ಬೆಂಗಳೂರು: ರಾಜ್ಯದಲ್ಲಿ ವಿಜ್ಞಾನ ಆಧಾರಿತ ಪರಿಸರ ಪುನರುಜ್ಜೀವನ ಮತ್ತು ಪರಿಸರ ಸಾಕ್ಷರತೆಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿ, ಕರ್ನಾಟಕ ಸರ್ಕಾರದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯ ಸಹಯೋಗದಲ್ಲಿ ಎರಡು ಪ್ರಮುಖ ಯೋಜನೆಗಳಾದ ‘ವೆಸ್ಟರ್ನ್ ಘಾಟ್ಸ್ ಆನ್ ವೀಲ್ಸ್’ (ಸಂಚಾರಿ ಜೀವವೈವಿಧ್ಯ ವಸ್ತುಸಂಗ್ರಹಾಲಯ) ಮತ್ತು ‘ಪ್ರಾಜೆಕ್ಟ್ ಸಹ್ಯಾದ್ರಿ ಸಂವರ್ಧನ 2026′(Project Sahyadri Conservation 2026) ಇವುಗಳ ಅಧಿಕೃತ ಜಂಟಿ ಲೋಕಾರ್ಪಣೆ ಸಮಾರಂಭವನ್ನು ನವೆಂಬರ್ 23, 2026ರ ಸೋಮವಾರ ಮಧ್ಯಾಹ್ನ 12:30ಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಅರಣ್ಯ ಭವನದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥರಾದ ಶ್ರೀ ಬಿ.ಪಿ. ರವಿ, ಐಎಫ್ಎಸ್ ಅವರ ಸಂಚಾಲಕತ್ವದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ, 60,000 ಚದರ ಕಿ.ಮೀ. ವ್ಯಾಪ್ತಿಯ ಸಹ್ಯಾದ್ರಿ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ಸಮಗ್ರ ನೀಲನಕ್ಷೆಯನ್ನು ಅನಾವರಣಗೊಳಿಸಲಾಗುವುದು.
ರಾಜ್ಯದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಭಾರತದ ಲೋಕಪಾಲ ನ್ಯಾಯಾಂಗ ಸದಸ್ಯರಾದ ಗೌರವಾನ್ವಿತ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ, ಕರ್ನಾಟಕದ ಉಪಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ಪಶ್ಚಿಮ ಘಟ್ಟಗಳ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರಾದ ಗೌರವಾನ್ವಿತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ (ನಿವೃತ್ತ) ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಅಂಜುಂ ಪರ್ವೇಜ್, ಐಎಎಸ್, ಪ್ರಧಾನ ಕಾರ್ಯದರ್ಶಿ ಶ್ರೀ ಮನೋಜ್ ಕುಮಾರ್, ಐಎಫ್ಎಸ್, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯ ಅಧ್ಯಕ್ಷ ಶ್ರೀ ಮೊಹಮ್ಮದ್ ತಬ್ರೇಜ್ ಆಲಂ ಷರೀಫ್ ಹಾಗೂ ಡಬ್ಲ್ಯೂಡಬ್ಲ್ಯೂಎಫ್-ಇಂಡಿಯಾ ರಾಜ್ಯ ಸಂಯೋಜಕ ಶ್ರೀ ರಾಹುಲ್ ಸೇರಿದಂತೆ ಹಿರಿಯ ಅರಣ್ಯ ಅಧಿಕಾರಿಗಳು ಉಪಸ್ಥಿತರಿರುವರು.
ಈ ಯೋಜನೆಗಳಲ್ಲಿ ಒಂದಾದ ‘ವೆಸ್ಟರ್ನ್ ಘಾಟ್ಸ್ ಆನ್ ವೀಲ್ಸ್’ ರಾಜ್ಯದ ಎಲ್ಲಾ 31 ಜಿಲ್ಲೆಗಳ ಶಾಲಾ ವಿದ್ಯಾರ್ಥಿಗಳಿಗೆ ಸಹ್ಯಾದ್ರಿಯ ಜೀವವೈವಿಧ್ಯದ ಪರಿಚಯ ಮಾಡಿಸುವ ವಿನೂತನ ಪ್ರಯತ್ನವಾಗಿದೆ.
15 ಮೀಟರ್ ಉದ್ದದ ಕಸ್ಟಮ್-ನಿರ್ಮಿತ ವೋಲ್ವೋ ಮಲ್ಟಿ-ಆಕ್ಸಲ್ ಬಸ್ ಅನ್ನು ಹವಾನಿಯಂತ್ರಿತ, ಸೌರಶಕ್ತಿ ಚಾಲಿತ ಸಂಚಾರಿ ಪರಿಸರ ವಸ್ತುಸಂಗ್ರಹಾಲಯವಾಗಿ ರೂಪಿಸಲಾಗಿದ್ದು, “ವಿಶ್ವದ ಅತಿದೊಡ್ಡ ಸಂಚಾರಿ ಜೀವವೈವಿಧ್ಯ ವಸ್ತುಸಂಗ್ರಹಾಲಯ” ಎಂಬ ಗಿನ್ನಿಸ್ ವಿಶ್ವ ದಾಖಲೆಯ ಪ್ರಯತ್ನಕ್ಕೆ ಇದು ಸಜ್ಜಾಗಿದೆ.
ಈ ಬಸ್ನ ಒಳಭಾಗದಲ್ಲಿ ಕೃತಕ ಜಲಪಾತ ಮತ್ತು ಶೋಲಾ ಸಸ್ಯವರ್ಗದ ಮಳೆಕಾಡು ಮಾದರಿಗಳು, ಸಂವಾದಾತ್ಮಕ ಜಿಐಎಸ್ (GIS) ನಕ್ಷೆಗಳು, ಸಿಂಹ ಬಾಲದ ಸಿಂಗಳೀಕ ಮತ್ತು ನೀಲಗಿರಿ ತಾಹ್ರ್ನಂತಹ ಪ್ರಾಣಿಗಳ ನೈಜ ಗಾತ್ರದ ಮಾದರಿಗಳು, ವರ್ಧಿತ ವಾಸ್ತವ (AR) ಹೊಲೊಗ್ರಾಫಿಕ್ ವನ್ಯಜೀವಿ ವಲಯ ಹಾಗೂ ವಿದ್ಯಾರ್ಥಿಗಳ ಕಲಿಕಾ ಕೇಂದ್ರ ಸೇರಿದಂತೆ ಆರು ವಿಶೇಷ ವಲಯಗಳಿವೆ. ಬಸ್ನ ಮೇಲ್ಛಾವಣಿಯಲ್ಲಿರುವ ಸೌರ ಫಲಕಗಳ ಮೂಲಕವೇ ಒಳಗಿನ ಎಲ್ಲಾ ಉಪಕರಣಗಳು ಕಾರ್ಯನಿರ್ವಹಿಸಲಿದ್ದು, ಬಸ್ನ ಹೊರಭಾಗದಲ್ಲಿ ಹುಲಿ, ಆನೆ, ಕಪ್ಪು ಚಿರತೆ, ಚಿರತೆ ಹಾಗೂ ಮಂಗಟ್ಟೆ ಹಕ್ಕಿಯ ಆಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ.
ಮತ್ತೊಂದೆಡೆ, ‘ಪ್ರಾಜೆಕ್ಟ್ ಸಹ್ಯಾದ್ರಿ ಸಂವರ್ಧನ 2026’ ಯೋಜನೆಯು ಪಶ್ಚಿಮ ಘಟ್ಟಗಳ ನಾಲ್ಕು ಪರಿಸರ ವಲಯಗಳಲ್ಲಿ ವೈಜ್ಞಾನಿಕವಾಗಿ ಅರಣ್ಯೀಕರಣ ಕೈಗೊಳ್ಳಲು ಅರಣ್ಯ, ಗ್ರಾಮೀಣಾಭಿವೃದ್ಧಿ (ನರೇಗಾ), ಪ್ರವಾಸೋದ್ಯಮ, ಶಿಕ್ಷಣ, ಸಾರಿಗೆ, ಕಾಫಿ ಮಂಡಳಿ, ಜೀವವೈವಿಧ್ಯ ಮಂಡಳಿ ಸೇರಿದಂತೆ ರಾಜ್ಯದ 16 ಇಲಾಖೆಗಳು ಮತ್ತು ಶಾಸನಬದ್ಧ ಮಂಡಳಿಗಳನ್ನು ಒಗ್ಗೂಡಿಸುತ್ತದೆ. ವಿಷನ್ 2030ರ ಅಡಿಯಲ್ಲಿ 1,00,000 ಹೆಕ್ಟೇರ್ ಹಾಳಾದ ಭೂಮಿಯನ್ನು ಪುನರುಜ್ಜೀವನಗೊಳಿಸುವುದು, 5 ಕೋಟಿ ಸ್ಥಳೀಯ ಜಾತಿಯ ಸಸಿಗಳನ್ನು ನೆಟ್ಟು ಕನಿಷ್ಠ ಶೇ. 80ರಷ್ಟು ಉಳಿವಿನ ಪ್ರಮಾಣದೊಂದಿಗೆ ಪೋಷಿಸುವುದು ಹಾಗೂ 5 ದಶಲಕ್ಷ ಟನ್ಗಳಿಗಿಂತ ಹೆಚ್ಚು ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುವ ಗುರಿ ಹೊಂದಲಾಗಿದೆ.
ಇದರೊಂದಿಗೆ ಶರಾವತಿ, ನೇತ್ರಾವತಿ, ಕುಮಾರಧಾರ, ಕಬಿನಿ, ತುಂಗಾ ಮತ್ತು ಭದ್ರಾ ನದಿಗಳ ಜಲಾನಯನ ಪ್ರದೇಶಗಳನ್ನು ಸಂರಕ್ಷಿಸುವುದು ಮತ್ತು ಮಹಿಳಾ ಸ್ವ-ಸಹಾಯ ಗುಂಪುಗಳು ಹಾಗೂ ಬುಡಕಟ್ಟು ಸಮುದಾಯಗಳಿಗೆ 50,000ಕ್ಕೂ ಹೆಚ್ಚು ಹಸಿರು ಉದ್ಯೋಗಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ.
ವೈಜ್ಞಾನಿಕ ನಿರ್ವಹಣೆಗಾಗಿ ಪ್ರತಿ ಸಸಿಗೂ ಲೇಸರ್ ಕೆತ್ತನೆಯ ಕ್ಯೂಆರ್ (QR) ಕೋಡ್ ಅಳವಡಿಸಿ ಉಪಗ್ರಹ (KSRSAC) ಮತ್ತು ಬ್ಲಾಕ್ಚೈನ್ ತಂತ್ರಜ್ಞಾನದ ಮೂಲಕ ಅವುಗಳ ಬೆಳವಣಿಗೆಯ ಮೇಲೆ ನಿಗಾ ಇಡಲಾಗುವುದು. ಅಲ್ಲದೆ, ಶಾಲೆ, ದೇವಸ್ಥಾನ ಮತ್ತು ಕೈಗಾರಿಕಾ ಪ್ರದೇಶಗಳ ಗೋಡೆಗಳ ಮೇಲೆ ‘ಜ್ಞಾನದ ಗೋಡೆ’ (Wall of Knowledge) ಚಿತ್ರಕಲೆ, 5,000 ಶಾಲಾ ಇಕೋ-ಕ್ಲಬ್ಗಳು, 100 ದೇವಾಲಯ ವನಗಳು, 200 ಕಿ.ಮೀ.ಗೂ ಹೆಚ್ಚು ರಸ್ತೆ ಬದಿಯ ಆಮ್ಲಜನಕ ಕಾರಿಡಾರ್ಗಳು, 100 ಹವಾಮಾನ ಡ್ಯಾಶ್ಬೋರ್ಡ್ ಬಸ್ ತಂಗುದಾಣಗಳು, 50ಕ್ಕೂ ಹೆಚ್ಚು ಮಿಯಾವಾಕಿ ನಗರ ಅರಣ್ಯಗಳು ಹಾಗೂ ಜೋಗ ಜಲಪಾತ ಸೇರಿದಂತೆ ಐದು ಕಡೆ ಅನುಭವ ಕೇಂದ್ರಗಳನ್ನು ನಿರ್ಮಿಸಲಾಗುವುದು.
ನವೆಂಬರ್ 23ರಂದು ಮಧ್ಯಾಹ್ನ 12:00 ಗಂಟೆಯಿಂದ ಅರಣ್ಯ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ನೋಂದಣಿ ಮತ್ತು ಪ್ರೆಸ್ ಕಿಟ್ ವಿತರಣೆ ನಡೆಯಲಿದ್ದು, 12:30ಕ್ಕೆ ಉದ್ಘಾಟನಾ ಸಮಾರಂಭ ಹಾಗೂ 12:55ಕ್ಕೆ ಎರಡೂ ಯೋಜನೆಗಳ ಅಧಿಕೃತ ಅನಾವರಣ ನೆರವೇರಲಿದೆ. ಮಧ್ಯಾಹ್ನ 1:48ಕ್ಕೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮಾಧ್ಯಮ ಸಂವಾದ ನಡೆಯಲಿದ್ದು, ಎಂದು ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ತಬ್ರೇಜ್ ಆಲಂ ಷರೀಫ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

