Home Blog Page 67

ವಿದ್ಯೆಯ ಜೊತೆ ಕೌಶಲ್ಯ ಬಹುಮುಖ್ಯ: ಡಾ.ಟಿ.ಬಿ.ನಂಜುoಡಪ್ಪ ಕರೆ ಸಿದ್ದಗಂಗಾ ಕಲಾ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ

ಕೌಶಲ್ಯತೆ ಮೂಡಿಸಿಕೊಳ್ಳುವಂತೆ ಪ್ರಾಂಶುಪಾಲ ನಂಜುoಡಪ್ಪ ಕರೆ

ತುಮಕೂರು: ಪ್ರಸ್ತುತ ದಿನಗಳಲ್ಲಿ ವಿದ್ಯೆಯ ಜೊತೆಗೆ ಕೌಶಲ್ಯವು ಬಹಳ ಮುಖ್ಯವಾಗಿದೆ. ಜೀವನದಲ್ಲಿ ಉದ್ಯೋಗವನ್ನು ಪಡೆದುಕೊಳ್ಳಲು ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಜ್ಞಾನ, ಕೌಶಲ್ಯಗಳನ್ನು ಪಡೆದುಕೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಬಿ.ನಂಜು0ಡಪ್ಪ ತಿಳಿಸಿದರು.
ನಗರದ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ತುಮಕೂರು ಇವರ ವತಿಯಿಂದ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ಲೇಸ್ಮೆಂಟ್ ಅಂಡ್ ಟ್ರೈನಿಂಗ್ ಸೆಲ್ ಹಾಗೂ ಮ್ಯಾಜಿಕ್ ಬಸ್ ಫೌಂಡೇಶನ್ ವತಿಯಿಂದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜೀವನವು ಸರಾಗವಾಗಿ ಸಾಗಬೇಕಾದರೆ ಉದ್ಯೋಗವು ಬಹಳ ಮುಖ್ಯವಾದದ್ದು ಆಧುನಿಕ ಜೀವನದ ಬೇಕು ಬೇಡಗಳನ್ನು ನಿಭಾಯಿಸಲು ಆರ್ಥಿಕವಾಗಿ ಸದೃಢವಾಗಬೇಕಾದರೆ ಉದ್ಯೋಗದ ಅವಶ್ಯಕತೆ ಬಹಳ ಮುಖ್ಯವಾಗಿದೆ. ನಮ್ಮ ಕಾಲೇಜು ವಿದ್ಯೆಯ ಜೊತೆಗೆ ಉದ್ಯೋಗವನ್ನು ಕಲ್ಪಿಸುವ ಕೆಲಸವನ್ನು ಮಾಡುತ್ತಿದೆ ಎಲ್ಲರಿಗೂ ಉದ್ಯೋಗ ಪಡೆಯಲು ಸುವರ್ಣ ಅವಕಾಶವಿದು ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ಎಂ.ದಕ್ಷಿಣಮೂರ್ತಿ ರವರು ಮಾತನಾಡಿ, ದುಡಿಯುವ ಕೈಗಳಿಗೆ ಕೆಲಸ ನೀಡಲು ಹಲವಾರು ಕಂಪನಿಗಳು ಮುಂದೆ ಬಂದಿವೆ.
ಮಾನವ ಸಂಪನ್ಮೂಲದ ಸದ್ಬಳಕೆಯ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸಬಹುದಾಗಿದೆ. ಗ್ರಾಮೀಣ ಭಾಗದ ಯುವಜನತೆ ನಗರಗಳ ಕಡೆ ಆಗಮಿಸಿ ಬದುಕನ್ನು ಕಟ್ಟಿಕೊಳ್ಳಲು ಹಲವಾರು ಕಂಪನಿಗಳು ಮುಖ್ಯ ಪಾತ್ರ ವಹಿಸಿವೆ. ಮಾನವನ ಆರ್ಥಿಕತೆ ಉತ್ತಮವಾಗಬೇಕಾದರೆ ಉದ್ಯೋಗ ಬಹಳ ಮಹತ್ವವಾಗಿದೆ ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚು ಉದ್ಯೋಗದ ಅವಕಾಶಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಬೃಹತ್ ಉದ್ಯೋಗ ಮೇಳದಲ್ಲಿ 32ಕ್ಕೂ ಹೆಚ್ಚು ಎಂಎನ್‌ಸಿ ಕಂಪನಿಗಳು ಭಾಗವಹಿಸಿದ್ದು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗ ಮೇಳದ ಸದುಪಯೋಗವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಂಯೋಜಕರಾದ ಪ್ರೊ.ಎಚ್.ಜಿ.ಸರ್ವಮಂಗಳ, ಐಕ್ಯೂಎಸಿ ಮಾರ್ಗದರ್ಶಕ ಪ್ರೊ.ಸಿ.ಎಸ್ ಸೋಮಶೇಖರಯ್ಯ, ಪ್ಲೇಸ್ಮೆಂಟ್ ಅಂಡ್ ಟ್ರೈನಿಂಗ್ ಸೆಲ್‌ನ ಸಂಚಾಲಕರಾದ ಪ್ರೊ.ಲಿಂಗದೇವರಪ್ಪ ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ದೆಹಲಿಗೆ ನಾನು ವೈಯಕ್ತಿಕ ಕಾರಣಕ್ಕಾಗಿ ಹೋಗಿ ಬಂದೆ..ಶೀಘ್ರವೇ ಹಲವು ರಾಜ್ಯಾಧ್ಯಕ್ಷರ ಘೋಷಣೆ: ವಿಜಯೇಂದ್ರ

ಬೆಂಗಳೂರು: ಅತಿ ಶೀಘ್ರವೇ ಕರ್ನಾಟಕವೂ ಒಳಗೊಂಡಂತೆ ಹಲವು ರಾಜ್ಯಾಧ್ಯಕ್ಷರ ಹೆಸರು ಘೋಷಣೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ನೀಡಿದರು. ನಮ್ಮದು ರಾಷ್ಟ್ರೀಯ ಪಕ್ಷ. ಎಲ್ಲರ ಅಭಿಪ್ರಾಯ ಪಡೆದಿದ್ದಾರೆ. ನಾನು ಕಳೆದ ಒಂದೂವರೆ ವರ್ಷದಲ್ಲಿ ಬಹಳ ಯಶಸ್ವಿಯಾಗಿ ಕೆಲಸ- ಸಂಘಟನಾ ಕಾರ್ಯ ಮಾಡಿದ್ದೇನೆ ಎಂಬ ವಿಶ್ವಾಸ ನನ್ನಲ್ಲಿದೆ. ನಮ್ಮ ಕಾರ್ಯಕರ್ತರಲ್ಲೂ ಇದೆ. ನಮ್ಮ ಮುಖಂಡರಲ್ಲೂ ಇದೆ. ಹಾಗಾಗಿ ಒಳ್ಳೆಯದಾಗಲಿದೆ; ನಿಮಗೂ ಒಳ್ಳೆಯದಾಗಲಿದೆ. ನನಗೂ ಒಳ್ಳೆಯದಾಗಲಿದೆ ಎಂದು ನಗುತ್ತ ಉತ್ತರ ಕೊಟ್ಟರು.
ರಾಜ್ಯದ ಬಿಜೆಪಿ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಇನ್ನೂ ನೇಮಕಾತಿ ಆಗುತ್ತಿಲ್ಲ; ಗೊಂದಲಗಳಿದ್ದು ಮುಂದೂಡುತ್ತಿದ್ದಾರೆ ಎಂಬುದು ಯಾವುದೂ ಸತ್ಯವಲ್ಲ. ಈಗ ದೇಶದ 14 ರಾಜ್ಯಗಳ ಅಧ್ಯಕ್ಷರ ಆಯ್ಕೆ ಮುಗಿದಿದೆ. ಈ ವಿಚಾರದಲ್ಲಿ ಘೋಷಣೆಯೂ ಆಗಿದೆ. ಸದ್ಯವೇ, ಅತಿ ಶೀಘ್ರದಲ್ಲೇ ಇನ್ನು ಆರೇಳು ರಾಜ್ಯಗಳ ಅಧ್ಯಕ್ಷರ ಘೋಷಣೆ ಆಗಲಿದೆ ಎಂಬ ಮಾಹಿತಿ ನಮಗೆ ಬರುತ್ತಿದೆ. ಅದಾದ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಘೋಷಣೆ ಆಗಲಿದೆ. ಕರ್ನಾಟಕ ಒಂದೇ ಅಲ್ಲ; ಡಿ.ವಿ.ಸದಾನಂದಗೌಡರ ಹೇಳಿಕೆ ಅರ್ಧ ಸತ್ಯ. ಉತ್ತರ ಪ್ರದೇಶ ರಾಜ್ಯದ ಅಧ್ಯಕ್ಷರ ನೇಮಕಾತಿಯೂ ಆಗಿಲ್ಲ. ತೆಲಂಗಾಣ- ಕರ್ನಾಟಕ ರಾಜ್ಯಗಳ ಅಧ್ಯಕ್ಷರ ನೇಮಕಾತಿಯೂ ನಡೆದಿಲ್ಲ ಎಂದು ವಿವರಿಸಿದರು.
ಬಿಜೆಪಿ ಬೂದಿ ಮುಚ್ಚಿದ ಕೆಂಡದಂತಿದೆ ಎಂಬ ಹಿರಿಯರಾದ ಡಿ.ವಿ.ಸದಾನಂದಗೌಡರ ಹೇಳಿಕೆಯ ಬಗ್ಗೆ ಪತ್ರಕರ್ತರು ಗಮನ ಸೆಳೆದರು. ಡಿ.ವಿ.ಸದಾನಂದಗೌಡರು ಹಿರಿಯರಿದ್ದಾರೆ. ನಾಳೆ ಭೇಟಿ ಮಾಡಿ ಅವರ ಜೊತೆ ಚರ್ಚೆ ಮಾಡುತ್ತೇನೆ. ಬೂದಿ ಮುಚ್ಚಿದ ಕೆಂಡದಂತಿದೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದು ತಿಳಿಸಿದರು. ಸಣ್ಣಪುಟ್ಟ ಅಭಿಪ್ರಾಯ ವ್ಯತ್ಯಾಸ ಇರುವುದು ಸಹಜ ಎಂದು ತಿಳಿಸಿದರು.

ಎಫ್‍ಐಆರ್, ಗೂಂಡಾಗಿರಿಯಂಥ ಗೊಡ್ಡು ಬೆದರಿಕೆಗೆ ಹೆದರುವ ಪ್ರಶ್ನೆ ಇಲ್ಲ…
ತುರ್ತು ಪರಿಸ್ಥಿತಿ ಸಂಬಂಧ ಇಂದಿರಾ ಗಾಂಧಿಯವರನ್ನು ಕರಾಳವಾಗಿ ತೋರಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ಸಿನವರು ಮೂರ್ಖರಿದ್ದಾರೆ. ಶ್ರೀಮತಿ ಇಂದಿರಾ ಗಾಂಧಿಯವರು ಈ ದೇಶದ ಪ್ರಧಾನಮಂತ್ರಿ ಆಗಿದ್ದಾಗ 50 ವರ್ಷಗಳ ಹಿಂದೆ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿತ್ತು. ಎಲ್ಲ ಹಕ್ಕುಗಳನ್ನು ಕಿತ್ತುಕೊಳ್ಳುವ ಕೆಲಸ ಆಗಿತ್ತು. ಅನೇಕರನ್ನು ಜೈಲಿಗೆ ಅಟ್ಟಿದ್ದರು. ಮಾಧ್ಯಮಗಳ ಮೇಲೂ ದಬ್ಬಾಳಿಕೆ ಮಾಡಿದ್ದರು. ಅಂಥ ಕರಾಳ ದಿನವನ್ನು ನಿನ್ನೆ ನೆನಪಿಸುವ ದಿನ. ತುರ್ತು ಪರಿಸ್ಥಿತಿಯಂಥ ಕರಾಳ ದಿನಗಳು ಮತ್ತೆ ಮರುಕಳಿಸಬಾರದು ಎಂಬ ಆಶಯ ಇದರ ಹಿಂದಿದೆ. ಶ್ರೀಮತಿ ಇಂದಿರಾ ಗಾಂಧಿಯವರು ಪ್ರಧಾನಮಂತ್ರಿ ಆಗಿದ್ದಾಗ ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಯಾವ ರೀತಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ ಎಂಬುದನ್ನು ನೆನಪು ಮಾಡಿಕೊಳ್ಳುವ ದಿನ. ಇಂದಿರಾ ಗಾಂಧಿ ಅವರ ನಡವಳಿಕೆ ಹಿಟ್ಲರ್ ನಂತೆ ಎಂದಲ್ಲದೆ ಇನ್ನೇನು ಹೇಳಲು ಸಾಧ್ಯ ಎಂದು ವಿಜಯೇಂದ್ರ ಅವರು ಕೇಳಿದರು.
ನಮ್ಮ ಸಾಮಾಜಿಕ ಜಾಲತಾಣದ ಟ್ವೀಟ್ ಮೇಲಿನ ಸಿದ್ದರಾಮಯ್ಯನವರ ಎಫ್‍ಐಆರ್, ಗೂಂಡಾಗಿರಿಯಂಥ ಗೊಡ್ಡು ಬೆದರಿಕೆಗೆ ಹೆದರುವ ಪ್ರಶ್ನೆಯೇ ಇಲ್ಲ. ಇಂಥ ನೂರು ಎಫ್‍ಐಆರ್ ದಾಖಲಿಸಲಿ. ನಾವು, ನಮ್ಮ ಕಾರ್ಯಕರ್ತರು ಅದನ್ನು ಎದುರಿಸಲು ಸಿದ್ಧ ಎಂದು ತಿಳಿಸಿದರು. ಇಂಥ ದಬ್ಬಾಳಿಕೆ, ಗೂಂಡಾಗರ್ದಿ ನಡೆಯಲು ಸಾಧ್ಯವಿಲ್ಲ ಎಂದು ನುಡಿದರು.

ನಾನು ಕೂಡ ದೆಹಲಿಗೆ ಹೋಗಿದ್ದೆ. ಪಕ್ಷದ ಕೆಲವು ಹಿರಿಯ ನಾಯಕರೂ ದೆಹಲಿಗೆ ಹೋಗಿದ್ದಾರೆ. ಕೆಲವರು ಇನ್ನೂ ವಾಪಸ್ ಬರುವುದು ಬಾಕಿ ಇದೆ ಎಂದರು. ಬಹಳ ಬೆಳವಣಿಗೆ ಆಗುತ್ತಿದೆ ಎಂಬುದು ಕಲ್ಪನೆಗಳು ಅಷ್ಟೇ ಎಂದು ತಿಳಿಸಿದರು.
ದೆಹಲಿಗೆ ನಾನು ವೈಯಕ್ತಿಕ ಕಾರಣಕ್ಕಾಗಿ ಹೋಗಿದ್ದೆ. ರಾಷ್ಟ್ರೀಯ ನಾಯಕರನ್ನಾಗಲೀ, ಯಾರನ್ನೂ ಭೇಟಿ ಮಾಡಿಲ್ಲ. ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ. ಅದನ್ನು ಮುಗಿಸಿಕೊಂಡು ಬಂದಿದ್ದೇನೆ ಎಂದು ನುಡಿದರು. ಆರ್.ಅಶೋಕ್ ಅವರ ಭೇಟಿ ಕುರಿತು ಕೇಳಿದಾಗ, ‘ಅವರು ವಿಪಕ್ಷ ನಾಯಕರಿದ್ದಾರೆ. ವಿಪಕ್ಷ ನಾಯಕರು ದೆಹಲಿಗೆ ಹೋಗಬಾರದು; ನಮ್ಮ ಮುಖಂಡರನ್ನು ಭೇಟಿ ಮಾಡಬಾರದು ಎಂದರೆ..’ ಎಂದು ನಗುತ್ತ ಮರುಪ್ರಶ್ನೆ ಹಾಕಿದರು.
ಆರ್.ಅಶೋಕ್ ಅವರು ವಿಪಕ್ಷ ನಾಯಕರಾಗಿ ಬಹಳ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದರ ಬಗ್ಗೆ ಶಾಸಕರಿಗೂ ತೃಪ್ತಿ ಇದೆ. ಆದರೆ, ಮಾಧ್ಯಮದಲ್ಲಿ ವಿಪಕ್ಷ ನಾಯಕರ ಬದಲಾವಣೆ ಬಗ್ಗೆ ಚರ್ಚೆ ಆಗುತ್ತಿದೆ ಎಂಬ ಚರ್ಚೆ ನಡೆದಿದೆ. ಇದು ಖಂಡಿತ ಸರಿಯಲ್ಲ. ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಹಿಂದಿನಿಂದ ಅಸಮಾಧಾನ ತೋಡಿಕೊಳ್ಳುತ್ತಿದ್ದವರು ಈಗ ಪಕ್ಷದಿಂದ ಹೊರಗಿದ್ದಾರೆ. ಪಕ್ಷವಿರೋಧಿ ಚಟುವಟಿಕೆ ಮಾಡಿದವರೂ ಪಕ್ಷದಿಂದ ಹೊರಗಿದ್ದಾರೆ. ಇನ್ನೂ ಕೆಲವರು ತಮ್ಮ ಸಣ್ಣಪುಟ್ಟ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಮೊನ್ನೆ ನಾನು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು, ಇನ್ನೂ ಕೆಲವು ಮುಖಂಡರು ಏನೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಬೇಕೆಂದು ಯೋಚಿಸಿದ್ದು, ಈಗಾಗಲೇ ಪ್ರಲ್ಹಾದ್ ಜೋಶಿಯವರು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಎಲ್ಲವೂ ಸರಿಯಾಗಲಿದೆ. ಆತಂಕ ಪಡುವ ಯಾವುದೇ ವಿಚಾರ ಇಲ್ಲ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು.
ರಾಜ್ಯದ ಜನರು ಕಾಂಗ್ರೆಸ್ ಸರಕಾರದ ಬಗ್ಗೆ ಛೀ, ಥೂ ಎಂದು ಉಗಿಯುತ್ತಿದ್ದಾರೆ. ಇವತ್ತು ರಾಜ್ಯದ ಮುಖ್ಯಮಂತ್ರಿಗಳು ಬಿ.ಆರ್.ಪಾಟೀಲ್, ರಾಜು ಕಾಗೆಯವರನ್ನು ಕರೆದು ಸಮಾಧಾನ ಪಡಿಸಿದರೆ ಎಲ್ಲವೂ ಸರಿಯಾಗಿದೆ ಎಂದು ಅರ್ಥವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಬಿ.ಆರ್.ಪಾಟೀಲ್ ಅವರು ಒಬ್ಬ ಹಿರಿಯ ಶಾಸಕರು; ಬಡವರಿಗೆ ಮನೆ ಕೊಡಲು 10 ಸಾವಿರ ಲಂಚ ಕಿತ್ತುಕೊಳ್ಳುವ ಕುರಿತಂತೆ ನೇರ ಆರೋಪ ಮಾಡಿದ್ದಾರೆ. ಸಚಿವರು ಉಡಾಫೆಯಾಗಿ ಮಾತನಾಡುವುದನ್ನು ಬಿಡಬೇಕೆಂದು ಆಗ್ರಹಿಸಿದರು.

ಇವರ ದರ್ಬಾರ್ ಬಹಳ ದಿನ ನಡೆಯದು..
ಇವರ ಯೋಗ್ಯತೆಗೆ ಅಭಿವೃದ್ಧಿ ಕೆಲಸ ಮಾಡಲು ಆಗುತ್ತಿಲ್ಲ. ಮಳೆ ಹೆಚ್ಚಾಗಿ ರೈತರು ಪರದಾಡುತ್ತಿದ್ದಾರೆ. ಜಿಲ್ಲೆಗಳು- ತಾಲ್ಲೂಕುಗಳಲ್ಲಿ ಗೊಬ್ಬರ ಸರಿಯಾಗಿ ಸಿಗುತ್ತಿಲ್ಲ. ಬಿತ್ತನೆ ಬೀಜವೂ ಸಿಗುತ್ತಿಲ್ಲ. ಇದನ್ನು ಗಮನಿಸುವುದನ್ನು ಬಿಟ್ಟು, ಇವರು ಹುಡುಗಾಟಿಕೆ- ಭ್ರಷ್ಟಾಚಾರ ಮಾಡಿಕೊಂಡು, ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದಾರೆ; ಇವರ ದರ್ಬಾರ್ ಬಹಳ ದಿನ ನಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಕಾಲ್ತುಳಿತ ಘಟನೆ : ಪ್ರತ್ಯಕ್ಷ ಸಾಕ್ಷಿಗಳು ಹೇಳಿಕೆ ಸಲ್ಲಿಸಲು ಡಿ.ಸಿ. ಕರೆ

ಬೆಂಗಳೂರು ನಗರ ಜಿಲ್ಲೆ ಜೂನ್ 26 (ಕರ್ನಾಟಕ ವಾರ್ತೆ): ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 4 ರಂದು ಆರ್.ಸಿ.ಬಿ ಕ್ರಿಕೆಟ್ ತಂಡದ ವಿಜಯೋತ್ಸವದ ಅಭಿನಂದನಾ ಸಮಾರಂಭದ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯ ಕುರಿತು ಸರ್ಕಾರದ ಆದೇಶದ ಮೇರೆಗೆ ವಿಚಾರಣಾಧಿಕಾರಿಗಳಾದ ಬೆಂಗಳೂರು ನಗರ ಜಿಲ್ಲಾದಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಗದೀಶ.ಜಿ ಅವರು ಸಮಗ್ರವಾದ ವಿಚಾರಣೆಯನ್ನು ನಡೆಸುತ್ತಿರುತ್ತಾರೆ.

ಈ ಘಟನೆಗೆ ಸಂಬಂಧಿಸಿದ ಮಾಹಿತಿ ಅಥವಾ ಪ್ರತ್ಯಕ್ಷವಾಗಿ ನೋಡಿದ ಸಾರ್ವಜನಿಕರು/ ಮಾಧ್ಯಮದವರು ವಿಚಾರಣಾಧಿಕಾರಿಗಳ ಸಮಕ್ಷಮದಲ್ಲಿ ಹಾಜರಾಗಿ ಸಾಕ್ಷ್ಯ ಅಥವಾ ಹೇಳಿಕೆಯನ್ನು ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ.

ತಮ್ಮ ಹೇಳಿಕೆಯನ್ನು ದಾಖಲಿಸಲು ಇಚ್ಛಿಸುವವರು ಜೂನ್ 27, ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣ, ಜಿಲ್ಲಾಧಿಕಾರಿಗಳ ಕಚೇರಿ, ಬೆಂಗಳೂರು ನಗರ ಜಿಲ್ಲೆ,  ಕೆ.ಜಿ.ರಸ್ತೆ, ಬೆಂಗಳೂರು-09 ಇಲ್ಲಿ ತಮ್ಮ ಲಿಖಿತ ರೂಪದ ಪ್ರಮಾಣಿತ ಅಫಿಡವಿಟ್ ನ ಎರಡು ಪ್ರತಿಗಳೊಂದಿಗೆ ಖುದ್ದು ಹಾಜರಾಗಿ ಹೇಳಿಕೆಯನ್ನು ದಾಖಲಿಸಬಹುದಾಗಿದೆ ಎಂದು ವಿಚಾರಣಾಧಿಕಾರಿಗಳು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೃಹೋಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ ತರಬೇತಿಗಾಗಿ ಅರ್ಜಿ ಆಹ್ವಾನ  

 ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್ ಸೆಟ್ ಸಂಸ್ಥೆಯ ವತಿಯಿಂದ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿಯು ಜುಲೈ 28 ರಿಂದ ಪ್ರಾರಂಭವಾಗಲಿದ್ದು, ಆಸಕ್ತ ಗ್ರಾಮೀಣ ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನ್ನು ಕಡ್ಡಾಯವಾಗಿ  ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್ ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ  ತಾಲ್ಲೂಕ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ಮೊಬೈಲ್ ಸಂಖ್ಯೆ: 9380220884, 9380162042, 9113880324 ಅನ್ನು ಸಂಪರ್ಕಿಸಬಹುದು ಎಂದು, ರುಡ್ ಸೆಟ್ ಸಂಸ್ಥೆ, ಬೆಂಗಳೂರು ಶಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ. ಜಾತಿಯ ಸಮಗ್ರ ಸಮೀಕ್ಷೆಯ ಕುರಿತು ಪರಿಶೀಲನೆ ನಡೆಸಿದ ಸಚಿವ ಮುನಿಯಪ್ಪ

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಇಂದು ಯಲಹಂಕ ತಾಲ್ಲೂಕಿನ ಪ್ರಮುಖ ಬಡಾವಣೆ ಹಾಗೂ ಗ್ರಾಮಗಳಿಗೆ ಭೇಟಿ ನೀಡಿ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯ ಕುರಿತು ಪರಿಶೀಲನೆ ನಡೆಸಿದರು.

ನ್ಯಾಯಮೂರ್ತಿ ನಾಗಮೋಹನದಾಸ್ ರವರ ಏಕಸದಸ್ಯ ಆಯೋಗದ ನಿರ್ದೇಶನದಂತೆ ಸರ್ಕಾರವು ನಿರ್ದಿಷ್ಟ ದತ್ತಾಂಶಗಳ ಸಂಗ್ರಹಣೆಗಾಗಿ ಪರಿಶಿಷ್ಟ ಜಾತಿಯ 101 ಜಾತಿಗಳ ಮೂಲಜಾತಿಗಳನ್ನು ಮೇ 6 ರಿಂದ ಸಮೀಕ್ಷೆ ನಡೆಸುತ್ತಿದ್ದು ಜೂನ್ 30ಕ್ಕೆ ಅಂತ್ಯಗೊಳ್ಳಲಿದೆ. ಈ ಸಂಬಂಧ ಇಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಖುದ್ದಾಗಿ ಯಲಹಂಕ ತಾಲ್ಲೂಕಿನ ಅರಕೆರೆ ಬಡಾವಣೆ, ಸುರದೇನಪುರ, ಎಂ.ಎಸ್ ಪಾಳ್ಯ, ಬೆಟ್ಟಹಳ್ಳಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮೂಲ ಜಾತಿಗಳನ್ನು ನಮೂದಿಸಲು ನಾಗರಿಕರಿಗೆ ಮನವಿ ಮಾಡಿದರು.

ಎಲ್ಲಾ ಪರಿಶಿಷ್ಟ ಜಾತಿಯ 101 ಸಮುದಾಯದವರು ತಪ್ಪದೇ ಮೂಲ ಜಾತಿಯನ್ನು ನಮೂದಿಸುವ ಮೂಲಕ ಅವಕಾಶಗಳಿಂದ ವಂಚಿತರಾಗದಿರಲು ಮನವಿ ಮಾಡಿದರು.

ಜೂ. 27 ರಂದು  ಜಲಮಂಡಳಿಯಿಂದ ನೇರ ಫೋನ್ ಇನ್ ಕಾರ್ಯಕ್ರಮ

ಬೆಂಗಳೂರು ಜಲಮಂಡಳಿಯ ವತಿಯಿಂದ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅಧ್ಯಕ್ಷತೆಯಲ್ಲಿ ಜೂನ್ 27ರಂದು  ಶುಕ್ರವಾರ ಬೆಳಿಗ್ಗೆ 09:30 ರಿಂದ 10:30 ರವರೆಗೆ ನೇರ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಾರ್ವಜನಿಕರು ತಮ್ಮ ವಲಯ / ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಮತ್ತು ಒಳಚರಂಡಿ ಕೊಳವೆ/ ಇಳಿ ಗುಂಡಿಯಿಂದ ತ್ಯಾಜ್ಯ ನೀರು ಹೊರಬರುತ್ತಿರುವ ಬಗ್ಗೆ, ಜಲಮಾಪನ ಹಾಗೂ ನೀರಿನ ಬಿಲ್ಲಿನ ಸಮಸ್ಯೆಯ ಬಗ್ಗೆ ನೇರವಾಗಿ ಮಾತನಾಡಿ ಕುಂದು-ಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು. ಸಾರ್ವಜನಿಕರು  080-22945119 ಮತ್ತು 080-22229639 ಗೆ ಸಂಪರ್ಕಿಸಬಹುದಾಗಿದೆ. ನೀರಿನ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ಆರ್.ಆರ್.ಸಂಖ್ಯೆಯನ್ನು ತಿಳಿಸಿ ದೂರನ್ನು ನೀಡಬಹುದು. ಸಾರ್ವಜನಿಕರು ಈ  ನೇರ ಫೋನ್-ಇನ್ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳುವಂತೆ ಸಾರ್ವಜನಿಕ ಸಂಪರ್ಕಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಊಹಾ ಪತ್ರಿಕೋದ್ಯಮಕ್ಕೆ ಜೋತು ಬಿದ್ದರೆ ಅಧ್ಯಯನಶೀಲತೆ ಬೆಳೆಯುವುದಿಲ್ಲ – ಕೆ.ವಿ.ಪ್ರಭಾಕರ್

ಊಹಾ ಪತ್ರಿಕೋದ್ಯಮಕ್ಕೆ ಜೋತು ಬಿದ್ದರೆ ಅಧ್ಯಯನಶೀಲತೆ ಬೆಳೆಯುವುದಿಲ್ಲ. ಮಗು ಮಾತಾಡುವ ಮೊದಲು ನೋಡಿ ಕಲಿಯುತ್ತದೆ, ನೋಟದ ಮೂಲಕವೇ ತನ್ನ ಸುತ್ತಲನ್ನು ಗ್ರಹಿಸುತ್ತದೆ. ಸಮಾಜದ ಬಗ್ಗೆ ಸ್ಪಷ್ಟ ನೋಟ-ಗ್ರಹಿಕೆ ಇದ್ದಾಗ ಪರಿಣಾಮಕಾರಿ ಪತ್ರಕರ್ತ ಹುಟ್ಟುತ್ತಾನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.

ತುಮಕೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಆಯೋಜಿಸಿದ್ದ ಮಾಧ್ಯಮ ಹಬ್ಬ “ಇಂಪ್ರೆಷನ್ -2025” ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮದ ಕುರಿತು ಚರ್ಚಿಸಲು, ಇದನ್ನು ಅಧ್ಯಯನ ಮಾಡುವ ಯುವ ಮನಸ್ಸುಗಳೊಂದಿಗೆ ಸಂವಾದ ನಡೆಸಲು, ಇಂತಹ ಮಾಧ್ಯಮ ಹಬ್ಬದಲ್ಲಿ ಭಾಗವಹಿಸುತ್ತಿರುವುದು ನನಗೆ ಹೆಮ್ಮೆ ಮತ್ತು ಸಂತೋಷದ ವಿಚಾರ.

ಹೊಸ ಪತ್ರಕರ್ತರಲ್ಲಿ ಅಧ್ಯಯನಶೀಲತೆ ಮತ್ತು ಗ್ರಹಿಕೆಯ ಕೊರತೆ ಇರುವುದನ್ನು ನಾನು ಗಮನಿಸಿದ್ದೇನೆ. ಪತ್ರಕರ್ತರಾಗುವವರಿಗೆ ಮಗುವಿನ ಮನಸ್ಸು ಮುಖ್ಯ. ಪ್ರತಿಯೊಂದು ಮಗುವೂ ಮಾತಾಡುವ ಮೊದಲು ನೋಟದ ಮೂಲಕವೇ ತಿಳಿಯುತ್ತದೆ, ಅರಿಯುತ್ತದೆ, ಗ್ರಹಿಸುತ್ತದೆ. ಹೀಗಾಗಿ ನೋಟದ ಮೂಲಕ ಕಲಿಯುವುದು ಸಹಜವಾದ, ನೈಸರ್ಗಿಕವಾದ ಪ್ರಕ್ರಿಯೆ.

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇ ಪದೇ ಕುವೆಂಪು ಅವರ ಒಂದು ಮಾತನ್ನು ನೆನಪಿಸಿಕೊಳ್ಳುತ್ತಾರೆ. “ಮಗು ಹುಟ್ಟುವಾಗ ವಿಶ್ವ ಮಾನವನಾಗಿ ಹುಟ್ಟುತ್ತದೆ. ಬೆಳೆಯುತ್ತಾ ಅಲ್ಪ ಮಾನವನನ್ನಾಗಿ ಮಾಡಲಾಗುತ್ತದೆ”.

ಪತ್ರಕರ್ತರಾಗುವವರು ಪೂರ್ವಾಗ್ರಹ ಮುಕ್ತ ಮಗುವಿನ ಮನಸ್ಸಿನಿಂದ ಸಾಮಾಜಿಕ ವ್ಯವಸ್ಥೆಯನ್ನು, ಸಾಮಾಜಿಕ ತಾರತಮ್ಯಗಳನ್ನು ಇರುವುದನ್ನು ಇರುವ ಹಾಗೆ ಗಮನಿಸಬೇಕು. ಹೀಗಾದಾಗ ಮಾತ್ರ ಸಾಮಜಿಕ ಸಮಸ್ಯೆಗಳು ಮತ್ತು ಈ ಸಮಸ್ಯೆಗಳಿಗೆ ಕಾರಣವಾದ ಸಂಗತಿಗಳ ಬಗ್ಗೆ ಸ್ಪಷ್ಟ ಗ್ರಹಿಕೆ ಬರುತ್ತದೆ. ಈ ಸ್ಪಷ್ಟತೆಯೇ ಪರಿಣಾಮಕಾರಿ ಪತ್ರಕರ್ತನನ್ನು ರೂಪಿಸುತ್ತದೆ. ಇದರಿಂದಾಗಿ ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ಹೆಚ್ಚು ಅನುಕೂಲ ಮತ್ತು ಮಹತ್ವ ಸಿಗುತ್ತದೆ ಎಂದರು.

ಇತ್ತೀಚಿನ ದಶಕಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ತಂತ್ರಜ್ಞಾನದ ಕಾರಣಕ್ಕೆ ಕ್ರಾಂತಿಕಾರಿ ಬದಲಾವಣೆಗಳು ಸಂಭವಿಸುತ್ತಿವೆ. ಮುದ್ರಣ ಮಾಧ್ಯಮದಿಂದ ಡಿಜಿಟಲ್ ಮಾಧ್ಯಮವನ್ನೂ ದಾಟಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಡೆಗೆ ಧಾವಿಸಿ ಬಂದಿದ್ದೇವೆ.

ಈ ಬದಲಾವಣೆಯು ಮಾಹಿತಿ ಹರಿವಿನ ವೇಗವನ್ನು ಹೆಚ್ಚಿಸಿದೆ, ಆದರೆ ಅದೇ ವೇಳೆ ಸುಳ್ಳು ಸುದ್ದಿ, ಕ್ಲಿಕ್ ಬೈಟ್, ದ್ವೇಷ ಭಾμÉ ಇತ್ಯಾದಿಗಳ ಹೊಸ ಹೊಸ ಸವಾಲುಗಳನ್ನೂ, ಅಪಾಯಗಳನ್ನೂ ಮನುಷ್ಯ ಜಗತ್ತಿನ ಮುಂದಿಟ್ಟಿದೆ. ಇಂತಹ ಸಂದರ್ಭದಲ್ಲಿ ಪತ್ರಿಕೋದ್ಯಮ ಮತ್ತು ಮಾಧ್ಯಮ ಶಿಕ್ಷಣವು ನೈತಿಕತೆ ಮತ್ತು ಜವಾಬ್ದಾರಿಯನ್ನೂ ಜೊತೆಗೆ ಕಲಿಸಬೇಕಾಗಿದೆ.

ಮೊದಲು ಸತ್ಯ, ನಂತರ ವೇಗ ಎಂಬ ನುಡಿಯು ಈಗ ಇನ್ನೂ ಹೆಚ್ಚು ಪ್ರಸ್ತುತವಾಗಿದೆ. ಚಾಟ್ ಜಿ.ಪಿ.ಟಿ ಇರಬಹುದು ಅಥವಾ ಎ.ಐ  ಯುಗದಲ್ಲಿ ನಿಮ್ಮತನವನ್ನು ಕಳೆದುಕೊಳ್ಳದೆ ಕಾರ್ಯನಿರ್ವಹಿಸಿದರೆ, ಕೃತಕತೆ ಇಲ್ಲದ ಯಶಸ್ಸು ಸಾಧ್ಯ. ಇದನ್ನು ಸಾಧಿಸಲು ಶಿಕ್ಷಣ ಮತ್ತು ತರಬೇತಿಯ ಅಗತ್ಯತೆ ಇದೆ.

ಪ್ರತಿಯೊಬ್ಬ ಮಾಧ್ಯಮ ವಿದ್ಯಾರ್ಥಿಗೆ ನಿಖರ ಮಾಹಿತಿ ಸಂಗ್ರಹಣೆ, ಬೋಧನೆಯ ಶೈಲಿ, ವಿಶ್ಲೇಷಣಾತ್ಮಕ ದೃಷ್ಟಿಕೋನ ಹಾಗೂ ಸಮಾಜದ ಅಸಮಾನತೆಗಳನ್ನು ಗುರುತಿಸುವ ನೈತಿಕ ಬದ್ಧತೆ ಅತ್ಯಗತ್ಯ. ಮಾಧ್ಯಮ ಇಂದಿನ ಕಾಲದಲ್ಲಿ ಕೇವಲ ಸುದ್ದಿಯನ್ನು ನೀಡುವುದಲ್ಲ. ಇವು ಆಲೋಚನೆಗಳನ್ನು, ಅಭಿಪ್ರಾಯಗಳನ್ನು ರೂಪಿಸುವ ಶಕ್ತಿಯನ್ನೂ ಹೊಂದಿವೆ. ಈ ಕಾರಣಕ್ಕಾಗಿಯೇ ಮಾಧ್ಯಮಗಳನ್ನು opinion makers ಎಂದು ಪರಿಗಣಿಸಲಾಗುತ್ತಿದೆ.

ನಮ್ಮ ಸರ್ಕಾರ ಮಾಧ್ಯಮ ಕ್ಷೇತ್ರದ ಅಭಿವೃದ್ಧಿಗೆ ಬದ್ಧವಾಗಿದೆ. ಮಾಧ್ಯಮ ಅಕಾಡೆಮಿಯ ಮೂಲಕ ತರಬೇತಿ ಶಿಬಿರಗಳು, ಸಂವಾದ ಸಭೆಗಳು, ಗ್ರಾಮೀಣ ಪತ್ರಕರ್ತರ ಪೆÇ್ರೀತ್ಸಾಹ, ಡಿಜಿಟಲ್ ಮಾಧ್ಯಮ ತರಬೇತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಸತ್ಯನಿಷ್ಠ ಸಮಾಜಮುಖಿ ಪತ್ರಕರ್ತರನ್ನು ರೂಪಿಸುವ ದಿಕ್ಕಿನಲ್ಲಿ ಪ್ರಯತ್ನಿಸುತ್ತಿದೆ.

ನೀವು ಪತ್ರಿಕೋದ್ಯಮವನ್ನು ವೃತ್ತಿಯಾಗಿ ಆಯ್ಕೆ ಮಾಡುತ್ತಿದ್ದರೆ, ಇದು ಕೇವಲ ಉದ್ಯೋಗವಲ್ಲ. ಇದು ಸಮಾಜದ ಧ್ವನಿ ಆಗುವ, ಧ್ವನಿ ಇಲ್ಲದವರ ಮಾತುಗಳನ್ನು ಎತ್ತಿ ಹಿಡಿಯುವ, ಮತ್ತು ಅಧಿಕಾರದ ಎದುರು ಸತ್ಯವನ್ನು ಹೇಳುವ ಧೈರ್ಯದ ಮಾರ್ಗ ಮತ್ತು ಮಾಧ್ಯಮ ಎನ್ನುವುದನ್ನು ನೆನಪಿನಲ್ಲಿಡಬೇಕು.

ಪ್ರೀತಿಯ ವಿದ್ಯಾರ್ಥಿಗಳೇ, ಕಲಿಕೆಯ ದಿನಗಳಲ್ಲಿ ಸೃಜನಶೀಲತೆ, ಅಧ್ಯಯನಶೀಲತೆ ಸಂಶೋಧನಾ ಮನೋಭಾವ, ಮತ್ತು ಸಾಮಾಜಿಕ ಜವಾಬ್ದಾರಿಯ ಚಿಂತನೆಯನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ ಎಂದರು.

ತುಮಕೂರು ವಿಶ್ವ ವಿದ್ಯಾಲಯ ಆಯೋಜಿಸಿರುವ ಈ ಮಾಧ್ಯಮ ಹಬ್ಬವು ಮಾಧ್ಯಮ ಕ್ಷೇತ್ರದಲ್ಲಿ ಪ್ರಜ್ಞಾವಂತ ಯುವ ಪ್ರತಿಭೆಗಳ ಹುಟ್ಟಿಗೆ ವೇದಿಕೆಯಾಗಲಿ ಎಂದು ಆಶಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ತುಮಕೂರು ವಿವಿ ಕುಲಪತಿಗಳಾದ ಪ್ರೊ. ಎಂ.ವೆಂಕಟೇಶ್ವರಲು ಅಧ್ಯಕ್ಷತೆ ವಹಿಸಿದ್ದು,  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ, ಕಾರ್ಯದರ್ಶಿ ಸಹನಾ ಎಂ, ಪ್ರಜಾ ಪ್ರಗತಿ ಸಂಪಾದಕರಾದ ನಾಗಣ್ಣ, ಸಿಂಡಿಕೇಟ್ ಸದಸ್ಯರಾದ ಮನೋಜ್, ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಡಾ.ಸತೀಶ್ ಗೌಡ, ವಿವಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ದಾಕ್ಷಾಯಿಣಿ ಅವರು ಉಪಸ್ಥಿತರಿದ್ದರು.

ಚರ್ಮ ಆಧಾರಿತ ಸಾಂಪ್ರದಾಯಿಕ ಕುಶಲಕರ್ಮಿ ಜನರಿಗೆ ಹೊರರಾಜ್ಯಗಳಲ್ಲಿ, ಕೌಶಲ್ಯ ಉನ್ನತೀಕರಣ ತರಬೇತಿ

ಡಾ.ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಲಿಡ್ಕರ್) ಬೆಂಗಳೂರು ವತಿಯಿಂದ ರಾಜ್ಯದ ಪರಿಶಿಷ್ಟ ಜಾತಿಯ ಮಾದಿಗ, ಸಮಗಾರ, ಡೋರ, ಆದಿಜಾಂಬವ, ಮಚಗಾರ ಮತ್ತು ಮೋಚಿ ಜಾತಿಗೆ ಸೇರಿದ ಚರ್ಮ ಆಧಾರಿತ ಸಾಂಪ್ರದಾಯಿಕ ಕುಶಲಕರ್ಮಿಗಳ ಕುಟುಂಬಗಳ 81 ಯುವ ಜನರಿಗೆ ಚರ್ಮ ಉದ್ಯಮದಲ್ಲಿನ ಹೊಸ ತಂತ್ರಜ್ಞಾನಗಳು, ವಿನ್ಯಾಸಗಳು ಹಾಗೂ ಮಾರುಕಟ್ಟೆಯ ಬೇಡಿಕೆಗಳಿಗೆ ಪರಿಚಯಿಸಲು ಚರ್ಮ ಆಧಾರಿತ ಕೈಗಾರಿಕೆಗಳಲ್ಲಿ ಮಂಚೂಣಿಯಲ್ಲಿರುವ ರಾಜ್ಯಗಳಾದ ದೆಹಲಿ, ತಮಿಳುನಾಡು, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು ಅರ್ಜಿ ಆಹ್ವಾನಿಸಲಾಗಿದೆ.

ಎಸ್.ಎಸ್.ಎಲ್.ಸಿ / ಪಿ.ಯು.ಸಿ ಉತ್ತೀರ್ಣ ಹಾಗೂ ಯಾವುದೇ ಸಾಮಾನ್ಯ ಪದವಿಗಳನ್ನು ಪಡೆದ ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳ ಕುಟುಂಬಕ್ಕೆ ಸೇರಿದ ನಿರುದ್ಯೋಗಿ ಯುವಕ / ಯುವತಿಯರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ. ತರಬೇತಿಗೆ ನಿಯೋಜಿಸಲಾಗುವ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಶಿಷ್ಯ ವೇತನವನ್ನು ನೀಡಲಾಗುವುದು.

ತರಬೇತಿ ಪಡೆಯುವ ಕೋರ್ಸ್‍ಗಳು:
ಎಸ್.ಎಸ್.ಎಲ್.ಸಿ ಪಾಸಾದವರಿಗೆ ಆಗ್ರಾದ ಸಿಎಫ್ ಟಿಐ ನಲ್ಲಿ ಎರಡು ತಿಂಗಳ Footwear Designing and Production, ಗೆ 11 ಅಭ್ಯರ್ಥಿಗಳು,  ಸಿಎಲ್ ಆರ್ ಐ  ಚೆನ್ನೈ / ಕೊಲ್ಕತ್ತದಲ್ಲಿ  ಎರಡು ತಿಂಗಳ  Leather Goods Design (Manual & Cad) ಗೆ 20 ಅಭ್ಯರ್ಥಿಗಳು, ಎಫ್.ಡಿ.ಡಿ.ಐ ನೋಯ್ಡಾ / ಕೊಲ್ಕತ್ತ, ಮೂರು ತಿಂಗಳ Certified Program in Footwear Design ಗೆ 20 ಅಭ್ಯರ್ಥಿಗಳು, ಆಗ್ರಾದ ಸಿಎಫ್ ಟಿಐ ನಲ್ಲಿ 06 ತಿಂಗಳ Footwear Design and Production ಗೆ 20 ಅಭ್ಯರ್ಥಿಗಳು, ಯಾವುದೇ ಪದವಿ ಪಡೆದಿರುವ 10 ಅಭ್ಯರ್ಥಿಗಳಿಗೆ ಆಗ್ರಾದ ಸಿಎಫ್ ಟಿಐ ನಲ್ಲಿ P.G.Diploma in Footwear Technology 18 ತಿಂಗಳ ತರಬೇತಿ ನೀಡಲಾಗುವುದು.

ರಾಜ್ಯದಲ್ಲಿ ಕುಶಲಕರ್ಮಿಗಳ ಸಂಖ್ಯೆಗಳನ್ನು ವೃದ್ಧಿಸಲು ಹಾಗೂ ಚರ್ಮ ಕೈಗಾರಿಕೆಗಳ ಇಂದಿನ ಹೊಸ ತಂತ್ರಜ್ಞಾನಗಳು, ವಿನ್ಯಾಸಗಳನ್ನು ಪರಿಚಯಿಸಲು ನಿರುದ್ಯೋಗಿ ಯುವಕ/ಯುವತಿಯರಿಗೆ ಚರ್ಮೋದ್ಯಮದಲ್ಲಿ ಆಸಕ್ತಿಯನ್ನು ಹುಟ್ಟಿಸಿ ಅವರ ಮುಂದಿನ ಆರ್ಥಿಕ ಜೀವನವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಅಭ್ಯರ್ಥಿಗಳು ತಮಗೆ ಸಂಬಂಧಪಟ್ಟ ಜಿಲ್ಲೆಯ ಸ್ಥಳಿಯ ಜಿಲ್ಲಾ ಸಂಯೋಜಕರ ಕಛೇರಿ ಅಥವಾ ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಲಿಡ್ಕರ್) ಇಲ್ಲಿಗೆ ಭೇಟಿ ನೀಡಿ ದಾಖಲಾತಿಗಳೊಂದಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವುದರ ಮೂಲಕ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು  ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಎಸ್‍ಆರ್‍ಟಿಸಿ (KSRTC) ಯಿಂದ ಕೋಲಾರ ಜಿಲ್ಲೆಗೆ ಪ್ಯಾಕೇಜ್ ಪ್ರವಾಸ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ಚಿಕ್ಕತಿರುಪತಿ-ಕೋಟಿಲಿಂಗೇಶ್ವರ-ಬಂಗಾರು ತಿರುಪತಿ-ಆವಣಿ-ಮುಳಬಾಗಿಲು-ಕುರುಡುಮಲೆ-ಕೋಲಾರ ಮಾರ್ಗದಲ್ಲಿ ಅಶ್ವಮೇಧ ಕ್ಲಾಸಿಕ್ ಸಾರಿಗೆಯನ್ನು ವಾರಾಂತ್ಯದ ಶನಿವಾರ ಮತ್ತು ಭಾನುವಾರ ದಿನಗಳಲ್ಲಿ ಪ್ಯಾಕೇಜ್ ಪ್ರವಾಸ ಪ್ರಾರಂಭಿಸಲಾಗಿದೆ.

ಈ ಪ್ರವಾಸವನ್ನು 2025ನೇ ಜೂನ್ 28 ರಿಂದ ಬೆಳಿಗ್ಗೆ 6.30ಕ್ಕೆ ಪ್ರಾರಂಭಿಸಲಾಗುತ್ತದೆ. ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನ / ರಾತ್ರಿ ಊಟವನ್ನು ಹೊರತುಪಡಿಸಿ, ಪ್ರಯಾಣಿಕರ ಅಶ್ವಮೇಧ ಕ್ಲಾಸಿಕ್ ಸಾರಿಗೆ ಪ್ರಯಾಣ ವಯಸ್ಕರರಿಗೆ 600/- (ಮುಂಗಡ ಬುಕಿಂಗ್ ಸೇರಿ), 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ 450/- (ಮುಂಗಡ ಬುಕಿಂಗ್ ಸೇರಿ) ದರ ನಿಗಧಿಪಡಿಸಿದೆ.

ಸಾರ್ವಜನಿಕ ಪ್ರಯಾಣಿಕರು ಪ್ಯಾಕೇಜ್ ಟೂರ್ ಸಾರಿಗೆ ಸೌಲಭ್ಯಕ್ಕಾಗಿ ಟಿಕೇಟ್ ಪಡೆಯಲು ವೆಬ್ ಸೈಟ್:  www.ksrtc.in & amp; www.ksrtc.karnataka.gov.in  ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-26252625 / 7760990100 / 7760990560 / 7760990287 ಸಂಪರ್ಕಿಸಬಹುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಲ್ಮೀಕಿ ನಿಗಮದಲ್ಲಿ 500 ಕೋಟಿಗೂ ಹೆಚ್ಚು ಮೊತ್ತದ ಹಗರಣ- ಬಂಗಾರು ಹನುಮಂತು

 

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಮತ್ತೊಂದು ಹಗರಣ ನಡೆದಿದ್ದು, ಸುಮಾರು 500 ಕೋಟಿಯಿಂದ 600 ಕೋಟಿ ಮೊತ್ತದ ಹಗರಣ ಇದಾಗಿರುವ ಸಾಧ್ಯತೆ ಇದೆ ಎಂದು ಬಿಜೆಪಿ ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ನೂರಾರು ಕೋಟಿ ಹಣವನ್ನು ದೋಚಿ ಬಳ್ಳಾರಿಯ ಲೋಕಸಭಾ ಚುನಾವಣೆಗೆ ಖರ್ಚು ಮಾಡಿದ್ದರು. ಪ್ರಸ್ತುತ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದಿಂದ ದಿನೇದಿನೇ ಹೊಸದಾಗಿ ಬೆಳಕಿಗೆ ಬರುವ ಹಗರಣಗಳನ್ನು ನೋಡಿದರೆ ನೂರಾರು ಕೋಟಿಗಳ ಅವ್ಯವಹಾರ ಆಗಿರುವುದು ಕಂಡುಬರುತ್ತಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 2019-20ನೇ ಸಾಲಿನಲ್ಲಿ ಸ್ವಯಂ ಉದ್ಯಮಶೀಲತಾ ಸಾಲದ ಯೋಜನೆಗೆ ವಾಲ್ಮೀಕಿ ಸಮಾಜದ ಅನೇಕ ಯುವಜನರು ಅರ್ಜಿ ಸಲ್ಲಿಸಿದ್ದರು. ಆದರೆ ಯಾವುದೇ ಫಲಾನುಭವಿಗಳಿಗೆ ಸಾಲ ಮಂಜೂರು ಆಗಿರಲಿಲ್ಲ. ಪ್ರಸ್ತುತ 2024-25ನೇ ಸಾಲಿನಲ್ಲಿಯೂ ಅರ್ಜಿ ಸಲ್ಲಿಸಿದಾಗ ನಿಗಮದ ತಾಲ್ಲೂಕು ವ್ಯವಸ್ಥಾಪಕ ನಿರ್ದೇಶಕರಾದ ಭಾಗೀರಥಿ ರವರು ‘ನಿಮಗೆ ಈಗಾಗಲೇ ಸಾಲವನ್ನು ನೀಡಲಾಗಿದೆ’ ಎಂದು ಫÀಲಾನುಭವಿಗಳಿಗೆ ಹೇಳಿದ್ದಾರೆ. ಆದರೆ ಆ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿದಾಗ ಯಾವುದೇ ರೀತಿಯ ಸಾಲವನ್ನು ಪಡೆದಿರುವುದಿಲ್ಲ. ಫಲಾನುಭವಿಗಳ ಹೆಸರಿನಲ್ಲಿ ಸಾಲ ಪಡೆದಿರುವ ಬಗ್ಗೆ ದಾಖಲೆ ಕೊಡಿ ಎಂದು ಕೇಳಿದರೆ ಅವನ್ನು ಕೊಡಲು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಿದರು.

ಬೋಗಸ್ ಸಹಿ ಹಾಕಿ ಕೋಲಾರದಲ್ಲಿ ಹಣ ಪಡೆದರು..
ನಿಗಮದಿಂದ ಫಲಾನುಭವಿಗಳಿಗೆ ಸಾಲದ ಹಣವನ್ನು ನೀಡಿರುವ ಬಗ್ಗೆ ಪರಿಶೀಲಿಸಿದಾಗ ತುಮಕೂರು ಜಿಲ್ಲೆಯ ಶಿರಾ ಮತ್ತು ಪಾವಗಡ ತಾಲ್ಲೂಕಿನ ಫಲಾನುಭವಿಗಳ ಹೆಸರಿನಲ್ಲಿ 2 ಲಕ್ಷ ಹಣದ ಅನುದಾನವನ್ನು ಬಿಡುಗಡೆ ಮಾಡಿರುತ್ತಾರೆ. ಈ ಅನುದಾನವನ್ನು ಬೋಗಸ್ ಸಹಿ ಮೂಲಕ ಕೋಲಾರದ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಹಣವನ್ನು ಡ್ರಾ ಮಾಡಿರುತ್ತಾರೆ. ಸದರಿ ಹಣವನ್ನು ನಿಗಮದ ಅಧಿಕಾರಿಗಳು, ಸಚಿವರು ಮತ್ತು ಶಾಸಕರು ಬಳಸಿಕೊಂಡಿರುತ್ತಾರೆ ಎಂದು ಬಂಗಾರು ಹನುಮಂತು ಅವರು ದೂರಿದರು.

ತುಮಕೂರು ಜಿಲ್ಲೆಯಲ್ಲಿ ನಿಗಮದಿಂದ ಸುಮಾರು 1 ಕೋಟಿ 24 ಲಕ್ಷ ಹಣವನ್ನು ದೋಚಿದ್ದಾರೆ. ಇದೇ ರೀತಿ ಕರ್ನಾಟಕದ ರಾಜ್ಯಾದ್ಯಂತ ಪತ್ರಿ ಜಿಲ್ಲೆಯ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ವಾಲ್ಮೀಕಿ ಸಮಾಜದ ಫಲಾನುಭವಿಗಳ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ದೋಚಿದ್ದಾರೆ ಎಂದು ಆರೋಪಿಸಿದರು. ನಾವು ಹುಡುಕುತ್ತಾ ಹೋದರೆ ಕಾಂಗ್ರೆಸ್ ಸರ್ಕಾರದಿಂದ ಸುಮಾರು 500 ರಿಂದ 600 ಕೋಟಿ ಹಣ ಅವ್ಯವಹಾರವಾಗಿರುವುದು ಕಂಡುಬರುತ್ತದೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಾಲ್ಮೀಕಿ ಸಮುದಾಯ ಮತ್ತು ಜನರು ಅಭಿವೃದ್ಧಿ ಆಗÀಬಾರದೆಂದು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಸರ್ಕಾರದಿಂದ ಬೋವಿ ಸಮಾಜದ ನಿಗಮ, ಬಂಜಾರ ಸಮಾಜದ ನಿಗಮ, ಒಕ್ಕಲಿಗ ಸಮಾಜದ ನಿಗಮ ಮತ್ತು ಲಿಂಗಾಯಿತ ಸಮಾಜದ ನಿಗಮ ಹಾಗೂ ಇತರೆ ಎಲ್ಲ ಸಮಾಜದ ನಿಗಮದಲ್ಲೂ ಕೂಡ ಅವ್ಯವಹಾರ ಆಗಿದೆ ಎಂದು ಆರೋಪಿಸಿದರು.

ಅಧಿಕಾರಿಗಳ ಅಮಾನತು ಮಾಡಿ ತನಿಖೆ ನಡೆಸಿ..
ತುಮಕೂರು ಜಿಲ್ಲೆಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀಧರ್ ಅವರು ಮೊಬೈಲ್‍ನಲ್ಲಿ ಮಾತನಾಡಿರುವ ಆಡಿಯೋ ಸಂಭಾಷಣೆಯನ್ನು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಸಮಾಜದ ಬಗ್ಗೆ ಕಾಳಜಿ ಇದ್ದರೆ ತುಮಕೂರಿನ ಹಿಂದಿನ ಅವಧಿಯಲ್ಲಿ ಅವ್ಯವಹಾರ ಎಸಗಿರುವ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಹಾಗೂ ಇಂದಿನ ಅಧಿಕಾರಿಗಳಾದ ಶ್ರೀಧರ್, ಭಾಗೀರಥಿ ಮತ್ತು ನಾಗೇಂದ್ರ ಅವರನ್ನು ಅಮಾನತಿನಲ್ಲಿರಿಸಬೇಕು. ಸಮಗ್ರ ತನಿಖೆ ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳಲು ಬಂಗಾರು ಹನುಮಂತು ಅವರು ಆಗ್ರಹಿಸಿದರು.

ನಾರಾಯಣಸ್ವಾಮಿ ಅವರ ಲೆಟರ್‍ಹೆಡ್ ಅನ್ನು ಸಿದ್ಧಪಡಿಸಿ ನಕಲಿ ಸಹಿ ಮಾಡಿದ್ದಾರೆ ಎಂದು ಅವರು ದೂರಿದರು. ಅಧಿಕಾರಿಗಳು ಈಗ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸಿಕೊಂಡ ದಿನದಿಂದ ದಿನನಿತ್ಯ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ ಎಂದು ಟೀಕಿಸಿದರು.
ನಿಮ್ಮ ಸರ್ಕಾರ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ವಾಲ್ಮೀಕಿ ಸಮಾಜದ ಜನಾಂಗದಿಂದ ಬೆಂಗಳೂರಿನ ವಾಲ್ಮೀಕಿ ನಿಗಮಕ್ಕೆ ಮುತ್ತಿಗೆ ಹಾಕಿ ನ್ಯಾಯ ಸಿಗುವವರೆಗೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

2019ರಿಂದ ಈ ವರೆಗೆ ಅರ್ಜಿ ಹಾಕಿದ ಫಲಾನುಭವಿಗಳು ಮತ್ತೊಮ್ಮೆ ಅರ್ಜಿ ಹಾಕಬೇಕು. ಆಧಾರ್, ಪ್ಯಾನ್ ಕಾರ್ಡ್ ಬಳಸಿ ಫಲಾನುಭವಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು s ಹಣ ಪಡೆದಿರುವ ಸಾಧ್ಯತೆ ಇದೆ. ಸಂಬಂಧಿತ ಕಚೇರಿಗೆ ಹೋಗಿ ಇದನ್ನು ಕೂಲಂಕಷ ಪರಿಶೀಲನೆ ಮಾಡಬೇಕೆಂದು ಅವರು ಮನವಿ ಮಾಡಿದರು.