ಬೆಂಗಳೂರು : ಕನ್ನಡದಲ್ಲಿ ವ್ಯವಹಾರಗಳು ಸುಗಮವಾಗಿ ನಡೆಯಬೇಕೆಂಬ ಉದ್ದೇಶದಿಂದ, ಎಟಿಎಂನಲ್ಲೂ ಕನ್ನಡದ ಆಯ್ಕೆಗಳನ್ನು ಹಲವು ಬ್ಯಾಂಕುಗಳು ನೀಡಿವೆ. ಆದರೆ, ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದ ಮಾಡುವಾಗ ನಡೆಯುವ ಅವಾಂತರಗಳ ಕಡೆಗೆ ಲಕ್ಷ್ಯ ಕೊಡದೇ, ಕನ್ನಡದ ಕೊಲೆಯಾಗುತ್ತಿರುವುದು ಬೆಂಗಳೂರಿನ ಎಟಿಎಂ(Bangalore ATM) ಒಂದರಲ್ಲಿ ಕಂಡುಬಂದಿದೆ. ಎಸ್‌ಬಿಐ ಬ್ಯಾಂಕಿನ ಎಟಿಎಂ ಒಂದರಲ್ಲಿ, ಕನ್ನಡದ ವ್ಯವಹಾರದ ಆಯ್ಕೆ ಮಾಡಿದಾಗ, ‘ಠೇವಣೆ’, ‘ಬ್ಯಾಂಕಿಂಗ್’ ಮತ್ತು ‘ಪಿನ್ ಪೀಳಿಗೆ’ ಎಂಬ ಮೂರು ಆಯ್ಕೆಗಳು ಕಾಣಿಸುತ್ತವೆ. ಮೊದಲ ಆಯ್ಕೆ ಮತ್ತು ಎರಡನೆಯ ಆಯ್ಕೆ ಸೂಕ್ತವಾಗಿದೆ. ಆದರೆ, ಮೂರನೆಯ ಆಯ್ಕೆಯು ಅಸಂಬದ್ಧ ಎನಿಸಿದೆ ಏಕೆಂದರೆ, ಕನ್ನಡದಲ್ಲಿ ‘ ಪಿನ್ ಪೀಳಿಗೆ’ ಎಂಬ ಪದಗಳಿಗೆ ಅರ್ಥವೇ ಇಲ್ಲ! ಇಂಗ್ಲಿಷ್‌ನಲ್ಲಿ ‘ಪಿನ್ ಜನರೇಷನ್’ ಎಂಬ ಪದಗಳನ್ನು ‘ಪಿನ್ ಪೀಳಿಗೆ’ ಎಂದು ಅನುವಾದಿಸಿ, ಎಟಿಎಂನಲ್ಲಿ ಅಳವಡಿಸಿದ್ದಾರೆ. ಅದು ʼಪಿನ್ ಸಂಖ್ಯೆಯನ್ನು ಸೃಷ್ಟಿಸಿʼ ಎಂದಾಗಬೇಕು. ಎಸ್ ಬಿಐ ರೀತಿಯ ಜವಾಬ್ದಾರಿಯುತ ಬ್ಯಾಂಕುಗಳು ಕನ್ನಡಕ್ಕೆ ಆದ್ಯತೆ ನೀಡಬೇಕು ಹೊರತು ತಪ್ಪು ಅನುವಾದವನ್ನು ಅನುಮೋದಿಸಬಾರದು. ಈ ರೀತಿ ಎಟಿಎಂನಲ್ಲಿ ನಡೆಯುತ್ತಿರುವ ಕನ್ನಡದ ಕೊಲೆಗೆ ಕೊನೆ ಎಂದು?
-ಜಗನ್ನಾಥ ಗುರು, ಯಶವಂತಪುರ