ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿಗೆ ರೂ.75000/- ದಂಡ ಕರ್ನಾಟಕ ಮಾಹಿತಿ ಆಯೋಗ ಆದೇಶ ಮಾಹಿತಿ ನೀಡದ ಮೂರು ಪ್ರತ್ಯೇಕ ಪ್ರಕರಣ ಇಲಾಖಾ ವಿಚಾರಣೆ ಹಾಗೂ ಶಿಸ್ತುಕ್ರಮಕ್ಕೆ ಶಿಫಾರಸು
ಬೆಂಗಳೂರು, ಜುಲೈ 01 : ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಅರ್ಜಿದಾರರಿಗೆ ಮಾಹಿತಿ ನೀಡದ ಹಾಗೂ ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ಉಪ ವಿಭಾಗದ ಉಪ ವಿಭಾಗಾಧಿಕಾರಿ ಕಿರಣ್ ಅವರಿಗೆ ರೂ.75000/- ದಂಡ ವಿಧಿಸಿರುವ ಕರ್ನಾಟಕ ಮಾಹಿತಿ ಆಯೋಗ, ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದೆ.
ಅಧಿಕಾರಿ ಕಿರಣ್ ಅವರು ತಮ್ಮ ಕಚೇರಿಗೆ ಮಾಹಿತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಸರಿಯಾದ ಮಾಹಿತಿ ನೀಡದೆ ನಿರ್ಲಕ್ಷ್ಯ ಮಾಡುತ್ತಿದ್ದರು. ಕರ್ನಾಟಕ ಮಾಹಿತಿ ಆಯೋಗದಲ್ಲಿ ನಡೆಯುವ ಅರ್ಜಿಗಳ ವಿಚಾರಣೆಗೂ ಹಾಜರಾಗುತ್ತಿರಲಿಲ್ಲ. ಅವರ ಪ್ರತಿನಿಧಿಯನ್ನು ಸಹ ವಿಚಾರಣೆಗೆ ನಿಯೋಜನೆ ಮಾಡುತ್ತಿರಲಿಲ್ಲ. ಇವರ ನಿರ್ಲಕ್ಷ್ಯ ಧೋರಣೆಯಿಂದಾಗಿ ಮಾಹಿತಿ ಆಯೋಗದ 4 ನೇ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಅವರು, ಪ್ರತಿ ಪ್ರಕರಣದಲ್ಲಿ ತಲಾ ರೂ.25000/-/ಗಳಂತೆ ದಂಡ ವಿಧಿಸಿ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ್ದಾರೆ.
ದಾಸನಪುರ ಹೋಬಳಿಯ ಗೊಲ್ಲಹಳ್ಳಿ ಗ್ರಾಮದ ಅಂಜನಮೂರ್ತಿ ಬಿ. ಅವರು 2024ರ ಮಾರ್ಚ್ 25ರಂದು ಉಪ ವಿಭಾಗಾಧಿಕಾರಿ ಕಚೇರಿಯಲ್ಲಿನ ದಾಖಲೆಯೊಂದನ್ನು ನೀಡುವಂತೆ ಕೋರಿದ್ದರು. ನಿಯಮದ ಪ್ರಕಾರ ಮೂವತ್ತು ದಿನದಲ್ಲಿ ಮಾಹಿತಿ ನೀಡಬೇಕಿತ್ತು. ಆದರೆ ಉಪ ವಿಭಾಗಾಧಿಕಾರಿ ಕಚೇರಿಯಿಂದ ಯಾವುದೇ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಆಯೋಗದಲ್ಲಿ ದ್ವಿತೀಯ ಮೇಲ್ಮನವಿ ಸಲ್ಲಿಸಿದ್ದರು. ಆಯೋಗದ ವಿಚಾರಣೆಗೂ ಸಹ ಕಿರಣ್ ಅವರು ಹಾಜರಾಗಲಿಲ್ಲ. ಆದ್ದರಿಂದ ರೂ.25000/- ದಂಡ ವಿಧಿಸಲಾಗಿದೆ.
ಕೆಂಗೇರಿಯ ಜೆ. ರಾಜೇಂದ್ರರಾಜು ಅವರು ಗವಿಪುರಂ ವಿಲೇಜಿಗೆ ಸಂಬಂಧಿಸಿದಂತೆ ಮಾಹಿತಿಯನ್ನು 2024ರ ಡಿಸೆಂಬರ್ 26 ರಂದು ಅರ್ಜಿ ಸಲ್ಲಿಸಿ ಕೋರಿದ್ದರು. ಉಪ ವಿಭಾಗಾಧಿಕಾರಿ ಕಚೇರಿಯಿಂದ ಯಾವುದೇ ಮಾಹಿತಿ ನೀಡಿರಲಿಲ್ಲ, ಆದ್ದರಿಂದ ಮೇಲ್ಮನವಿದಾರರು ಮಾಹಿತಿ ಆಯೋಗಕ್ಕೆ ದ್ವಿತೀಯ ಮೆಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಆಯೋಗ ಈ ಕಡತ ಲಭ್ಯವಿಲ್ಲದೇ ಇದ್ದಲ್ಲಿ ಕರ್ನಾಟಕ ಪಬ್ಲಿಕ್ ರೆಕಾರ್ಡ್ ಆಕ್ಟ್ -2012ರ ಪ್ರಕರಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಎಫ್ ಐ ಆರ್ ದಾಖಲಿಸಬೇಕೆಂದು ಕಿರಣ್ ಅವರಿಗೆ ಸೂಚನೆ ನೀಡಿತ್ತು. ಆದರೆ ಕಿರಣ್ ಅವರು ತಮ್ಮ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದ್ದರಿಂದ ರೂ.25000/- ದಂಡ ವಿಧಿಸಿ, ಅರ್ಜಿದಾರರಿಗೆ ರೂ.5000/-ಗಳ ಪರಿಹಾರ ನೀಡುವಂತೆ ಆದೇಶ ನೀಡಿದೆ.
ವೈಟ್ಫೀಲ್ಡ್ ನ ಚಲಪತಿ ಜೆ. ಅವರು ಪಟ್ಟಂದೂರು ಅಗ್ರಹಾರ ಗ್ರಾಮದ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಕೋರಿ 2024ರ ನವೆಂಬರ್ 26ರಂದು ಉಪ ವಿಭಾಗಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಮಾಹಿತಿ ದೊರಕದ ಹಿನ್ನೆಲೆಯಲ್ಲಿ ಆಯೋಗಕ್ಕೆ ದ್ವಿತೀಯ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಆಯೋಗ ನಿರ್ದೇಶನ ನೀಡಿದರು ಸಹ ಅರ್ಜಿದಾರರಿಗೆ ಮಾಹಿತಿ ನೀಡಿರಲಿಲ್ಲ. ಆಯೋಗದ ವಿಚಾರಣೆಗೂ ಗೈರು ಹಾಜರಾದ ಹಿನ್ನೆಲೆಯಲ್ಲಿ ದಂಡ ವಿಧಿಸಿ ಆದೇಶ ಮಾಡಲಾಗಿದೆ.
ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ನಿರ್ಲಕ್ಷ್ಯ ಮಾಡಿರುವ ಕಿರಣ್ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಕೆಸಿಎಸ್ಆರ್ನ ಅನ್ವಯ ಶಿಸ್ತುಕ್ರಮ ಕೈಗೊಂಡು ಆಯೋಗಕ್ಕೆ ಅನುಪಾಲನಾ ವರದಿ ನೀಡುವಂತೆ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಾಂತರಾಜ್ ಅವರಿಗೆ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ನಿರ್ದೇಶನ ನೀಡಿದ್ದಾರೆ.
ಮುಖ್ಯ ಕಾರ್ಯದರ್ಶಿಗೆ ಪತ್ರ:
ಬೆಂಗಳೂರು ನಗರ ಜಿಲ್ಲಾಡಳಿತದ ವ್ಯಾಪ್ತಿಯ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗಳು ಹಾಗೂ ತಾಲೂಕು ಕಚೇರಿಗಳಲ್ಲಿ ಮಾಹಿತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಸಕಾಲಕ್ಕೆ ಮಾಹಿತಿ ದೊರಕದ ಹಾಗೂ ಆಯೋಗದ ಆದೇಶ ಪಾಲನೆ ಮಾಡದ ಹಿನ್ನೆಲೆಯಲ್ಲಿ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ.
“ನ್ಯಾಯದಾನ ವಿಳಂಬ ಸಹ ನ್ಯಾಯ ನಿರಾಕರಣೆ” ಆಗುತ್ತದೆ. ಮಾಹಿತಿ ಕೋರುವವರಿಗೆ ಸಕಾಲದಲ್ಲಿ ಮಾಹಿತಿ ಬೆಂಗಳೂರು ಜಿಲ್ಲಾಡಳಿತದಲ್ಲಿ ದೊರಕುತ್ತಿಲ್ಲ. ಆಯೋಗದ ವಿಚಾರಣೆಗಳಿಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ಅವರ ಪ್ರತಿನಿಧಿ ಹಾಜರಾಗದೇ ಮಾಹಿತಿ ಹಕ್ಕು ಅಧಿನಿಯಮದ ಬಗ್ಗೆ ಉದಾಸೀನ ಭಾವನೆ ತೋರುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಪತ್ರದಲ್ಲಿ ಕೋರಿದ್ದಾರೆ.
