ಬೆಂಗಳೂರು: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ಪಾಸ್ ಸೌಲಭ್ಯ ಕಲ್ಪಿಸಿರುವ ಹಿನ್ನೆಲೆಯಲ್ಲಿ, ಬಸ್ಪಾಸ್ ಪಡೆಯಲು ಇರುವ ನಿಯಮಗಳನ್ನು ಮತ್ತಷ್ಟು ಸರಳೀಕರಣಗೊಳಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಸರ್ಕಾರವನ್ನು ಆಗ್ರಹಿಸಿದೆ.
ಗ್ರಾಮೀಣ ಪತ್ರಕರ್ತರು ತಮ್ಮ ವೃತ್ತಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವ ಉದ್ದೇಶದಿಂದ ಉಚಿತ ಬಸ್ಪಾಸ್ ಸೌಲಭ್ಯ ಕಲ್ಪಿಸಿರುವುದು ಸ್ವಾಗತಾರ್ಹ. ಆದರೆ ಪ್ರಸ್ತುತ ಇರುವ ಕೆಲವು ನಿಯಮಗಳು ಬಸ್ಪಾಸ್ಗೆ ಅರ್ಜಿ ಸಲ್ಲಿಸಲು ಹಾಗೂ ಸೌಲಭ್ಯ ಪಡೆಯಲು ತೊಡಕಾಗಿವೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ
ಮನವಿಯಲ್ಲಿ ತಿಳಿಸಿದ್ದಾರೆ.
ವಿಶೇಷವಾಗಿ ಜಿಲ್ಲಾ ಮಟ್ಟದಲ್ಲಿ ಪ್ರಕಟವಾಗುವ ಪತ್ರಿಕೆಗಳು ಹಾಗೂ ಪ್ರಾದೇಶಿಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ತಾಲೂಕು ಮತ್ತು ಹೋಬಳಿ ಮಟ್ಟದ ವರದಿಗಾರರಿಗೆ ಬಸ್ಪಾಸ್ ಸೌಲಭ್ಯ ದೊರೆಯುವಂತೆ ನಿಯಮಗಳನ್ನು ಸರಳೀಕರಿಸಬೇಕು ಎಂದು ಕೆಯುಡಬ್ಲ್ಯುಜೆ ಒತ್ತಾಯಿಸಿದೆ.
ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಅರ್ಹ ಪತ್ರಕರ್ತರಿಗೆ ಯಾವುದೇ ಅನಗತ್ಯ ನಿಯಮಗಳಿಂದ ಸೌಲಭ್ಯ ವಂಚಿತವಾಗದಂತೆ, ಬಸ್ಪಾಸ್ ನಿಯಮಾವಳಿಗಳನ್ನು ಮರುಪರಿಶೀಲಿಸಿ ಅಗತ್ಯ ತಿದ್ದುಪಡಿ ಮಾಡುವಂತೆ ಸಂಘ ಮನವಿ ಮಾಡಿದೆ.
ಗ್ರಾಮೀಣ ಪತ್ರಕರ್ತರ ಹಿತದೃಷ್ಟಿಯಿಂದ ಮನವಿಯನ್ನು ಆದ್ಯತೆಯಿಂದ ಪರಿಗಣಿಸಿ, ನಿಯಮಗಳ ಸರಳೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮನವಿ ಮಾಡಿದ್ದಾರೆ.
