಯಕ್ರಮ ನಾನು ನೋಡಿಕೊಂಡೆ. ನನಗೆ ಬೇರೆ ಯಾವುದೂ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಗಮನ ಸೆಳೆದರು. ಹಾಗಿದ್ದರೆ ನೀವು ವಿಧಾನಸೌಧಕ್ಕೆ ಮಾತ್ರ ಮುಖ್ಯಮಂತ್ರಿಗಳೇ? ಈ ರಾಜ್ಯಕ್ಕೆ ಮುಖ್ಯಮಂತ್ರಿ ಯಾರು? ಡಿ.ಕೆ.ಶಿವಕುಮಾರ್? ಪರಮೇಶ್ವರ್ ಅವರೇ? ಅಥವಾ ಮುಖ್ಯ ಕಾರ್ಯದರ್ಶಿಗಳೇ? ಎಂದು ಕೇಳಿದರು.
ನೀವು ಯಾವ ಯೋಗ್ಯತೆ ಇಟ್ಟುಕೊಂಡು ಮುಖ್ಯಮಂತ್ರಿ ಎಂದು ಕರೆಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು. ‘ಯು ಮಸ್ಟ್ ರಿಸೈನ್’ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. 11 ಜನರ ಸಾವಿನ ಪ್ರಕರಣದಲ್ಲಿ ನೀವೇ ಆರೋಪಿ. ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿಯವರ ಕ್ರೆಡಿಟ್ ವಾರ್‍ನಲ್ಲಿ ರಾಜ್ಯ ಇವತ್ತು ಕಪ್ಪು ಛಾಯೆಯಲ್ಲಿದೆ ಎಂದು ನುಡಿದರು.
ಮಾನ್ಯ ರಾಜ್ಯಪಾಲರು ಬರುವ ವೇಳೆ ಶಿಷ್ಟಾಚಾರ ಪಾಲಿಸಿಲ್ಲ. ಸರಕಾರವು ಶಿಷ್ಟಾಚಾರಗಳನ್ನು ಉಲ್ಲಂಘಿಸಿದೆ ಎಂದು ಅವರು ಆಕ್ಷೇಪಿಸಿದರು. ಸಾಂವಿಧಾನಿಕ ಶಿಷ್ಟಾಚಾರ ಉಲ್ಲಂಘನೆಗೆ ಸಿಎಂ, ಡಿಸಿಎಂ ಕಾರಣರಾಗಿದ್ದಾರೆ ಎಂದು ಟೀಕಿಸಿದರು. ಡಿಪಿಆರ್ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿಗೆ ಇಂಚಿಂಚು ಮಾಹಿತಿ ಇರಬೇಕಿತ್ತು. ಅವರಿಗೆ ಏನು ಆದೇಶ ಇತ್ತೆಂಬ ತನಿಖೆ ಆಗಲಿ ಎಂದು ಒತ್ತಾಯಿಸಿದರು.

ಬಡ ಮಕ್ಕಳು ವಿದ್ಯಾವಂತರಾಗಿ ಉತ್ತಮ ಪ್ರಜೆಗಳಾಬೇಕು: ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ

ಜಯನಗರ, ಜೂ, 10; ವಿದ್ಯಾವಂತ ಸಮಾಜ ನಿರ್ಮಾಣವಾದಾಗ ದೇಶದ ಅಭಿವೃದ್ದಿ ಸಾಧ್ಯ. ವಿದ್ಯಾವಂತರಿಗೆ ಸಮಾಜದಲ್ಲಿ ಗೌರವ ಮಾನ್ಯತೆ ಇರುತ್ತದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಜಯನಗರದ ಭೈರಸಂದ್ರ ವಾರ್ಡ್ ಸರ್ಕಾರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡ 85ಕ್ಕೂ ಹೆಚ್ಚು ಅಂಕಗಳಿಸಿದ 23ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವನ್ನು ಬಾಂದವ ಸಂಸ್ಥೆ ಅಧ್ಯಕ್ಷ ಎನ್.ನಾಗರಾಜು ರವರು ನೀಡಿ ಮಾತನಾಡಿದ, ಅವರು ಬಡವರ ಮಕ್ಕಳು ವಿದ್ಯಾವಂತರಾಗಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಬೇಕು. ಸರ್ಕಾರಿ ಶಾಲೆಗಳನ್ನು ಹೈಟೆಕ್ ಶಾಲೆಯನ್ನಾಗಿ ರೂಪಿಸಲಾಗುತ್ತಿದೆ. ಮತ್ತು ಹೈಟೆಕ್ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಶ್ರೀಮಂತರ ಮಕ್ಕಳಿಗೆ ಸಿಗುವ ಶಿಕ್ಷಣ ಸೌಲಭ್ಯಗಳು, ಸರ್ಕಾರಿ ಶಾಲೆಗಳಿಗೂ ಲಭಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಕೊಠಡಿ, ಡಿಜಿಟಲ್ ಬ್ಲಾಕ್ ಬೋರ್ಡ್, ಮಕ್ಕಳಿಗೆ ಕುಳಿತುಕೊಳ್ಳಲು ಉತ್ತಮ ಟೇಬಲ್, ಕುರ್ಚಿ ವ್ಯವಸ್ಥೆ ಹಾಗೂ ವಿಜ್ಞಾನ ಕೊಠಡಿ ಎಲ್ಲವು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸಿಗುತ್ತಿದೆ.
ಪ್ರತಿಭಾವಂತ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಬೇಕಾಗುವ ಸಹಾಯ ಸಹಕಾರ ನೀಡಲಾಗುವುದು ಎಂದು ಹೇಳಿದರು.ಜಯನಗರ ವಿಧಾನಸಭಾ ಕ್ಷೇತ್ರದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಹಾಗು ಬಾಂದವ ಸಂಸ್ಥೆ ಅಧ್ಯಕ್ಷ ಎನ್.ನಾಗರಾಜು ಮಾತನಾಡಿ, ವಿದ್ಯೆ ಯಾರು ಕದಿಯಲಾಗದ ಅಮೂಲ್ಯ ಜ್ಞಾನ ಭಂಡಾರ. ಪ್ರತಿಯೊಂದು ಮಕ್ಕಳಗೆ ಶಿಕ್ಷಣ ಸಿಗಬೇಕು. ಶಿಕ್ಷಣ ವ್ಯವಸ್ಥೆಯನ್ನು ಸುಧಾರಣೆ ಮಾಡಲಾಗುತ್ತಿದ್ದು, ಉಚಿತ ನೋಟ್ ಪುಸ್ತಕ ವಿತರಣೆ, ಮಕ್ಕಳಿಗೆ ಆರೋಗ್ಯ ಸೇವೆ, ಕ್ರೀಡಾ ಚಟುವಟಿಕೆ ಹಾಗೂ ಪರಿಸರ ಜಾಗೃತಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಪಠ್ಯೇತರ ಚಟುವಟಿಕೆಗಳಿಗೂ ಆದ್ಯೆತೆ ನೀಡಲಾಗುತ್ತಿದೆ ಎಂದು ಹೇಳಿದರು.ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ, ಸಸಿಗಳನ್ನು ವಿತರಿಸಲಾಯಿತು.

ಕಾಂತರಾಜು ಆಯೋಗ ವರದಿ ಕೈಬಿಡುವಂತೆ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಆಗ್ರಹ

*ಸುಪ್ರೀಂ ಕೋರ್ಟ್ ಆದೇಶದಂತೆ ಮೀಸಲಾತಿ ಪ್ರಮಾಣ ಶೇ 56 ರಿಂದ ಶೇ 50ಕ್ಕೆ ಇಳಿಸಿ ಆದೇಶ ಜಾರಿ ಅಪ್ರಸ್ತುತವಾಗಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆ ಕುರಿತ ವರದಿ ಕೈಬಿಡುವಂತೆ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಆಗ್ರಹ*

ಬೆಂಗಳೂರು, ಜೂ, 10; ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಮೀಸಲಾತಿಯನ್ನು ಶೇಕಡ 50ಕ್ಕೆ ಮಿತಿಗೊಳಿಸಿ ಆದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಕಾಂತರಾಜು, ಜಯಪ್ರಕಾಶ್ ಹೆಗಡೆ ನೇತೃತ್ವದ ಸಾಮಾಜಿಕ, ಆರ್ಥಿಕ ಸಮೀಕ್ಷೆ ಕುರಿತ ವರದಿ ಅಪ್ರಸ್ತುವಾಗಿದೆ. ಹೀಗಾಗಿ ಈ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು ಎಂದು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಡಾ. ಗಾ.ನಂ. ಶ್ರೀಕಂಠಯ್ಯ, ಕಾಂತರಾಜು ಆಯೋಗ ವರದಿ ತಿರಸ್ಕರಿಸಿ ಎಲ್ಲ ವರ್ಗದ ಜನರಿಗೆ ನ್ಯಾಯ ದೊರಕಿಸಿಕೊಡಬೇಕು. ಆದರೆ ಕಾಂತರಾಜು, ಜಯಪ್ರಕಾಶ್ ಹೆಗಡೆ ಆಯೋಗ ಮೀಸಲಾತಿ ಪ್ರಮಾಣವನ್ನು ಶೇ 75 ಕ್ಕೆ ಹೆಚ್ಚಿಸುವಂತೆ ಶಿಫಾರಸ್ಸು ಮಾಡಿದ್ದು, ಇದರ ಅನುಷ್ಠಾನ ಕಾರ್ಯಸಾಧುವಲ್ಲ. ಇದೀಗ ಮೀಸಲಾತಿ ಪ್ರಮಾಣ ಹೆಚ್ಚಿಸಲು ಸಾಧ್ಯವಿಲ್ಲ ಎಂಬುದನ್ನು ಸರ್ಕಾರವೇ ತನ್ನ ಆದೇಶದ ಮೂಲಕ ಸ್ಪಷ್ಟಪಡಿಸಿದೆ. ಹೀಗಿರುವಾಗ ಯಾವ ಸಮುದಾಯದಿಂದ ಮೀಸಲಾತಿ ಕಸಿದು ಹಿಂದುಳಿದ ವರ್ಗಕ್ಕೆ ನೀಡುತ್ತೀರಿ ಎಂದು ಪ್ರಶ್ನಿಸಿದರು.
ಕೆಎಟಿ ಆದೇಶದಲ್ಲಿ ಸರ್ಕಾರಿ ನೇಮಕಾತಿಯಲ್ಲಿ ಶೇ 56ರಷ್ಟು ಮೀಸಲಾತಿ ನೀಡಿರುವ ಆದೇಶವನ್ನು 9 ನ್ಯಾಯಮೂರ್ತಿಗಳ ಪೀಠ ರದ್ದುಪಡಿಸಿ, ಮೀಸಲಾತಿ ಪ್ರಮಾಣವನ್ನು ಶೇ 50ಕ್ಕೆ ಮಿತಿಗೊಳಿಸಿ ಆದೇಶಿಸಿದೆ. ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್ಸಿ ಹೊರಡಿಸಿರುವ ಅಧಿಸೂಚನೆಯನ್ನು ಸಹ ಭಾಗಶ: ರದ್ದುಗೊಳಿಸಿ, ಮೀಸಲಾತಿಯನ್ನು ಶೇಕಡ 56 ರಿಂದ ಶೇಕಡ 50ಕ್ಕೆ ಇಳಿಸಿದೆ. ಹೀಗಿರುವಾಗ ಇದೇ ತಿಂಗಳ 12 ರಂದು ಜಾತಿ ಜನಗಣತಿ ಕುರಿತ ಚರ್ಚೆಗೆ ಕರೆದಿರುವ ವಿಶೇಷ ಸಚಿವ ಸಂಪುಟ ಸಭೆಯನ್ನು ರದ್ದು ಮಾಡಬೇಕು. ಅನಗತ್ಯವಾಗಿ ಸರ್ಕಾರದ ಹಣ, ಸಮಯವನ್ನು ವ್ಯರ್ಥ ಮಾಡಬಾರದು ಎಂದು ಹೇಳಿದರು.
ಸರ್ಕಾರದ ಆದೇಶದಿಂದ ವರದಿ ಅನುಷ್ಠಾನ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ. ಕುರುಬ ಸಮುದಾಯಕ್ಕೆ ಶೇ 103 ರಷ್ಟು ಮೀಸಲಾತಿ ಕಲ್ಪಿಸುವಂತೆ ವರದಿ ಶಿಫಾರಸ್ಸು ಮಾಡಿದ್ದು, ಇದು ಅತಿ ಹೆಚ್ಚಿನ ಪ್ರಮಾಣವಾಗಿದೆ. ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಬಗ್ಗೆ ಚಾಂಪಿಯನ್ ರೀತಿ ಮಾತನಾಡುವ ಸಿದ್ದರಾಮಯ್ಯ ಅವರು ಇಷ್ಟೊಂದು ಸ್ವಜನಪಕ್ಷಪಾತಿಯಾಗಬಾರದು. ಬಹುತೇಕ ಎಲ್ಲಾ ಜಾತಿ, ಜನಾಂಗಗಳು ಕಾಂತರಾಜು ಆಯೋಗದ ವರದಿಯಲ್ಲಿ ತಪ್ಪುಗಳಿವೆ ಎಂದು ತಿಳಿಸಿವೆ. ಆದುದ್ದರಿಂದ ಸಂಶಯಾಸ್ಪದವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಸಿದ್ಧಪಡಿಸಿರುವುದನ್ನು ಕೈಬಿಟ್ಟು, ಮತ್ತೊಮ್ಮೆ ವಿಶ್ವಾಸಯುತ ಸಮೀಕ್ಷೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಕಾಂತರಾಜು ಆಯೋಗದ ವರದಿಯ ಸಮೀಕ್ಷೆಯು 2014-15 ರಲ್ಲಿ ನಡೆದಿದ್ದು. ಈಗಾಗಲೇ 10 ವರ್ಷ ಪೂರ್ಣಗೊಂಡಿದೆ. ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದದಂತೆ ಪ್ರತಿ 10 ವರ್ಷಕ್ಕೊಮ್ಮೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ ಅದರ ಆಧಾರದ ಮೇಲೆ ಮೀಸಲಾತಿ ನೀಡಬೇಕಾಗಿದೆ. ಆದರೆ ಈಗಿನ ಕರ್ನಾಟಕ ಸರ್ಕಾರ ಕಾನೂನಿಗೆ ಯಾವುದೇ ಮಾನ್ಯತೆ ಕೊಡದೆ ಕಾಂತರಾಜು – ಜೆ.ಪಿ.ಹೆಗಡೆ ವರದಿಯನ್ನು ಅನುಷ್ಠಾನಗೊಳಿಸಲು ಹೊರಟಿರುವುದು ವಿಪರ್ಯಾಸ. ಸರ್ಕಾರವೇ ಕಾನೂನನ್ನು ಪಾಲಿಸದಿದ್ದಲ್ಲಿ ಇನ್ಯಾರು ಕಾನೂನನ್ನು ಪಾಲಿಸಬೇಕು ಎಂದರು.
ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಡಿಟರ್ ನಾಗರಾಜ್ ಯಲಚವಾಡಿ ಮಾತನಾಡಿ, ಸವೀಕ್ಷೆಯಲ್ಲಿ ರಾಜ್ಯದ ಎಲ್ಲಾ ನಾಗರೀಕರ ಮಾಹಿತಿಯನ್ನು ಸಂಗ್ರಹಿಸಿಲ್ಲ. ಒಟ್ಟು ಜನಸಂಖ್ಯೆಯ ಶೇಕಡಾ 90 ರಷ್ಟು ಜನ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ಭಾಗಿಯಾಗಿದ್ದು, ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ನಡೆದಿಲ್ಲ ಎಂದು ಸರ್ಕಾರವೇ ಒಪ್ಪಿಕೊಂಡಿದೆ. 10 ವರ್ಷಗಳಲ್ಲಿ ಜನಸಂಖ್ಯೆ ಏರಿಕೆಯಾಗಿದ್ದು, ಇತರೆ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯಲ್ಲಿ ಬಹಳಷ್ಟು ಬದಲಾವಣೆಯಾಗಿದೆ. 10 ವರ್ಷಗಳ ಹಿಂದಿನ ವರದಿ ಸ್ವೀಕರಿಸಿ ಮಾಡುವ ತೀರ್ಮಾನಗಳು ವಾಸ್ತವತೆಗಿಂತ ದೂರ ಇರಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಕಾರ್ಯದರ್ಶಿ ಎಂ.ಎ.ಆನಂದ್, ಸಂಘದ ಪ್ರಧಾನ ಕಾರ್ಯದರ್ಶಿ ಅಡಿಟರ್ ನಗರಾಜ್ ಯಲಚವಾಡಿ, ಕಡಬಗೆರೆ ಒಕ್ಕಲಿಗರ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಸಿ.ಶಿವರಾಮು, ಒಕ್ಕಲಿಗ ಸಮಾಜದ ಮುಖಂಡರಾದ ರಂಗನರಸಿಂಹಯ್ಯ, ಮೇಲುಕೋಟೆ ಶಿವರಾಜು ಮತ್ತಿತರರು ಉಪಸ್ಥಿತರಿದ್ದರು.

ಮಾಧ್ಯಮ ಪ್ರತಿನಿದಿಗಳ ಗಮನಕ್ಕೆ – ಸಚಿವ ಸಂಪುಟ ಸಭೆ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಬೆಟ್ಟ ಗಿರಿಧಾಮದ ಮಯೂರ ಸಭಾಂಗಣದಲ್ಲಿ ದಿನಾಂಕ 19-06-2025 ರಂದು ಅಪರಾಹ್ನ 12.00 ಗಂಟೆಗೆ 2025ನೇ ಸಾಲಿನ 13 ನೇ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ. ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದ್ದು, ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿರುವ ಮಾಧ್ಯಮ ಪ್ರತಿನಿಧಿಗಳಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಡಳಿತ ವತಿಯಿಂದ ಅಗತ್ಯ ಪಾಸುಗಳನ್ನು ನೀಡಲಾಗುವುದು.

Home - Department of Information and Public Relations

ಅದ್ದರಿಂದ ಈ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಲಿರುವ ಬೆಂಗಳೂರು ಜಿಲ್ಲೆಯ ಮಾಧ್ಯಮ ಮಾನ್ಯತೆ ಹೊಂದಿರುವ ರಾಜ್ಯ ಮಟ್ಟದ ಪತ್ರಿಕೆಗಳ (ಇಬ್ಬರು ವರದಿಗಾರ ಹಾಗೂ ಓರ್ವ ಛಾಯಾಗ್ರಾಹಕ ಮಾತ್ರ) ಮತ್ತು ವಿದ್ಯುನ್ಮಾನ ಮಾಧ್ಯಮದ (ಇಬ್ಬರು ವರದಿಗಾರರು ಹಾಗೂ ಇಬ್ಬರು ವಿಡಿಯೋಗ್ರಾಹಕರು ಮಾತ್ರ) ಮಾಧ್ಯಮ ಪ್ರತಿನಿಧಿಗಳ ಹೆಸರು, ಪದನಾಮ, ಮೊಬೈಲ್ ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸದೊಂದಿಗೆ ಇತ್ತೀಚಿನ 2 ಭಾವಚಿತ್ರಗಳನ್ನು ಒಳಗೊಂಡಂತೆ ಕಡ್ಡಾಯವಾಗಿ ತಮ್ಮ ಸಂಸ್ಥೆಯ ಶಿಫಾರಸ್ಸು ಪತ್ರದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ತಮ್ಮ ಸಂಸ್ಥೆಯ ಮಾಧ್ಯಮ ಪ್ರತಿನಿಧಿಗಳ ಮೂಲಕ, ಶ್ರೀ ಎಂ.ಜುಂಜಣ್ಣ, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲೆ ಇವರಿಗೆ ದಿನಾಂಕ: 12-06-2025ರ ಮಧ್ಯಾಹ್ನ 3.00 ಗಂಟೆಗೆ ಒಳಗಾಗಿ ತಲುಪಿಸುವುದು.

ಪತ್ರಿಕಾಗೋಷ್ಠಿಯ ಹಾಲ್‍ಗೆ ರಾಜ್ಯಮಟ್ಟದ ಪತ್ರಿಕೆಗಳಿಗೆ ಓರ್ವ ವರದಿಗಾರ ಮತ್ತು ಛಾಯಾಗ್ರಾಹಕ, ಸುದ್ದಿವಾಹಿನಿಗಳಿಗೆ ಓರ್ವ ವರದಿಗಾರ ಮತ್ತು ಕ್ಯಾಮೆರಾಮ್ಯಾನ್ ಗೆ ಮಾತ್ರ ಅವಕಾಶವಿರುವುದರಿಂದ ಶಿಫಾರಸ್ಸು ಪತ್ರದಲ್ಲಿ ಯಾರನ್ನು ಪತ್ರಿಕಾಗೋಷ್ಠಿ ವರದಿಗಾರಿಕೆಗೆ ನಿಯೋಜಿಸಲಾಗಿದೆ ಎಂಬುದನ್ನು ನಮೂದಿಸುವುದು.

ಉಳಿದಂತೆ ರಾಷ್ಟ್ರಮಟ್ಟದ ಪತ್ರಿಕೆಗಳು ಹಾಗೂ ವಿದ್ಯುನ್ಮಾನ ಮಾಧ್ಯಮ ಪ್ರತಿನಿಧಿಗಳು ಮಾತ್ರ ಹೆಸರು, ಪದನಾಮ, ಮೊಬೈಲ್ ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸದೊಂದಿಗೆ ಇತ್ತೀಚಿನ 2 ಭಾವಚಿತ್ರಗಳನ್ನು ಒಳಗೊಂಡಂತೆ ಕಡ್ಡಾಯವಾಗಿ ತಮ್ಮ ಸಂಸ್ಥೆಯ ಶಿಫಾರಸ್ಸು ಪತ್ರದೊಂದಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿರುವ ಸುದ್ದಿ ಮತ್ತು ಪತ್ರಿಕಾ ಶಾಖೆಗೆ ದಿನಾಂಕ 12-06-2025 ರ ಮಧ್ಯಾಹ್ನ 3.00 ಗಂಟೆಯ ಒಳಗಾಗಿ ತಲುಪಿಸುವುದು.

ವಿಶೇಷ ಸೂಚನೆ :

1. ಮಾಧ್ಯಮ ಪಟ್ಟಿಯಲ್ಲಿ ಇರುವ ಮಾಧ್ಯಮ ಪ್ರತಿನಿಧಿಗಳು ಅಗತ್ಯ ದಾಖಲೆ ಮತ್ತು ಮಾಹಿತಿಯೊಂದಿಗೆ ನೇರವಾಗಿ ಶ್ರೀ ಎಂ. ಜುಂಜಣ್ಣ, ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ ಇವರಿಗೆ ಸಲ್ಲಿಸುವುದು. ಶ್ರೀಯುತರ ಮೊಬೈಲ್ ದೂರವಾಣಿ ಸಂಖ್ಯೆ: 094808 41224
2. ಅಪೂರ್ಣ ಮಾಹಿತಿ, ಶಿಫಾರಸ್ಸು ಪತ್ರ ಸಲ್ಲಿಸದಿದ್ದಲ್ಲಿ ಪರಿಗಣಿಸಲು ಸಾಧ್ಯವಿಲ್ಲ.
3. ನಿಗದಿತ ದಿನಾಂಕ ಹಾಗೂ ಅವಧಿಯ ನಂತರ ಸಲ್ಲಿಸುವ ಮಾಹಿತಿಯನ್ನು ಪರಿಗಣಿಸಲಾಗುವುದಿಲ್ಲ.
4.ಪಾಸುಗಳನ್ನು ಸಹಾಯಕ ನಿರ್ದೇಶಕರು, ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕಬಳ್ಳಾಪುರ ಕಚೇರಿಯಲ್ಲಿ ನೀಡಲಾಗುವುದು.

ಬಿಲ್ಲವಾಸ್ ಕತಾರ್ ನ ಸ್ವರ ಲಹರಿಗೆ ಸ್ವರ ಸೇರಿಸಿ ಕುಣಿದು ಕುಪ್ಪಳಿಸಿದ ಜನಸ್ತೋಮ

ಬಿಲ್ಲವಾಸ್ ಕತಾರ್  ಆಯೋಜಿಸಿದ  ಸ್ವರ ಲಹರಿ, ಸಂಗೀತ ಸಂಜೆ ಕಾರ್ಯಕ್ರಮ  ದಿನಾಂಕ  ಮೇ 30, 2025 ರಂದು ಡಿ.ಪಿ.ಎಸ್. ಎಂ.ಐ.ಎಸ್ ಅಲ್ ವಕ್ರ   ಸಭಾಂಗಣದಲ್ಲಿ ನವ ಇತಿಹಾಸವನ್ನು ಸೃಷ್ಟಿಸಿತು.  ಅದ್ಭುತ ಸಂಗೀತ ಮತ್ತು ನೃತ್ಯಾವಳಿಗಳಿಂದ ಕೂಡಿದ್ದ ಈ ರಸ ಸಂಜೆ, ಶೋತೃ ಗಡಣವನ್ನು ಹುಚ್ಚೆದ್ದು ಕುಣಿಯುವಂತೆ  ಮಾಡಿ, ಎಲ್ಲರ ಮನ ಸೂರೆಗೊಂಡಿತು.ವಿಶೇಷ ಆಕರ್ಷಣೆಯಾಗಿ ಕರ್ನಾಟಕದ  ಸುಪ್ರಸಿದ್ದ ಗಾಯಕರಾದ ದಿವ್ಯಾ ರಾಮಚಂದ್ರ,  ಅಂಕಿತ ಕುಂಡು, ಅನಿರುದ್ಧ ಶಾಸ್ತ್ರೀ ಮತ್ತು  ಸುಪ್ರೀತ್ ಸಪಳಿಗ ತಮ್ಮ ಕಂಚಿನ ಕಂಠದಿಂದ ನೆರೆದ ಜನಸ್ತೋಮವನ್ನು ಮಂತ್ರಮುಗ್ದರನ್ನಾಗಿಸಿದರು.  ಅದ್ಭುತ ಪ್ರತಿಭೆ ಅಮೋಘವರ್ಷ ಮತ್ತು ತಂಡದವರಿಂದ ಸಂಗೀತ ವಾದ್ಯ ಪ್ರದರ್ಶನ  ನಡೆಯಿತು.  ಜನಪ್ರಿಯ ನಿರೂಪಕ ನಿರಂಜನ್ ದೇಶ್ ಪಾಂಡೆ ತಮ್ಮ ರಂಜನೆಯ ವಾಕ್ ಲಹರಿಯಿಂದ ಪ್ರೇಕ್ಷಕರನ್ನು ಸ್ಪಂದಿಸಿ ಎಲ್ಲರ ಜನಾನುರಾಗಿಗಳಾದರು.

ಬಿಲ್ಲವಾಸ್ ಕತಾರ್ ನ ಸಾಂಸ್ಕತಿಕ ಕಾರ್ಯದರ್ಶಿ ಶ್ರೀಮತಿ ಪೂಜಾ ಜಿತಿನ್  ಅವರು ಪ್ರಾಸಂಗಿಕ ಭಾಷಣದ ಮೂಲಕ ಸ್ವರ ಲಹರಿಗೆ ಶುಭಾರಂಭಗೈದರು. ನೆರೆದ ವಿಶೇಷ ಗಣ್ಯರು, ಸಲಹಾಸಮಿತಿ, ಪ್ರಾಯೋಜಕರು ,ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ ಉಪಸ್ಥಿತಿಯಲ್ಲಿ ವಿಧಿವತ್ತಾಗಿ ದೀಪ ಬೆಳಗಿಸಿ ಸ್ವರ ಲಹರಿಯ ಉದ್ಘಾಟನೆ ಮಾಡಲಾಯಿತು .   ಆಮಂತ್ರಿತ ಗಣ್ಯರಿಗೆಲ್ಲಾ ಪುಷ್ಪಗುಚ್ಛ ವನ್ನು ಕೊಟ್ಟು ಪ್ರೀತಿ ಪೂರ್ವಕವಾಗಿ ಸ್ವಾಗತಿಸಲಾಯಿತು.
ಬಿಲ್ಲವಾಸ್ ಕತಾರ್ ನ ಅಧ್ಯಕ್ಷೆ ಶ್ರೀಮತಿ ಅಪರ್ಣ ಶರತ್ ಅವರು ಬಿಲ್ಲವಾಸ್ ಕತಾರ್ ನ ಧ್ಯೇಯೋದ್ದೇಶಗಳ ಬಗ್ಗೆ ಬೆಳಕು ಚೆಲ್ಲುತ್ತಾ  ಎಲ್ಲರನ್ನೂ ಆತ್ಮೀಯವಾಗಿ  ಸ್ವಾಗತಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ  ಡಾ. ವೈಭವ್ . ಎ. ಟಿ.  ಕೌನ್ಸಿಲರ್ (ಚಾನ್ಸೆಲರಿ ಮತ್ತು ಕೌನ್ಸಿಲರ್ ಮುಖ್ಯಸ್ಥರು), ಭಾರತೀಯ ರಾಯಭಾರಿ ಕಚೇರಿ, ಅವರು ಬಿಲ್ಲವಾಸ್ ಕತಾರ್ ನ  ಸಾಧನೆಯನ್ನು ಕೊಂಡಾಡಿ, ಭವಿಷ್ಯದಲ್ಲಿ  ಇನ್ನಷ್ಟು ವಿಶೇಷ ಕಾರ್ಯಕ್ರಮಗಳನ್ನು ಕೊಡುವುದರ ಮೂಲಕ ವಿಜೃಂಭಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಗಣ್ಯರಾದ ಶ್ರೀ ಮಣಿಕಂಠನ್ ಎ. ಪಿ. (ಅಧ್ಯಕ್ಷರು, ಐ.ಸಿ.ಸಿ, ಕತಾರ್ ),
ಶ್ರೀ ದಿವಾಕರ ಪೂಜಾರಿ ( ಸ್ಥಾಪಕಾಧ್ಯಕ್ಷರು, ಬಿಲ್ಲವಾಸ್ ಕತಾರ್ ) ಮತ್ತು ಶ್ರೀ ಚಿದಾನಂದ ನಾಯ್ಕ್  (ಪ್ರಧಾನ ವ್ಯವಸ್ಥಾಪಕ, ಎಂ. ಪಲ್ಲೋಂಜಿ ಡಬ್ಲ್ಯು.ಎಲ್‌.ಎಲ್. ಮತ್ತು ಪ್ರಮುಖ ಪ್ರಾಯೋಜಕರು ) ಅವರುಗಳನ್ನು ಆದರದಿಂದ ಸಂಮಾನಿಸಿ ಸ್ಮರಣಿಕೆ ನೀಡಲಾಯಿತು .   ಎಲ್ಲಾ ಮಹನೀಯರು ಬಿಲ್ಲವಾಸ್ ಕತಾರ್ ನ ಪ್ರಶಂಸೆಗೈದರು.

ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು, ಶಿಖರ (ಎಪೆಕ್ಸ್ )ಸಂಸ್ಥೆಗಳ ಪ್ರತಿನಿಧಿಗಳು ಮತ್ತು  ಕರ್ನಾಟಕದ ವಿವಿಧ ಸಂಘಟನೆಗಳ ನಾಯಕರು ಮತ್ತು  ಪ್ರತಿನಿಧಿಗಳು, ಈ ಕಾರ್ಯಕ್ರಮದಲ್ಲಿ ಹಾಜರಿದ್ದು, ಸ್ವರ ಸಂಜೆಗೆ ವಿಶೇಷ ಕಳೆ ತಂದು ಕೊಟ್ಟರು. ಸಭಾ  ಕಾರ್ಯಕ್ರಮವನ್ನು ವಸುಧಾ ಕೋಟ್ಯಾನ್ ಅವರು ಅಚ್ಚು ಕಟ್ಟಾಗಿ ನೆರವೇರಿಸಿ ಕೊಟ್ಟರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೃಂಭಿಸಿದ  ನೃತ್ಯ ತಂಡಗಳಾದ  ವಿಷ್ ಡಾನ್ಸ್ ಸ್ಟುಡಿಯೋ, ಜೂನಿಯರ್ ರಾಕ್‌ಸ್ಟಾರ್ಸ್, ಶ್ಯಾಮಾ ಹಂಸ (ತಿಲ್ಲಾನಾ), ಮತ್ತು ದೇಶಿ ಸ್ವ್ಯಾಗ್,  ಸುವರ್ಣ (ಗೋಲ್ಡ್ ) ಪ್ರಾಯೋಜಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀ ಸುಬ್ರಮಣ್ಯ ಹೆಬ್ಬಾಗಿಲು , ಐ, ಎಸ್. ಸಿ, ಸಲಹಾ ಸದಸ್ಯರು ಅವರಿಗೆ ವಿಶೇಷ ಸ್ಮರಣಿಕೆ ನೀಡಿ ಗೌರವಿಸಲಾಯಿತು.   ಎಲ್ಲಾ ಕಲಾವಿದರನ್ನು ವಿಶೇಷವಾಗಿ ಸಂಮಾನಿಸಿ ಅವರ ಕಲಾ ಸೇವೆಗೆ ವಿನಯಪೂರ್ವಕ ಗೌರವ ಸಲ್ಲಿಸಲಾಯಿತು.
ಬಿಲ್ಲವಾಸ್ ಕತಾರ್ ನ ಮಾಜಿ ಅಧ್ಯಕ್ಷರು ಮತ್ತು ಸಲಹಾ ಮಂಡಳಿಯ ಮುಖ್ಯಸ್ಥರಾದ ರಘುನಾಥ್ ಅಂಚನ್ , ಸಲಹಾ ಸಮಿತಿಯ ಸರ್ವ ಸದಸ್ಯರು, ಕಾರ್ಯಕಾರಿ ಮಂಡಳಿ, ಸ್ವಯಂ ಸೇವಕರು ಮತ್ತು ಎಲ್ಲಾ ಸದಸ್ಯರು  ಅಹರ್ನಿಶಿ ದುಡಿದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
ಬಿಲ್ಲವಾಸ್ ಕತಾರ್ ನ  ಉಪಾಧ್ಯಕ್ಷರಾದ ಜಯರಾಮ ಸುವರ್ಣ ಅವರು ಎಲ್ಲರಿಗೂ ಧನ್ಯವಾದಗೈದರು.  ಎಲ್ಲರ ಮನ ಸೂರೆಗೈದ ಸ್ವರ ಲಹರಿ ಬಿಲ್ಲವಾಸ್ ಕತಾರ್ ನ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿ ಎಲ್ಲರ ಮನದಂತರಾಳದದಲ್ಲಿ ಹೊಸ ಛಾಪನ್ನು ಮೂಡಿಸಿತು.

ಸಿಎಂ, ಡಿಸಿಎಂ, ವಿರೋಧ ಪಕ್ಷದ ನಾಯಕರುಗಳ ಭೇಟಿ – ಜೂ. 13 ರಂದು ಪ್ರೆಸ್‌ಕ್ಲಬ್‌ ನಲ್ಲಿ ಮಾಧ್ಯಮ ಸಂವಾದ

– ಜಿಎನ್‌ಆರ್‌ ಕಲ್ಯಾಣ ಮಂಟಪದಲ್ಲಿ ಟಿಟಿಡಿ ಸದಸ್ಯ ಎಸ್‌ ನರೇಶ್‌ ಕುಮಾರ್‌ ಅವರಿಂದ  ಶ್ರೀನಿವಾಸ ಕಲ್ಯಾಣೋತ್ಸವ

ಬೆಂಗಳೂರು ಜೂನ್‌ 10 : ಟಿಟಿಡಿ ಅಧ್ಯಕ್ಷರಾದ ಬಿ.ಆರ್‌ ನಾಯ್ಡು ಅವರು ನಾಳೆಯಿಂದ ಮೂರು ದಿನಗಳ ಕಾಲ ಬೆಂಗಳೂರು ಪ್ರವಾಸ ಕೈಗೊಳ್ಳಲಿದ್ದಾರೆ. ಈ ಪ್ರವಾಸ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳುಉಪಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರುಗಳನ್ನು ಭೇಟಿ ಮಾಡಲಿದ್ದಾರೆ ಎಂದು ಟಿಟಿಡಿ ಸದಸ್ಯರಾದ ಎಸ್‌ ನರೇಶ್‌ ಕುಮಾರ್‌ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರುಟಿಟಿಡಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಬೆಂಗಳೂರು ನಗರಕ್ಕೆ ಶ್ರೀ ಬಿ ಆರ್‌ ನಾಯ್ಡು ಅವರು ಆಗಮಿಸುತ್ತಿದ್ದಾರೆ. ಈ ಪ್ರವಾಸದ ಸಂಧರ್ಭದಲ್ಲಿ ಹೊಸ ಟಿಟಿಡಿ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ಟಿಟಿಡಿ ಸದಸ್ಯರಲ್ಲಿ ಮೊದಲ ಬಾರಿಗೆ ನರೇಶ್‌ ಕುಮಾರ್‌ ಅವರು ಜಿಎನ್‌ಆರ್‌ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಾಗೆಯೇಮಲ್ಲೇಶ್ವರಂ ವೈಯಾಲಿಕಾವಲ್‌ ನಲ್ಲಿರುವ ಟಿಟಿಡಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.

ಕರ್ನಾಟಕ ರಾಜ್ಯದಿಂದ ಅದರಲ್ಲೂ ಬೆಂಗಳೂರು ನಗರದಿಂದ ಅತಿಹೆಚ್ಚು ಭಕ್ತಾದಿಗಳು ತಿರುಪತಿ-ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ರಾಜ್ಯದ  ಭಕ್ತಾದಿಗಳಿಗೆ ಇನ್ನಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆಗಬೇಕಾಗಿರುವಂತಹ ಕಾರ್ಯಗಳ ಬಗ್ಗೆ ಚರ್ಚೆಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್‌ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರನ್ನು ಟಿಟಿಡಿ ಅಧ್ಯಕ್ಷರು ಭೇಟಿ ಮಾಡಿ ಚರ್ಚಿಸಲಿದ್ದಾರೆ.

ಹಾಗೆಯೇಮಾಜಿ ಮುಖ್ಯಮಂತ್ರಿಗಳಾದ ಬಿಎಸ್‌ ಯಡಿಯೂರಪ್ಪಕೇಂದ್ರ ಸಚಿವರಾದ ಹೆಚ್‌ ಡಿ ಕುಮಾರ ಸ್ವಾಮಿಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರವಿರೋಧ ಪಕ್ಷದ ನಾಯಕರಾದ ಆರ್‌ ಅಶೋಕ್‌ ಸೇರಿದಂತೆ ವಿರೋಧಪಕ್ಷಗಳ ನಾಯಕರನ್ನೂ ಭೇಟಿಯಾಗಲಿದ್ದಾರೆ ಎಂದು ಎಸ್‌ ನರೇಶ್‌ ಕುಮಾರ್‌ ತಿಳಿಸಿದ್ದಾರೆ.

ಸ್ಟಾರ್ಟ್‌ಅಪ್‌ ಕಂಪನಿಗಳ ಪ್ರತಿನಿಧಿಗಳು ಹಾಗೂ ಭಕ್ತಾದಿಗಳೊಂದಿಗೆ ಸಭೆ:

ಬೆಂಗಳೂರು ನಗರದ ಸ್ಟಾರ್ಟ್‌ಅಪ್‌ ಕಂಪನಿಗಳ ಪ್ರತಿನಿಧಿಗಳೊಂದಿಗೆ ಟಿಟಿಡಿ ಅಧ್ಯಕರಾದ ಬಿ ಆರ್‌ ನಾಯ್ಡು ಅವರು ಸಭೆಯನ್ನು ನಡೆಸಲಿದ್ದಾರೆ. ಇಂದಿನ ಪೀಳಿಗೆಯ ಉದ್ಯಮಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ದಾನದ ಮಹತ್ವ ತಿಳಿಸುವ ನಿಟ್ಟಿನಲ್ಲಿ ಈ ಸಭೆಯನ್ನು ಆಯೋಜಿಸಲಾಗಿದೆ. ಇದಲ್ಲದೇ ಅಧ್ಯಕ್ಷರು ರಾಜ್ಯದ ಪ್ರಮುಖ ಹಿರಿಯ ಅಧಿಕಾರಿಗಳೊಂದಿಗೆ ಹಾಗೂ ರಾಜ್ಯದ ಭಕ್ತಾದಿಗಳೊಂದಿಗೆ ಸಭೆ ನಡೆಸಲಿದ್ದುತಿರುಪತಿ – ತಿರುಮಲ ದೇವಸ್ಥಾನದಲ್ಲಿನ ಸೌಲಭ್ಯಗಳುಕುಂದುಕೊರತೆಗಳ ಬಗ್ಗೆ ಸಲಹೆ ಮತ್ತು ಸೂಚನೆಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಟಿಟಿಡಿ ಸದಸ್ಯರಾದ ಎಸ್‌ ನರೇಶ್‌ ಕುಮಾರ್‌ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಕವಿ ಡಾ| ಪ್ರವೀಣರಾಜ್ ಎಸ್ ರಾವ್ ಇವರ ನದಿ ತಟದ ವೃಕ್ಷ ಕವನ ಸಂಕಲನ ಬಿಡುಗಡೆ 

ಬೆಂಗಳೂರು: ಕರ್ನಾಟಕ ಸಾಹಿತ್ಯ ಪರಿಷತ್ತು ಬೆಂಗಳೂರು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಿ ಡಾ| ಪ್ರವೀಣರಾಜ್ ಎಸ್ ರಾವ್ ಇವರ “ನದಿ ತಟದ ವೃಕ್ಷ” ಕವನ ಸಂಕಲನವು ಇಂದು ಬಿಡುಗಡೆಗೊಂಡಿತ್ತು.

ಕಾರ್ಯಕ್ರಮದ ಉದ್ಘಾಟನೆಯು ಎಲ್ಲಾ ಸೇರಿದ ಕವಿಗಳು ವೃಕ್ಷಗಳಿಗೆ ನೀರೆರೆಯುವ ಮೂಲಕ ನರೆವೇರಿಸಿದರು.
“ನದಿ ತಟದ ವೃಕ್ಷ” ಕವನ ಸಂಕಲನವನ್ನು ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರಾದ ಶ್ರೀ ಎಂ. ಪ್ರಕಾಶಮೂರ್ತಿಯವರು ಬಿಡುಗಡೆ ಮಾಡಿ, ಕವನದಲ್ಲಿ ಆಧುನಿಕ ಯುಗದ ಆಕರ್ಷಣೆಗೆ ಒಳಗಾಗಿ ನಾವು ನಮ್ಮ ನೆಲ, ಜಲ, ಆಕಾಶವನ್ನು ನಿರ್ಲಕ್ಷ ಮಾಡುತ್ತಿರುವ ಬಗೆಗೆ ಮಾರ್ಮಿಕವಾಗಿ ಕವಿಗಳು ಈ ಕವನಸಂಕಲನದಲ್ಲಿ ಚಿತ್ರಿಸಿರುತ್ತಾರೆ ಹಾಗೆಯೇ ಪರಿಸರದ ಬಗ್ಗೆ ಒಳ್ಳೆಯ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮುಕ್ತಕಂಠದಿ0ದ ಶ್ಲಾಘಿಸಿದರು, ಇಂತಹ ಕವನಗಳು ಮತ್ತೆ ಮತ್ತೆ ಅವರ ಲೇಖನಿಯಿಂದ ಬರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಆರ್.ಆರ್. ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಉದಂತ ಶಿವಕುಮಾರ್ ಅವರು ಪ್ರತಿಯೊಂದು ಕವನದ ಮೌಲ್ಯ ಮಾಪನ ಮಾಡುತ್ತಾ ಈ ಕವನಸಂಕಲನದಲ್ಲಿ ಇರುವ ಕವಿತೆಗಳು ಉತ್ತಮ ಮಟ್ಟದಲ್ಲಿದ್ದು ಒಂದೇ ಬಾರಿಗೆ ಓದಿಸಿಕೊಂಡು ಹೋಗುತ್ತದೆ. ಇಂತಹ ಕವಿತೆಗಳನ್ನು ಓದಿ ಪ್ರೋತ್ಸಾಹಿಸಿ ಎಂದು ಓದುಗರಲ್ಲಿ ವಿನಂತಿಸಿದರು.

ಮಕ್ಕಳ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿರುವ ಡಾ. ಮಲಕಪ್ಪ ಅಲಿಯಾಸ್ ಮಹೇಶ್ ಮಾತನಾಡಿ, ಈ ಕವನ ಸಂಕಲನವನ್ನು ಎಲ್ಲರೂ ಪ್ರೋತ್ಸಾಹಿಸಿ ಕನ್ನಡ ಭಾಷೆಯ ಬೆಳವಣಿಗೆಗೆ ನೆರವಾಗಿ ಎಂದು ಆಶಿಸಿದರು.
ಮಂಡ್ಯ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಡಾ. ಕೆ.ಎನ್. ವಿಜಯಕುಮಾರ್ ಕೊಪ್ಪ ಅವರು ಕವನ ಸಂಕಲನದ ಬಗ್ಗೆ ಮಾತನಾಡಿ ಕವಿಯ ಆಶಯ ಮತ್ತು ಅಭಿವ್ಯಕ್ತಿಯನ್ನು ಕೊಂಡಾಡಿದರು.

ಕಾರ್ಯಕ್ರಮವನ್ನು ನಿರೂಪಿಸಿದ ಡಾ.ನಾಗರಾಜ ತಂಬ್ರಹಳ್ಳಿ ಅವರು, ಇವರ ಕವನಗಳು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ರಚಿಸಲ್ಪಟ್ಟಿದ್ದು, ವೈಶಿಷ್ಟ ಪೂರ್ಣವಾಗಿದೆ ಎಂದು ಹೇಳಿ ಇನ್ನೂ ಒಳ್ಳೆಯ ಕವನಗಳು ಇವರಿಂದ ಕಾವ್ಯ ಲೋಕಕ್ಕೆ ಕೊಡುಗೆಯಾಗಿ ಬರಲಿಯೆಂದು ಶುಭ ಹಾರೈಸಿದರು.

“ನದಿ ತಟದ ವೃಕ್ಷ “ ಕವನ ಸಂಕಲನದ ಕವಿ ಡಾ. ಪ್ರವೀಣರಾಜ್ ಎಸ್ ರಾವ್ ಕಾಸರಗೋಡು, ಇವರು ಮಾತನಾಡಿ ಕಾಸರಗೋಡು ಕನ್ನಡಿಗರು ಸದಾ ಕನ್ನಡ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಕನ್ನಡದ ಸಾಹಿತ್ಯ, ಸಂಸ್ಕೃತಿಯ ಕೆಲಸಗಳು ಇಲ್ಲಿ ನಿರಂತರ ನಡೆಯುತ್ತಿರುತ್ತದೆ . ಆದರೆ ಕರ್ನಾಟಕ ಸರಕಾರ ಗಡಿನಾಡಾದ ಕಾಸರಗೋಡಿನ ಬಗೆಗೆ ತೀವ್ರ ನಿರ್ಲಕ್ಷವನ್ನು ಹೊಂದಿದೆ. ಇಲ್ಲಿನ ಕವಿಗಳಿಗೆ ಕಲಾವಿದರಿಗೆ ಇಲ್ಲಿನ ಸಂಸ್ಕೃತಿಗಳಿಗೆ ಅತ್ತ ಕೇರಳ ಹಾಗೂ ಇತ್ತ ಕರ್ನಾಟಕದ ಯಾವುದೇ ಪ್ರೋತ್ಸಾಹವನ್ನು ನೀಡುತ್ತಿಲ್ಲದೆ ಇಲ್ಲಿನ ಕನ್ನಡಿಗರು ಅತಂತ್ರರಾಗಿದ್ದಾರೆ. ಸರಕಾರ ಈ ಕುರಿತು ಅಧ್ಯಯನ ಮಾಡಿ ವರದಿ ತರಿಸಿಕೊಂಡು ಇಲ್ಲಿನ ಕನ್ನಡಿಗರ ನಾನಾ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ವಿನಂತಿಸಿದರು.

“ನದಿ ತಟದ ವೃಕ್ಷ” ಕವನ ಸಂಕಲನದ ಬಿಡುಗಡೆಯ ಈ ಕಾರ್ಯಕ್ರಮದಲ್ಲಿ ರಾಜ್ಯದ, ಗಡಿನಾಡಿನ ಹಲವಾರು ಯುವ ಹಾಗೂ ಹಿರಿಯ ಕವಿಗಳು ಉಪಸ್ಥಿತರಿದ್ದು, ಈ ಸಂಧರ್ಭದಲ್ಲಿ ಕವಿಗಳ ಕವಿತಾ ವಾಚನವು ಯಶಸ್ವಿಯಾಗಿ ಜರುಗಿತು, ಸ್ಥಳೀಯ ವಿದ್ಯಾರ್ಥಿಗಳ ವಿವಿಧ ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿತು.
ಬಳಿಕ ಸಮಾಜದ ವಿವಿಧ ಸಾಧಕರನ್ನು ಈ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಡಾ. ಸುಕನ್ಯಾ ಹೆಗಡೆ, ಕೆಂಗೇರಿ ಅವರು ಅತಿಥಿಗಳನ್ನು ಸ್ವಾಗತಿಸಿ, ಸಭಿಕರಿಗೆ ಪರಿಚಯಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ನೆರವಾದವರಿಗೆ ಗೌರವಿಸಿ ವಂದಿಸಲಾಯಿತು.