ಬೆಂಗಳೂರು: ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯು(Finance Department, Government of Karnataka) 8 ವರ್ಷಗಳ ಅವಧಿಯ ಒಟ್ಟು ರೂ.2,000 ಕೋಟಿ ಮೌಲ್ಯದ ಸರ್ಕಾರಿ ಭದ್ರತಾ ಪತ್ರಗಳ (Bonds) ಮಾರಾಟಕ್ಕೆ ಚಂದಾದಾರಿಕೆಯನ್ನು ಆಹ್ವಾನಿಸಿದೆ.
ಈ ಭದ್ರತಾ ಪತ್ರಗಳ ಹಂಚಿಕೆಯು ಮುಂಬೈನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಪಿಡಿಒ) ಮುಖಾಂತರ ಹರಾಜು ಮೂಲಕ ನಡೆಯಲಿದ್ದು, ನವೆಂಬರ್ 17, 2026 ರಂದು ಹರಾಜು ಪ್ರಕ್ರಿಯೆ ಜರುಗಲಿದೆ.
ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ವತಿಯಿಂದ ‘ಸ್ಪರ್ಧಾತ್ಮಕವಲ್ಲದ ಹರಾಜು ಸೌಲಭ್ಯ’ವನ್ನು (Non-competitive bidding facility) ಪರಿಚಯಿಸಲಾಗಿದೆ. ಈ ಯೋಜನೆಯಡಿ ಮಾರಾಟಕ್ಕೆ ಅಧಿಸೂಚಿಸಲಾದ ಒಟ್ಟು ಮೊತ್ತದ ಗರಿಷ್ಠ ಶೇ. 10 ರವರೆಗಿನ ಸರ್ಕಾರಿ ಭದ್ರತಾ ಪತ್ರಗಳನ್ನು ಅರ್ಹ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗುವುದು.
ಆಸಕ್ತರು ಅಧಿಸೂಚನೆಯ ಪ್ರತಿಗಳು ಹಾಗೂ ಅರ್ಜಿ ನಮೂನೆಗಳನ್ನು ಬೆಂಗಳೂರಿನ ರಿಸರ್ವ್ ಬ್ಯಾಂಕ್ (ಪಿಡಿಒ) ಕಛೇರಿಯಿಂದ ಪಡೆಯಬಹುದಾಗಿದೆ.
ಮಾದರಿ ಟೆಂಡರ್ ನಮೂನೆಗಳು ಮತ್ತು ಸ್ಪರ್ಧಾತ್ಮಕವಲ್ಲದ ಹರಾಜು ಸೌಲಭ್ಯದ ಪರಿಷ್ಕೃತ ಯೋಜನೆಯ ಸಂಪೂರ್ಣ ವಿವರಗಳು ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಕೃತ ಜಾಲತಾಣವಾದ www.rbi.org.in ನಲ್ಲಿ ಲಭ್ಯವಿದೆ ಎಂದು ಆರ್ಥಿಕ ಇಲಾಖೆಯ (ಆಯವ್ಯಯ ಮತ್ತು ಸಂಪನ್ಮೂಲ) ಸರ್ಕಾರದ ಕಾರ್ಯದರ್ಶಿ ಡಾ. ಎಂ.ಟಿ. ರೇಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

