ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ತನ್ನ ಸೇವೆಯಲ್ಲಿ ಆದಾಯ(Income) ಸೋರಿಕೆ ತಡೆಯಲು ಹಾಗೂ ನಿಯಮಬದ್ಧ ಪ್ರಯಾಣವನ್ನು ಉತ್ತೇಜಿಸಲು ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿದ್ದು, ಆಗಸ್ಟ್ 2026ರ ಮಾಹೆಯಲ್ಲಿ ಸಾವಿರಾರು ಟಿಕೆಟ್ ರಹಿತ(Without Ticket) ಪ್ರಯಾಣಿಕರನ್ನು ಪತ್ತೆ ಹಚ್ಚಿ ದಂಡ ವಿಧಿಸಿದೆ.
ನಿಗಮದ ಕಾರ್ಯಾಚರಣೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹಾಗೂ ನೆರೆರಾಜ್ಯಗಳ ಮಾರ್ಗಗಳಲ್ಲಿ ಸಂಚರಿಸುವ ಬಸ್ಸ್‌ಗಳಲ್ಲಿ ತನಿಖಾ ತಂಡಗಳು ವ್ಯಾಪಕ ತಪಾಸಣೆ ನಡೆಸಿವೆ. ಆಗಸ್ಟ್ ಮಾಹೆಯಲ್ಲಿ ಒಟ್ಟು 44,848 ವಾಹನಗಳನ್ನು ತನಿಖೆಗೆ ಒಳಪಡಿಸಲಾಗಿದ್ದು, ಈ ವೇಳೆ 4,461 ಆದಾಯ ಸೋರಿಕೆ ಪ್ರಕರಣಗಳು ಪತ್ತೆಯಾಗಿವೆ.
ಸೂಕ್ತ ಟಿಕೆಟ್ ಪಡೆಯದೆ ಪ್ರಯಾಣಿಸುತ್ತಿದ್ದ 4,862 ಪ್ರಯಾಣಿಕರಿಂದ ಒಟ್ಟು ರೂ. 8,90,279/- ಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ. ಇದಲ್ಲದೆ, ಸಿಬ್ಬಂದಿಗಳ ನಿರ್ಲಕ್ಷ್ಯ ಹಾಗೂ ಲೋಪಗಳಿಂದ ನಿಗಮಕ್ಕೆ ಆಗುತ್ತಿದ್ದ ರೂ. 1,33,441/- ಗಳ ಆದಾಯ ಸೋರಿಕೆಯನ್ನು ತನಿಖಾಧಿಕಾರಿಗಳು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ತಪ್ಪಿತಸ್ಥ ಸಿಬ್ಬಂದಿಗಳ ವಿರುದ್ಧ ಇಲಾಖಾ ರೀತ್ಯಾ ಸೂಕ್ತ ಶಿಸ್ತಿನ ಕ್ರಮಗಳನ್ನು ಜರುಗಿಸಲಾಗಿದೆ.
ಪ್ರಯಾಣಿಕರಲ್ಲಿ ಮನವಿ:
ಸಾರ್ವಜನಿಕ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಸರಿಯಾದ ಟಿಕೆಟ್ ಅಥವಾ ಮಾನ್ಯವಾದ ಪಾಸ್ ಪಡೆದು ಪ್ರಯಾಣಿಸಬೇಕು ಮತ್ತು ಸಾರಿಗೆ ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ನಿಗಮವು ಪ್ರಕಟಣೆಯಲ್ಲಿ ತಿಳಿಸಿದೆ.

