ಇಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ. ಇಡೀ ದೇಶದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಅದೇ ದಿನ ಪ್ರಜಾಸೇವಾ ಅಭಿಯಾನ ಆಚರಿಸಬೇಕು ಎಂದು ಮುಖ್ಯಮಂತ್ರಿ ಅವರು ಕರೆ ಕೊಟ್ಟಿದ್ದರು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಈ ನೂತನ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದಾರೆ ಎಂದರು.
ಯಾವುದೇ ಇಲಾಖೆಯ ಸಮಸ್ಯೆಗಳನ್ನು ನೇರವಾಗಿ ಪ್ರಜಾಸೇವೆ ಇಲಾಖೆಯಡಿ ದಾಖಲಿಸಿದರೆ, ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಸಕಾಲದಲ್ಲಿ ಪರಿಹರಿಸಿಕೊಡುವ ಕೆಲಸ ಮಾಡಿಕೊಡಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮ ಇಂದಿನ ದಿನಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ತಿಂಗಳು ಮೊದಲನೆ ಮತ್ತು ಮೂರನೇ ಶನಿವಾರದಂದು ಪ್ರತಿ ತಾಲ್ಲೂಕಿನಲ್ಲಿ ಅಭಿಯಾನ ನಡೆಸಲಾಗುತ್ತದೆ. ನಂತರ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಅಭಿಯಾನ ಸಭೆ ನಡೆಸಲಾಗುವುದು. ಇದು ನಿರಂತರವಾಗಿ ನಡೆಯಲಿದ್ದು, ಇಂದು ಅರ್ಜಿ ನೀಡಲು ಸಾಧ್ಯವಾಗದವರು ಮೂರನೇ ಶನಿವಾರ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕರಿಂದ ಬರುವ ಅರ್ಜಿಗಳಿಗೆ ಪ್ರಾಮುಖ್ಯತೆ ಕೊಟ್ಟು, ಸರ್ಕಾರ ಜನರ ಸಮಸ್ಯೆಗಳನ್ನು ಬಗೆಹರಿಸಿಕೊಡುವ ಕೆಲಸ ಮಾಡಲಿದೆ ಎಂದರು.
ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಹಳಷ್ಟು ಟೀಕೆಗಳು ಕೇಳಿಬಂದವು. ಯಾರಿಗೆ ಸಹಾಯ ಹಸ್ತದ ನಿರೀಕ್ಷೆಯಿತ್ತು, ಸರ್ಕಾರದಿಂದ ಸಹಾಯ ಬೇಕಾಗಿತ್ತು ಅಂತವರಿಗೆ ಗ್ಯಾರಂಟಿ ಯೋಜನೆಗಳು ಹೆಚ್ಚು ಅನುಕೂಲವಾಗಿವೆ. ಕೂಲಿ ಮಾಡುವವರಿಗೆ, ಬಡವರ ಜೀವನಕ್ಕೆ ಸಹಾಯವಾಗುತ್ತಿದೆ. ಕೂಲಿ ಮಾಡುವ ಹೆಣ್ಣು ಮಗಳಿಗೆ ಎರಡು ಸಾವಿರ ರೂ. ದೊಡ್ಡದು. ಆಕೆಗೆ ಎರಡು ಸಾವಿರ ರೂಪಾಯಿ ಎರಡು ಲಕ್ಷದ ಮೌಲ್ಯಕ್ಕೆ ಸಮ.
ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಾಗ ‘ಅಜ್ಜಿಯೊಬ್ಬರಿಗೆ ಎರಡು ಸಾವಿರ ರೂ. ಬರುತ್ತದೆಯೇ ಎಂದು ವಿಚಾರಿಸಿದೆ. ಆಗ ಅವರು ಈ ಹಣ ನನಗೆ ಔಷಧ ತೆಗೆದುಕೊಳ್ಳಲು ಸಹಾಯವಾಗುತ್ತಿದ್ದು, ನಾನು ಬದುಕಿರುವುದೇ ಈ ಎರಡು ಸಾವಿರ ರೂ. ಹಣದಿಂದ’ ಎಂಬ ಮಾತನ್ನು ಹೇಳಿದರು. ಇದನ್ನು ಕೇಳಿದ ನನಗೆ ನಮ್ಮ ಕಾರ್ಯಕ್ರಮ ಸಾರ್ಥಕವಾಗಿದೆ ಎಂಬ ಭಾವನೆ ಮೂಡಿತು ಎಂದರು.

