ಬೆಂಗಳೂರು: ತಮ್ಮ ಮಾಧುರ್ಯಭರಿತ ಧ್ವನಿಯಿಂದಲೇ ಚಿತ್ರರಂಗದಲ್ಲಿ ಜನರ ಮನಗೆದ್ದಿದ್ದ ಗಾಯಕಿ ಎಸ್.ಜಾನಕಿ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಹಳ್ಳಿಯ ಸೊಗಡಿನ ಹಾಡುಗಳಿಂದ ಹಿಡಿದು ಎಲ್ಲಾ ಪ್ರಕಾರದ ಗೀತೆಗಳನ್ನೂ ಅವರು ಹಾಡಿದ್ದರು. “ದಕ್ಷಿಣ ಭಾರತದ ‘ಗಾನಕೋಗಿಲೆ’ ಎಂದೇ ಪ್ರಖ್ಯಾತರಾದ ದಂತಕಥೆ, ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಆರು ದಶಕಗಳಿಗಿಂತಲೂ ಹೆಚ್ಚು ಕಾಲ ಚಿತ್ರರಂಗದಲ್ಲಿ ತಮ್ಮ ಸುಮಧುರ ಕಂಠದ ಮೂಲಕ ಮನೆಮಾತಾಗಿದ್ದರು. ತಮ್ಮ ಸುದೀರ್ಘ ಗಾಯನ ಜೀವನದಲ್ಲಿ ಅವರು 17 ಭಾಷಗಳಲ್ಲಿ 48 ಸಾವಿರಕ್ಕೂ ಅಧಿಕ ಅಮರ ಗೀತೆಗಳಿಗೆ ದನಿಯಾಗಿದ್ದರು ಎಂದು ಸ್ಮರಿಸಿದ್ದಾರೆ.
ಅವರ ಅಭಿಮಾನಿಗಳು, ಕುಟುಂಬಕ್ಕೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

