ಗೋಬರ್ಧನ್ (GOBARdhan) ಯೋಜನೆ ಹಾಗೂ ಮಾದರಿ ರಾಜ್ಯ ನೀತಿ ಕುರಿತ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಘೋಷಣೆ; ಬೆಂಗಳೂರಿನಲ್ಲಿ ಗೇಲ್ (GAIL) ವತಿಯಿಂದ ಸ್ಥಾಪನೆಯಾಗುತ್ತಿರುವ 300 ಟಿಪಿಡಿ (TPD) ಸಾಮರ್ಥ್ಯದ ಘಟಕದಿಂದ ನಗರದ 25,000 ಮನೆಗಳಿಗೆ ಶುದ್ಧ ಇಂಧನ ಪೂರೈಕೆ
ಬೆಂಗಳೂರು: ರಾಜ್ಯದಲ್ಲಿ ಎದುರಾಗುತ್ತಿರುವ ಸಂಕುಚಿತ ಜೈವಿಕ ಅನಿಲ (Compressed Biogas – CBG) ಯೋಜನೆಗಳ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಶುದ್ಧ ಇಂಧನ ವಲಯಕ್ಕೆ ಉತ್ತೇಜನ ನೀಡಲು ರಾಜ್ಯ ಸರ್ಕಾರವು ಶೀಘ್ರದಲ್ಲೇ ನೂತನ ‘ರಾಜ್ಯ ಜೈವಿಕ ಇಂಧನ ನೀತಿ’ (State Policy for Bio-energy)ಯನ್ನು ಜಾರಿಗೆ ತರಲು ಯೋಜಿಸುತ್ತಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಭಾ.ಆ.ಸೇ., ಅವರು ತಿಳಿಸಿದರು.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (MoPNG), ಕರ್ನಾಟಕ ಸರ್ಕಾರ ಹಾಗೂ ಗೇಲ್ (ಇಂಡಿಯಾ) ಲಿಮಿಟೆಡ್ (GAIL) ಸಹಯೋಗದಲ್ಲಿ ಇಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ಗೋಬರ್ಧನ್ ಯೋಜನೆ, ಮಾದರಿ ರಾಜ್ಯ ಸಿಬಿಜಿ ನೀತಿ ಮತ್ತು SASCI 2026-27’ ಕುರಿತ “ತ್ಯಾಜ್ಯದಿಂದ ಸಂಪತ್ತು: ಗೋಬರ್ಧನ್ ವಿಸ್ತರಣೆ” (Waste to Wealth: Scaling GOBARdhan) ಎಂಬ ವಿಷಯದಡಿ ನಡೆದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂಬರುವ ನೂತನ ಜೈವಿಕ ಇಂಧನ ನೀತಿಯು ಸಿಬಿಜಿ (CBG) ವಲಯವನ್ನೂ ಒಳಗೊಂಡಿರಲಿದ್ದು, ಕೇಂದ್ರ ಸರ್ಕಾರದ ಮಾದರಿ ಸಿಬಿಜಿ ನೀತಿಗೆ ಪೂರಕವಾಗಿರಲಿದೆ ಎಂದು ತಿಳಿಸಿದರು.
ಸುಸ್ಥಿರ ತ್ಯಾಜ್ಯ ನಿರ್ವಹಣೆ ಮತ್ತು ಶುದ್ಧ ಇಂಧನ ಪರಿಹಾರಗಳನ್ನು ಉತ್ತೇಜಿಸಲು ವಿವಿಧ ಇಲಾಖೆಗಳ ನಡುವಿನ ಸಮನ್ವಯ, ರಾಜ್ಯ ಸಂಸ್ಥೆಗಳ ಪಾತ್ರ ಹಾಗೂ ಪಾಲುದಾರರ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಗೇಲ್ (GAIL) ಸಂಸ್ಥೆಯ ಬೃಹತ್ ಯೋಜನೆಗಳು ಹಾಗೂ ಕೊಡುಗೆ:
ರಾಜ್ಯದಲ್ಲಿ ಜೈವಿಕ ಇಂಧನ ವಲಯದ ಬಲವರ್ಧನೆಗೆ ಗೇಲ್ ಸಂಸ್ಥೆಯು ಮಹತ್ವದ ಹೆಜ್ಜೆ ಇಟ್ಟಿದೆ. ಕಳೆದ ನವೆಂಬರ್ 13, 2026 ರಂದು ಸನ್ಮಾನ್ಯ ಪ್ರಧಾನಮಂತ್ರಿಗಳು ಬೆಂಗಳೂರಿನ ಹರಳಕುಂಟೆಯಲ್ಲಿ ಗೇಲ್ ಸಂಸ್ಥೆಯ 300 ಟಿಪಿಡಿ (TPD) ಸಾಮರ್ಥ್ಯದ ನಗರ ಘನತ್ಯಾಜ್ಯ ಆಧಾರಿತ ಸಿಬಿಜಿ ಘಟಕಕ್ಕೆ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದರು.
ಈ ಘಟಕವು ಪ್ರತಿದಿನ 300 ಟನ್ಗಳಷ್ಟು ಬೇರ್ಪಡಿಸಿದ ಸಾವಯವ ನಗರ ತ್ಯಾಜ್ಯವನ್ನು ಸಂಸ್ಕರಿಸಿ, ಸುಮಾರು 12.6 ಟನ್ ಸಂಕುಚಿತ ಜೈವಿಕ ಅನಿಲ (CBG) ಮತ್ತು 21.6 ಟನ್ ಹುದುಗಿಸಿದ ಸಾವಯವ ಗೊಬ್ಬರವನ್ನು (FOM) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಇಲ್ಲಿ ಉತ್ಪಾದನೆಯಾಗುವ ಅನಿಲವನ್ನು ‘ಗೇಲ್ ಗ್ಯಾಸ್ ಲಿಮಿಟೆಡ್’ ಮೂಲಕ ಬೆಂಗಳೂರು ನಗರದ ಸುಮಾರು 25,000 ಮನೆಗಳಿಗೆ ಪೂರೈಸಲಾಗುವುದು.
ಇದಲ್ಲದೆ, ಗೇಲ್ ಸಂಸ್ಥೆಯು ದೇಶಾದ್ಯಂತ ಕನಿಷ್ಠ 26 ಸಿಬಿಜಿ ಘಟಕಗಳನ್ನು ಸ್ಥಾಪಿಸಲು ಯೋಜಿಸಿದ್ದು, ಈ ಪೈಕಿ ಕರ್ನಾಟಕದ 15 ಸ್ಥಳಗಳಲ್ಲಿ ವಿವಿಧ ಕಚ್ಚಾ ವಸ್ತುಗಳ (Feedstock) ಆಧಾರದ ಮೇಲೆ ಸಿಬಿಜಿ ಘಟಕಗಳನ್ನು ಸ್ಥಾಪಿಸಲು ಮುಂದಾಗಿದೆ ಎಂದು ತಿಳಿಸಿದರು.
ಕೇಂದ್ರದ ಸಹಕಾರ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ನಿರ್ದೇಶಕ ಶ್ರೀ ವಿಕಾಸ್ ಸಿಂಗ್ ಅವರು ಮಾತನಾಡಿ, ಇಂಧನ ಭದ್ರತೆಯನ್ನು ಬಲಪಡಿಸಲು, ಆಮದು ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಹಾಗೂ ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಗೆ ಸಿಬಿಜಿ ಅತ್ಯಂತ ಪೂರಕವಾಗಿದೆ. ಗೋಬರ್ಧನ್ ಮತ್ತು SASCI 2026-27 ಯೋಜನೆಗಳ ಯಶಸ್ಸಿಗೆ ರಾಜ್ಯ ಸರ್ಕಾರಗಳ ಸಕ್ರಿಯ ಸಹಕಾರ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.
ಕರ್ನಾಟಕದ ಕರಡು ರಾಜ್ಯ ಸಿಬಿಜಿ ನೀತಿಯ ಕುರಿತ ವಿಶೇಷ ಗೋಷ್ಠಿಯಲ್ಲಿ ಕಚ್ಚಾ ವಸ್ತುಗಳ ಸಂಗ್ರಹಣೆ, ಶಾಸನಬದ್ಧ ಅನುಮತಿಗಳು, ಹಣಕಾಸು ನೆರವು ಮತ್ತು ಮಾರುಕಟ್ಟೆ ಅಭಿವೃದ್ಧಿಗೆ ಸಂಬಂಧಿಸಿದ ಸವಾಲುಗಳ ಬಗ್ಗೆ ಉದ್ಯಮದ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಚರ್ಚಿಸಿದರು.
ಇಂಡಿಯಾ ಎನರ್ಜಿ ವೀಕ್ 2027:
ಮುಂಬರುವ ‘ಇಂಡಿಯಾ ಎನರ್ಜಿ ವೀಕ್ 2027’ (India Energy Week 2027) ಜಾಗತಿಕ ವೇದಿಕೆಯು ಇಂಧನ ವಲಯದಲ್ಲಿ ಹೂಡಿಕೆ, ನಾವೀನ್ಯತೆ ಮತ್ತು ತಂತ್ರಜ್ಞಾನ ವಿನಿಮಯಕ್ಕೆ ನೀಡಲಿರುವ ಅವಕಾಶಗಳ ಕುರಿತು ಪ್ರತ್ಯೇಕ ಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು.
ರಾಜ್ಯದಲ್ಲಿರುವ ವಿಪುಲ ಜೈವಿಕ ದ್ರವ್ಯರಾಶಿ (Biomass), ಸಕ್ಕರೆ ಕಾರ್ಖಾನೆಗಳ ಪ್ರೆಸ್ ಮಡ್ (Press mud) ಮತ್ತು ಸಾವಯವ ತ್ಯಾಜ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಕರ್ನಾಟಕವನ್ನು ಜೈವಿಕ ಇಂಧನ ಅಭಿವೃದ್ಧಿಯ ಪ್ರಮುಖ ಕೇಂದ್ರವನ್ನಾಗಿ ರೂಪಿಸಲು ಕಾರ್ಯಾಗಾರದಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
ಕಾರ್ಯಾಗಾರದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಶ್ರೀ ಮಹೇಶ್ವರ್ ರಾವ್ (ಭಾ.ಆ.ಸೇ.), ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ (ಭಾ.ಆ.ಸೇ.), ಗೇಲ್ ಸಂಸ್ಥೆಯ ನಿರ್ದೇಶಕ (ಯೋಜನೆಗಳು) ಶ್ರೀ ಮನೋಜ್ ಕುಮಾರ್ ಶರ್ಮಾ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳು, ತೈಲ ಮತ್ತು ಅನಿಲ ಮಾರುಕಟ್ಟೆ ಕಂಪನಿಗಳು (OMCs), ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (CGD) ಸಂಸ್ಥೆಗಳು, ಹಣಕಾಸು ಸಂಸ್ಥೆಗಳ ಹಿರಿಯ ಅಧಿಕಾರಿಗಳು ಹಾಗೂ ಜೈವಿಕ ಇಂಧನ ವಲಯದ ಪಾಲುದಾರರು ಭಾಗವಹಿಸಿದ್ದರು.

