ಅಕ್ರಮ ನಿರ್ಮಾಣ ಮತ್ತು ನಿಯಂತ್ರಣರಹಿತ ವಾಣಿಜ್ಯೀಕರಣದಿಂದ ಕಬ್ಬನ್ ಪಾರ್ಕ್ನ ಪರಿಸರಕ್ಕೆ ಭಾರಿ ಅಪಾಯ ಎದುರಾಗಿದೆ. ಕಾನೂನು ಮತ್ತು ಪರಿಸರ ಸಂರಕ್ಷಣೆಯನ್ನು ಪರಿಗಣಿಸದೇ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕಾನೂನು ಪರಿಪಾಲನೆ ಮಾಡಬೇಕಾದ ರಾಜ್ಯ ಪುರಾತತ್ವ ಇಲಾಖೆ ಪಾರ್ಕ್ ನ ತನ್ನ ಆವರಣದ ವ್ಯಾಪ್ತಿಯೊಳಗೆ ಶಾಶ್ವತ ಕಟ್ಟಡ ನಿರ್ಮಿಸುತ್ತಿದ್ದು, ಇದು ಉದ್ಯಾನ ಕಾಯ್ದೆಯ ನೇರ ಉಲ್ಲಂಘನೆಯಾಗಿದೆ. ಈ ಪ್ರಮುಖ ಹಸಿರು ಪ್ರದೇಶದಲ್ಲಿ ಹೊಸ ಕಾಂಕ್ರಿಟ್ ನಿರ್ಮಾಣವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಎಸ್. ಉಮೇಶ್ ಅವರು, ತೋಟಗಾರಿಕೆ ಇಲಾಖೆ ಇಂತಹ ಅಕ್ರಮ ನಿರ್ಮಾಣಕ್ಕೆ ಸಹಕಾರ ನೀಡುತ್ತಿದೆ. ಕಬ್ಬನ್ ಪಾರ್ಕ್ನ ಸಂರಕ್ಷಣೆ ಮತ್ತು ರಕ್ಷಣೆಯ ಹೊಣೆ ಹೊತ್ತಿರುವ ತೋಟಗಾರಿಕೆ ಇಲಾಖೆ ಈ ಅಕ್ರಮ ನಿರ್ಮಾಣದ ಬಗ್ಗೆ ಕಣ್ಣುಮುಚ್ಚಿ ಕುಳಿತಿದೆ. ನಿಯಂತ್ರಣ ಕ್ರಮ ಕೈಗೊಳ್ಳದೇ ಸಂಪೂರ್ಣವಾಗಿ ನಿರ್ಲಕ್ಷ್ಯವಹಿಸಿದೆ ಎಂದು ಹೇಳಿದ್ದಾರೆ.
ತೋಟಗಾರಿಕೆ ಇಲಾಖೆಯ ಕೆಲವು ಭ್ರಷ್ಟ ಅಧಿಕಾರಿಗಳು ಪಾರ್ಕ್ನ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದು, ಪರಿಸರ ಸಂರಕ್ಷಣೆಗೆ ಬದಲಾಗಿ ಸ್ವಾರ್ಥಪರ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಪರಿಸರ ಹಾಟ್ಸ್ಪಾಟ್ ಅನ್ನು ವಾಣಿಜ್ಯ ಕೇಂದ್ರವನ್ನಾಗಿ ಪರಿವರ್ತನೆ ಮಾಡಲಾಗಿದೆ. ಕಬ್ಬನ್ ಪಾರ್ಕ್ ಅನ್ನು ಕ್ರಮಬದ್ಧವಾಗಿ ಒಂದು ಸ್ವಚ್ಛ ಪರಿಸರ ವಲಯದಿಂದ ಅಸ್ತವ್ಯಸ್ತ ವಾಣಿಜ್ಯ ಕೇಂದ್ರವನ್ನಾಗಿ ಪರಿವರ್ತಿಸಲಾಗುತ್ತಿದೆ. ಕಾಂಕ್ರೀಟ್ ಮತ್ತು ವಾಣಿಜ್ಯ ಚಟುವಟಿಕೆಗಳಿಂದ ಪಾರ್ಕ್ನಲ್ಲಿ ಉಸಿರು ಕಟ್ಟುವ ವಾತಾವರನ ನಿರ್ಮಾಣವಾಗಿದೆ.
ಪಾರ್ಕ್ ಆವರಣದಲ್ಲಿ ಅನಧಿಕೃತ ಅಂಗಡಿಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಆಯೋಜಿಸಲಾದ ಭಾರೀ ‘ಮಾವಿನ ಮೇಳ’ದಿಂದ ಅಪಾರ ಪ್ರಮಾಣದ ಕಸ, ಶಬ್ದ ಹಾಗೂ ಜನಸಂದಣಿ ಉಂಟಾಗಿ ಸ್ಥಳೀಯ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ತೀವ್ರ ಹಾನಿಯಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು “ಕಬ್ಬನ್ ಪಾರ್ಕ್ ಅನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕೆ ಬಳಸುವುದಿಲ್ಲ” ಎಂದು ಭರವಸೆ ನೀಡಿದ್ದರು. ಆದರೆ ಅವರ ಕಣ್ಣಳತೆಯ ದೂರದಲ್ಲಿ ಇಂತಹ ಲೋಪಗಳು ಜರುಗುತ್ತಿವೆ ಎಂದು ಎಸ್. ಉಮೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಶ್ವಾಸಕೋಶವಾಗಿರುವ ಕಬ್ಬನ್ ಪಾರ್ಕ್ ನಾಶವಾಗಲು ಬಿಡುವುದಿಲ್ಲ. ಪುರಾತತ್ವ ಇಲಾಖೆ ತಕ್ಷಣವೇ ನಿರ್ಮಾಣ ಕಾರ್ಯವನ್ನು ನಿಲ್ಲಿಸಿ, ಈಗಾಗಲೇ ನಿರ್ಮಿಸಿರುವ ಭಾಗವನ್ನು ತೆರವುಗೊಳಿಸಬೇಕು. ಈ ಉಲ್ಲಂಘನೆಗಳಿಗೆ ಸಹಕಾರ ನೀಡಿರುವ ತೋಟಗಾರಿಕೆ ಇಲಾಖೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ಕಟ್ಟುನಿಟ್ಟಿನ ತನಿಖೆ ಆರಂಭಿಸಬೇಕು. ಕರ್ತವ್ಯ
ಉಲ್ಲಂಘನೆ ಮತ್ತು ನಂಬಿಕೆ ದ್ರೋಹ ಎಸಗಿರುವ ಸಂಬಂಧಿತ ಅಧಿಕಾರಿಗಳ ವಿರುದ್ಧ ವೈಯಕ್ತಿಕವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಸೋಸಿಯೇಷನ್ ಸಿದ್ಧತೆ ನಡೆಸುತ್ತಿದೆ. ಕಬ್ಬನ್ ಪಾರ್ಕ್ ಅನ್ನು ಭವಿಷ್ಯದ ಪೀಳಿಗೆಗಳಿಗಾಗಿ ಉಳಿಸಲು ಈ ವಾಣಿಜ್ಯ ದಾಳಿಯ ವಿರುದ್ಧ ಹೋರಾಟದಲ್ಲಿ ಬೆಂಗಳೂರು ನಾಗರಿಕರು ಮತ್ತು ಪರಿಸರ ಹೋರಾಟಗಾರರು ಕೈಜೋಡಿಸಬೇಕು ಎಂದು ಎಸ್. ಉಮೇಶ್ ಮನವಿ ಮಾಡಿದ್ದಾರೆ.

