ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ(Basavaraj Horatti) ಅವರು ರಾಜಿನಾಮೆ(Resignation) ನೀಡಿದ್ದು, ಅದನ್ನು ಅಂಗೀಕರಿಸಲಾಗಿದೆ. ಬದಲಿ ವ್ಯವಸ್ಥೆ ಆಗುವವರೆಗೂ ಅವರನ್ನೇ ಈ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(CM. D.K.ShviaKumar) ಅವರು ತಿಳಿಸಿದರು.
ಇಂದು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಪ್ರಸಕ್ತ ರಾಜಕೀಯ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಬಸವರಾಜ ಹೊರಟ್ಟಿ ಅವರು ತಮ್ಮ ರಾಜೀನಾಮೆ ನೀಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಹೊರಟ್ಟಿ ಅವರು ದೇಶದ ವಿಧಾನ ಪರಿಷತ್ ಇತಿಹಾಸದಲ್ಲೇ ಅತ್ಯಂತ ಹಿರಿಯ ನಾಯಕರು. ಅವರು ತಮ್ಮ ಹೃದಯ ವೈಶಾಲ್ಯತೆ ತೋರಿದ್ದಾರೆ. ಅದು ಮೆಚ್ಚುವಂತದ್ದು. ಆಗಸ್ಟ್ 13 ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, 14 ರಂದು ನೂತನ ಉಪಸಭಾಪತಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನಂತರ ಉಪಸಭಾಪತಿಗಳ ಮೂಲಕ ಸಭಾಪತಿಗಳ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಬಸವರಾಜ ಹೊರಟ್ಟಿ ಅವರೊಂದಿಗೆ ವಿಧಾನಸೌಧದಲ್ಲಿ ಚರ್ಚೆ ನಡೆಸಿದ್ದ ಮುಖ್ಯಮಂತ್ರಿಗಳು, ವಿಧಾನ ಪರಿಷತ್ತಿನ ಅಧ್ಯಕ್ಷ, ಉಪಾಧ್ಯಕ್ಷರನ್ನ ಆಯ್ಕೆ ಮಾಡಿ ನಂತರ ನಮ್ಮ ಸದಸ್ಯರೆಲ್ಲರಿಗೂ ಕೃತಜ್ಞತೆ ಸಲ್ಲಿಸುವ ಆಸೆಯನ್ನು ಬಸವರಾಜ ಹೊರಟ್ಟಿಯವರು ಇಟ್ಟುಕೊಂಡಿದ್ದಾರೆ. ಅವರ ಭಾವನೆಗಳನ್ನು ನಾವು ಒಪ್ಪಿಕೊಂಡಿದ್ದೇವೆ, ಗೌರವಿಸುತ್ತೇವೆ ಎಂದರು.
ಬಸವರಾಜ ಹೊರಟ್ಟಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿಚಾರ ಇತ್ತಲ್ಲ ಎಂದು ಕೇಳಿದಾಗ, ನಾವುಗಳೇ ಒಂದು ಒಪ್ಪಂದಕ್ಕೆ ಬಂದ ಮೇಲೆ ಮುಂದೇನಿದೆ? ಅವಿಶ್ವಾಸ ನಿರ್ಣಯ ಮಂಡನೆ ಅಪ್ರಸ್ತುತ. ಈಗ ಅವರೇ ರಾಜೀನಾಮೆ ನೀಡಿದ್ದಾರೆ. ಈಗ ರಾಜೀನಾಮೆ ಅಂಗೀಕರಿಸಿದರೂ ಅವರನ್ನೇ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕಿದೆ ಎಂದರು.
ರಾಜೀನಾಮೆ ನೀಡುತ್ತೇನೆ ಎಂದು ಬಸವರಾಜ ಹೊರಟ್ಟಿ ಅವರು ದೇಶದ ಮುಂದೆಯೇ ಹೇಳಿರುವಾಗ ಆ ವಿಚಾರವೇ ಬಾರದು. ಬಸವರಾಜ ಹೊರಟ್ಟಿ ಅವರು ಶಿಸ್ತಿನ ಮನುಷ್ಯ. ಅವರು ಸಭಾಪತಿ ಸ್ಥಾನಕ್ಕೆ ನೀಡಿದಷ್ಟು ಗೌರವವನ್ನು ಯಾರೂ ನೀಡಿಲ್ಲ. ಎಲ್ಲಾ ಸಂದರ್ಭದಲ್ಲೂ ಸರ್ಕಾರದ ಗೌರವ ಕಾಪಾಡಿಕೊಂಡು ಬಂದಿದ್ದಾರೆ. ನಮಗೆಲ್ಲರಿಗೂ ಅವರ ಬಗ್ಗೆ ಹೆಮ್ಮೆಯಿದೆ ಎಂದರು.
