ಗುರುದೇಶಪಾಂಡೆ ಒಡೆತನದ ’ಜಿ ಅಕಾಡೆಮಿ’ಯಲ್ಲಿ(Zee Academy) ನಟನೆ ಕಲಿತಿರುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ಸಲುವಾಗಿ ’ರಾಮರಸ’ ಚಿತ್ರವನ್ನು(Ramarasa Film) ನಿರ್ಮಾಣ ಮಾಡುತ್ತಿದ್ದಾರೆ. ’ಮೈತ್ರಿ’ ’ಜಟ್ಟ’ ಖ್ಯಾತಿಯ ಬಿ.ಎಂ.ಗಿರಿರಾಜ್(B.M.Giriraj) ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಆದಾಶರ್ಮಾ ನಟಿಸುತ್ತಿರುವುದು ಸುದ್ದಿಯಾಗಿ ಯಾವ ಪಾತ್ರ ಎಂಬುದನ್ನು ರಿವೀಲ್ ಮಾಡಿರಲಿಲ್ಲ. ಈಗ ನಿರ್ದೇಶಕರು ಅವರ ರೋಲ್ ಬಗ್ಗೆ ವಿವರ ನೀಡುವ ಜತೆಗೆ ಪೋಸ್ಟರ್ನ್ನು ಬಿಡುಗಡೆ ಮಾಡಿದ್ದಾರೆ. ಪರಾಶಕ್ತಿಯಾಗಿ ಕೈಯಲ್ಲಿ ತ್ರಿಶೂಲ ಹಿಡಿದುಕೊಂಡು ಕೋಪದಿಂದ ಯಾರನ್ನೋ ನೋಡುತ್ತಿರುವ ಭಂಗಿ ಕುತೂಹಲ ಮೂಡಿಸಿದೆ.
ಬಿಗ್ಬಾಸ್ ಕನ್ನಡ 10ರ ವಿಜೇತ ಕಾರ್ತಿಕ್ ಮಹೇಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 12ನೇ ಶತಮಾತಮಾನದ ಒಂದು ಪೌರಾಣಿಕ ಕಥೆಯನ್ನು ಇಂದಿನ ಆಧುನಿಕ ಕಾಲಘಟ್ಟಕ್ಕೆ ಹೊಂದಿಕೊಳ್ಳುವಂತೆ ಚಿತ್ರಕಥೆಯನ್ನು ಸೃಷ್ಟಿಸಲಾಗಿದೆ. ಸಿನಿಮಾದಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ಕಲಾವಿದರು ಅಭಿನಯಿಸುತ್ತಿದ್ದು, ದೊಡ್ಡ ತಾರಾಬಳಗವನ್ನೇ ನೋಡಬಹುದು.
ಸಂಗೀತ ಬಿ.ಜೆ.ಭರತ್, ಛಾಯಾಗ್ರಹಣ ಎ.ವಿ.ಕೃಷ್ಣಕುಮಾರ್, ಸಂಕಲನ ಅರ್ಜುನ್ಕಿಟ್ಟು, ನೃತ್ಯ ಮುರಳಿ, ಸಾಹಿತ್ಯ ಪುನೀತ್ಆರ್ಯ ಅವರದಾಗಿದೆ.

