ಬೆಂಗಳೂರು: ವಿಕಲಚೇತನರನ್ನು ಕೇವಲ ಅನುಕಂಪ ಅಥವಾ ದಾನದ ದೃಷ್ಟಿಯಿಂದ ನೋಡದೆ, ಅವರಿಗೆ ಸಂವಿಧಾನಬದ್ಧ ಹಕ್ಕುಗಳು ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. ವಿಶ್ವಸಂಸ್ಥೆಯ ವಿಕಲಚೇತನರ ಹಕ್ಕುಗಳ ಒಡಂಬಡಿಕೆಯ (UN CRPD) ಆಶಯಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರರಿಗೆ (Special UN Rapporteur) ವಿಸ್ತೃತ ಟಿಪ್ಪಣಿಯನ್ನು ಸಲ್ಲಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ತಿಳಿಸಿದರು.
ಇಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ರಾಜ್ಯದ ಉಪಕ್ರಮಗಳು, ಸವಾಲುಗಳು ಮತ್ತು ಸಾಂಸ್ಥಿಕ ಪ್ರಸ್ತುತಿಗಳು ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ‘ಕರ್ನಾಟಕ ವಿಕಲಚೇತನರ ಉದ್ಯೋಗ ಮತ್ತು ಶಿಕ್ಷಣ ಹಕ್ಕುಗಳ ವಿಧೇಯಕ-2025’ ಅನ್ನು ರೂಪಿಸಿದ್ದು, ಇದು ದೇಶಕ್ಕೇ ಮಾದರಿಯಾಗಿದೆ. ಈ ಹೊಸ ವಿಧೇಯಕದ ಪ್ರಕಾರ, 20 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಖಾಸಗಿ ಸಂಸ್ಥೆಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಶೇ.5 ರಷ್ಟು ಮೀಸಲಾತಿಯನ್ನು ವಿಕಲಚೇತನರಿಗೆ ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿಕಲಚೇತನರಿಗೆ ಶೇ.10 ರಷ್ಟು ಮೀಸಲಾತಿ ನೀಡುವ ಪ್ರಸ್ತಾವನೆಯನ್ನು ಈ ವಿಧೇಯಕ ಹೊಂದಿದೆ ಎಂದು ತಿಳಿಸಿದರು.
ಸ್ವಯಂ ಉದ್ಯೋಗ ಮತ್ತು ಸಾಮಾಜಿಕ ಭದ್ರತೆ:
ಆಧಾರ ಯೋಜನೆ (Adhara Scheme): ವಿಕಲಚೇತನ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಲು ಬ್ಯಾಂಕ್ ಸಾಲಗಳ ಮೇಲೆ ಶೇ.50 ರವರೆಗೆ ಸಬ್ಸಿಡಿ ನೀಡಲಾಗುತ್ತಿದೆ.
ಮಾಸಾಶನ ಮತ್ತು ವಸತಿ: ಮಾನಸಿಕ ಅಸ್ವಸ್ಥರು ಸೇರಿದಂತೆ ಎಲ್ಲಾ ವಿಕಲಚೇತನರಿಗೆ ನಿಯಮಿತವಾಗಿ ನಿರ್ವಹಣಾ ಪಿಂಚಣಿ ನೀಡಲಾಗುತ್ತಿದೆ. ಸ್ವತಂತ್ರ ಜೀವನಕ್ಕಾಗಿ ಅಂಬೇಡ್ಕರ್ ವಸತಿ ಯೋಜನೆ ಮತ್ತು ನವಗ್ರಾಮ ಯೋಜನೆಗಳಲ್ಲಿ ಶೇ.5 ರಷ್ಟು ಮನೆಗಳನ್ನು ಮೀಸಲಿಡಲಾಗಿದೆ.
ಸಾರಿಗೆ ಸೌಲಭ್ಯ: ಸ್ವತಂತ್ರ ಸಂಚಾರಕ್ಕಾಗಿ ಉಚಿತ ಹಾಗೂ ರಿಯಾಯಿತಿ ದರದ ಬಸ್ ಪಾಸ್ಗಳು, ತೀವ್ರತರಹದ ವಿಕಲಚೇತನರಿಗೆ ಪ್ರಯಾಣ ಭತ್ಯೆ ಹಾಗೂ ಸಹಾಯಕರ ಭತ್ಯೆಗಳನ್ನು ಒದಗಿಸಲಾಗುತ್ತಿದೆ.
ಸಮಗ್ರ ಶಿಕ್ಷಣ, ಆರೋಗ್ಯ ಮತ್ತು ಸಮುದಾಯ ಆಧಾರಿತ ಪುನರ್ವಸತಿ:
ವಿಕಲಚೇತನ ಮಕ್ಕಳಿಗೆ 10ನೇ ತರಗತಿಯವರೆಗೆ ಉಚಿತ ಶಿಕ್ಷಣ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಮೆಟ್ರಿಕ್ ನಂತರದ ಆರ್ಥಿಕ ನೆರವು ನೀಡಲಾಗುತ್ತಿದೆ. ಜಿಲ್ಲಾ ಪುನರ್ವಸತಿ ಕೇಂದ್ರಗಳ ಮೂಲಕ ಕೃತಕ ಅಂಗಾಂಗಗಳು ಮತ್ತು ಸಾಧನಗಳನ್ನು ವಿತರಿಸಲಾಗುತ್ತಿದ್ದು, ದೈಹಿಕ ವಿಕಲಚೇತನರಷ್ಟೇ ಪ್ರಾಮುಖ್ಯತೆಯನ್ನು ಮಾನಸಿಕ ಹಾಗೂ ಬೌದ್ಧಿಕ ವಿಕಲಚೇತನರಿಗೂ ನೀಡಲಾಗುತ್ತಿದೆ. ಅಲ್ಲದೆ, ಸಾಂಸ್ಥಿಕ ಆರೈಕೆಯ ಬದಲಾಗಿ ಸಮುದಾಯ ಆಧಾರಿತ ಪುನರ್ವಸತಿ (CBR/CBID) ಮತ್ತು ‘ಘರೌಂದ’ (Gharaunda) ಯೋಜನೆಯಡಿ ಸಮೂಹ ವಸತಿ ಸೌಲಭ್ಯಗಳನ್ನು ಬಲಪಡಿಸಲಾಗುತ್ತಿದೆ. ಉದ್ಯೋಗಸ್ಥ ವಿಕಲಚೇತನ ಮಹಿಳೆಯರಿಗೆ ಪ್ರತ್ಯೇಕ ವಸತಿ ನಿಲಯಗಳು ಹಾಗೂ ಅಂಧ ಬಾಲಕಿಯರಿಗೆ ವಿಶೇಷ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಮಸ್ಯೆಗಳ ಪರಿಹಾರ ಮತ್ತು ಪ್ರೋತ್ಸಾಹಕ ಕ್ರಮಗಳು:
ಕೆಲಸದ ಸ್ಥಳಗಳಲ್ಲಿ ಕುಂದುಕೊರತೆ ನಿವಾರಣಾ ಅಧಿಕಾರಿಗಳ ನೇಮಕ, ಯುಡಿಐಡಿ (UDID) ಕಾರ್ಡ್ಗಳ ಸಾರ್ವತ್ರಿಕ ವಿತರಣೆ ಮತ್ತು ಚುನಾವಣೆಗಳಲ್ಲಿ ಶೇ.100 ರಷ್ಟು ವಿಕಲಚೇತನ ಸ್ನೇಹಿ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ವಿಕಲಚೇತನರನ್ನು ನೇಮಿಸಿಕೊಳ್ಳುವ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ, ಸರ್ಕಾರಿ ಖರೀದಿಯಲ್ಲಿ ಆದ್ಯತೆ ಹಾಗೂ ‘ಸಮಗ್ರ ಉದ್ಯೋಗದಾತ/ಸಂಸ್ಥೆ’ (Inclusive Employer/Institution) ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತಿದೆ.
ಮುಂದಿರುವ ಸವಾಲುಗಳು ಮತ್ತು ಸುಧಾರಣಾ ಕ್ರಮಗಳು:
ಕಾನೂನು ರೂಪಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ, ಅನುಷ್ಠಾನದ ಹಂತದಲ್ಲಿ ಇನ್ನೂ ಕೆಲವು ಸವಾಲುಗಳಿವೆ ಎಂದು ವರದಿಯಲ್ಲಿ ಗುರುತಿಸಲಾಗಿದೆ. ಗ್ರಾಮೀಣ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆರೋಗ್ಯ ಹಾಗೂ ಪುನರ್ವಸತಿ ಸೇವೆಗಳ ಕೊರತೆ, ಸಾರ್ವಜನಿಕ ಕಟ್ಟಡಗಳು ಮತ್ತು ಡಿಜಿಟಲ್ ವೇದಿಕೆಗಳಲ್ಲಿ ಅಡಚಣೆ ರಹಿತ ವಾತಾವರಣದ ಕೊರತೆ, ಹಾಗೂ ಬಾಕಿ ಇರುವ ಮೀಸಲು ಹುದ್ದೆಗಳ ಭರ್ತಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಪುನರ್ವಸತಿ ಕಾರ್ಯಕರ್ತರ (VRW/MRW) ಬಲವರ್ಧನೆ, ಸ್ಥಳೀಯ ಸಂಸ್ಥೆಗಳ ಶೇ.5 ರಷ್ಟು ಮೀಸಲು ನಿಧಿಯ ಸಮರ್ಪಕ ಬಳಕೆ ಹಾಗೂ ಎಲ್ಲಾ 21 ಬಗೆಯ ವಿಕಲಚೇತನರ ಸಮಗ್ರ ಸಮೀಕ್ಷೆ ನಡೆಸುವ ಮೂಲಕ ರಾಜ್ಯವನ್ನು ಸಂಪೂರ್ಣ ವಿಕಲಚೇತನ ಸ್ನೇಹಿಯನ್ನಾಗಿಸಲು ಸರ್ಕಾರ ಕಾರ್ಯಪ್ರವೃತ್ತವಾಗಿದೆ.
ವಿಕಲಚೇತನರ ಹಕ್ಕುಗಳು ಕೇವಲ ಕಲ್ಯಾಣ ಕಾರ್ಯಕ್ರಮವಲ್ಲ, ಅದು ರಾಜ್ಯದ ಮಾನವ ಅಭಿವೃದ್ಧಿ ಕಾರ್ಯತಂತ್ರದ ಪ್ರಮುಖ ಆಧಾರಸ್ತಂಭವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಎಂದು ತಿಳಿಸಿದರು.

