ವಿಶೇಷ ಚೇತನ ಮಕ್ಕಳು ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಂದ ನಾಡಿನ ಕಲೆ, ಸಂಸ್ಕೃತಿ, ಶೌರ್ಯ ಮತ್ತು ಪರಂಪರೆಯ ಮನಮೋಹಕ ಅನಾವರಣ
“ವೈವಿಧ್ಯಮಯ ಕಲೆ, ಸಾಹಿತ್ಯ, ಸಂಸ್ಕೃತಿ, (Culture) ಶೌರ್ಯ ಮತ್ತು ಪರಂಪರೆಯ ಶ್ರೀಮಂತಿಕೆಯನ್ನು ಮೈಗೂಡಿಸಿಕೊಂಡಿರುವ ಕರ್ನಾಟಕವು (Karnataka) ಇಂದು ಆಧುನಿಕ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಯಲ್ಲಿಯೂ ದೇಶದ ಮುಂಚೂಣಿ ರಾಜ್ಯವಾಗಿ ಹೊರಹೊಮ್ಮುತ್ತಿದೆ. 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ಕರ್ನಾಟಕವು ಪ್ರಮುಖ ಪಾತ್ರ ವಹಿಸಬೇಕಿದ್ದು, ಈ ಗುರಿ ಸಾಧನೆಗೆ ಸಮಾಜದ ಪ್ರತಿಯೊಂದು ವರ್ಗದ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ (Governor) ಡಾ. ಸುಧಾ ಯಾದವ್ (Dr. Sudha Yadav) ಅವರು ಹೇಳಿದರು.
ಲೋಕಭವನದ ಗಾಜಿನ ಮನೆಯಲ್ಲಿ ಗುರುವಾರ ಸಂಜೆ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ರಾಜ್ಯಪಾಲರು, ಸಮಸ್ತ ಕನ್ನಡಿಗರಿಗೆ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಿದರು.

ಕ್ರೀಡಾ ಸಾಧಕರಿಗೆ ರಾಜ್ಯಪಾಲರ ಅಭಿನಂದನೆ
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕ್ರೀಡಾ ಕ್ಷೇತ್ರದ ಗಣ್ಯರು ಹಾಗೂ ಕ್ರೀಡಾಪಟುಗಳನ್ನು ಆತ್ಮೀಯವಾಗಿ ಸ್ವಾಗತಿಸಿದ ರಾಜ್ಯಪಾಲರು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆ, ಪರಿಶ್ರಮ, ಶಿಸ್ತು ಹಾಗೂ ದೃಢಸಂಕಲ್ಪದಿಂದ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿರುವ ಕ್ರೀಡಾಪಟುಗಳ ಸಾಧನೆ ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಶ್ಲಾಘಿಸಿದರು.
ಕ್ರೀಡಾಪಟುಗಳು ತಮ್ಮ ಸಾಧನೆ ಹಾಗೂ ಕ್ರೀಡಾಸ್ಫೂರ್ತಿಯ ಮೂಲಕ ಯುವಜನತೆಗೆ ಮಾದರಿಯಾಗಿದ್ದಾರೆ. ಕ್ರೀಡೆಯು ಶಿಸ್ತು, ಆತ್ಮವಿಶ್ವಾಸ, ಸಹನೆ ಮತ್ತು ಸೋಲನ್ನು ಮೆಟ್ಟಿ ನಿಂತು ಮುನ್ನಡೆಯುವ ಮನೋಭಾವವನ್ನು ಬೆಳೆಸುತ್ತದೆ. ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿಯೂ ಹೊಸ ಎತ್ತರಗಳನ್ನು ತಲುಪಿ ರಾಜ್ಯ ಹಾಗೂ ರಾಷ್ಟ್ರದ ಗೌರವವನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಶುಭ ಹಾರೈಸಿದರು. 
ವಿಕಸಿತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರ ಕೈಜೋಡಿಕೆ ಅಗತ್ಯ
‘ಮಹಾನ್ ಮತ್ತು ಅಭಿವೃದ್ಧಿ ಹೊಂದಿದ ಕರ್ನಾಟಕ’ ನಿರ್ಮಾಣ ನಮ್ಮೆಲ್ಲರ ಕನಸಾಗಿದ್ದು, ಈ ಗುರಿಯನ್ನು ಸಾಕಾರಗೊಳಿಸಲು ರಾಜ್ಯವು ಅಭಿವೃದ್ಧಿಯ ಪಥದಲ್ಲಿ ನಿರಂತರವಾಗಿ ಮುನ್ನಡೆಯಬೇಕು. 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದಲ್ಲಿ ಕರ್ನಾಟಕವು ಬಲಿಷ್ಠ ಅಡಿಪಾಯವಾಗಬೇಕು. ಇದಕ್ಕಾಗಿ ಸಮಾಜದ ಪ್ರತಿಯೊಂದು ವರ್ಗದ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಸಾಮೂಹಿಕ ಪ್ರಯತ್ನ ಅತ್ಯಗತ್ಯ ಎಂದು ರಾಜ್ಯಪಾಲರು ಕರೆ ನೀಡಿದರು.
ಆಧುನಿಕತೆಯತ್ತ ಸಾಗುವ ಸಂದರ್ಭದಲ್ಲಿ ನಮ್ಮ ಬೇರುಗಳು, ಪರಿಸರ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಮರೆಯಬಾರದು. ಜಲ ಸಂರಕ್ಷಣೆ, ಸ್ವಚ್ಛ ಇಂಧನ ಬಳಕೆ, ಹಸಿರು ಪರಿಸರದ ವಿಸ್ತರಣೆ ಹಾಗೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಬೆಳೆಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ನಶಾಮುಕ್ತ ಕರ್ನಾಟಕವು ಕೇವಲ ಸಂಕಲ್ಪ ಅಥವಾ ಘೋಷಣೆಯಾಗದೆ, ಆರೋಗ್ಯಕರ, ಸುರಕ್ಷಿತ ಮತ್ತು ಸಮೃದ್ಧ ಕರ್ನಾಟಕ ನಿರ್ಮಾಣದ ಬುನಾದಿಯಾಗಬೇಕು ಎಂದು ಅವರು ತಿಳಿಸಿದರು.
ಅಂಗವೈಕಲ್ಯವನ್ನು ಮೀರಿದ ಪ್ರತಿಭೆ, ಆತ್ಮವಿಶ್ವಾಸ ಮತ್ತು ಕಲಾ ವೈಭವ – ಮಕ್ಕಳ ಪ್ರದರ್ಶನಕ್ಕೆ ಮನಸೋತ ಲೋಕಭವನ
ಸಮಾರಂಭದ ಅತ್ಯಂತ ವಿಶೇಷ ಹಾಗೂ ಹೃದಯಸ್ಪರ್ಶಿ ಆಕರ್ಷಣೆಯಾಗಿದ್ದು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು. ಅಂಧ ಮಕ್ಕಳು, ಕಿವುಡು ಮತ್ತು ಮೂಕ ಮಕ್ಕಳು ಸೇರಿದಂತೆ ವಿವಿಧ ವಿಶೇಷ ಚೇತನ ಮಕ್ಕಳು ಹಾಗೂ ಬೆಂಗಳೂರಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ತಮ್ಮ ಅದ್ಭುತ ಪ್ರತಿಭೆಯನ್ನು ಅನಾವರಣಗೊಳಿಸಿ, ಕರ್ನಾಟಕದ ಶ್ರೀಮಂತ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಮನಮೋಹಕವಾಗಿ ಪ್ರಸ್ತುತಪಡಿಸಿದರು. 
ದೈಹಿಕ ಸವಾಲುಗಳು ಪ್ರತಿಭೆ, ಸೃಜನಶೀಲತೆ ಮತ್ತು ಆತ್ಮವಿಶ್ವಾಸಕ್ಕೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಮಕ್ಕಳು ತಮ್ಮ ಪ್ರದರ್ಶನಗಳ ಮೂಲಕ ಸಾಬೀತುಪಡಿಸಿದರು. ಸಂಗೀತ, ನೃತ್ಯ, ಅಭಿನಯ ಮತ್ತು ಕಲಾತ್ಮಕ ಅಭಿವ್ಯಕ್ತಿಯ ಮೂಲಕ ಅವರು ಪ್ರೇಕ್ಷಕರ ಮನಗೆದ್ದರು. ಮಕ್ಕಳ ಪ್ರತಿಯೊಂದು ಪ್ರದರ್ಶನವೂ ಅವರ ಪರಿಶ್ರಮ, ತರಬೇತಿ, ಆತ್ಮವಿಶ್ವಾಸ ಮತ್ತು ಕಲೆಯ ಮೇಲಿನ ಪ್ರೀತಿಗೆ ಸಾಕ್ಷಿಯಾಗಿತ್ತು.
ಸರ್ಕಾರಿ ಪ್ರೌಢಶಾಲೆ, ಬಾಗಲಗುಂಟೆಯ ವಿದ್ಯಾರ್ಥಿಗಳು ‘ಕನ್ನಡ ಕಲರವ’ ಎಂಬ ಶೀರ್ಷಿಕೆಯಡಿ ಸುಮಾರು 8ರಿಂದ 10 ನಿಮಿಷಗಳ ಸುಂದರ ಸಮ್ಮಿಲನ ನೃತ್ಯವನ್ನು ಪ್ರಸ್ತುತಪಡಿಸಿದರು. ಬಾದಾಮಿ ಶಾಸನದಲ್ಲಿ ವರ್ಣಿಸಲಾದ ಕನ್ನಡಿಗರ ಸದ್ಗುಣ, ಧೈರ್ಯ, ಸಹಾನುಭೂತಿ ಮತ್ತು ಸಾಂಸ್ಕೃತಿಕ ಅಭಿಮಾನವನ್ನು ನೃತ್ಯದ ಮೂಲಕ ಅನಾವರಣಗೊಳಿಸಿದರು.
ಜ್ಯೋತಿ ಸೇವಾ ಅಂಧ ಮಕ್ಕಳ ವಸತಿಯುತ ಪಾಠಶಾಲೆಯ ಮಕ್ಕಳು ಕರ್ನಾಟಕದೊಂದಿಗೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳ ಸಾಂಪ್ರದಾಯಿಕ ಗೀತೆಗಳನ್ನು ಸಂಯೋಜಿಸಿ, ನಾಲ್ಕು ರಾಜ್ಯಗಳ ಕಲೆ, ಸಂಸ್ಕೃತಿ, ಪರಂಪರೆ ಮತ್ತು ಪ್ರಕೃತಿ ಸೌಂದರ್ಯವನ್ನು ಬಿಂಬಿಸುವ ಮೂಲಕ ‘ವೈವಿಧ್ಯತೆಯಲ್ಲಿ ಏಕತೆ’ಯ ಸಂದೇಶ ಸಾರಿದರು. ಮಕ್ಕಳು ತಮ್ಮ ವಿಶಿಷ್ಟ ಕಲಾ ಪ್ರತಿಭೆ, ಆತ್ಮವಿಶ್ವಾಸ ಮತ್ತು ಮನಮೋಹಕ ಪ್ರದರ್ಶನದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಅಂಧತ್ವವು ಅವರ ಪ್ರತಿಭೆ ಮತ್ತು ಕಲಾತ್ಮಕ ಅಭಿವ್ಯಕ್ತಿಗೆ ಎಂದಿಗೂ ಮಿತಿಯಲ್ಲ ಎಂಬುದನ್ನು ತಮ್ಮ ಪ್ರದರ್ಶನದ ಮೂಲಕ ತೋರಿಸಿಕೊಟ್ಟರು.
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ನಾಗಶೆಟ್ಟಿಹಳ್ಳಿಯ ವಿದ್ಯಾರ್ಥಿಗಳು ‘ಕರ್ನಾಟಕದ ಕಲೆ, ಕಾವ್ಯ ಮತ್ತು ಸಂಸ್ಕೃತಿ’ ಎಂಬ ಶೀರ್ಷಿಕೆಯಡಿ ಸುಮಾರು 10 ನಿಮಿಷಗಳ ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು. ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಒನಕೆ ಓಬವ್ವ ಅವರ ಶೌರ್ಯಗಾಥೆ, ನಾಡಪ್ರಭು ಕೆಂಪೇಗೌಡರ ಸಾಧನೆ, ಕನ್ನಡದ ಎಂಟು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಅಮೂಲ್ಯ ಕೊಡುಗೆ ಹಾಗೂ ಹಂಪಿಯ ಐತಿಹಾಸಿಕ ವೈಭವವನ್ನು ನೃತ್ಯದ ಮೂಲಕ ಕಟ್ಟಿಕೊಟ್ಟರು. ನಾಡಿನ ನದಿಗಳು, ಫಲವತ್ತಾದ ಮಣ್ಣು, ಕೃಷಿ ಸಂಪತ್ತು ಮತ್ತು ಪ್ರಕೃತಿಯ ಸೌಂದರ್ಯವನ್ನೂ ಜನಪದ ಕಲೆಯ ಮೂಲಕ ಮನೋಜ್ಞವಾಗಿ ಪ್ರಸ್ತುತಪಡಿಸಿದರು.
ಸ್ವಸ್ತಿ ಸ್ಪೆಷಲ್ ಸ್ಕೂಲ್, ಸಂಜಯನಗರ, ಬೆಂಗಳೂರಿನ ವಿಶೇಷ ಚೇತನ ವಿದ್ಯಾರ್ಥಿಗಳು ಕರ್ನಾಟಕದ ಸಾಂಸ್ಕೃತಿಕ ನೃತ್ಯಕಲಾ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಅವರ ಶೌರ್ಯಗಾಥೆಗಳೊಂದಿಗೆ ಡೊಳ್ಳು ಕುಣಿತ, ಭರತನಾಟ್ಯ, ವೀರಗಾಸೆ, ಯಕ್ಷಗಾನ, ಪೂಜಾ ಕುಣಿತ ಮತ್ತು ನಂದಿಕೋಲು ಕುಣಿತದಂತಹ ಕರ್ನಾಟಕದ ವೈವಿಧ್ಯಮಯ ಸಾಂಪ್ರದಾಯಿಕ ಕಲೆಗಳನ್ನು ಕಿರು ನಾಟಕದ ಮೂಲಕ ಪರಿಚಯಿಸಿದರು. ವಿಶೇಷ ಚೇತನ ಮಕ್ಕಳ ಈ ವಿಶಿಷ್ಟ ಪ್ರಸ್ತುತಿ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯ ಜೊತೆಗೆ ಅವರ ಅಸಾಧಾರಣ ಪ್ರತಿಭೆ ಮತ್ತು ಆತ್ಮವಿಶ್ವಾಸವನ್ನು ಪ್ರತಿಬಿಂಬಿಸಿತು.
ಮಕ್ಕಳ ಈ ಎಲ್ಲ ಪ್ರದರ್ಶನಗಳು ಲೋಕಭವನದ ಗಾಜಿನ ಮನೆಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದವು. ಕರ್ನಾಟಕದ ಇತಿಹಾಸ, ಸಾಹಿತ್ಯ, ಜನಪದ ಕಲೆ, ವೀರ ಪರಂಪರೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ಕಲ್ಪಿಸಿದವು.
ಮಕ್ಕಳ ಪ್ರತಿಭೆ ಮತ್ತು ಪ್ರದರ್ಶನವನ್ನು ಹೃದಯಪೂರ್ವಕವಾಗಿ ಶ್ಲಾಘಿಸಿದ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು, ಎಲ್ಲ ಪುಟಾಣಿ ಕಲಾವಿದರನ್ನು ಅಭಿನಂದಿಸಿದರು. ಪ್ರತಿಯೊಂದು ಮಗುವಿನಲ್ಲಿಯೂ ವಿಶಿಷ್ಟ ಪ್ರತಿಭೆ ಅಡಗಿದ್ದು, ಅದನ್ನು ಗುರುತಿಸಿ ಬೆಳೆಸಲು ಸೂಕ್ತ ಅವಕಾಶ ಮತ್ತು ಪ್ರೋತ್ಸಾಹ ನೀಡುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಹೇಳಿದರು. ವಿಶೇಷ ಚೇತನ ಮಕ್ಕಳು ಸೇರಿದಂತೆ ಎಲ್ಲ ಮಕ್ಕಳಿಗೂ ಸಮಾನ ಅವಕಾಶ, ಗೌರವ ಮತ್ತು ಪ್ರೋತ್ಸಾಹ ದೊರೆಯಬೇಕು. ವಿದ್ಯಾರ್ಥಿಗಳಲ್ಲಿ ಜಾಗೃತಿ, ಸಕಾರಾತ್ಮಕ ಚಿಂತನೆ, ಕ್ರೀಡೆ, ಯೋಗ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಅವರು ತಿಳಿಸಿದರು.
ಸಂಸ್ಕೃತಿ ಮತ್ತು ಅಭಿವೃದ್ಧಿಯ ಸಂಗಮವೇ ಬಲಿಷ್ಠ ಕರ್ನಾಟಕ
ಭಾರತವು ಇಂದು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದು, ಬಲಿಷ್ಠ, ಸಮೃದ್ಧ ಮತ್ತು ಸ್ವಾವಲಂಬಿ ಕರ್ನಾಟಕವು ‘ವಿಕಸಿತ ಭಾರತ @2047’ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ರಾಜ್ಯಪಾಲರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಮತ್ತು ರಾಷ್ಟ್ರದ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು, ನಾಗರಿಕ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪಾಲಿಸುವುದು, ಪರಿಸರವನ್ನು ಸಂರಕ್ಷಿಸುವುದು ಹಾಗೂ ದೇಶದ ಸಾರ್ವಭೌಮತೆ, ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸೋಣ ಎಂದು ರಾಜ್ಯಪಾಲರು ಕರೆ ನೀಡಿದರು.
ಕೊನೆಯಲ್ಲಿ, ಮತ್ತೊಮ್ಮೆ ಸಮಸ್ತ ನಾಡಿನ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದ ಅವರು, ಸಮಾರಂಭದ ಯಶಸ್ಸಿಗೆ ಸಹಕರಿಸಿದ ಕ್ರೀಡಾಪಟುಗಳು, ಶಾಲೆಗಳ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಎಲ್ಲ ಆಯೋಜಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.

