ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಹೋಬಳಿಯ ಚಿಕ್ಕಕುಂಟನಹಳ್ಳಿ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಬಿಷ್ಣು ಪ್ರಮಾಣಿಕ್(Bishnu Pramanik) (34 ವರ್ಷ) ಎಂಬ ವ್ಯಕ್ತಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದು, ಅವರ ಅಪಹರಣವಾಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ (Bidadi Police Station) ಪ್ರಕರಣ ದಾಖಲಾಗಿದ್ದು, ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ.
ಪಶ್ಚಿಮ ಬಂಗಾಳ ಮೂಲದ ಲೇಟ್ ನರೇನ್ ಚಂದ್ರ ಪ್ರಮಾಣಿಕ್ ಅವರ ಪುತ್ರ ಬಿಷ್ಣು ಪ್ರಮಾಣಿಕ್ ಅವರು ಚಿಕ್ಕಕುಂಟನಹಳ್ಳಿ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದರು. ಜೂನ್ 16, 2026 ರಂದು ಸಂಜೆ ಸುಮಾರು 5.00 ಗಂಟೆಗೆ ಅವರು ಕೆಲಸದ ಸ್ಥಳದಿಂದ ದಿಢೀರ್ ಕಾಣೆಯಾಗಿದ್ದಾರೆ.
ಅವರನ್ನು ಯಾರೋ ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದಾರೆ ಅಥವಾ ತಪ್ಪಾಗಿ ಬಂಧಿಸಿದ್ದಾರೆ ಎಂದು ಶಂಕಿಸಿ, ಅವರ ಪತ್ನಿ ಶ್ರೀಮತಿ ಕೇಯಾ ಪ್ರಮಾಣಿಕ್ ಅವರು ಪಶ್ಚಿಮ ಬಂಗಾಳದ ಮಾಲ್ಡ ಜಿಲ್ಲೆಯ ಇಂಗ್ಲಿಷ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಲ್ಲಿ ಶೂನ್ಯ ಎಫ್.ಐ.ಆರ್ ದಾಖಲಾಗಿ, ತನಿಖೆಗಾಗಿ ಬಿಡದಿ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ. ಪ್ರಸ್ತುತ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ವಿವರ:
ಬಿಷ್ಣು ಪ್ರಮಾಣಿಕ್, ವಯಸ್ಸು 34 ವರ್ಷಗಳಾಗಿದ್ದು, 5.1 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು, ದುಂಡು ಮುಖ, ಎಣ್ಣೆಗೆಂಪು ಬಣ್ಣ ಹೊಂದಿದ್ದಾರೆ. ಬೆಂಗಾಲಿ ಮತ್ತು ಹಿಂದಿ ಭಾಷೆಗಳನ್ನು ಮಾತನಾಡುತ್ತಾರೆ.
ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ದೊರೆತಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಬಿಡದಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ
