ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಜಿ.ಕೆ.ವಿ.ಕೆ (GKVK) ಆವರಣದ ಗಣಪತಿ ದೇವಸ್ಥಾನದ ಹತ್ತಿರ ಈ ಬಾರಿ ವಿಭಿನ್ನ ಹಾಗೂ ವಿಶೇಷವಾದ ‘ರೈತ ಸಂತೆ’ಯನ್ನು (Raitha Santhe) ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ, ಪೌಷ್ಟಿಕತೆ, ಮೌಲ್ಯವರ್ಧನೆ ಹಾಗೂ ಕೃಷಿ ಯಾಂತ್ರೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದ ಈ ಸಂತೆಯು ಗ್ರಾಹಕರನ್ನು ದೊಡ್ಡ ಮಟ್ಟದಲ್ಲಿ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ರೈತ ಸಂತೆಯಲ್ಲಿ ನೈಸರ್ಗಿಕ ಬೆಲ್ಲದಿಂದ ತಯಾರಿಸಲಾಗಿದ್ದ ತಾಜಾ ಗೋಧಿ ಪಾಯಸಕ್ಕೆ ಗ್ರಾಹಕರಿಂದ ಅಭೂತಪೂರ್ವ ಬೇಡಿಕೆ ವ್ಯಕ್ತವಾಯಿತು. ನಗರ ವಾಸಿಗಳು ಮತ್ತು ಮಕ್ಕಳು ಇದರ ರುಚಿಯನ್ನು ಸವಿದು ಆನಂದಿಸಿದರು. ಪೌಷ್ಟಿಕಾಂಶಗಳ ರಾಜ ‘ಬಟರ್ ಫ್ರೂಟ್’ (ಅವಕಾಡೊ), ಆರೋಗ್ಯಕರ ಕೊಬ್ಬಿನಾಂಶ, ನಾರಿನಾಂಶ, ಪೆÇಟ್ಯಾಷಿಯಂ ಹಾಗೂ ವಿಟಮಿನ್-ಇ ಹೊಂದಿರುವ ಈ ಹಣ್ಣು ಪ್ರಮುಖ ಆಕರ್ಷಣೆಯಾಗಿತ್ತು.
ಹೃದಯದ ಆರೋಗ್ಯ ಹಾಗೂ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿಯಾದ ಈ ಹಣ್ಣನ್ನು ಆರೋಗ್ಯ ಪ್ರಜ್ಞೆಯ ಗ್ರಾಹಕರು ಮುಗಿಬಿದ್ದು ಖರೀದಿಸಿದರು.
ಹಸಿ ಅವರೆಕಾಳು ಸಿಪ್ಪೆತೆಗೆಯುವ ಯಂತ್ರ, ಮನೆಮಟ್ಟದ ಬಳಕೆದಾರರು, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಸಣ್ಣ ಉದ್ಯಮಿಗಳಿಗೆ ಅನುಕೂಲವಾಗುವ ಈ ಯಂತ್ರವು ರೈತರು ಮತ್ತು ಸಂದರ್ಶಕರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿತು.
ಪಶ್ಚಿಮ ಘಟ್ಟದ ಮಲೆನಾಡು ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯಲಾದ, ಹೆಚ್ಚಿನ ಕಕ್ರ್ಯೂಮಿನ್ ಅಂಶ ಹಾಗೂ ವಿಶಿಷ್ಟ ಸುವಾಸನೆ ಹೊಂದಿರುವ ಈ ಅರಿಶಿನಕ್ಕೆ ಉತ್ತಮ ಸ್ಪಂದನೆ ಸಿಕ್ಕಿತು. ‘ಕೃಷಿಕಾ ನ್ಯಾಚುರಲ್’ ಹೆಲ್ತ್ ಡ್ರಿಂಕ್: ಸೇಬು, ಬೀಟ್ರೂಟ್ ಮತ್ತು ಕ್ಯಾರೆಟ್ಗಳ ಪೌಷ್ಟಿಕಾಂಶಗಳನ್ನು ಒಳಗೊಂಡ, ಯಾವುದೇ ಕೃತಕ ಬಣ್ಣ ಅಥವಾ ಸಂರಕ್ಷಕಗಳಿಲ್ಲದ ಈ ಪ್ರೀಮಿಯಂ ಆರೋಗ್ಯ ಪಾನೀಯವು ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ರಕ್ತಹೀನತೆ ನಿವಾರಣೆಗೆ ಉಪಯುಕ್ತವಾಗಿದ್ದು, ಗ್ರಾಹಕರ ಗಮನ ಸೆಳೆಯಿತು.
ತಾಜಾ ತರಕಾರಿಗಳು ಮತ್ತು ಇತರ ಉತ್ಪನ್ನಗಳು:ರೈತರಿಂದ ನೇರವಾಗಿ ತರಲಾಗಿದ್ದ ಬದನೆಕಾಯಿ, ಬೆಂಡೆಕಾಯಿ, ಸೌತೆಕಾಯಿ, ಹೀರೇಕಾಯಿ, ಸೊರೆಕಾಯಿ, ಹಗಲಕಾಯಿ, ವಿವಿಧ ಸೊಪ್ಪುಗಳು ಸೇರಿದಂತೆ ಹಲವು ಬಗೆಯ ತರಕಾರಿಗಳು ಕೊಯ್ಲಾದ ಅತ್ಯಲ್ಪ ಅವಧಿಯಲ್ಲೇ ಸಂತೆಯನ್ನು ತಲುಪಿದ್ದರಿಂದ ದಿನವಿಡೀ ಗ್ರಾಹಕರ ಸಂಚಾರ ದಟ್ಟವಾಗಿತ್ತು.
ಇವುಗಳೊಂದಿಗೆ ಗಿರ್ ತಳಿಯ ಗಿಣ್ಣು, ಸ್ವರ್ಣದಾರ ಕೋಳಿ ಉತ್ಪನ್ನಗಳೂ ಮಾರಾಟವಾದವು. ಇದರೊಂದಿಗೆ ಸಿರಿಧಾನ್ಯ ಉತ್ಪನ್ನಗಳು, ಜೈವಿಕ ಗೊಬ್ಬರಗಳು, ಅಲಂಕಾರಿಕ ಗಿಡ ಹಾಗೂ ಮೀನುಗಳು, ಜೇನು ಕೃಷಿ, ಎರೆಹುಳು ಗೊಬ್ಬರ, ಕರಕುಶಲ ವಸ್ತುಗಳು ಹಾಗೂ ಕೃಷಿ ಪ್ರಕಟಣೆಗಳ ಪ್ರದರ್ಶನ ಮತ್ತು ಮಾರಾಟ ಇತ್ತು.ಗ್ರಾಮೀಣ ಸೊಗಡಿನ ಎತ್ತಿನ ಬಂಡಿ ಸವಾರಿ ನಗರದ ಮಕ್ಕಳನ್ನು ವಿಶೇಷವಾಗಿ ಆಕರ್ಷಿಸಿತು.
ಕೃಷಿ ವಿಶ್ವವಿದ್ಯಾನಿಲಯದ ವಿವಿಧ ಸಂಶೋಧನಾ ಕೇಂದ್ರಗಳು, ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ ವಿಶ್ವವಿದ್ಯಾನಿಲಯದ ವೈಜ್ಞಾನಿಕ ಸಲಹೆಗಳ ಮೂಲಕ ರೈತ ಉತ್ಪಾದಕ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಗುಣಮಟ್ಟದ ಕೃಷಿ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಿದ್ದದ್ದು ಈ ಸಂತೆಯ ವೈಶಿಷ್ಟ್ಯವಾಗಿತ್ತು.
ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್.ವಿ. ಸುರೇಶ, ವಿಸ್ತರಣಾ ನಿರ್ದೆಶಕರಾದ ಡಾ. ವೈ.ಎನ್. ಶಿವಲಿಂಗಯ್ಯ, ಸಹ ವಿಸ್ತರಣಾ ನಿರ್ದೇಶಕರಾದ ಡಾ. ಕೆ.ಪಿ. ರಘುಪ್ರಸಾದ್ ಸೇರಿದಂತೆ ಹಲವು ಮುಖ್ಯ ಅಧಿಕಾರಿಗಳು ಈ ರೈತ ಸಂತೆಯಲ್ಲಿ ಭಾಗವಹಿಸಿದ್ದರು.

