ಬೆಂಗಳೂರು: ಸರ್ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (Sir M. Visvesvaraya Institute of Technology)ಯ ವಿದ್ಯುತ್ ಮತ್ತು ವಿದ್ಯುನ್ಮಾನ ಇಂಜಿನಿಯರಿಂಗ್ ವಿಭಾಗದಲ್ಲಿ ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನ ಉತ್ಕೃಷ್ಟತಾ ಕೇಂದ್ರ (EV-CoE) ಅನ್ನು 17 ಆಗಸ್ಟ್ 2026ರಂದು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
ಕಾಲೇಜಿನ ಶ್ರೀ ಕೃಷ್ಣದೇವರಾಯ ಶಿಕ್ಷಣ ದತ್ತಿಯ ಸಂಸ್ಥಾಪಕ ಟ್ರಸ್ಟಿ ಹಾಗೂ ಶೈಕ್ಷಣಿಕ ಸಮಿತಿಯ ಅಧ್ಯಕ್ಷರು ಆದ ಶ್ರೀ ಕೆ.ವಿ ಶೇಖರ್ ರಾಜು ಅವರ ಮಾರ್ಗದರ್ಶನದಲ್ಲಿ ಹಾಗೂ ಪ್ರಾಂಶುಪಾಲರಾದ ಡಾ. ಎಂ. ಎನ್. ತಿಪ್ಪೇಸ್ವಾಮಿ ಅವರ ನೇತೃತ್ವದಲ್ಲಿ ಸ್ಥಾಪಿಸಲಾದ ಈ ಕೇಂದ್ರವು, ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನ, ಪ್ರಾಯೋಗಿಕ ಅನುಭವ ಹಾಗೂ ಕೈಗಾರಿಕಾ ಕೌಶಲ್ಯಗಳನ್ನು ಒದಗಿಸುವ ಪ್ರಮುಖ ವೇದಿಕೆಯಾಗಲಿದೆ.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ಎಚ್. ಎಲ್. ಸುರೇಶ್ ಉಪಸ್ಥಿತರಿದ್ದರು. ಕೈಗಾರಿಕಾ ಕ್ಷೇತ್ರದ ಪ್ರತಿನಿಧಿಯಾದ ಶ್ರೀ ನವೀನ್ ಸಿ. ಎಸ್. ಅವರು ಭಾಗವಹಿಸಿ, ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಪ್ರಸ್ತುತ ಬೆಳವಣಿಗೆಗಳು, ಕೈಗಾರಿಕಾ ಅಗತ್ಯಗಳು ಹಾಗೂ ಭವಿಷ್ಯದ ಉದ್ಯೋಗಾವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಪ್ರಾಂಶುಪಾಲರಾದ ಡಾ. ಎಂ.ಎನ್ ತಿಪ್ಪೇಸ್ವಾಮಿಯವರು ಮಾತನಾಡಿ ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನ ಉತ್ಕೃಷ್ಟತಾ ಕೇಂದ್ರದ ಮೂಲಕ ವಿದ್ಯಾರ್ಥಿಗಳಿಗೆ ಬ್ಯಾಟರಿ ತಂತ್ರಜ್ಞಾನ, ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಮ್ (BMS), ಎಲೆಕ್ಟ್ರಿಕ್ ಮೋಟಾರ್ಗಳು, ಪವರ್ ಎಲೆಕ್ಟ್ರಾನಿಕ್ಸ್, EV ಚಾರ್ಜಿಂಗ್ ತಂತ್ರಜ್ಞಾನ, ನಿಯಂತ್ರಣ ವ್ಯವಸ್ಥೆಗಳು ಹಾಗೂ EV ಡಯಾಗ್ನೋಸ್ಟಿಕ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಾಯೋಗಿಕ ತರಬೇತಿ ದೊರೆಯಲಿದೆ ಎಂದು ತಿಳಿಸಿದರು.ಶ್ರೀ ಕೃಷ್ಣದೇವರಾಯ ಶಿಕ್ಷಣ ದತ್ತಿಯ ಸಂಸ್ಥಾಪಕ ಟ್ರಸ್ಟಿ ಕೆ.ವಿ ಶೇಖರ್ ರಾಜುರವರು ಈ ಕೇಂದ್ರವು ಸಂಶೋಧನೆ, ನವೋದ್ಯಮ, ವಿದ್ಯಾರ್ಥಿ ಯೋಜನೆಗಳು, ಕೌಶಲ್ಯಾಭಿವೃದ್ಧಿ, ಕೈಗಾರಿಕಾ ಸಹಯೋಗ ಮತ್ತು ಉದ್ಯಮಶೀಲತೆಗೆ ಉತ್ತೇಜನ ನೀಡಲಿದೆ. ಹಸಿರು ತಂತ್ರಜ್ಞಾನ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡುವುದರೊಂದಿಗೆ, ಭವಿಷ್ಯದ ಎಲೆಕ್ಟ್ರಿಕ್ ಮೊಬಿಲಿಟಿ ಕ್ಷೇತ್ರಕ್ಕೆ ಅಗತ್ಯವಿರುವ ಉದ್ಯೋಗಪರ ಹಾಗೂ ಕೈಗಾರಿಕಾ ಕೌಶಲ್ಯ ಹೊಂದಿದ ತಾಂತ್ರಿಕ ಮಾನವ ಸಂಪನ್ಮೂಲವನ್ನು ರೂಪಿಸುವಲ್ಲಿ ಈ ಕೇಂದ್ರವು ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ, ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.

