ಬೆಂಗಳೂರು: ರಾಜ್ಯಕ್ಕೆ ಇಂದು ಭೇಟಿ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಅವರನ್ನು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅತ್ಯಂತ ಗೌರವಪೂರ್ವಕವಾಗಿ ಸ್ವಾಗತಿಸಿದರು. ಗೌರವಾನ್ವಿತ ರಾಜ್ಯಪಾಲರಾದ ಶ್ರೀಮತಿ ಡಾ.ಸುಧಾ ಯಾದವ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಸೋಮಣ್ಣ, ಕು.ಶೋಭಾ ಕರಂದ್ಲಾಜೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪ್ರಮುಖರು ಉಪಸ್ಥಿತರಿದ್ದರು.
ಬೆಂಗಳೂರು: ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ (PM Modi) ಯವರ ಇಂದಿನ (Bengaluru) ಬೆಂಗಳೂರು ಭೇಟಿಯ ಸಂದರ್ಭದಲ್ಲಿ ಎಲ್ಲೆಡೆ ರಸ್ತೆಯುದ್ದಕ್ಕೂ ಅವರಿಗೆ ಮೋದಿ, ಮೋದಿ (Modi, Modi) ಎಂದು ಘೋಷಣೆ ಕೂಗುವ ಮೂಲಕ ಅಭಿಮಾನಿಗಳು ಮತ್ತು ಕಾರ್ಯಕರ್ತರು ಆತ್ಮೀಯ ಸ್ವಾಗತ ಕೋರಿದರು.
ರಸ್ತೆಯ ಎರಡೂ ಭಾಗದಲ್ಲಿ ‘ಮೋದಿ ಕಹಿ ನಹೀ ಜಾಯೇಗಾ’ ‘ಕರ್ನಾಟಕ ವೆಲ್ಕಮ್ಸ್ ಪಿಎಂ ಮೋದಿ’ ಫಲಕಗಳನ್ನು ಹಿಡಿದು ನಿಂತಿದ್ದ ಜನರು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿದರು. ಅಭಿಮಾನಿಗಳು ಪುಷ್ಪವೃಷ್ಟಿ ಮಾಡಿ ಮೋದಿ ಮೋದಿ ಕೂಗುವ ಮೂಲಕ ಸ್ವಾಗತಿಸಿದ್ದು ಕಾಣಿಸಿತು.

ಇನ್ನೂ ಕೆಲವೆಡೆ ‘ಮೋದಿ ಹೈ ತೋ ಮುಮ್ಕಿನ್ ಹೈ’ ‘ಮೋದಿ ಇದ್ದರೆ ಎಲ್ಲವೂ ಸಾಧ್ಯ’ ಎಂಬ ಫಲಕಗಳ ಜೊತೆ ಜನರು ಅಭಿಮಾನಪೂರ್ವಕವಾಗಿ ಭಾಗವಹಿಸಿದ್ದರು. ರಸ್ತೆಯ ಎರಡೂ ಬದಿಗಳಲ್ಲಿ ಕಾದು ನಿಂತಿದ್ದ ಸಾವಿರಾರು ಜನರು ಅತ್ಯಂತ ಪ್ರೀತಿಯಿಂದ ಪ್ರಧಾನಿಯವರಿಗೆ ಜೈಕಾರ ಕೂಗಿದರು.

ಬೆಳಿಗ್ಗೆ ಪ್ರಶಾಂತಿ ಕುಟೀರದಲ್ಲಿ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿದ್ದ ಮೋದಿಜೀ ಅವರು, ಕರ್ನಾಟಕವು ಯೋಗಕ್ಕೆ ಸಂಬಂಧಿಸಿದ ಅನೇಕ ಗುರುಗಳು ಮತ್ತು ಶ್ರೇಷ್ಠ ವಿದ್ವಾಂಸರು ಜನಿಸಿದ ನೆಲವಾಗಿದೆ ಎಂದು ಬಣ್ಣಿಸಿದರು. ಮೇರುನಟ ಡಾ. ರಾಜ್ಕುಮಾರ್ ಅವರು ಯೋಗಾಭ್ಯಾಸ ಮಾಡುತ್ತಿದ್ದುದನ್ನು ಸ್ಮರಿಸಿದರು. ಭಾರತದ ಪ್ರಯತ್ನದ ಫಲವಾಗಿ ಇಂದು ಯೋಗವು ವಿಶ್ವದಾದ್ಯಂತ ಜನಪ್ರಿಯವಾಗಿದೆ ಎಂದು ತಿಳಿಸಿದರು.
ಇದೇವೇಳೆ ಪ್ರಧಾನಿಯವರು ಎಚ್.ವಿ.ಶೇಷಾದ್ರಿ ಅವರ ಜನ್ಮ ಶತಮಾನೋತ್ಸವ ಸಂಭ್ರಮದಲ್ಲಿ ಗೌರವ ನಮನಗಳನ್ನು ಸಲ್ಲಿಸಿದರು. ಆರೆಸ್ಸೆಸ್ನಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಮಾನ್ಯ ಶೇಷಾದ್ರಿಯವರು ಅನುಸರಿಸಿದ ಧ್ಯೇಯೋದ್ದೇಶಗಳು ಇಂದಿಗೂ ಕೋಟ್ಯಂತರ ಸ್ವಯಂಸೇವಕರಿಗೆ ಪ್ರೇರಣೆ ಕೊಡುತ್ತಿವೆ ಎಂದು ತಿಳಿಸಿದರು.
ಪ್ರಶಾಂತಿ ಕುಟೀರದ ಸಮಾರಂಭದಲ್ಲಿ ಪ್ರಧಾನಿಯವರನ್ನು ಮೈಸೂರು ಪೇಟ ತೊಡಿಸಿ, ರೇಷ್ಮೆ ಶಾಲು ಹೊದಿಸಿ ಗೌರವಿಸಲಾಯಿತು. ವಿವೇಕಾನಂದರ ಪ್ರತಿಮೆಯನ್ನು ಸ್ಮರಣಿಕೆಯಾಗಿ ಕೊಡಲಾಯಿತು.
ಬಳಿಕ ನಮ್ಮ ಮೆಟ್ರೊದ ಗುಲಾಬಿ ಮಾರ್ಗವನ್ನು ಮೋದಿಜೀ ಅವರು ಉದ್ಘಾಟಿಸಿದರು. ನಂತರ ರಾಜ್ಯಪಾಲರಾದ ಸುಧಾ ಯಾದವ್, ಮುಖ್ಯಮಂತ್ರಿ ಶಿವಕುಮಾರ್, ಸಚಿವ ಕೃಷ್ಣಬೈರೇಗೌಡ, ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ಮೆಟ್ರೊದಲ್ಲಿ ಪ್ರಯಾಣ ಮಾಡಿದರು.

