ಬೆಂಗಳೂರು: ರಾಜ್ಯ ಸರ್ಕಾರವು ಗುತ್ತಿಗೆದಾರರಿಗೆ ಕೊಡಬೇಕಾದ ಹಿಂಬಾಕಿಯನ್ನು ಕೊಡಬೇಕು. ಸಾರಿಗೆ ನಿಗಮ ಇರಬಹುದು, ವಿದ್ಯುತ್ ವಿತರಣಾ ಕೇಂದ್ರಗಳು ಎಸ್ಕಾಂಗಳು (Escom) ಸೇರಿ ನಿಗಮಗಳಿಗೆ ಕೊಡಬೇಕಾದ ಹಿಂಬಾಕಿಯನ್ನು ತಕ್ಷಣಕ್ಕೆ ಕೊಡಬೇಕು ಎಂದು ರಾಜ್ಯ ಬಿಜೆಪಿ (State BJP Genl. Secy.) ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ (P. Rajiv) ಅವರು ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಚಳಿಯಲ್ಲಿ ಅಹೋರಾತ್ರಿ ಧರಣಿ ಮಾಡುತ್ತಿದ್ದು, ತಕ್ಷಣಕ್ಕೆ ಸರ್ಕಾರ ಸ್ಪಂದಿಸಬೇಕು ಎಂದರು. ತಾನು ಕೊಟ್ಟ ಮಾತಿನಂತೆ ಅವರಿಗೆ ಪ್ರತಿ ತಿಂಗಳು ಹದಿನೈದು ಸಾವಿರ ಗೌರವಧನ ಕೊಡಬೇಕು ಎಂದು ಒತ್ತಾಯಿಸಿದರು.
ರಾಜ್ಯಕ್ಕೆ ಅತ್ಯಂತ ಭೀಕರವಾದ ಬರಗಾಲ ಬಂದಿದೆ. ರೈತರಿಗೆ ಪರಿಹಾರವನ್ನು ಇವತ್ತಿನವರೆಗೆ ಈ ಸರ್ಕಾರ ಮುಟ್ಟಿಸಲಿಕ್ಕೆ ಸಾಧ್ಯ ಆಗಿಲ್ಲ. ಈ ಕೊರೆಯುವಂತಹ ಚಳಿಯಲ್ಲಿ ಆಶಾ ಕಾರ್ಯಕರ್ತೆಯರು ಹೋರಾಟ ಹಮ್ಮಿಕೊಂಡಿದ್ದಾರೆ. ಇದೇ ಸರ್ಕಾರ, ಇದೇ ಕಾಂಗ್ರೆಸ್ಸಿನ ಸರ್ಕಾರ ಅವರಿಗೆ 15 ಸಾವಿರ ತಿಂಗಳಿಗೆ ಕೊಡುವುದಾಗಿ ಮಾತು ಕೊಟ್ಟಿತ್ತು. ಅದನ್ನು ಈಡೇರಿಸುವಂತೆ ಒತ್ತಾಯಿಸಿದರು.
ಭಾರತೀಯ ಜನತಾ ಪಕ್ಷ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಎಂದ ಅವರು, ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಯಾವ ಅಂಶ ಹೇಳಿದೆಯೋ, ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಆರ್ಥಿಕ ಪರಿಸ್ಥಿತಿ ದಿವಾಳಿ..
ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ. ಎಂಟೂವರೆ ಲಕ್ಷ ಕೋಟಿ ಸಾಲದ ಹೊರೆ ಈ ರಾಜ್ಯದ ಜನಸಾಮಾನ್ಯನ ಮೇಲೆ ಇದೆ. ನಿಮ್ಮ ಶಕ್ತಿ ಯೋಜನೆ, ಅದಕ್ಕೆ ಕೊಡಬೇಕಾಗಿರುವಂತಹ ಬಾಕಿ ಆರೂವರೆ ಸಾವಿರ ಕೋಟಿ ಬಾಕಿ ಇದೆ. ಈ ಸರ್ಕಾರ ನಿಗಮಕ್ಕೆ ಕೊಡಬೇಕು. ಸಾರಿಗೆ ಸಿಬ್ಬಂದಿಯವರು ಗ್ರಾಚ್ಯುಟಿ, ಇಪಿಎಫ್ ನೀಡದೇ ಬಾಕಿ ಉಳಿಸಿಕೊಂಡಿದೆ. ಗ್ರಾಚ್ಯುಟಿ, ಇಪಿಎಫ್ ಅವುಗಳಿಗೆ ಎಲ್ಲವನ್ನ ಸೇರಿಸಿದರೆ ಸುಮಾರು ಎಂಟೂವರೆ ಸಾವಿರ ಕೋಟಿ ಈ ಸರ್ಕಾರ ನಿಗಮಗಳಿಗೆ ಕೊಡದೇ ಬಾಕಿ ಉಳಿಸಿಕೊಂಡಿದೆ ಎಂದರು.
ಎಸ್ಕಾಂಗಳಿಗೆ ಹಣ ಬಾಕಿ..
ಗೃಹಜ್ಯೋತಿ ಯೋಜನೆ ಸಂಬಂಧ ಸಾವಿರಾರು ಕೋಟಿ ಬಾಕಿ ಇದೆ. ಈ ಎಲ್ಲಾ ಹೊರೆ ನಾಳೆ ಜನಸಾಮಾನ್ಯನ ಮೇಲೆ ಹಾಕುವರಿದ್ದೀರಿ. ಇದರ ಬಿಸಿ ಈಗಾಗಲೇ ಜನಸಾಮಾನ್ಯರು ಅನುಭವಿಸುತ್ತಾ ಇದ್ದಾರೆ ಎಂದು ಗಮನ ಸೆಳೆದರು.
ಹಾಲಿನ ದರ ಹೆಚ್ಚಿಸಿದ್ದಾರೆ. ಆದರೆ, ರೈತರಿಗೆ ಕೇವಲ ಐದು ರೂಪಾಯಿ ಮಾತ್ರ ಕೊಡುತ್ತಾರೆ. ಉಳಿದ ಹಣವನ್ನು ಈ ಸರ್ಕಾರ ಬಳಸಿಕೊಳ್ಳುತ್ತಿದೆ. ಗ್ರಾಹಕರಿಗೆ ನೀವು ಪೆಟ್ಟು ಹಾಕುತ್ತೀರಿ ಎಂದು ಆಕ್ಷೇಪಿಸಿದರು. ಈಗ ವಿದ್ಯುತ್ ಬಿಲ್ಲುಗಳನ್ನು ನಾವು ಗಮನಿಸಿದರೆ, ನಿಮ್ಮ ಹಿಂಬಾಕಿ ಜನಸಾಮಾನ್ಯ ತುಂಬುವಂತಾಗಿದೆ ಎಂದು ಟೀಕಿಸಿದರು.
ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ಅನ್ನ ವಿಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸೆಸ್ ಹಾಕುತ್ತಾರೆ ಎಂದು ಎಚ್ಚರಿಸಿದರು. ಜನಸಾಮಾನ್ಯರ ತಲೆಯ ಮೇಲೆ ಸಾಲದ ಹೊರೆ ಹೆಚ್ಚು ಮಾಡುತ್ತಿದ್ದಾರೆ ಎಂದು ದೂರಿದರು.

