Home Blog Page 64

ಕೆ ಐ ಎ ಡಿ ಬಿ ವತಿಯಿಂದ ಬೃಹತ್ ಮೆರವಣಿಗೆ: ಮಾದಿಗ ದಂಡೋರ ಸಂಘಟನೆಯಿಂದ ಸಂಪೂರ್ಣ ಬೆಂಬಲ

ಶಿಡ್ಲಘಟ್ಟ : ಜೂನ್ 30 ಸೋಮವಾರದಂದು ಕೆ ಐ ಎ ಡಿ ಬಿ ವತಿಯಿಂದ ಬೃಹತ್ ಮೆರವಣಿಗೆ ಹಾಗೂ ಪ್ರತಿಭಟನೆಯನ್ನು ದಲಿತ ಪರ ಸಂಘಟನೆಗಳು ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಪರ ಸಂಘಟನೆಗಳು ಹಮ್ಮಿಕೊಂಡಿರುವ ಪ್ರತಿಭಟನೆಗೆ ಮಾದಿಗ ದಂಡೋರ ಸಂಘಟನೆಯಿಂದ ಸಂಪೂರ್ಣ ಬೆಂಬಲ ಇದೆ ಎಂದು ಮಾದಿಗ ದಂಡೋರ ಜಿಲ್ಲಾ ಸದಸ್ಯ ದೇವರ ಮಳ್ಳೂರು ಕೃಷ್ಣಪ್ಪ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾದಿಗ ದಂಡೋರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಜಂಗಮಕೋಟೆ ಹೋಬಳಿಯ 13 ಹಳ್ಳಿಗಳಿಗೆ ಸೇರಿದ ಕೆ ಐ ಎ ಡಿ ಬಿ ಗೆ ಸಂಬಂಧಿಸಿದಂತೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವು ಬಹಳ ಹಿಂದುಳಿದಿದ್ದು ಅನೇಕ ಯುವಕರು ವರರಾಜ್ಯ ಹಾಗೂ ಅವರ ಜಿಲ್ಲೆಗಳಿಗೆ ಉದ್ಯೋಗವನ್ನರಸಿ ತೆರಳುತ್ತಿದ್ದಾರೆ. ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆಕರಣ ಆದರೆ ನಮ್ಮ ಶಿಡ್ಲಘಟ್ಟ ಜನತೆಗೆ ಉದ್ಯೋಗ ಸಿಗುತ್ತದೆ, ತಾಲೂಕಿನಲ್ಲಿ ಅತಿ ಹೆಚ್ಚು ಬಡತನವನ್ನು ಹೊಂದಿದ್ದರೆ ಬಡತನ ನಿರ್ಮೂಲವಾಗಬೇಕಾದರೆ, ನಮ್ಮ ತಾಲೂಕಿಗೆ ಕೈಗಾರಿಕೆಗಳು ಅತ್ಯವಶ್ಯಕವಾಗಿವೆ. ಹಿಂದುಳಿದ ತಾಲೂಕಾಗಿರುವ ಶಿಡ್ಲಘಟ್ಟವು ಅಭಿವೃದ್ಧಿಯತ್ತ ಸಾಗುತ್ತದೆ.
ಸೋಮವಾರ ದಲಿತ ಪರ ಸಂಘಟನೆಗಳು ಕನ್ನಡ ಪರ ಸಂಘಟನೆಗಳು ಹಮ್ಮಿಕೊಂಡಿರುವ ಬೃಹತ್ ಮೆರವಣಿಗೆ ಹಾಗೂ ಪ್ರತಿಭಟನೆಗೆ ನಮ್ಮ ರಾಜ್ಯ ಪ್ರಧಾನ ಕಾರ್ಯದರ್ಶಿ ಜಂಗಮ ಶೀಗಹಳ್ಳಿ ದೇವರಾಜ್ ಅವರ ಸೂಚನೆಯಂತೆ ನಾವು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಮಾದಿಗ ದಂಡೋರ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಅಲಸೂರದಿನ್ನೇ ಅಂಜಿ ಮಾತನಾಡಿ ದಲಿತ ಪರ ಸಂಘಟನೆಗಳು ಕನ್ನಡಪರ ಸಂಘಟನೆಗಳು ಹಾಗೂ ವಿವಿಧಪರ ಸಂಘಟನೆಗಳು ಸೋಮವಾರ ಮೆರವಣಿಗೆ ಹಾಗು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಕೆ ಐ ಎ ಡಿಬಿ ಸಂಸ್ಥೆಯು ಜಂಗಮಕೋಟೆಯ 13 ಹಳ್ಳಿಗಳ ಭೂಮಿಯನ್ನು ಪಡೆದುಕೊಂಡು ಆದಷ್ಟು ಬೇಗ ಕಾರ್ಖಾನೆಗಳನ್ನು ಸ್ಥಾಪಿಸಬೇಕು ಹಾಗೂ ಈ ಭಾಗದ ಹೆಚ್ಚು ವಿದ್ಯಾವಂತ ಯುವಕರಿದು ಅಂತವರಿಗೆ ನಿರುದ್ಯೋಗವನ್ನು ನೀಗಿಸಬೇಕು ಎಂದು ಒತ್ತಾಯಿಸಿ ಬೃಹತ್ ಪ್ರತಿಭಟನೆಗೆ ನಮ್ಮ ಸಂಘಟನೆಯಿಂದ ಸಂಪೂರ್ಣ ಬೆಂಬಲ ಸಿಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಮಂಜುನಾಥ್ ಎ ಎನ್, ತಾಲೂಕು ಅಧ್ಯಕ್ಷ ನರಸಿಂಹಪ್ಪ, ಚಾಲಕರ ಘಟಕದ ಅಧ್ಯಕ್ಷ ವೇಣು,ತಾಲೂಕು ಖಜಾಂಚಿ ಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ಸಿ ನಾರಾಯಣಸ್ವಾಮಿ, ಆಟೋ ಘಟಕ ಅಧ್ಯಕ್ಷ ಮುನಿರಾಜು,
ನಲಪ್ಪ, ಕೃಷ್ಣಪ್ಪ ಮತ್ತು ಇತರರು ಹಾಜರಿದ್ದರು.

*ವರದಿ ಚಿಕ್ಕತೇಕಹಳ್ಳಿ ಡಿ ಶಿವಕುಮಾರ್*

ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ

ಕೋರಮಂಗಲದ ಕರ್ನಾಟಕ ರಾಜ್ಯ ಪೊಲೀಸ್ ಕ್ರೀಡಾಂಗಣದಲ್ಲಿ ನಡೆದ, ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದ ಉದ್ಘಾಟನಾ ಸಮಾರಂಭವನ್ನು Dr. ಜಿ ಪರಮೇಶ್ವರ, ಸನ್ಮಾನ್ಯ ಗೃಹ ಸಚಿವರು ಕರ್ನಾಟಕ ಸರ್ಕಾರ ರವರು ನೆರವೇರಿಸಿದರು. ವಿಶೇಷ ಆಹ್ವಾನಿತರಾದ ಶ್ರೀಮತಿ ಕನ್ನಿಕಾ ಪರಮೇಶ್ವರಿ ರವರು ಗೆಲುವು ಸಾಧಿಸಿದ ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾ ತಂಡಗಳಿಗೆ ಬಹುಮಾನವನ್ನು ವಿತರಿಸಿದರು. ಈ ಸಮಾರೋಪ ಸಮಾರಂಭದಲ್ಲಿ Dr. ಎಂ ಎ ಸಲೀಂ, ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು, ಪೊಲೀಸ್ ಪಡೆಯ ಮುಖ್ಯಸ್ಥರು ಹಾಗೂ ಇಲಾಖೆಯ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ತುರ್ತು ಪರಿಸ್ಥಿತಿ ಕರಾಳ ದಿನಗಳ ವಿರುದ್ಧ ನಡೆದಿರುವ ರೋಚಕ ಕಥೆ ಅನಾವರಣ ಕಾರ್ಯಕ್ರಮ

  • ಇಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರ ನಗರದ ಶ್ರೀ ನೀಲಕಂಠೇಶ್ವರ ಸಭಾಭವನದಲ್ಲಿ “ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್, ರಾಣೆಬೆನ್ನೂರ” ಏರ್ಪಡಿಸಿದ *ತುರ್ತು ಪರಿಸ್ಥಿತಿ ಕರಾಳ ದಿನಗಳ ವಿರುದ್ಧ ನಡೆದಿರುವ ರೋಚಕ ಕಥೆ ಅನಾವರಣ* ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾವೇರಿ – ಗದಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಸವರಾಜ ಬೊಮ್ಮಾಯಿರವರು ಉದ್ಘಾಟಿಸಿ, ಮಾತನಾಡಿದರು. ಈ ಸಂಧರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ, ಮಾಜಿ ಶಾಸಕರು ಹಾಗೂ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ವೀರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಶ್ರೀ ಅರುಣಕುಮಾರ ಪೂಜಾರ, ರಾಜ್ಯ ತುರ್ತು ಪರಿಸ್ಥಿತಿ ಸಮಿತಿಯ ಸಂಚಾಲಕರಾದ ಶ್ರೀ ಮಹೇಂದ್ರ ಕೌತಾಳ, ತುರ್ತು ಪರಿಸ್ಥಿತಿ ಸಂಧರ್ಭದಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸಿದ ಶ್ರೀ ರಾಮಕೃಷ್ಣ ತುಕಾರಾಮ ತಾಂಬೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ರಾಜ್ಯ ಪೊಲೀಸರಿಗೆ ತೆಲಂಗಾಣ ಮಾದರಿಯ ಟೋಪಿಗೆ ಸಿಎಂ ಅಸ್ತು

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಹಾಗೂ ಮುಖ್ಯ ಪೇದೆಗಳ ಟೋಪಿಯ ಮಾದರಿ ಬದಲಾವಣೆಯಾಗಲಿದೆ. ತೆಲಂಗಾಣ ಪೊಲೀಸರ ಶೈಲಿಯ ತೆಳುವಾದ, ಹಗುರವಾದ ಟೋಪಿಯನ್ನು ರಾಜ್ಯದ ಕಾನ್ಸ್ಟೇಬಲ್ ಮತ್ತು ಹೆಡ್ ಕಾನ್ಸ್ಟೇಬಲ್‌ಗಳಿಗೆ ಒದಗಿಸಲು ಮುಖ್ಯಮಂತ್ರಿ ಅವರು ಹಸಿರು ನಿಶಾನೆ ನೀಡಿದ್ದಾರೆ.
ನಿನ್ನೆ ಶುಕ್ರವಾರ ಕೇಂದ್ರ ಕಚೇರಿಯಲ್ಲಿ ನಡೆದ ವಾರ್ಷಿಕ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ ಮತ್ತು ತೆಲಂಗಾಣ ರಾಜ್ಯದ ಪೊಲೀಸರು ಬಳಸಲ್ಪಡುವ ಟೋಪಿಗಳ ಮಾದರಿ ಪ್ರದರ್ಶನಕ್ಕಿಡಲಾಗಿತ್ತು. ಇದೇ ಸಂದರ್ಭದಲ್ಲಿ ಸಿ.ಎಂ. ಸಿದ್ದರಾಮಯ್ಯ ಅವರು ನೆರೆ ರಾಜ್ಯಗಳ ಟೋಪಿಗಳನ್ನು ಪರಿಶೀಲಿಸಿದರು. ತೆಲಂಗಾಣ ಪೊಲೀಸರ ತೆಳುವಾದ ಮತ್ತು ಧರಿಸಲು ಸೌಕರ್ಯವಾದ ಕ್ಯಾಪ್‌ಗೆ ತಮ್ಮ ಒಪ್ಪಿಗೆ ಇರುವುದಾಗಿ ಅವರು ಸೂಚಿಸಿದರು.
Untitled design (22)ಈ ಹೊಸ ಟೋಪಿಯು ಹಾಲಿ ಕ್ಲೋಚ್ ಹ್ಯಾಟ್‌ಗೆ (ಸ್ಟೋಚ್ ಕ್ಯಾಪ್) ರ‍್ಯಾಯಯವಾಗಿದ್ದು, ರಾಜ್ಯದ ಕಾನ್ಸ್ಟೇಬಲ್ ಮತ್ತು ಹೆಡ್ ಕಾನ್ಸ್ಟೇಬಲ್‌ಗಳಿಗೆ ಶೀಘ್ರದಲ್ಲೇ ವಿತರಣೆಯಾಗುವ ಸಿದ್ಧತೆಯಲ್ಲಿದೆ. ಪೊಲೀಸ್ ಸಿಬ್ಬಂದಿಯ ಕಾರ್ಯಕ್ಷಮತೆ ಮತ್ತು ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾದ ಕ್ರಮ ಇದಾಗಿರುತ್ತದೆ.

ನೌಕರರ ಭವಿಷ್ಯ ನಿಧಿ: ಹೈಯರ್ ಪೆನ್ಷನ್ ಸಮಸ್ಯೆಗೆ ಶೀಘ್ರ ಪರಿಹಾರ: ಸಚಿವೆ ಶೋಭಾ ಕರಂದ್ಲಾಜೆ ಭರವಸೆ

ಬೆಂಗಳೂರು : ನೌಕರರ ಭವಿಷ್ಯ ನಿಧಿ ಯೋಜನೆ ಅಡಿ ಬರುವ “ಹೈಯರ್ ಪೆನ್ಷನ್ ಸ್ಕೀfಮ್” ನಲ್ಲಿ ಉಂಟಾಗಿರುವ ಸಮಸ್ಯೆಯನ್ನು ಅತಿ ಶೀಘ್ರವಾಗಿ ಪರಿಹಾರ ಮಾಡುವುದಾಗಿ ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಶನಿವಾರ ತಮ್ಮನ್ನು ಭೇಟಿ ಮಾಡಿದ ಹಿರಿಯ ಪತ್ರಕರ್ತರ ನಿಯೋಗಕ್ಕೆ ಭರವಸೆ ನೀಡಿದರು.

ಕರ್ನಾಟಕದ ಅನೇಕ ಪತ್ರಕರ್ತರು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಹೈಯರ್ ಪೆನ್ಷನ್ ಪಡೆಯುವ ಬಗ್ಗೆ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಅವು ಅನೇಕ ತಿಂಗಳಿನಿಂದ ಇತ್ಯರ್ಥ ಕಾಣದೆ ಪತ್ರಕರ್ತರು ಅದರಲ್ಲೂ ನಿವೃತ್ತ ನೌಕರರು ತೀವ್ರ ಆರ್ಥಿಕ ಸಮಸ್ಯೆಗೆ ತುತ್ತಾಗಿರುವ ಸಂಗತಿಯನ್ನು ನಿಯೋಗ ಸಚಿವರ ಗಮನಕ್ಕೆ ತಂದಿತು. ಅನೇಕ ಪತ್ರಕರ್ತರು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯಿಂದ ಬಂದ ಡಿಮ್ಯಾಂಡ್ ನೋಟ್ ಅನುಸಾರ ಹೆಚ್ಚುವರಿ ಮೊತ್ತವನ್ನು ಜನವರಿ ತಿಂಗಳಲ್ಲೇ ಪಾವತಿ ಮಾಡಿದ್ದಾರೆ, ಇದುವರೆವಿಗೂ ಇದು ಇತ್ಯರ್ಥವಾಗಿಲ್ಲ. ಆರು ತಿಂಗಳಿನಿಂದ ಕಟ್ಟಿದ ದುಡ್ಡಿಗೆ ಬಡ್ಡಿಯೂ ಇಲ್ಲ ಹೆಚ್ಚಿನ ಪೆನ್ಷನ್ನೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ನಿಯೋಗ ವಾಸ್ತವ ಚಿತ್ರಣವನ್ನು ಸಚಿವರ ಮುಂದೆ ತೆರೆದಿಟ್ಟಿತು. ಈ ಸಮಸ್ಯೆಗೆ ಕೂಡಲೇ ಸ್ಪಂದಿಸಿದ ಸಚಿವೆ ಶೋಭಾ ಕರಂದ್ಲಾಜೆ , ಈಗಾಗಲೇ ಡಿಮಾಂಡ್ ನೋಟ್ ವಿತರಿಸಿ ಹಣ ಕಟ್ಟಿಸಿಕೊಂಡ ಉದ್ಯೋಗಿಗಳ ಅರ್ಜಿಯನ್ನು ಕೂಡಲೇ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇನ್ನು ಕೆಲವು ಸಂಸ್ಥೆಗಳ ಭವಿಷ್ಯ ನಿಧಿಯನ್ನು ಆಯಾ ಸಂಸ್ಥೆಗಳ ಟ್ರಸ್ಟ್ ಗಳೇ ನಡೆಸುತ್ತಿದ್ದು ತಾಂತ್ರಿಕ ಕಾರಣದ ಮೇಲೆ ಇಂಥ ಅರ್ಜಿಗಳು ತಿರಸ್ಕಾರ ಗೊಂಡಿರುವ ಸಂಗತಿಯನ್ನು ಸಚಿವರ ಗಮನಕ್ಕೆ ತರಲಾಯಿತು. ಈ ವಿಷಯ ಸರ್ಕಾರದ ಮಟ್ಟದಲ್ಲಿ ಈಗಾಗಲೇ ಚರ್ಚೆಯಲ್ಲಿದ್ದು ಅತಿ ಶೀಘ್ರದಲ್ಲೇ ಪರಿಹಾರ ಹುಡುಕುವ ಭರವಸೆ ನೀಡಿದರು.
ನಿಯೋಗದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ, ಹಿರಿಯ ಪತ್ರಕರ್ತರಾದ , ಶ್ರೀವತ್ಸ ನಾಡಿಗ್, ನೆತ್ತನಕೆರೆ ಉದಯಶಂಕರ, ಎಂ ನಾಗರಾಜ, ,ಬಿ ಎನ್ ರಾಘವೇಂದ್ರ, ವಾದಿರಾಜ ದೇಸಾಯಿ, ಚಂದ್ರಶೇಖರ ಮತ್ತು ಹನುಮೇಶ್ ಕೆ ಯಾವಗಲ್ ಇದ್ದರು.

ಪ್ರಾಚೀನ ವ್ಯಾಪಾರ ಇತಿಹಾಸ , ಆಧುನಿಕ ಆರ್ಥಿಕ ಸುಧಾರಣೆಗಳೊಂದಿಗೆ ಭಾರತ ಪ್ರಮುಖ ಪಾತ್ರ: ರಾಜ್ಯಪಾಲ ಗೆಹ್ಲೋಟ್


ಬೆಂಗಳೂರು 28.06.2025:
 ಪ್ರಾಚೀನ ವ್ಯಾಪಾರ ಇತಿಹಾಸ ಮತ್ತು ಆಧುನಿಕ ಆರ್ಥಿಕ ಸುಧಾರಣೆಗಳೊಂದಿಗೆ ಭಾರತವು ಇಂದು ವಿಶ್ವ ವ್ಯಾಪಾರ ನಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಬೆಂಗಳೂರಿನಲ್ಲಿ ಗ್ಲೋಬಲ್ ಇಂಡಿಯಾ ಬಿಸಿನೆಸ್ ಫೋರಮ್ ಆಯೋಜಿಸಿದ್ದ ಭಾರತ-ಏಷ್ಯಾ ಮತ್ತು ಯುರೋಪ್ ವ್ಯಾಪಾರ ಸಮಾವೇಶ ಮತ್ತು ಬ್ಯುಸಿನೆಸ್ ಎಕ್ಸಲೆನ್ಸ್ ಪ್ರಶಸ್ತಿ- 2025 ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ಮೇಕ್ ಇನ್ ಇಂಡಿಯಾ”, “ಸ್ಟಾರ್ಟ್ಅಪ್ ಇಂಡಿಯಾ”, “ಡಿಜಿಟಲ್ ಇಂಡಿಯಾ” ನಂತಹ ಯೋಜನೆಗಳು ಹೊಸ ಬೆಳವಣಿಗೆಯ ಅಲೆಯನ್ನು ಸೃಷ್ಟಿಸಿವೆ ಮತ್ತು ಯುವಕರು ಸ್ವಾವಲಂಬಿಗಳಾಗಲು ಸ್ಫೂರ್ತಿ ನೀಡಿವೆ ಮತ್ತು ಜಾಗತಿಕ ಹೂಡಿಕೆದಾರರ ಗಮನವನ್ನು ಸೆಳೆದಿವೆ.  ಭಾರತದಲ್ಲಿ 6 ಕೋಟಿಗೂ ಹೆಚ್ಚು MSME ಘಟಕಗಳಿವೆ, ಇದು ದೇಶದ GDP ಗೆ ಸುಮಾರು 30 ಪ್ರತಿಶತ ಮತ್ತು ರಫ್ತಿಗೆ 45 ಪ್ರತಿಶತಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ. ಈ ವಲಯವು ಉತ್ಪಾದನೆಯ ಜೊತೆಗೆ ಉದ್ಯೋಗ, ನಾವೀನ್ಯತೆ ಮತ್ತು ಸ್ವಾವಲಂಬನೆಯ ಮೂಲವಾಗಿದೆ” ಎಂದರು.

“”ಭಾರತದ ಆರ್ಥಿಕ ಬೆಳವಣಿಗೆ ದರ, ಡಿಜಿಟಲ್ ರೂಪಾಂತರ, ನವೋದ್ಯಮ ಕ್ರಾಂತಿ ಮತ್ತು ಹಸಿರು ಇಂಧನಕ್ಕೆ ಬದ್ಧತೆಯು ದೇಶದೊಳಗೆ ಪರಿವರ್ತನೆಯನ್ನು ತಂದಿದೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಭಾರತವನ್ನು ಜಾಗತಿಕ ವೇದಿಕೆಗಳಲ್ಲಿ ಸ್ಥಾಪಿಸಿದೆ. ಡಿಜಿಟಲ್ ತಂತ್ರಜ್ಞಾನ, ಸುಲಭ ಹಣಕಾಸು ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಪ್ರವೇಶದೊಂದಿಗೆ MSME ಗಳನ್ನು ಸಬಲೀಕರಣಗೊಳಿಸುವುದು ಇಂದಿನ ಅಗತ್ಯವಾಗಿದೆ. ಜಾಗತಿಕ ವೇದಿಕೆಗಳಲ್ಲಿ ಈ ಉದ್ಯಮಗಳಿಗೆ ಇನ್ಕ್ಯುಬೇಷನ್, ತರಬೇತಿ ಮತ್ತು ತಾಂತ್ರಿಕ ನೆಟ್‌ವರ್ಕಿಂಗ್ ಅನ್ನು ಉತ್ತೇಜಿಸುವುದು ಈ ಸಮಯದ ಅಗತ್ಯವಾಗಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿದೆ. ಎಐ, ಫಿನ್‌ಟೆಕ್, ಹೆಲ್ತ್ ಟೆಕ್, ಅಗ್ರಿಟೆಕ್ ನಂತಹ ಪ್ರತಿಯೊಂದು ಕ್ಷೇತ್ರದಲ್ಲಿಯೂ ಯುವಕರ ಸೃಜನಶೀಲತೆ ಮತ್ತು ನಾವೀನ್ಯತೆ ನಮಗೆ ವಿಶ್ವದಲ್ಲಿ ವಿಶಿಷ್ಟ ಗುರುತನ್ನು ನೀಡಿದೆ. ಟೆಕ್ ಸ್ಟಾರ್ಟ್ಅಪ್‌ಗಳು ಉದ್ಯೋಗಗಳನ್ನು ಸೃಷ್ಟಿಸುವುದಲ್ಲದೆ, ತಾಂತ್ರಿಕ ದೃಷ್ಟಿಕೋನದಿಂದ ಸಮಸ್ಯೆಗಳಿಗೆ ಪರಿಹಾರಗಳನ್ನು ಸಹ ಒದಗಿಸುತ್ತಿವೆ – ಅದು ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನವಾಗಿರಬಹುದು, ಆರೋಗ್ಯ ರಕ್ಷಣೆಯಲ್ಲಿ ಡಿಜಿಟಲ್ ಡಯಾಗ್ನೋಸ್ಟಿಕ್ಸ್ ಆಗಿರಬಹುದು ಅಥವಾ ಶಿಕ್ಷಣದಲ್ಲಿ ರಿಮೋಟ್ ಲರ್ನಿಂಗ್ ಪ್ಲಾಟ್‌ಫಾರ್ಮ್‌ಗಳಾಗಿರಬಹುದು” ಎಂದು ಹೇಳಿದರು.

“ಈ ನವೋದ್ಯಮಗಳನ್ನು MSME ಗಳೊಂದಿಗೆ ಸಂಪರ್ಕಿಸಿದರೆ, ಭಾರತವನ್ನು ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವ ಬಲವಾದ, ತಾಂತ್ರಿಕವಾಗಿ ಸಮರ್ಥ ಮತ್ತು ಸ್ಥಿತಿಸ್ಥಾಪಕ ಉದ್ಯಮ ಪರಿಸರ ವ್ಯವಸ್ಥೆಯನ್ನು ರಚಿಸಬಹುದು. ಇಡೀ ಜಗತ್ತು ಹವಾಮಾನ ಬದಲಾವಣೆ ಮತ್ತು ಪರಿಸರ ಅಸಮತೋಲನದಿಂದ ಹೋರಾಡುತ್ತಿರುವಾಗ, ಹಸಿರು ಆರ್ಥಿಕತೆಯು ನಮ್ಮ ಉತ್ತರವಾಗಿದೆ. ನವೀಕರಿಸಬಹುದಾದ ಇಂಧನ, ವೃತ್ತಾಕಾರದ ಆರ್ಥಿಕತೆ, ವಿದ್ಯುತ್ ಚಲನಶೀಲತೆ ಮತ್ತು ಇಂಗಾಲ ತಟಸ್ಥ ಉತ್ಪಾದನಾ ವಲಯಗಳು ಪರಿಸರವನ್ನು ರಕ್ಷಿಸುವುದರ ಜೊತೆಗೆ ಹೊಸ ವ್ಯಾಪಾರ ಅವಕಾಶಗಳನ್ನು ತೆರೆಯುತ್ತಿವೆ. ಭಾರತದ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್, ಸೌರ ಮೇಲ್ಛಾವಣಿ ಯೋಜನೆಗಳು ಮತ್ತು ಶುದ್ಧ ಇಂಧನದಲ್ಲಿನ ಹೂಡಿಕೆಗಳು ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಜವಾಬ್ದಾರಿ ಪರಸ್ಪರ ಪೂರಕವಾಗಿವೆ ಎಂಬುದನ್ನು ಸಾಬೀತುಪಡಿಸಿವೆ” ಎಂದು ತಿಳಿಸಿದರು.

“ಆರ್ಥಿಕತೆಯ ಬಲವು ಈಗ ಹಸಿರು ನೀತಿಯೊಂದಿಗೆ ಸಂಬಂಧ ಹೊಂದಿದೆ ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು. ಗಡಿಗಳು ಭೌಗೋಳಿಕವಲ್ಲ, ಬದಲಾಗಿ ವಿಚಾರಗಳೇ ಆಗಿರುವ ಯುಗವನ್ನು ನಾವು ಪ್ರವೇಶಿಸಿದ್ದೇವೆ. ಇಂದು ಭಾರತ ಜಾಗತಿಕ ವೇದಿಕೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ಭಾರತವು ಜಾಗತಿಕ ವೇದಿಕೆಯಲ್ಲಿ ಒಂದು ದೊಡ್ಡ ಮಾರುಕಟ್ಟೆಯಾಗಿ, ವಿಶ್ವಾಸಾರ್ಹ ಪಾಲುದಾರನಾಗಿ, ನಾವೀನ್ಯಕಾರನಾಗಿ ಮತ್ತು ನಾಯಕನಾಗಿ ಹೊರಹೊಮ್ಮಿದೆ” ಎಂದರು.

ಈ ಸಮ್ಮೇಳನದಲ್ಲಿ ವಿವಿಧ ದೇಶಗಳ ರಾಯಭಾರಿಗಳು ಮತ್ತು ಪ್ರತಿನಿಧಿಗಳ ಉಪಸ್ಥಿತರಿದ್ದಾರೆ. ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಸಮೃದ್ಧ, ಸಹಕಾರಿ ಮತ್ತು ಸುಸ್ಥಿರ ಅಭಿವೃದ್ಧಿಯ ಭವಿಷ್ಯದತ್ತ ನಾವು “ವಾಸುದೇವ್ ಕುಟುಂಬಕಂ” ತತ್ವದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂಬುದಕ್ಕೆ ಈ ಸಮ್ಮೇಳನ ಸಾಕ್ಷಿಯಾಗಿದೆ. ಗ್ಲೋಬಲ್ ಇಂಡಿಯಾ ಬಿಸಿನೆಸ್ ಫೋರಮ್ ಜಾಗತಿಕ ವ್ಯಾಪಾರ ಸಹಯೋಗ, ನಾವೀನ್ಯತೆ ಮತ್ತು ಸಮಗ್ರ ಬೆಳವಣಿಗೆಗೆ ಪ್ರಬಲ ವೇದಿಕೆಯನ್ನು ಒದಗಿಸುತ್ತಿದೆ. ಜಾಗತಿಕ ಭಾರತ ವ್ಯಾಪಾರ ವೇದಿಕೆಯ ಮೂಲಕ ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿರುವ MSME ವಲಯದ ಅಭಿವೃದ್ಧಿಗೆ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಆರ್ಥಿಕ ರಾಜತಾಂತ್ರಿಕತೆಯನ್ನು ಉತ್ತೇಜಿಸುತ್ತಿರುವುದು ಪ್ರಶಂಸನೀಯ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಡಾ. ಜಿತೇಂದ್ರ ಜೋಶಿ, ಶ್ರೀಮತಿ ದೀಪಾಲಿ ಗಡ್ಕರಿ ಸೇರಿದಂತೆ ಮುಂತಾದ ಗಣ್ಯರು ಹಾಜರಿದ್ದರು.

ತಿಪ್ಪಗೊಂಡನಹಳ್ಳಿ ಜಲಾಶಯ ರಕ್ಷಿಸಿ ಬೆಂಗಳೂರಿನ ಉಳಿಸಿ ವಿಚಾರ ಸಂಕಿರಣದ ಮುಖ್ಯಾಂಶಗಳು

ಬೆಂಗಳೂರು ಜಲ ಮಂಡಳಿ ನಿವೃತ್ತ ಅಭಿಯಂತರ ಎಂ. ಎನ್. ತಿಪ್ಪೇಸ್ವಾಮಿಯವರು ಬೆಂಗಳೂರಿನ ನೀರಿನ ಸರಬರಾಜು ವಿಚಾರವಾಗಿ ಮಾತನಾಡಿದರು. 3000 ಅಡಿಗಳಷ್ಟು ಎತ್ತರವಿರುವ ಬೆಂಗಳೂರಿಗೆ ನೀರನ್ನು ಪೂರೈಸಲು ಅಂದಿನ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ರವರು 1860ನೇ ಇಸವಿಯಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿ ಹೆಸರಘಟ್ಟದಲ್ಲಿ ಜಲಾಶಯವನ್ನು ನಿರ್ಮಿಸಿದರು. ಆಗಿನ ಸಂದರ್ಭದಲ್ಲಿ ವಿದ್ಯುತ್ ಇರಲಿಲ್ಲ ಆದುದರಿಂದ ಟ್ಯಾಂಕುಗಳಲ್ಲಿ ಬೆಂಗಳೂರಿಗೆ ನೀರನ್ನು ಸರಬರಾಜ ಮಾಡುವ ವ್ಯವಸ್ಥೆಯನ್ನು ಮಾಡುತ್ತಿದ್ದರು.

1920 ನೇ ಇಸವಿಯಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರ ನೇತೃತ್ವದ ಸಮಿತಿಯು ಅರ್ಕಾವತಿ ನದಿಗೆ ಅಡ್ಡಲಾಗಿ ತಿಪ್ಪಗೊಂಡನಹಳ್ಳಿಯಲ್ಲಿ ಜಲಾಶಯವನ್ನು ನಿರ್ಮಿಸಬೇಕೆಂದು ತೀರ್ಮಾನಿಸಿದರು. ನಂತರ 1930 ನೇ ಇಸವಿಯಲ್ಲಿ ತಿಪ್ಪಗೊಂಡನ ಹಳ್ಳಿ ಜಲಾಶಯ ನಿರ್ಮಾಣವಾಯಿತು. ಅರ್ಕಾವತಿ ನದಿಯಿಂದ 150 ಎಂಎಲ್‌ಡಿ ಹಾಗೂ ಹೆಸರಘಟ್ಟ ಜಲಾಶಯದಿಂದ 50 ಎಂಎಲ್‌ಡಿ ನೀರುನ್ನು ಸಂಗ್ರಹಿಸುವ ಸಾಮರ್ಥ್ಯ ಈ ಜಲಾಶಯಕ್ಕೆ ಇತ್ತು.

1974ರಲ್ಲಿ ಕಾವೇರಿ ಮೊದಲನೇ ಹಂತದ ಯೋಜನೆ ಆರಂಭವಾಗಿ ಬೆಂಗಳೂರಿಗೆ ನೀರಿನ ಸರಬರಾಜು ಮಾಡುವ ವ್ಯವಸ್ಥೆ ಆಯಿತು. ಬಿಡಬ್ಲಿಎಸ್‌ಎಸ್‌ಪಿ ಸಂಸ್ಥೆಯಿಂದ ಪ್ರತಿ ವರ್ಷವೂ ತೆಪ್ಪೋತ್ಸವವನ್ನು ಸಹ ಮಾಡಲಾಗುತ್ತಿತ್ತು. 1990 ರಿಂದ ಜಲಾಶಯವು ಸಂಪೂರ್ಣ ಬತ್ತಿ ಹೋಗಿ ಕುಡಿಯಲು ನೀರಿಗೆ ಯೋಗ್ಯವಿಲ್ಲವೆಂದು ತೀರ್ಮಾನಿಸಿದ್ದಾರೆ.

ಆದರೆ ಟಿ.ಜಿ .ಹಳ್ಳಿ ಜಲಾಶಯದಿಂದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆಯಲ್ಲಿ ಅತ್ಯಂತ ಕಡಿಮೆ ಖರ್ಚು ಬರುತ್ತದೆ. ಆದರೆ ಕಾವೇರಿಕೊಳ್ಳದಿಂದ ನೀರು ಹರಿಸುವ ಯೋಜನೆಗೆ ಅತ್ಯಂತ ದುಬಾರಿಯಾಗಿದೆ.

ಬೆಂಗಳೂರಿನ ನೀರು ಸರಬರಾಜು ಅವಶ್ಯಕತೆ 1950 ಎಂ.ಎಲ್. ಡಿ ಅಷ್ಟು ಇದೆ. ಆದರೆ ಇದೀಗ 110 ಹಳ್ಳಿಗಳಿಗೆ ಪೂರೈಸಲು ಸಿದ್ಧವಾಗಿರುವ ಕಾವೇರಿ 5 ನೆ ಹಂತದ ಯೋಜನೆಯಲ್ಲಿ ಕೇವಲ 750 ಎಂಎಲ್‌ಡಿ ಯಷ್ಟು ಮಾತ್ರ ಸರಬರಾಜು ಮಾಡುವ ಸಾಮರ್ಥ್ಯ ಇದೆ.

ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಪುನರುಜ್ಜೀವಗೊಳಿಸಲು ಈಗಾಗಲೇ 2000ನೇ ಇಸವಿಯಲ್ಲಿ ಇಸ್ರೋ ಸಂಸ್ಥೆಯಿಂದ, ATREE ,EMPR, BWSSB ಸಂಸ್ಥೆಗಳಿಂದ ಸವಿಸ್ತಾರವಾದಂತಹ ವರದಿಯನ್ನು ಈಗಾಗಲೇ ಕೊಟ್ಟಿದ್ದಾರೆ ಆದರೂ ಸಹ ಸರ್ಕಾರ ಈ ಜಲಾಶಯದ ಪುನರುಜ್ಜೀವನಕ್ಕೆ ಯಾವುದೇ ಯೋಜನೆಯನ್ನು ಇಲ್ಲಿಯವರೆಗೂ ಮಾಡದಿರುವುದು ನಿಜಕ್ಕೂ ಬೆಂಗಳೂರಿಗೆ ಮಾಡುತ್ತಿರುವ ಅನ್ಯಾಯವೇ ಸರಿ.

ಭವಿಷ್ಯದ ಎತ್ತಿನಹೊಳೆ ಯೋಜನೆಯಲ್ಲಿ ಟಿ.ಜಿ.ಹಳ್ಳಿ ಜಲಾಶಯಕ್ಕೆ 3 ಟಿಎಂಸಿ ಹೆಸರುಘಟ್ಟ ಜಲಾಶಯಕ್ಕೆ 1 ಟಿಎಂಸಿ ನೀರನ್ನು ತಲುಪಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ದಶಕಗಳಿಂದ ಯೋಜನೆ ನೆನೆಗುದಿಯಲ್ಲೇ ಬಿದ್ದಿದೆ.

2050ನೇ ಇಸವಿಗೆ ಬೆಂಗಳೂರಿನ ಜನಸಂಖ್ಯೆ 20.96 ಮಿಲಿಯನ್ ನಷ್ಟು ಆಗುವ ಅಂದಾಜಿದೆ. ಇವುಗಳಿಗೆ ಪೂರಕವಾದಂತಹ ಯಾವುದೇ ಯೋಜನೆಗಳು ಇನ್ನು ಸರ್ಕಾರ ಕೈಗೊಳ್ಳದಿರುವುದು ಎದ್ದು ಕಾಣುತ್ತಿದೆ.

ಶ್ರೀಮತಿ ಕ್ಯಾತ್ಯಾಯಿನಿ, ನಾಗರಿಕ ಹೋರಾಟಗಾರರು ಮತ್ತು ಪತ್ರಕರ್ತರು

ಬೆಂಗಳೂರಿನ ಸ್ಥಳೀಯ ಆಡಳಿತವನ್ನು ನಡೆಸಲು ಬಿಬಿಎಂಪಿಯನ್ನು ರದ್ದುಗೊಳಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚಿಸುವ ಸಂದರ್ಭದಲ್ಲಿ ನಮ್ಮೆಲ್ಲರ ಒತ್ತಾಯದ ಫಲವಾಗಿ ನಾಮಕಾವಸ್ತೆಯಾಗಿ.  ಮಹಾನಗರ ಯೋಜನಾ ಸಮಿತಿಯನ್ನು ಸೇರಿಸಿದರು. ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಈ ಯೋಜನಾ ಸಮಿತಿಯು ಕಾಲಕಾಲಕ್ಕೆ ನೀಡುವ ವರದಿಯ ಅನುಸಾರ ಬೆಂಗಳೂರಿನ ಅಭಿವೃದ್ಧಿ ಆಗಬೇಕಿದೆ. ಈ ಸಮಿತಿಯ ಮೂಲ ಆಶಯವೇನೆಂದರೆ ಯಾವುದೇ ನಗರಗಳು ಅಭಿವೃದ್ಧಿಗೊಳ್ಳಬೇಕಾದರೆ ಆ ನಗರಕ್ಕೆ ನೀರಿನ ಲಭ್ಯತೆಯ ಸಾಮರ್ಥ್ಯದ ಮೇಲೆ ಅಭಿವೃದ್ಧಿ ಆಗಬೇಕಿದೆ. ಆದರೆ ಬೆಂಗಳೂರಿನ ನೀರಿನ ಲಭ್ಯತೆಯ ವಿರುದ್ಧ ದಿಕ್ಕಿನಲ್ಲಿ ಬೆಂಗಳೂರನ್ನು ಅಭಿವೃದ್ಧಿಪಡಿಸುತ್ತಿರುವುದು ರಾಜಕಾರಣಿಗಳ ದುರಾಸೆಯ ಪರಮಾವಧಿಯಾಗಿದೆ. ಬಿ ಎಂ ಆರ್ ಡಿ ಎ ಸಂಸ್ಥೆಯ ಸ್ಥಾಪನೆಯ ಉದ್ದೇಶವು ಸಹ ಇದೇ ಆಗಿರುತ್ತದೆ.

ಪದೇ ಪದೇ ಕಾವೇರಿ ನೀರಿನಿಂದ ಮಾತ್ರ ಬೆಂಗಳೂರಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆಯು ಕಡಿಮೆಯಾಗಬೇಕಿದೆ. ಕಾವೇರಿ ನೀರಿನ ಮೇಲಿನ ಅವಲಂಬನೆ ಕಡಿಮೆಯಾಗಬೇಕಿದೆ. ಮುಖ್ಯಮಂತ್ರಿಗಳ ನೇತೃತ್ವದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿಜಕ್ಕೂ ಸ್ಥಳೀಯ ಆಡಳಿತಕ್ಕೆ ನೀಡುವ ಪೆಟ್ಟಾಗಿದೆ. ಇದರ ವಿರುದ್ಧ ನಾವೆಲ್ಲರೂ ಹೋರಾಡಬೇಕಿದೆ.

ವಿಶ್ವನಾಥ್, ಮಳೆ ನೀರು ತಜ್ಞರು

ಸಭೆಯಲ್ಲಿ ಭಾಗವಹಿಸಿದ್ದ ಶ್ರೀಯುತರು ಮಾತನಾಡಿ ಬೆಂಗಳೂರು ನಗರಕ್ಕೆ ನೀರಿನ ನೀತಿ ಯನ್ನು ಕೂಡಲೇ ಜಾರಿಗೊಳಿಸ ಬೇಕು. ಬೆಂಗಳೂರಿನ ಕಾಲು ಭಾಗ ಮಾತ್ರ ಕಾವೇರಿ ನದಿಯನ್ನು ಆಶ್ರಯಿಸಬೇಕು. ಮುಕ್ಕಾಲು ಭಾಗ ಬೆಂಗಳೂರಿಗೆ ದಕ್ಷಿಣ ಪಿನಾಕಿನಿ ಹಾಗೂ ಸ್ಥಳೀಯ ಕೆರೆಗಳು, ಬಾವಿ ಗಳಿಂದ , ಅಂತರ್ಜಲ ವ್ಯವಸ್ಥೆಗಳಿಂದ ನೀರನ್ನು ಸ್ವಯಂ ನಾವೇ ಪೂರೈಕೆ ಮಾಡಿಕೊಳ್ಳಬಹುದಾಗಿದೆ.

ಬೆಂಗಳೂರು ನಗರದಲ್ಲಿ 3000 ದಶಲಕ್ಷ ಲೀಟರ್ ಮಳೆ ನೀರಿನಿಂದ ಸಂಗ್ರಹವಾದರೆ, ಕಾವೇರಿಯಿಂದ ಕೇವಲ 2050 ದಶಕ ನೀರು ಸಂಗ್ರಹಣೆಯಾಗುತ್ತದೆ. ಮನೆಗಳ ಛಾವಣಿಗಳ ಮೇಲೆ, ಬಾವಿಗಳು, ಇಂಗು ಬಾವಿಗಳು, 186 ಕೆರೆಗಳ ಪುನರುಜ್ಜೀವನ ದಂತಹ ಮಳೆ ನೀರಿನ ಸಂಗ್ರಹಣೆ ವ್ಯವಸ್ಥೆಯನ್ನು ವೃದ್ಧಿಗೊಳಿಸಿಕೊಂಡರೆ ನೀರು ಪೂರೈಕೆ ಸಮಸ್ಯೆ ಆಗುವುದಿಲ್ಲ. ಆಗಲೇ ಬೆಂಗಳೂರಿ ನಗರದಲ್ಲಿ 5 ಲಕ್ಷ ಬೋರ್ ವೆಲ್ ಗಳು ಇವೆ. ಇವುಗಳಿಂದ 8000 ದಶಲಕ್ಷ ಲೀಟರ್ ಗಳಷ್ಟು ನೀರು ಪೂರೈಕೆ ಆಗುತ್ತಿದೆ.

ಬಾವಿಗಳನ್ನು ಅಗೆಯುವುದರಲ್ಲಿ ಅತ್ಯಂತ ನಿಪುಣರಾಗಿರುವ ಬೋವಿ ಜನಾಂಗದವರಿಗೆ ಹೆಚ್ಚಿನ ನೆರವು ಹಾಗೂ ಪ್ರೋತ್ಸಾಹವನ್ನು ನೀಡುವ ಮೂಲಕ 10 ಲಕ್ಷ ಬಾವಿಗಳನ್ನು ನಗರದಲ್ಲಿ ತೊಡಬಹುದಾಗಿದೆ. ಬೆಂಗಳೂರು ನಗರದಲ್ಲಿ ಈಗಾಗಲೇ ಈ ಜನಾಂಗದವರಿಂದ 3 ಲಕ್ಷ ಬಾವಿಗಳ ನಿರ್ಮಾಣವಾಗಿದೆ. ನಿಜಕ್ಕೂ ಇವರುಗಳೇ ನಿಜವಾದ ಆಧುನಿಕ ಭಗೀರಥರು ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ನೀರಿನ ಸಂಬಂಧವನ್ನು ಪ್ರತಿಯೊಬ್ಬರು ಹೆಚ್ಚಿಸಿಕೊಳ್ಳಬೇಕಾಗಿದೆ.

ಸ್ಥಳೀಯ ಆಡಳಿತಗಳು ನೀರಿನ ಸಂಗ್ರಹಣ ವ್ಯವಸ್ಥೆಗೆ ಹೆಚ್ಚಿನ ಬಂಡವಾಳವನ್ನು ಹೂಡಬೇಕಿದೆ. ನದಿ ಸಂರಕ್ಷಣೆಯಲ್ಲಿ ಕೇವಲ ನಗರವಾಸಿಗಳ ಕುಡಿಯುವ ನೀರನ್ನು ನೆಪವಾಗಿಟ್ಟುಕೊಳ್ಳಬಾರದು ಜೊತೆ ಜೊತೆಗೆ ಜೀವಸಂಕುಲಯಗಳು ಹಾಗೂ ರೈತರಿಗೆ ನೀರನ್ನು ಸರಪರಾಜುವ ಮಾಡುವ ಗುರಿಯನ್ನು ಸಹ ಇಟ್ಟುಕೊಳ್ಳಬೇಕಿದೆ.

ಪ್ರತಿಯೊಂದು ನದಿಗಳ ಸಂರಕ್ಷಣೆಗಾಗಿ ಜಲಾನಯನ ಸಂರಕ್ಷಣ ಸಂಸ್ಥೆಗಳನ್ನು( River basin institution )ನಿರ್ಮಾಣ ಮಾಡಬೇಕಿದೆ. ಇವುಗಳಿಗೆ ಕಾನೂನಿನ ಪರಮಾಧಿಕಾರವನ್ನು ನೀಡಬೇಕು. ನದಿಗಳನ್ನು ಕಾಪಾಡಬಹುದು. ಕೇವಲ ಬೆಂಗಳೂರು ಜಲ ಮಂಡಳಿ ಹಾಗೂ ಪರಿಸರ ಮಾಲಿನ್ಯ ಮಂಡಳಿಗಳಿಗೆ ಇವುಗಳ ಜವಾಬ್ದಾರಿಯನ್ನು ವಹಿಸುವುದು ಸೂಕ್ತವಲ್ಲ.

ರಾಮ್ ಪ್ರಸಾದ್, ಕೆರೆ ಹಾಗೂ ಪರಿಸರ ಹೋರಾಟಗಾರರು

ಶ್ರೀಯುತರು ಸಭೆಯಲ್ಲಿ ಮಾತನಾಡಿ ಈಗಾಗಲೇ ನ್ಯಾಯಾಲಯಗಳು ಸರ್ಕಾರದ ನೀತಿಗಳ ವಿರುದ್ಧ ಅನೇಕ ಬಾರಿ ಮಾತನಾಡಿದ್ದಾರೆ. ಇತ್ತೀಚಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮಸೂದೆಯಲ್ಲಿ ಕೆರೆಗಳನ್ನು ಸಂರಕ್ಷಿಸುವ 62 ನಾಗರಿಕ ಗುಂಪುಗಳನ್ನು ಸಂಪೂರ್ಣ ಹೊರಗಿಟ್ಟಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ನಾಗರೀಕರ ಸಹಭಾಗಿತ್ವಕ್ಕೆ ನೂತನ ಮಸೂದೆಯಲ್ಲಿ ಉದ್ದೇಶಪೂರ್ವಕವಾಗಿ ಮಟಕುಗೊಳಿಸಿರುವುದು ಎದ್ದು ಕಾಣುತ್ತದೆ.

ಈಗಾಗಲೇ 19 ಕೆರೆಗಳನ್ನು ಸತ್ತ ಕೆರೆ (Dead lake)ಗಳೆಂದು ಸರ್ಕಾರವು ಘೋಷಿಸಿದೆ. ಇವುಗಳ ಪುನರ್ಜೀವಕ್ಕೆ ಯಾವುದೇ ಆಸ್ಪದವನ್ನು ನೀಡದೆ ಅನ್ಯ ಉದ್ದೇಶಗಳಿಗಾಗಿ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ಇತ್ತೀಚಿನ ಸರ್ವೋಚ್ಚ ನ್ಯಾಯಾಲಯದ ತೀರ್ಪು ಸಹ ಇವರುಗಳ ಪರವಾಗಿಯೇ ಇದೆ.

ತಿಪ್ಪಗೊಂಡನಹಳ್ಳಿಯ ಅಚ್ಚುಕಟ್ಟು ಪ್ರದೇಶವನ್ನು 2 ಕಿಲೋಮೀಟರ್ ಗಳಿಂದ ಕೇವಲ 30 ಮೀಟರ್ ಗೆ ಇಳಿಸಿರುವುದು ದುರಂತದ ಸಂಗತಿ. ಕಾನೂನಿನ ಪ್ರಕಾರ ಬಫರ್ ವಲಯ ಕೇವಲ 30 ಮೀಟರ್ ಮಾತ್ರ ಇರುತ್ತದೆ. ಆದರೆ ಇದು ಬಫರ್ ವಲಯ ಅಲ್ಲ. ಇದು ಸಂಪೂರ್ಣ ಜಲಾನಯನದ ಅಚ್ಚುಕಟ್ಟು ಪ್ರದೇಶ. ಇವುಗಳನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.

ಕೆಲ ಸ್ಥಳೀಯ ರೈತರುಗಳು ಈ ಅಚ್ಚುಕಟ್ಟು ಪ್ರದೇಶದಿಂದ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಪದೇ ಪದೇ ದೂರುತ್ತಿದ್ದಾರೆ. ಆದರೆ ಈ ಪ್ರದೇಶದಲ್ಲಿಯೂ 5 ವಲಯಗಳಾಗಿ ವಿಂಗಡಿಸಿ ಹಸಿರು ಕೈಗಾರಿಕೆಗಳು, ವ್ಯವಸಾಯ ಚಟುವಟಿಕೆಗಳನ್ನು ಮಾಡಲು ಅನುವು ಮಾಡಿಕೊಡಲಾಗಿದೆ. ಆದರೆ ಸರ್ಕಾರದಿಂದ ಈ ರೀತಿಯ ಅಭಿವೃದ್ಧಿ ಕೆಲಸಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲ.

ಅಭಿವೃದ್ಧಿಯೆಂದರೆ ಕೇವಲ ದೊಡ್ಡ ದೊಡ್ಡ ಕಂಪನಿಗಳಿಗೆ ಖಾಸಗಿ ಬಿಲ್ಡರ್ ಗಳಿಗೆ ಜಮೀನುಗಳನ್ನು ನೀಡಿದರೆ ಅಭಿವೃದ್ಧಿ ಸಾಧ್ಯವಿಲ್ಲ. ಈ ಜಲಾನಯನದ ಅಚ್ಚುಕಟ್ಟು ಪ್ರದೇಶವು ಪ್ರವಾಹ ಪೀಡಿತ ವಲಯವೆಂದು ಈಗಾಗಲೇ ತೀರ್ಮಾನಿಸಲಾಗಿದೆ.

ಮಾನ್ಯತಾ ಟೆಕ್ ಪಾರ್ಕ್, ಬಿಟಿಎಂ ಬಡಾವಣೆ , ರೈನ್ ಬೋ ಅಪಾರ್ಟ್ ಮೆಂಟ್ ಸಂಪೂರ್ಣ ಜವಲಾವೃತವಾಗಲು ಮಡಿವಾಳ ಕೆರೆ,ಹಾಲನಾಯಕನ ಹಳ್ಳಿ ಕೆರೆಯ ಜಲಾನಯನ ಪ್ರದೇಶವನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಅಭಿವೃದ್ಧಿ ಪಡಿಸಿದ್ದೆ ಪ್ರಮುಖ ಕಾರಣವಾಗಿದೆ.
ಈ ಜಲಾನಯನ ಪ್ರದೇಶಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಂದ ಸರ್ಕಾರಕ್ಕೆ ಹೇಳಲು ಮನಸ್ಸಿಲ್ಲ. ಭೂಕಬಳಿಗೆ ಸಾಕಷ್ಟು ಕಷ್ಟವಾಗುತ್ತದೆ.

ಸರ್ಕಾರಗಳಿಗೆ ನಗರ ಪ್ರದೇಶಗಳು ಪ್ರವಾಹ ಪೀಡಿತವಾದರೆ ಕೂಡಲೇ ವಿಶ್ವ ಬ್ಯಾಂಕಿನ ಸಾವಿರಾರು ಕೋಟಿ ಹಣ ಲಪಟಾಯಿಸುವ ಉನ್ನಾರವನ್ನು ನಡೆಸುತ್ತಿದ್ದಾರೆ. ಈಗಾಗಲೇ 3600 ಕೋಟಿ ರೂಪಾಯಿಗಳನ್ನು ಲಪಟಾಯಿಸಿದ್ದಾರೆ.

ಎತ್ತಿನ ಹೊಳೆ ಯೋಜನೆ 2 ಸಾವಿರ ಕೋಟಿಗಿಂತ 26 ಸಾವಿರ ಕೋಟಿಗೆ ತಲುಪಿದರು ಮುಗಿಯುವ ಹೊತ್ತಿಗೆ ಮತ್ತಷ್ಟು ಸಾವಿರಾರು ಕೋಟಿ ಖರ್ಚಾಗುವ ಸಾಧ್ಯತೆ ಇದೆ.

ನೂತನವಾಗಿ ನಿರ್ಮಿಸಿರುವ ಶಿವರಾಮ ಕೊರಂಟೈನ್ ಕೆಂಪೇಗೌಡ ಬಡಾವಣೆ ಬಡಾವಣೆಗಳಲ್ಲಿ ಎತ್ತರದ ಪ್ರದೇಶಗಳಲ್ಲಿ ಎಸ್ ಟಿ ಪಿ ಹಾಗೂ ಈ ಟಿ ಪಿ ಯೋಜನೆಗಳನ್ನು ಮಾಡುತ್ತಿದ್ದಾರೆ. ಎತ್ತರದ ಪ್ರದೇಶಗಳಲ್ಲಿ ಮಾಡಿದರೆ ಪಂಪ್ ಮಾಡುತ್ತಾ ಮಾಡುತ್ತಾ ಭ್ರಷ್ಟಾಚಾರ ಮಾಡಬಹುದೆಂಬ ಅತಿಯಾಸೆ ಇಲ್ಲಿನ ಇಂಜಿನಿಯರಿಂಗ್ ಗಳಿಗಿದೆ.

ಸಂವಿಧಾನದ 74ನೆಯ ತಿದ್ದುಪಡಿಯನ್ನು ಸರ್ಕಾರ ಚಾಚು ಸಹ ಪಾಲಿಸದೆ ಸ್ಥಳೀಯ ಆಡಳಿತಗಳಲ್ಲಿ ನಾಗರೀಕರ ಸಹಭಾಗಿತ್ವವನ್ನು ಸಾಯಿಸುವ ಮೂಲಕ ಸಂವಿಧಾನವನ್ನು ಕಗ್ಗೊಲೆ ಮಾಡಿದೆ ಎಂದು ಹೇಳಿದರು.

ರಾಜಕಾರಣಿಗಳು ತಮ್ಮ ಓಟಿಗಾಗಿ ನೀರಿನ ರಾಜಕಾರಣವನ್ನು ಮಾಡುತ್ತಿರುವುದು ನಮ್ಮ ದುರಂತದ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ನಮ್ಮೆಲ್ಲರನ್ನು ನೀರಿನ ಗುಲಾಮರಾಗುವಂತೆ ಮಾಡುತ್ತಿದ್ದಾರೆ.

ನೀರಿನ ಲಭ್ಯತೆಯನ್ನು ರಾಜಕಾರಣಿಗಳ ಕೈಗೆ ನೀಡಿ ನಾಗರಿಕರನ್ನು ಗುಲಾಮರಾಗಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಇವುಗಳೆಲ್ಲವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ ಇವುಗಳ ವಿರುದ್ಧ ಹೋರಾಡಬೇಕಿದೆ ಎಂದರು.

ಸಿಂಹಾದ್ರಿ,  ಪರಿಸರ ಹಾಗೂ ಪ್ರಾಣಿ ಸಂರಕ್ಷಕರು

ತಿಪ್ಪಗೊಂಡನಹಳ್ಳಿ ಜಲಾಶಯ ಪ್ರದೇಶದಲ್ಲಿ ಈ ಮೊದಲು ಆನೆ ಕಾರಿಡಾರ್ ಇತ್ತು.ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲಿನ ಆನೆಗಳು ಸಂಪೂರ್ಣ ಮಾಯವಾಗಿವೆ.
ದೂರ ದೂರದಿಂದ ಬರುವ ಪಕ್ಷಿ ಸಂಕುಲಗಳು ಇತ್ತೀಚಿನ ದಿವಸಗಳಲ್ಲಿ ಬರುತ್ತಿಲ್ಲ. ನೀರು ಕೋಳಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದವು ಅವುಗಳು ಸಹ ನಾಪತ್ತೆಯಾಗಿವೆ. ಮನುಷ್ಯನು ಪ್ರಾಣಿ ಪಕ್ಷಿಗಳ ಸಂಕುಲಗಳಿಗೆ ಸಂಪೂರ್ಣ ಮಾರಣಹೋಮವನ್ನು ಮಾಡಿರುವುದು ಈ ಜಲಾಶಯದ ಸುತ್ತಮುತ್ತ ಎದ್ದು ಕಾಣುತ್ತಿದೆ ಎಂದು ಶ್ರೀಯುತರು ತಿಳಿಸಿದರು.

ಮೂರು ಅಂಶಗಳ ಪ್ರಮುಖ ನಿರ್ಣಯಗಳು

1) ತಜ್ಞರುಗಳ ಸಮಿತಿ ನೇಮಕ

ಜಲಾಶಯವನ್ನು ಉಳಿಸಲು ನಾಗರಿಕರ ಸಹಭಾಗಿತ್ವದಲ್ಲಿ ತಜ್ಞರುಗಳ ಸಮಿತಿಯನ್ನು ನೇಮಿಸಬೇಕು. ಸಮಿತಿಯ ಶಿಫಾರಸಿನಂತೆ ಆಮೂಲಾಗ್ರವಾಗಿ ಜಲಾಶಯವನ್ನು ಪುನಃ ಚೇತನ ಗೊಳಿಸಲು ಕಾರ್ಯತಂತ್ರ ಯೋಜನೆಯನ್ನು ಸರ್ಕಾರ ಕೂಡಲೇ ಪ್ರಕಟಿಸಿ ನಿರ್ಧಾರ ಕೈಗೊಳ್ಳಬೇಕು.

2) ಪಾದಯಾತ್ರೆ ಆಯೋಜನೆ
ಬೆಂಗಳೂರಿನ ನಾಗರೀಕರೆಲ್ಲರೂಗಳು ಪಾಲ್ಗೊಳ್ಳಲು ಜಲಾಶಯವನ್ನು ಉಳಿಸುವ ದಿಶೆಯಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನದ ವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ರೂಪರೇಷೆಗಳನ್ನು ಸಮಿತಿಯ ನಿರ್ಧರಿಸುತ್ತದೆ.

3) ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಶೀಘ್ರ ಕಾರ್ಯತಂತ್ರ ಯೋಜನೆಯನ್ನು ರೂಪಿಸಲು ಒತ್ತಾಯ ಪಡಿಸುವುದು.

ನೈಪುಣ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಗೆ ಹೆಚ್ಚಿನ ಮಾನ್ಯತೆ: ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್

ಕರ್ನಾಟಕ ಸರ್ಕಾರವು ಶಿಕ್ಷಣವನ್ನು ಉದ್ಯಮಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ರೂಪಿಸಲು ಕ್ರಮ ಕೈಗೊಂಡಿದೆ. ಕಳೆದ ವರ್ಷ ಆರಂಭಿಸಿದ ಶೈಕ್ಷಣಿಕ ಯೋಜನೆಯ ಮುಂದುವರಿಕೆ ಎಂಬoತೆ, ಶಿಷ್ಯವೃತ್ತಿ ಜೊತೆಯಾದ ವಿಶಿಷ್ಟ ಪದವಿ ಕಾರ್ಯಕ್ರಮವನ್ನು ರೂಪಿಸಲಾಗಿದ್ದು, ಈಗ ಶಿಕ್ಷಣವನ್ನು ಉದ್ಯಮ ಉನ್ನತೀಕರಿಸಲು ಮತ್ತಷ್ಟು ಹೆಜ್ಜೆ ಇಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಬೆಂಗಳೂರು ನಗರದಲ್ಲಿ ನಡೆದ ಜಾಗತಿಕ ಮಹಿಳಾ ಉದ್ಯಮಶೀಲತೆ ಸಮ್ಮೇಳನ ಸಮಾರೋಪ ಕಾರ್ಯಕ್ರಮದಲ್ಲಿ ಹೇಳಿದರು.
ಸಚಿವರು ಮಾತನಾಡುವಾಗ, ಈ ಪದವಿ ಕಾರ್ಯಕ್ರಮವನ್ನು ನಾಲ್ಕು ಕ್ಷೇತ್ರಗಳಲ್ಲಿ ರೂಪಿಸಲಾಗಿದ್ದು ಲಾಜಿಸ್ಟಿಕ್ಸ್ ರಿಟೇಲ್ ಇ ಕಾಮರ್ಸ್ ಮತ್ತು ಬ್ಯಾಂಕಿoಗ್ ಮತ್ತು ಫೈನಾನ್ಸ್ನಲ್ಲಿ ಬಿಕಾಂ. ವಿದ್ಯಾರ್ಥಿಗಳು ಐದನೇ ಮತ್ತು ಆರನೇ ಸೆಮಿಸ್ಟರ್‌ಗಳಲ್ಲಿ ಉದ್ಯಮದಲ್ಲಿ ಶಿಷ್ಯ ವೇತನ ಪಡೆಯಲಿದ್ದಾರೆ. ಇದರಿಂದ ಅವರು ಉದ್ಯಮಗಳಿಗೆ ಸಿದ್ಧರಾಗುತ್ತಾರೆ ಎಂದು ತಿಳಿಸಿದರು. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ನೈಪುಣ್ಯಾಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಪಠ್ಯಕ್ರಮವನ್ನು ಉದ್ಯಮದ ಅಗತ್ಯಗಳಿಗೆ ತಕ್ಕಂತೆ ಮಾಡಿಕೊಳ್ಳಲು, ಸರಕಾರ ಉದ್ಯಮಗಳೊಂದಿಗೆ ಸೇರಿಕೊಂಡು ಕೆಲಸ ಆರಂಭಿಸಿದೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಮಹಿಳಾ ಉದ್ಯಮಶೀಲರ ಸಂಖ್ಯೆಯಲ್ಲಿ ಕಂಡುಬರುತ್ತಿರುವ ಗಣನೀಯ ಏರಿಕೆ ಕುರಿತು ಮಾತನಾಡಿದ ಸಚಿವರು, ಪುರುಷಾಧಿಪತ್ಯದ ಸಮಾಜದಲ್ಲಿ ಮಹಿಳೆಯರು ಅಪಾರ ಯಶಸ್ಸು ಗಳಿಸುತ್ತಿರುವುದು ಖುಷಿಯ ವಿಷಯ ಎಂದು ಹೇಳಿದರು. ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಿoದ ಪದವಿ ಪಡೆಯುವ ಹುಡುಗಿಯರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯಾವುದೇ ಶಿಕ್ಷಣ ಸಂಸ್ಥೆಯಲ್ಲಿಯಾದರೂ ಸುಮಾರು 70% ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ, ಉನ್ನತ ಪದಕಗಳನ್ನು ಪಡೆದು ಹೊರ ಬರುತ್ತಿದ್ದಾರೆ ಎಂದು ತಿಳಿಸಿದರು.
ಇದು ಮುಂದೆಯೂ ಮುಂದುವರಿಯಲಿದೆ ಮತ್ತು ಇನ್ನಷ್ಟು ಮಹಿಳಾ ಉದ್ಯಮಶೀಲರು ಬರಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಮಹಿಳೆಯರ ಸಬಲಿಕರಣದ ದೃಷ್ಟಿಯಿಂದ ಇದು ಶ್ರೇಷ್ಠ ಬೆಳವಣಿಗೆಯಾಗಿದೆ. ಪಠ್ಯಕ್ರಮ ನಿಶ್ಚಿತವಾಗಿರದೆ ಸದಾ ನವೀಕರಿಸಬೇಕಾದ ಅವಶ್ಯಕತೆ ಇದೆ. ಇದಕ್ಕಾಗಿ ಉದ್ಯಮದ ಅಭಿಪ್ರಾಯಗಳು ಅತ್ಯಗತ್ಯ ಎಂದರು.
ಬೆoಗಳೂರು ನಗರವು ಈಗಾಗಲೇ ನಾವೀನ್ಯತೆಗಾಗಿ ಅಗತ್ಯ ಮೂಲಸೌಕರ್ಯಗಳನ್ನು ಹೊಂದಿದ್ದು, ಹಲವಾರು ಸ್ಟಾರ್ಟ್ಅಪ್‌ಗಳು ಮತ್ತು ಐಟಿ ಉದ್ಯಮಗಳ ಬೆಳವಣಿಗೆಯಿಂದ ಇದು ಸ್ಪಷ್ಟವಾಗಿದೆ. ಆದಾಗ್ಯೂ, ತಂತ್ರಜ್ಞಾನ ಕ್ಷಿಪ್ರವಾಗಿ ಮುಂದುವರಿಯುತ್ತಿರುವುದರಿoದ, ನಮ್ಮ ಶೈಕ್ಷಣಿಕ ಸಂಸ್ಥೆಗಳು ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗಳಿಗೆ ಹೆಜ್ಜೆಗೂ ಹೆಜ್ಜೆ ಹಾಕಬೇಕಾಗಿದೆ ಎಂದು ಅವರು ಹೇಳಿದರು.
ಜಾಗತಿಕ ಮಹಿಳಾ ಉದ್ಯಮಶೀಲತೆ ಸಮ್ಮೇಳನದಲ್ಲಿ ವಿಶ್ವದ ವಿವಿಧ ಭಾಗಗಳಿಂದ ಬಂದ ಮಹಿಳೆಯರು ಭಾಗವಹಿಸಿದ್ದರು. ಈ ಸಮ್ಮೇಳನದ ಕುರಿತು ಮಾತನಾಡಿದ ಇಮರ್ಜ್ (ಇಂಜಿನಿಯರಿoಗ್ ಮ್ಯಾನುಫ್ಯಾಕ್ಚರರ್ಸ್ ಎಂಟರ್‌ಪ್ರನರ್ಸ್ ರಿಸೋರ್ಸ್ ಗ್ರೂಪ್) ಅಧ್ಯಕ್ಷೆ ರಾಧಿಕಾ ಶೆಟ್ಟಿ, ಈ ವೇದಿಕೆಯಿಂದ ಮಹಿಳೆಯರನ್ನು ವ್ಯಾಪಾರ ಕ್ಷೇತ್ರದಲ್ಲಿ ಇನ್ನಷ್ಟು ಸಬಲಗೊಳಿಸುವ ಅವಕಾಶ ಸಿಕ್ಕಿತು ಎಂದು ಹೇಳಿದರು.
ಇಮರ್ಜ್ ಸ್ಥಾಪಕಿ ಮತ್ತು ಮಾಜಿ ಅಧ್ಯಕ್ಷೆ ಉಮಾ ರೆಡ್ಡಿ ಮಾತನಾಡುತ್ತಾ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಶೀಲತೆ ಅಭಿವೃದ್ಧಿಯಲ್ಲಿ ಭಾಗವಹಿಸಲು ಇಮರ್ಜ್ ತೆಗೆದುಕೊಳ್ಳುತ್ತಿರುವ ಕಾರ್ಯಕ್ರಮಗಳನ್ನು ವಿವರಿಸಿದರು.

ಹಂಸಲೇಖರಿಗೆ ಶುಭಕೋರಿದ ಚಲನಚಿತ್ರ ಪೋಷಕ ಕಲಾವಿದರ ಸಂಘದ ಪದಾಧಿಕಾರಿಗಳು

ಬೆಂಗಳೂರು – ಜೂ. 28- ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖರ 74 ನೇ ಜನ್ಮದಿನದ ನಿಮಿತ್ತ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದವತಿಯಿಂದ ಇಂದು ಅವರ ನಿವಾಸದಲ್ಲಿ ಶಾಲು ಹೊದಿಸಿ ಪುಷ್ಪಗುಚ್ಚ ನೀಡಿ ಶುಭಕೋರಲಾಯಿತು ಸಂಘದ ಅಧ್ಯಕ್ಷರಾದ ಶ್ರೀಮತಿ ಪದ್ಮಿನಿ ನಂದ, ಕಾರ್ಯದರ್ಶಿ ಹಿರಿಯ ಹಾಸ್ಯ ಕಲಾವಿದ ಮೂಗ್ ಸುರೇಶ್, ಕಾರ್ಯಕಾರಿ ಸದಸ್ಯರು ಹಾಗೂ ಕಲಾವಿದರಾದ ಉಮಾ ಹೆಬ್ಬಾರ್, ಕವಿತಾ ಶೆಟ್ಟಿ, ನಟರಾಜ್ ಹಂಜಗಿಮಠ್, ಕಲಾವತಿ, ಪುಷ್ಪ,ನಿಸಾರ್ ಸಾಯಿ ಉಪಸ್ಥಿತರಿದ್ದು ಶುಭಾಶಯ ಕೋರಿದರು.

*ಸ್ವಚ್ಛ ಪರಿಸರಕ್ಕಾಗಿ ಇವಿ ಬೈಕ್‌ ರ್ಯಾಲಿ ಮೂಲಕ  ʼಹಸಿರು ಸಂಕಲ್ಪ 2025ʼ*

ವಿಶ್ವ ಪರಿಸರ ದಿನದ ಅಂಗವಾಗಿ ಜನರಲ್ಲಿ ಅರಿವು  ಮೂಡಿಸುವ ಹಾಗೂ ಸ್ವಚ್ಛ ಪರಿಸರಕ್ಕಾಗಿ ಸಂಕಲ್ಪ ಹೊಂದುವ ನಿಟ್ಟಿನಲ್ಲಿ ʼಹಸಿರು ಸಂಕಲ್ಪ 2025ʼ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ತಮಗೆ ಆತ್ಮೀಯವಾದ ಸ್ವಾಗತ ಕೋರುತ್ತಿದ್ದೇವೆ.
ಹಸಿರೋತ್ಸವ ಫೋರಂ ಈ ಅಭಿಯಾನವನ್ನು  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸುರಕ್ಷಾ ಎನ್ವಿರೋ ಸೊಲ್ಯೂಷನ್ ಮತ್ತು ಸುದಯಾ ಫೌಂಡೇಶನ್ ಸಹಯೋಗದೊಂದಿಗೆ “ಗೋ ಗ್ರೀನ್, ಗೋ ಇವಿ” (Go Green, Go EV) ಎಂಬ ವಿಷಯದಡಿಯಲ್ಲಿ ಎಲೆಕ್ಟ್ರಿಕ್ ವಾಹನ (EV) ಬೈಕ್ ರ್ಯಾಲಿ  ಹಾಗೂ 500ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಯೋಜನೆಯನ್ನು ಹಮ್ಮಿಕೊಂಡಿದೆ.
*ಉದ್ಘಾಟನೆ:*
ಸತೀಶ್ ರೆಡ್ಡಿ,
ಶಾಸಕರು, ಬೊಮ್ಮನಹಳ್ಳಿ ಕ್ಷೇತ್ರ
*ಮುಖ್ಯ ಅತಿಥಿಗಳು:*
ಎಸ್‌.ಇ. ಸುಧೀಂದ್ರ,
ಚೇರ್‌ಮೆನ್‌, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ.
ದಿನಾಂಕ: ಜೂನ್‌ 29, 2025 ಭಾನುವಾರ
ಉದ್ಘಾಟನಾ ಸ್ಥಳ : ನೆಕ್ಸಸ್‌ ವೆಗಾ ಸಿಟಿ ಮಾಲ್‌
ಸಮಯ : ಬೆಳಗ್ಗೆ 8 ಗಂಟೆಗೆ
ಸಸಿ ನೆಡುವ ಅಭಿಯಾನ 
ಸ್ಥಳ: ಹುಳಿಮಾವು ಲೇಕ್‌, ಬೆಂಗಳೂರು
ಸಮಯ: ಬೆಳಿಗ್ಗೆ 9:30ಕ್ಕೆ