ಬೆಂಗಳೂರು: ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ‘ಅಟಲ್ ವಯೋ ಅಭ್ಯುದಯ ಯೋಜನೆ’ (AVYAY) ಹಾಗೂ ಕರ್ನಾಟಕ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ 2026-27ನೇ ಸಾಲಿಗೆ “ಹಿರಿಯ ನಾಗರಿಕರ ಆರೈಕೆದಾರರ” (Geriatric Care Provider – NSQF Level-4) ಉಚಿತ ತರಬೇತಿ ಕಾರ್ಯಕ್ರಮಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸರ್ಕಾರಿ ಮತ್ತು ಖಾಸಗಿ ವೃದ್ಧಾಶ್ರಮಗಳು, ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂಗಳಲ್ಲಿ ಹಿರಿಯ ನಾಗರಿಕರಿಗೆ ವೈಯಕ್ತಿಕ ಆರೈಕೆ, ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆ, ಪೌಷ್ಟಿಕ ಆಹಾರ ಹಾಗೂ ಮಾನಸಿಕ ಬೆಂಬಲ ನೀಡುವ ಕುರಿತು ಅಗತ್ಯ ಜ್ಞಾನ ಮತ್ತು ವೃತ್ತಿಪರ ಕೌಶಲ್ಯಗಳನ್ನು ಈ ವಸತಿ ರಹಿತ ತರಬೇತಿಯಲ್ಲಿ ನೀಡಲಾಗುತ್ತದೆ. ಬೆಂಗಳೂರಿನ ಶ್ರೀ ಶತಶೃಂಗ ವಿದ್ಯಾ ಸಂಸ್ಥೆಯ ಮೂಲಕ ರಾಜ್ಯದ ಪ್ರತಿ ಜಿಲ್ಲೆಯಿಂದ 25 ಅಭ್ಯರ್ಥಿಗಳಂತೆ ಒಟ್ಟು 775 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು.
ತರಬೇತಿ ಕೇಂದ್ರಗಳು ಮತ್ತು ವ್ಯಾಪ್ತಿಯ ಜಿಲ್ಲೆಗಳು:
ರಾಜ್ಯದ ಒಟ್ಟು 5 ಜಿಲ್ಲಾ ಕೇಂದ್ರಗಳಲ್ಲಿ ತರಬೇತಿ ನಡೆಯಲಿದೆ.
ಬೆಂಗಳೂರು ಕೇಂದ್ರ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಒಳಗೊಂಡದ್ದು, ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ಆಶಾ ಶಾಲಿನಿ, ಮೊಬೈಲ್ ಸಂಖ್ಯೆ 81479 08899 ಇವರನ್ನು ಸಂಪರ್ಕಿಸಬಹುದು.
ಮೈಸೂರು ಕೇಂದ್ರ : ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ ಮತ್ತು ಹಾಸನ ಜಿಲ್ಲೆಗಳನ್ನು ಒಳಗೊಂಡದ್ದು, ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಶ್ರೀ ನಾಗರಾಜ್, ಮೊಬೈಲ್ ಸಂಖ್ಯೆ 81976 48899 ಇವರನ್ನು ಸಂಪರ್ಕಿಸಬಹುದು.
ದಾವಣಗೆರೆ ಕೇಂದ್ರ: ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಗಳನ್ನು ಒಳಗೊಂಡದ್ದು, ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಶ್ರೀ ಶ್ರೀನಿವಾಸ್, ಮೊಬೈಲ್ ಸಂಖ್ಯೆ 81478 48899 ಇವರನ್ನು ಸಂಪರ್ಕಿಸಬಹುದು.
ಹುಬ್ಬಳ್ಳಿ ಕೇಂದ್ರ: ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ ಮತ್ತು ಗದಗ ಜಿಲ್ಲೆಗಳನ್ನು ಒಳಗೊಂಡದ್ದು, ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಶ್ರೀ ಕಿರಣ್ ಕಟಾರಕಿ, ಮೊಬೈಲ್ ಸಂಖ್ಯೆ 81476 08899 ಇವರನ್ನು ಸಂಪರ್ಕಿಸಬಹುದು.
ಕಲಬುರಗಿ ಕೇಂದ್ರ: ಕಲಬುರಗಿ, ಬೀದರ್, ರಾಯಚೂರು, ವಿಜಯನಗರ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳನ್ನು ಒಳಗೊಂಡದ್ದು, ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಶ್ರೀ ಆಕಾಶ್, ಮೊಬೈಲ್ ಸಂಖ್ಯೆ 81476 08899 ಇವರನ್ನು ಸಂಪರ್ಕಿಸಬಹುದು.
ಅರ್ಹತೆ ಮತ್ತು ವಿಶೇಷ ಸೌಲಭ್ಯಗಳು:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ (10+2) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಆರೋಗ್ಯ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಸೇವಾ ಅನುಭವ ಹೊಂದಿರುವ ಎಸ್ಎಸ್ಎಲ್ಸಿ ಉತ್ತೀರ್ಣ ಅಭ್ಯರ್ಥಿಗಳಿಗೂ ವಿಶೇಷ ವಿನಾಯಿತಿ ಅಡಿಯಲ್ಲಿ ಅವಕಾಶವಿದೆ.
ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ‘ಉಪಕಾರ್’ ಕಾರ್ಯಕ್ರಮದಡಿ ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು.
ಈ ಕೋರ್ಸ್ ಸಂಪೂರ್ಣ ಉಚಿತವಾಗಿದ್ದು, ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಆರ್ಥಿಕವಾಗಿ ಹಿಂದುಳಿದ ವರ್ಗದವರು (EWS), ಮಹಿಳೆಯರು, ವಿಶೇಷಚೇತನರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಮಾಸಿಕ ರೂ. 1,500/- ಶಿಷ್ಯವೇತನ (Stipend) ನೀಡಲಾಗುವುದು. ಅಲ್ಲದೆ, ತರಬೇತಿ ಪಡೆದವರಿಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಸಂಸ್ಥೆಯಿಂದ ಸಂಪೂರ್ಣ ನೆರವು ಒದಗಿಸಲಾಗುವುದು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್ 23, 2026 ರಿಂದ ಡಿಸೆಂಬರ್ 14, 2026 ರೊಳಗೆ ಅಧಿಕೃತ ಜಾಲತಾಣ https://kar.cgcp.saissvs.org/ ಮೂಲಕ ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳಬಹುದು.
ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್, ಎಸ್ಎಸ್ಎಲ್ಸಿ ಮತ್ತು ಪಿಯುಸಿ ಅಂಕಪಟ್ಟಿಗಳು, ಬ್ಯಾಂಕ್ ಪಾಸ್ಬುಕ್ ಪ್ರತಿ ಹಾಗೂ ಜಾತಿ/ಆದಾಯ/ಅಂಗವಿಕಲ ಪ್ರಮಾಣಪತ್ರಗಳನ್ನು ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ. ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ ಅಥವಾ ಸಂಬಂಧಪಟ್ಟ ತರಬೇತಿ ಕೇಂದ್ರದ ಸಂಯೋಜಕರನ್ನು ಸಂಪರ್ಕಿಸಲು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

