ಬೆಂಗಳೂರು: ಮಹಿಳಾ ಉದ್ಯಮಿಗಳು( Women Entrepreneurs) ತಮ್ಮ ಉದ್ಯಮಗಳನ್ನು ಬಲಪಡಿಸಲು, ವ್ಯಾಪಾರ ನಿರ್ವಹಣಾ ಪದ್ಧತಿಗಳನ್ನು ಸುಧಾರಿಸಲು ಮತ್ತು ತಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸಲು ನೆರವಾಗುವ ಉದ್ದೇಶದಿಂದ ಉಬುಂಟು ಒಕ್ಕೂಟವು ‘ಉಬುಂಟುಸ್ ಸ್ಪ್ರಿಂಗ್ ಬೋರ್ಡ್ – ಬ್ಲೂಪ್ರಿಂಟ್ ಫಾರ್ ಬಿಸಿನೆಸ್ ಗ್ರೋತ್’(Ubuntu’s Springboard – Blueprint for Business Growth) ಎಂಬ ವಿಶೇಷ ವ್ಯಾಪಾರ ಅಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿ ಉಪಕ್ರಮಕ್ಕೆ ಚಾಲನೆ ನೀಡಿದೆ. ನವೆಂಬರ್ 19 ರಂದು ಇನ್ಫ್ಯಾಂಟ್ರಿ ರಸ್ತೆಯ ಐಎಎಸ್ ಅಧಿಕಾರಿಗಳ ಸಂಘದಲ್ಲಿ ಉದ್ಘಾಟನೆಗೊಂಡ ಈ ಉಪಕ್ರಮವು, ಮಹಿಳಾ ಉದ್ಯಮಿಗಳು ತಮ್ಮ ಉದ್ಯಮಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅಗತ್ಯವಾದ ಸೂಕ್ತ ಮಾರ್ಗದರ್ಶನ, ಸಾಂಸ್ಥಿಕ ಬೆಂಬಲ, ಆರ್ಥಿಕ ಸಂಪರ್ಕಗಳು ಮತ್ತು ಪ್ರಾಯೋಗಿಕ ವ್ಯಾಪಾರ ಜ್ಞಾನವನ್ನು ಒದಗಿಸುವತ್ತ ಗಮನಹರಿಸುತ್ತದೆ.
ಈ ಉಪಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಉಬುಂಟು ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ನಿವೃತ್ತ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ ಅವರು, ಮಹಿಳಾ ಉದ್ಯಮಿಗಳಲ್ಲಿ ಬೆಳೆಯುವ ಸಾಮರ್ಥ್ಯ ಮತ್ತು ವ್ಯಾಪಾರದ ಭದ್ರ ಬುನಾದಿ ಈಗಾಗಲೇ ಇದೆ. ಆದರೆ ವಿಸ್ತರಣೆಯ ಮುಂದಿನ ಹಂತವನ್ನು ತಲುಪಲು ಅವರಿಗೆ ವ್ಯವಸ್ಥಿತ ಮಾರ್ಗದರ್ಶನ, ಸಲಹೆ ಮತ್ತು ಸಂಪನ್ಮೂಲಗಳ ಲಭ್ಯತೆಯ ಅಗತ್ಯವಿದೆ ಎಂದು ಒತ್ತಿ ಹೇಳಿದರು.
‘ಸ್ಪ್ರಿಂಗ್ ಬೋರ್ಡ್’ ಹಿಂದಿನ ಪರಿಕಲ್ಪನೆಯನ್ನು ವಿವರಿಸಿದ ರತ್ನಪ್ರಭಾ ಅವರು, ಮಹಿಳಾ ಉದ್ಯಮಿಗಳು ತಮ್ಮ ವ್ಯಾಪಾರ ಪಯಣದಲ್ಲಿ ದೊಡ್ಡ ಮಟ್ಟದ ವೃದ್ಧಿಯನ್ನು ಕಾಣಲು ಸಹಾಯ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ ಎಂದರು. ಉದಾಹರಣೆಗೆ, ಪ್ರಸ್ತುತ ವಾರ್ಷಿಕ 10 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿರುವ ಮಹಿಳಾ ಉದ್ಯಮಿಯೊಬ್ಬರು ಸರಿಯಾದ ಬೆಂಬಲ, ಮಾರ್ಗದರ್ಶನ ಮತ್ತು ವ್ಯಾಪಾರ ತಂತ್ರಗಳೊಂದಿಗೆ 1 ಕೋಟಿ ರೂಪಾಯಿವರೆಗೆ ವಹಿವಾಟನ್ನು ವಿಸ್ತರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ಅವರು ತಿಳಿಸಿದರು. ಗ್ರಾಹಕ ನಿರ್ವಹಣೆ, ಮಾರುಕಟ್ಟೆ ಮತ್ತು ಪ್ರಚಾರ, ಹಣಕಾಸಿನ ಲಭ್ಯತೆ ಹಾಗೂ ಸೂಕ್ತ ಬೆಳವಣಿಗೆಯ ತಂತ್ರಗಳನ್ನು ಗುರುತಿಸುವುದು ಸೇರಿದಂತೆ ಉದ್ಯಮಶೀಲತೆಯ ನಿರ್ಣಾಯಕ ಅಂಶಗಳನ್ನು ಈ ಕಾರ್ಯಕ್ರಮವು ಒಳಗೊಂಡಿರುತ್ತದೆ ಎಂದು ಅವರು ವಿವರಿಸಿದರು. ಯಶಸ್ವಿ ಉದ್ಯಮವನ್ನು ಕಟ್ಟುವುದು ಒಂದು ದೀರ್ಘಕಾಲೀನ ಪ್ರಕ್ರಿಯೆಯಾಗಿದ್ದು, ಮಹಿಳಾ ನೇತೃತ್ವದ ಉದ್ಯಮಗಳನ್ನು ಬೆಂಬಲಿಸುವ ಉಬುಂಟುವಿನ ನಿರಂತರ ಪ್ರಯತ್ನಕ್ಕೆ ಈ ಚಾಲನೆಯು ಮುನ್ನುಡಿಯಾಗಿದೆ ಎಂದು ಅವರು ಹೇಳಿದರು.
ಸ್ವಯಂ-ಹೂಡಿಕೆ ಮತ್ತು ಸಮಯ ನಿರ್ವಹಣೆಯ ಮಹತ್ವವನ್ನು ಒತ್ತಿಹೇಳಿದ ರತ್ನಪ್ರಭಾ ಅವರು, ಮಹಿಳಾ ಉದ್ಯಮಿಗಳು ತಮ್ಮ ವೃತ್ತಿಪರ ಬೆಳವಣಿಗೆಗಾಗಿ ಸಮಯವನ್ನು ಮೀಸಲಿಡುವಂತೆ ಕರೆ ನೀಡಿದರು. “ನಾವು ಮಹಿಳೆಯರು ನಮಗಾಗಿ ಸಮಯವನ್ನು ನೀಡದಿದ್ದರೆ, ಬೇರೆ ಯಾರೂ ನೀಡುವುದಿಲ್ಲ,” ಎಂದು ಹೇಳಿದ ಅವರು, ಉದ್ಯಮಶೀಲತೆಯ ಯಶಸ್ಸಿಗೆ ಸಮಯ ನಿರ್ವಹಣೆ, ನಿರಂತರ ಕಲಿಕೆ ಮತ್ತು ಮಾರ್ಗದರ್ಶನ ಪಡೆಯುವ ಇಚ್ಛಾಶಕ್ತಿ ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಉಬುಂಟು ಒಕ್ಕೂಟ ಮತ್ತು ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) ನಡುವೆ ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡಿದ್ದು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಇದು ಮಹಿಳಾ ಉದ್ಯಮಿಗಳನ್ನು ಸಾಂಸ್ಥಿಕ ಆರ್ಥಿಕ ಬೆಂಬಲ ಒದಗಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
ಈ ಸಹಯೋಗದ ಕುರಿತು ಮಾತನಾಡಿದ ಸಿದ್ಬಿಯ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಎಲ್.ಆರ್. ನಾರಾಯಣ ಅವರು, ನೀತಿ ನಿರೂಪಣೆಯಲ್ಲಿ ಮತ್ತು ಉದ್ಯಮಿಗಳ ಸಮಸ್ಯೆಗಳು ಹಾಗೂ ಅಗತ್ಯಗಳನ್ನು ಪ್ರತಿನಿಧಿಸುವಲ್ಲಿ ಕೈಗಾರಿಕಾ ಸಂಘಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಸಾಲ ಪಡೆಯಲು ಅರ್ಹವಾಗಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಗುರುತಿಸುವ ಮತ್ತು ಆರ್ಥಿಕ ನೆರವಿನ ಅಗತ್ಯವಿರುವ ಉದ್ಯಮಗಳಿಗೆ ಹಣಕಾಸಿನ ಸೌಲಭ್ಯವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಸಿದ್ಬಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ವಿವರಿಸಿದರು.
ಮಹಿಳಾ ಉದ್ಯಮಿಗಳಿಗೆ ವಿಶೇಷ ವ್ಯಾಪಾರ ಮಾರ್ಗದರ್ಶನ ಮತ್ತು ತರಬೇತಿ ನೀಡಲು ಐಐಎಂ ಬೆಂಗಳೂರಿನ ಎನ್ಎಸ್ಆರ್ಸಿಇಎಲ್ ಜೊತೆ ಉಬುಂಟು ಕೈಜೋಡಿಸಿರುವುದು ಮತ್ತೊಂದು ಪ್ರಮುಖ ಘೋಷಣೆಯಾಗಿತ್ತು. ಮೊದಲ ತಂಡದಲ್ಲಿ 60 ಮಹಿಳಾ ಉದ್ಯಮಿಗಳು ಎಂದು ಯೋಜಿಸಲಾಗಿತ್ತು. ಆದರೆ ಈಗಾಗಲೇ 100 ಸದಸ್ಯರು ನೋಂದಾಯಿಸಿದ್ದು, ಅವರಿಗೆ ವ್ಯಾಪಾರವನ್ನು ನಡೆಸುವ ಮತ್ತು ಬೆಳೆಸುವ ವಿವಿಧ ಅಂಶಗಳ ಕುರಿತು 4 ರಿಂದ 5 ದಿನಗಳ ಆನ್ಲೈನ್ ಮಾರ್ಗದರ್ಶನ ನೀಡಲಾಗುವುದು ಎಂದು ರತ್ನಪ್ರಭಾ ತಿಳಿಸಿದರು. ವ್ಯಾಪಾರ ಅಭಿವೃದ್ಧಿ, ನಿರ್ವಹಣೆ ಮತ್ತು ಬೆಳವಣಿಗೆಯ ತಂತ್ರಗಳ ಕುರಿತು ಪ್ರಾಯೋಗಿಕ ಒಳನೋಟಗಳನ್ನು ಒದಗಿಸುವಂತೆ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.
ಈ ಕಾರ್ಯಕ್ರಮವನ್ನು ಎಲ್ಲರಿಗೂ ಕೈಗೆಟುಕುವಂತೆ ಮಾಡಲು, ಭಾಗವಹಿಸುವ ಮಹಿಳಾ ಉದ್ಯಮಿಗಳ ಕೋರ್ಸ್ ಶುಲ್ಕದ ಶೇಕಡಾ 50 ರಷ್ಟನ್ನು ಉಬುಂಟು ಭರಿಸುವ ಮೂಲಕ ಆರ್ಥಿಕ ಬೆಂಬಲ ನೀಡಲಿದೆ. ಈ ಉಪಕ್ರಮವನ್ನು ಐಐಎಂ ಬೆಂಗಳೂರಿನ ಪರಿಣತಿಯನ್ನು ಉದ್ಯಮಿಗಳ ಮನೆಬಾಗಿಲಿಗೆ ತರುವ ಪ್ರಯತ್ನ ಎಂದು ಬಣ್ಣಿಸಿದರು.
ಈ ಕಾರ್ಯಕ್ರಮದಲ್ಲಿ ಬ್ರ್ಯಾಂಡ್ ಮಾರುಕಟ್ಟೆ ಒದಗಿಸುವುದು, ಸಂಧಾನ ಮತ್ತು ಸಂವಹನ ಕೌಶಲ್ಯಗಳು, ಮಾರುಕಟ್ಟೆ ಮತ್ತು ಮಾರಾಟ ತಂತ್ರಗಳು, ಗ್ರಾಹಕರ ವರ್ತನೆ, ಬ್ರ್ಯಾಂಡ್ ಲಾಭದಾಯಕತೆ, ಕೃತಕ ಬುದ್ಧಿಮತ್ತೆ ಮತ್ತು ಹಣಕಾಸು ನಿರ್ವಹಣೆಯನ್ನು ಒಳಗೊಂಡ ತಜ್ಞರ ನೇತೃತ್ವದ ವಿಶೇಷ ಗೋಷ್ಠಿಗಳನ್ನ ನಡೆಸಲಾಯಿತು.
ಐಐಎಂ ಬೆಂಗಳೂರಿನ ಎನ್ಎಸ್ಆರ್ಸಿಇಎಲ್ ಸಿಇಒ ಶ್ರೀಮತಿ ರಸಿಕಾ ಪ್ರಶಾಂತ್ ಮತ್ತು ಪ್ರಾಧ್ಯಾಪಕರಾದ ಶ್ರೀ ವಿಶಾಲ್ ಎಸ್. ಅವರು ಉದ್ಯಮಶೀಲತೆ, ವ್ಯಾಪಾರ ಪೋಷಣೆ ಮತ್ತು ಸುಸ್ಥಿರ ಉದ್ಯಮಗಳನ್ನು ವಿಸ್ತರಿಸುವ ಕುರಿತು ಒಳನೋಟಗಳನ್ನು ಹಂಚಿಕೊಂಡರು. ಗೋವಾದ ಸೊಲಾನಾ ಫೌಂಡೇಶನ್ ಮತ್ತು ಶ್ರೀ ರೇಣುಕಾ ಇನ್ಸ್ಟಿಟ್ಯೂಟ್ ಫಾರ್ ರೂರಲ್ ಡೆವಲಪ್ಮೆಂಟ್ ಅಂಡ್ ರಿಸರ್ಚ್ ಬೆಂಬಲದೊಂದಿಗೆ ನಡೆದ ಈ ಉಪಕ್ರಮವು ಮಹಿಳಾ ಉದ್ಯಮಿಗಳು, ಉದ್ಯಮ ತಜ್ಞರು, ಸಾಂಸ್ಥಿಕ ಪ್ರತಿನಿಧಿಗಳು ಮತ್ತು ವಿವಿಧ ಸಂಘಗಳ ಸದಸ್ಯರನ್ನು ಒಂದೆಡೆ ಸೇರಿಸಿತು.

