ಬೆಂಗಳೂರು: ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಪ್ರತಿ ತಿಂಗಳು ನೀಡಲಾಗುವ ಒಂದು ದಿನದ ಮುಟ್ಟಿನ ರಜೆಯನ್ನು (Menstrual Leave) ಯಾವುದೇ ತಡೆ ಇಲ್ಲದೆ ‘ಕರ್ತವ್ಯ’ (Karthavya) ಆ್ಯಪ್ ಮೂಲಕ ಸ್ವಯಂಚಾಲಿತವಾಗಿ (Auto-approval) ಮಂಜೂರು ಮಾಡಲು ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.
ಕೆಲವು ಪ್ರಕರಣಗಳಲ್ಲಿ ಮಹಿಳಾ ನೌಕರರ ಮುಟ್ಟಿನ ರಜೆಯ ಅರ್ಜಿಗಳನ್ನು ಮಂಜೂರು ಮಾಡದಿರುವುದು ಹಾಗೂ ವೈದ್ಯಕೀಯ ಪ್ರಮಾಣಪತ್ರ ಮುಂತಾದ ಅನಗತ್ಯ ಕಾರಣಗಳನ್ನು ನೀಡಿ ವಿಳಂಬ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಈ ರಜೆಗೆ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲದಿರುವುದರಿಂದ ಮತ್ತು ನಿಗದಿತ ಷರತ್ತುಗಳನ್ನು ಪೂರೈಸುವ ಅರ್ಜಿಗಳನ್ನು ತಕ್ಷಣ ಮಂಜೂರು ಮಾಡಬೇಕಾಗಿರುವುದರಿಂದ, ಮಂಜೂರಾತಿ ಪ್ರಾಧಿಕಾರಗಳಿಗೆ ಇಂತಹ ಅರ್ಜಿಗಳನ್ನು ತಿರಸ್ಕರಿಸುವ ವಿವೇಚನಾಧಿಕಾರವಿರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
‘ಕರ್ತವ್ಯ’ ಆ್ಯಪ್ ನಿಯಮಗಳು:
ಈ ಸೌಲಭ್ಯವನ್ನು ಸುಲಭವಾಗಿ ಪಡೆಯಲು ‘ಕರ್ತವ್ಯ’ ಆ್ಯಪ್ ನಲ್ಲ್ಲಿ ಸೂಕ್ತ ತಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿದ್ದು, ಕೆಳಗಿನ ಅರ್ಹತೆಗಳ ಆಧಾರದ ಮೇಲೆ ರಜೆ ಸ್ವಯಂಚಾಲಿತವಾಗಿ ಮಂಜೂರಾಗಲಿದೆ.
ಅರ್ಜಿದಾರರು 18 ರಿಂದ 52 ವರ್ಷ ವಯೋಮಿತಿಯ ಮಹಿಳಾ ಸರ್ಕಾರಿ ನೌಕರರಾಗಿರಬೇಕು.
ಒಂದು ತಿಂಗಳಿನಲ್ಲಿ ಒಂದು ದಿನಕ್ಕಿಂತ ಹೆಚ್ಚು ರಜೆ ಪಡೆಯಲು ಅವಕಾಶವಿರುವುದಿಲ್ಲ.
ಈ ರಜೆಯನ್ನು ಸಂಚಯಿಸಲು (Accumulate), ಮುಂದಿನ ತಿಂಗಳಿಗೆ ಮುಂದುವರಿಸಲು (Carry forward) ಅಥವಾ ಬೇರೆ ಯಾವುದೇ ರಜೆಯೊಂದಿಗೆ ಸೇರಿಸಿ ಪಡೆಯಲು ಅವಕಾಶವಿಲ್ಲ.
ಸರ್ಕಾರದ ಆದೇಶದಂತೆ ‘ಕರ್ತವ್ಯ’ ಆ್ಯಪ್ ಮೂಲಕ ಸ್ವಯಂಚಾಲಿತವಾಗಿ ಮಂಜೂರಾದ ರಜೆಯನ್ನು ಯಾವುದೇ ಮಂಜೂರಾತಿ ಪ್ರಾಧಿಕಾರವು ತಡೆಹಿಡಿಯದಂತೆ, ಪ್ರಶ್ನಿಸದಂತೆ ಅಥವಾ ರದ್ದುಪಡಿಸದಂತೆ ಖಚಿತಪಡಿಸಿಕೊಳ್ಳಬೇಕೆಂದು ಎಲ್ಲಾ ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳಿಗೆ ಪ್ರಜಾಸೇವಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ನಿರ್ದೇಶನ ನೀಡಿದ್ದಾರೆ.
ಮಹರ್ಷಿ ವಾಲ್ಮೀಕಿ ಜಯಂತಿ: ಅಕ್ಟೋಬರ್ 26ಕ್ಕೆ ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ

