ಬೆಂಗಳೂರು: ಕೇಂದ್ರ ಪುರಸ್ಕೃತ (Centrally sponsored) ‘ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ’ (PMFME) ಯೋಜನೆಯನ್ನು ಅತ್ಯುತ್ತಮವಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯಕ್ಕೆ ಕೇಂದ್ರ ಆಹಾರ ಸಂಸ್ಕರಣಾ ಸಚಿವಾಲಯವು (MoFPI) “ಉತ್ತಮ ಅನುಷ್ಠಾನ ರಾಜ್ಯ” ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರಶಸ್ತಿ ಪ್ರದಾನ ಹಾಗೂ ರಾಷ್ಟ್ರೀಯ ಸಮಾವೇಶ:
ಆಗಸ್ಟ್ 25, 2026 ರಂದು ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಕೇಂದ್ರ ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವರಾದ ಶ್ರೀ ಚಿರಾಗ್ ಪಾಸ್ವಾನ್ ಅವರಿಂದ ರಾಜ್ಯ ಸರ್ಕಾರದ ಪರವಾಗಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (KAPPEC) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವೆಂಕಟರಾಮರೆಡ್ಡಿ ಜೆ. ಪಾಟೀಲ್ ಮತ್ತು ಪ್ರಧಾನ ವ್ಯವಸ್ಥಾಪಕರಾದ ಡಾ. ಹೆಚ್.ಕೆ. ಶಿವಕುಮಾರ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ನಡೆದ ‘ರಾಷ್ಟ್ರ ಮಟ್ಟದ PMFME ಸಮಾವೇಶ – 2026’ ರಲ್ಲಿ:
ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವೆಂಕಟರಾಮರೆಡ್ಡಿ ಜೆ. ಪಾಟೀಲ್ ಅವರು ಯೋಜನೆ ಅನುಷ್ಠಾನದಲ್ಲಿ ರಾಜ್ಯವು ಕೈಗೊಂಡ ಕಾರ್ಯತಂತ್ರಗಳು, ವಿವಿಧ ಚಟುವಟಿಕೆಗಳು ಹಾಗೂ ಅನುಸರಿಸಿದ ಉತ್ತಮ ಅಭ್ಯಾಸಗಳ ಕುರಿತು ವಿಷಯ ಮಂಡಿಸಿದರು.
ಪ್ರಧಾನ ವ್ಯವಸ್ಥಾಪಕರಾದ ಡಾ. ಹೆಚ್.ಕೆ. ಶಿವಕುಮಾರ್ ಅವರು PMFME ಯೋಜನೆಯಡಿ ತಯಾರಾದ ಆಹಾರ ಉತ್ಪನ್ನಗಳ ಬ್ರಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಯಲ್ಲಿ ಕರ್ನಾಟಕ ಸಾಧಿಸಿದ ಸಫಲತೆಯನ್ನು ವಿವರಿಸಿದರು.
ಯೋಜನೆಯ ಮೈಲಿಗಲ್ಲು ಮತ್ತು ಪ್ರಮುಖ ಸಾಧನೆಗಳು:
ರಾಜ್ಯದಲ್ಲಿ 2020-21 ರಿಂದ ಕೆಪೆಕ್ (KAPPEC) ಸಂಸ್ಥೆಯು ರಾಜ್ಯ ನೋಡಲ್ ಏಜೆನ್ಸಿಯಾಗಿ ಈ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.
ಬಂಡವಾಳ ಹೂಡಿಕೆ: ಯೋಜನೆಯಡಿಯಲ್ಲಿ ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗಾಗಿ 10,500 ಕ್ಕೂ ಹೆಚ್ಚು ಸಾಲ ಸಂಪರ್ಕಿತ ಸಹಾಯಧನಗಳನ್ನು ಮಂಜೂರು ಮಾಡಲಾಗಿದ್ದು, ರಾಜ್ಯದಲ್ಲಿ ರೂ1,300.00 ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯಾಗಿದೆ.
ಉದ್ದಿಮೆಗಳ ಸ್ಥಾಪನೆ:
ಸಿರಿಧಾನ್ಯಗಳ ಸಂಸ್ಕರಣೆ, ಬೆಲ್ಲ ತಯಾರಿಕೆ, ಕೋಲ್ಡ್ ಪ್ರೆಸ್ಡ್ ಎಣ್ಣೆ ಉತ್ಪಾದನೆ, ಮಸಾಲೆ ಪದಾರ್ಥಗಳ ಸಂಸ್ಕರಣೆ ಹಾಗೂ ಬೇಕರಿ ಉತ್ಪನ್ನ ತಯಾರಿಕೆಯಂತಹ ವಿವಿಧ ಘಟಕಗಳು ಯಶಸ್ವಿಯಾಗಿ ಕಾರ್ಯಾರಂಭ ಮಾಡಿವೆ.
ಸಾಮಾಜಿಕ ಹಾಗೂ ಆರ್ಥಿಕ ಕೊಡುಗೆ:
ಗ್ರಾಮೀಣ ಪ್ರದೇಶಗಳಲ್ಲಿ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಮತ್ತು ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತ ಮೌಲ್ಯವರ್ಧನೆ ಹಾಗೂ ಉತ್ತಮ ಮಾರುಕಟ್ಟೆ ಬೆಲೆ ದೊರಕಿಸಿಕೊಡುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಿದೆ.
ಅಭಿನಂದನೆ:
ರಾಜ್ಯ ಸರ್ಕಾರ ಹಾಗೂ ಕೆಪೆಕ್ ಸಂಸ್ಥೆಯ ಈ ಸಾಧನೆಯನ್ನು ಶ್ಲಾಘಿಸಿರುವ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಕೃಷಿ ಸಚಿವರಾದ ಶ್ರೀ ನರೇಂದ್ರಸ್ವಾಮಿ ಹಾಗೂ ಕೆಪೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಪ್ರಧಾನ ವ್ಯವಸ್ಥಾಪಕರು ಸೇರಿದಂತೆ ಇಡೀ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ ಎಂದು ವ್ಯವಸ್ಥಾಪಕ ನಿರ್ದೇಶಕರು
ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (KAPPEC) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಕಲಚೇತನ ನಿರುದ್ಯೋಗಿಗಳಿಗೆ ಉದ್ಯೋಗ ಮೇಳ-2026: ಸೆಪ್ಟೆಂಬರ್ 10 ರಂದು ಬೆಂಗಳೂರಿನಲ್ಲಿ ಆಯೋಜನೆ
