ಪ್ರಸ್ತುತ ಭಾರತದಲ್ಲಿ ಒಟ್ಟು 822 ಜಿಐ(GI) ನೋಂದಣಿಗಳಿದ್ದು, ಈ ಪೈಕಿ ಕರ್ನಾಟಕವೊಂದೇ 51 ಉತ್ಪನ್ನಗಳ ಜಿಐ ಟ್ಯಾಗ್ ಹೊಂದುವ ಮೂಲಕ ದೇಶದಲ್ಲೇ ಗಮನಾರ್ಹ ಸಾಧನೆ ಮಾಡಿದೆ.
ಈ ಹಿಂದೆ ‘ಕರಿ ಇಶಾದ್ ಮಾವಿನ ಹಣ್ಣಿಗೆ’ (Kari Ishad Mangoes) ಜಿಐ ನೋಂದಣಿ ಪ್ರಕ್ರಿಯೆಗೆ ನೆರವಾಗಿದ್ದ ನಬಾರ್ಡ್, ಪ್ರಸಕ್ತ ಆರ್ಥಿಕ ವರ್ಷದಲ್ಲಿ (2025-26) ರಾಜ್ಯದ ನಾಲ್ಕು ವಿಶಿಷ್ಟ ಉತ್ಪನ್ನಗಳನ್ನು ಜಿಐ ನೋಂದಣಿಗೆ ಒಳಪಡಿಸಲು ಮುಂದಾಗಿದೆ.
ತಿಪಟೂರು ಕೊಬ್ಬರಿ (Tiptur Coconut), ಹೊಯ್ಸಳ ಶೈಲಿಯ ಶಿಲ್ಪಕಲೆ (Hoysala Style Stone Art), ಸಾಣಿಕಟ್ಟೆ ಉಪ್ಪು (Sanikatte Salt), ಹಾಗೂ ಹವಾಮಾನ ವೈಪರೀತ್ಯ ತಡೆದುಕೊಳ್ಳುವ ತರಕಾರಿ ಜಾತಿಗೆ ಸೇರಿದ ಕುನಬಿಮುದ್ಲಿ ಗಡ್ಡೆ (KunbiMudli) ಸೇರಿದೆ.
ಕೇವಲ ನೋಂದಣಿಗೆ ಮಾತ್ರ ಸೀಮಿತವಾಗದೆ, ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ವಿಸ್ತರಣೆಗೂ ನಬಾರ್ಡ್ ಗಮನಹರಿಸಿದೆ. ನೇಕಾರರು ಮತ್ತು ಕುಶಲಕರ್ಮಿಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಿದೆ.
ಉಡುಪಿ ಸೀರೆಗಳ ಪ್ರಚಾರಕ್ಕಾಗಿ ಪ್ರತ್ಯೇಕ ವೆಬ್‍ಸೈಟ್(Website) ಅಭಿವೃದ್ಧಿ ಪಡಿಸಲಾಗುತ್ತಿದೆ. ಬಾಗಲಕೋಟೆಯ ಗುಳೇದಗುಡ್ಡ ಖಾನದ ನೇಯ್ಗೆದಾರರು ಮತ್ತು ಕುಶಲಕರ್ಮಿಗಳಿಗೆ ತರಬೇತಿ ಹಾಗೂ ಸಾಮಥ್ರ್ಯ ವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಐಹೊಳೆಯಲ್ಲಿ ಜಿಐ ಸ್ಟೋರ್: ಪ್ರವಾಸಿಗರನ್ನು ಆಕರ್ಷಿಸಲು ಬಾಗಲಕೋಟೆಯ ಐತಿಹಾಸಿಕ ತಾಣವಾದ ಐಹೊಳೆಯಲ್ಲಿ ‘ಇಳಕಲ್ ಸೀರೆಗಳ'(Ilkal Saree) ವಿಶೇಷ ಜಿಐ ಸ್ಟೋರ್ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ಇದು ದೇಶಿ ಮತ್ತು ವಿದೇಶಿ ಪ್ರವಾಸಿಗರಿಗೆ ಅಧಿಕೃತ ಜಿಐ ಉತ್ಪನ್ನಗಳನ್ನು ಖರೀದಿಸಲು ಸೂಕ್ತ ವೇದಿಕೆಯಾಗಲಿದೆ.
ಸಾಂಪ್ರದಾಯಿಕ ಉತ್ಪನ್ನಗಳನ್ನು ಸುಸ್ಥಿರ ಮತ್ತು ಲಾಭದಾಯಕ ಉದ್ಯಮಗಳನ್ನಾಗಿ ಪರಿವರ್ತಿಸುವುದು, ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಮೂಲಕ ಗ್ರಾಮೀಣ ಭಾಗದ ಆರ್ಥಿಕತೆಯನ್ನು ಬಲಪಡಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ನಬಾರ್ಡ್‍ನ ಮುಖ್ಯ ಮಹಾಪ್ರಬಂಧಕರಾದ ಡಾ. ಸುರೇಂದ್ರ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
