ಬೆಂಗಳೂರು: ಅಲ್ ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿಯಡಿ ನಗರದ ಥಣಿಸಂದ್ರದಲ್ಲಿ ಅಕ್ರಮವಾಗಿ(Illegally) ನಡೆಸಲಾಗುತ್ತಿರುವ ಜಾಮಿಯಾ ಮೊಹಮ್ಮದೀಯ ಮನ್ಸೂರಾ ರೆಸಿಡೆನ್ಸಿಯಲ್ ಸ್ಕೂಲ್ (ಮದರಸಾ) ಹಾಗೂ ಸಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್(High Court), ಸರ್ಕಾರಕ್ಕೆ ನೋಟಿಸ್(Notice) ಜಾರಿಗೊಳಿಸಿದೆ.
ಬೆಂಗಳೂರಿನ ಪಾದರಾಯನಪುರದ ಚಾಂದ್ ಪಾಷಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ನ್ಯಾಯಮೂರ್ತಿ ಅನು ಸಿವರಾಮನ್ ಹಾಗೂ ನ್ಯಾಯಮೂರ್ತಿ ಕೆ.ಎಸ್ .ಭರತ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿ ರಾಜ್ಯ ಸರ್ಕಾರ, ಗೃಹ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಅಲ್ ಜಾಮಿಯಾ ಎಜುಕೇಶನ್ ಸೊಸೈಟಿ ಸೇರಿ ಮತ್ತಿತರಿಗೆ ನೋಟೀಸ್ ಜಾರಿ ಮಾಡಿತು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಲಕ್ಷ್ಮಿ ಅಯ್ಯಂಗಾರ್ , ‘‘ಮಹಾರಾಷ್ಟ್ರ ಸೊಸೈಟಿಗಳ ನೋಂದಣಿ ಕಾಯಿದೆ-1979ರಡಿ ನೋಂದಣಿ ಆಗಿರುವುದಾಗಿ ಸಂಸ್ಥೆ ಹೇಳುತ್ತಿದೆ. ಆದರೆ, ಅಂತಹ ಯಾವುದೇ ದಾಖಲೆಗಳು ಲಭ್ಯವಿಲ್ಲ. ನೋಂದಣಿ ಇಲ್ಲದೆ, ಈ ಸಂಸ್ಥೆಯು ಥಣಿಸಂದ್ರದಲ್ಲಿ ಮದರಸಾ ಮತ್ತು ಶಾಲೆ ನಡೆಸುತ್ತಿದ್ದು, 2025ರ ಮೇ 30ರಂದು ಶಿಕ್ಷಣ ಇಲಾಖೆ ಮಾನ್ಯತೆ ರದ್ದುಪಡಿಸಿದೆ. ಆದರೂ ಅಕ್ರಮವಾಗಿ ಶಾಲೆ ನಡೆಸಲಾಗುತ್ತಿದ್ದು, ಆ ಬಗ್ಗೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಅಲ್ಲಿಉತ್ತರ ಭಾರತದ ವಲಸೆ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ನಕಲಿ ದಾಖಲೆಗಳನ್ನು ಸಲ್ಲಿಸಿ 5 ಲಕ್ಷ ರೂ ಅನುದಾನ ಪಡೆದಿದೆ ಎಂದು ವಾದಿಸಿದರು.
‘‘ಅಕ್ರಮವಾಗಿ ನಡೆಸಲಾಗುತ್ತಿರುವ ಮದರಸಾ ಮತ್ತು ಶಾಲೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ಸರಕಾರ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಬೇಕು. ಅಲ್ ಜಾಮಿಯ ಮೊಹಮ್ಮದಿಯಾ ಎಜುಕೇಷನಲ್ ಸೊಸೈಟಿ ವಿರುದ್ಧ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಬೇಕು. ಇಡೀ ಪ್ರಕರಣವನ್ನು ಸರಕಾರ ಯಾವುದಾದರೂ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಬೇಕು, ಬಿಡುಗಡೆ ಮಾಡಲಾಗಿರುವ 5 ಲಕ್ಷ ರೂ. ಅನುದಾನ ವಾಪಸ್ ಪಡೆಯಬೇಕು, ತಕ್ಷಣ ಮದರಸಾ ಮತ್ತು ಶಾಲೆ ಸ್ಥಗಿತೊಳಿಸಲು ನಿರ್ದೇಶನ ನೀಡಬೇಕು,’’ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

