ಬೆಂಗಳೂರಿನ ಜೈವಿಕ ತಂತ್ರಜ್ಞಾನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಹಾಗೂ ದೂರದರ್ಶನ ಚಂದನದ ‘ಬಿ’ ಗ್ರೇಡ್ ಭರತನಾಟ್ಯ
ಕಲಾವಿದೆ ನಂದಿತಾ ನಟೇಶನ್ (Nanditha Nateshan) ಅವರು ಉಡುಪಿ ಶ್ರೀಕೃಷ್ಣ ಮಠದ (Udupi Sri Krishna Mutt) ರಾಜಾಂಗಣ ವೇದಿಕೆಯಲ್ಲಿ ಶ್ರೀಕೃಷ್ಣ ಪರಮಾತ್ಮನಿಗೆ ನೃತ್ಯಾರ್ಪಣೆ ಸಲ್ಲಿಸಿದರು.

ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಶಿರೂರು ಮಠದ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಂದಿತಾ ಅವರು ಭರತನಾಟ್ಯದ ವಿವಿಧ ಅಂಗಗಳನ್ನು ಒಳಗೊಂಡ ನೃತ್ಯ ಪ್ರದರ್ಶನ ನೀಡಿದರು. ಅವರ ನೃತ್ಯದಲ್ಲಿನ ಭಾವಾಭಿನಯ ಹಾಗೂ ನೃತ್ಯ ಕೌಶಲ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಬೆಂಗಳೂರು ನಿವಾಸಿಗಳಾದ ಶ್ರೀ ನಟೇಶನ್ ಎಸ್. ಹಾಗೂ ಶ್ರೀಮತಿ ನಿತ್ಯಾ ಕೆ.ಎನ್. ಅವರ ಪುತ್ರಿಯಾಗಿರುವ ನಂದಿತಾ, ಪ್ರಸ್ತುತ ಜೈವಿಕ ತಂತ್ರಜ್ಞಾನ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ 13 ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದು, ಚಿನ್ಮುದ್ರ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್‌ನ ನಿರ್ದೇಶಕಿ ಗುರು ಶ್ರೀಮತಿ ಶುಭದಾ ಪ್ರಭಾಕರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಅವರು ರವೀಂದ್ರ ಭಾರತಿ ವಿಶ್ವವಿದ್ಯಾಲಯ, ಕೊಲ್ಕತ್ತಾ ನಡೆಸಿದ ಜೂನಿಯರ್ ಹಾಗೂ ಸೀನಿಯರ್ ಭರತನಾಟ್ಯ ಪರೀಕ್ಷೆಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿದ್ದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವಿದ್ಯಾರ್ಥಿವೇತನಕ್ಕೆ ಭಾಜನರಾಗಿದ್ದಾರೆ. ಪ್ರಸಾರ ಭಾರತಿ ಅಧೀನದ ದೂರದರ್ಶನ ಚಂದನದಿಂದ ‘ಬಿ’ ಗ್ರೇಡ್ ಭರತನಾಟ್ಯ ಕಲಾವಿದೆಯಾಗಿ ಮಾನ್ಯತೆ ಪಡೆದಿದ್ದಾರೆ.
ಭರತನಾಟ್ಯದ ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿಯೂ ತರಬೇತಿ ಪಡೆದಿರುವ ನಂದಿತಾ ಅವರು ಚಿತ್ರಕಲೆಯಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಎಡಿಎ ರಂಗಮಂದಿರ, ಸುರಭಾರತಿ, ಮೇಡೈ, ಕೊಟ್ಟೆ ವೆಂಕಟೇಶ್ವರ ದೇವಸ್ಥಾನ, ಗುರುವಾಯೂರು ದೇವಸ್ಥಾನ ಸೇರಿದಂತೆ ಹಲವು ಪ್ರಮುಖ ವೇದಿಕೆಗಳಲ್ಲಿ ಅವರು ನೃತ್ಯ ಪ್ರದರ್ಶನ ನೀಡಿದ್ದಾರೆ.

