ಬೆಂಗಳೂರು: ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆಯು(The Excise Department) 2026-27ರ ಹಣಕಾಸು ವರ್ಷದ ಮೊದಲ ಅರ್ಧವಾರ್ಷಿಕ ಅವಧಿಯ (ಏಪ್ರಿಲ್ ನಿಂದ ಸೆಪ್ಟೆಂಬರ್ 2026) ಮದ್ಯ ಮಾರಾಟ ಹಾಗೂ ರಾಜಸ್ವ ಸಂಗ್ರಹದ ವರದಿಯನ್ನು ಬಿಡುಗಡೆ ಮಾಡಿದೆ.
ಕಳೆದ ವರ್ಷದ (2025) ಇದೇ ಅವಧಿಗೆ ಹೋಲಿಸಿದರೆ ರಾಜ್ಯದ ಅಬಕಾರಿ ರಾಜಸ್ವ ಸಂಗ್ರಹ ಮತ್ತು ಬೀರ್ ಮಾರಾಟದಲ್ಲಿ ಗಣನೀಯ ಪ್ರಗತಿ ಕಂಡುಬಂದಿದೆ.
ರಾಜಸ್ವ ಸಂಗ್ರಹದಲ್ಲಿ ಭಾರಿ ಏರಿಕೆ:
2026ರ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗಿನ ಅರ್ಧವಾರ್ಷಿಕ ಅವಧಿಯಲ್ಲಿ ರಾಜ್ಯಾದ್ಯಂತ ಒಟ್ಟು ರೂ. 22,191.63 ಕೋಟಿ ಅಬಕಾರಿ ರಾಜಸ್ವ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಗ್ರಹವಾಗಿದ್ದ ರೂ.19,570.23 ಕೋಟಿಗೆ ಹೋಲಿಸಿದರೆ ಇದು ರೂ. 2,621.40 ಕೋಟಿಯಷ್ಟು (ಶೇ.13.39) ಹೆಚ್ಚಳವಾಗಿದೆ.
ಬೀರ್ ಮಾರಾಟದಲ್ಲಿ ದಾಖಲೆ ಪ್ರಗತಿ:
ಈ ಅರ್ಧವಾರ್ಷಿಕ ಅವಧಿಯಲ್ಲಿ ಬೀರ್ ಮಾರಾಟದಲ್ಲಿ ಶೇ. 41.32 ರಷ್ಟು ಬೃಹತ್ ಏರಿಕೆ ಕಂಡುಬಂದಿದೆ. 2025ರಲ್ಲಿ 195.27 ಲಕ್ಷ ಕೇಸ್ ಬಾಕ್ಸ್ಗಳಿದ್ದ ಬೀರ್ ಮಾರಾಟವು, 2026ರಲ್ಲಿ 275.96 ಲಕ್ಷ ಕೇಸ್ ಬಾಕ್ಸ್ಗಳಿಗೆ ಏರಿಕೆಯಾಗಿದೆ. ವಿಶೇಷವಾಗಿ ದ್ವಿತೀಯ ತ್ರೈಮಾಸಿಕದಲ್ಲಿ (ಜುಲೈನಿಂದ ಸೆಪ್ಟೆಂಬರ್) ಬೀರ್ ಮಾರಾಟವು ಶೇ. 49.69 ರಷ್ಟು ಹೆಚ್ಚಳ ಕಂಡುಬಂದಿದೆ. ಇದರಿಂದಾಗಿ ಬೀರ್ ಮಾರಾಟದಿಂದ ಬರುವ ರಾಜಸ್ವವು ಶೇ. 19.08 ರಷ್ಟು ಹೆಚ್ಚಾಗಿ ಒಟ್ಟು ರೂ. 3,377.88 ಕೋಟಿಗೆ ತಲುಪಿದೆ.
ಐ.ಎಂ.ಎಲ್ ಮಾರಾಟ ಮತ್ತು ರಾಜಸ್ವ:
ಭಾರತೀಯ ತಯಾರಿತ ಮದ್ಯದ (IML) ಮಾರಾಟ ಪ್ರಮಾಣದಲ್ಲಿ ಶೇ. 1.14 ರಷ್ಟು ಸಣ್ಣ ಪ್ರಮಾಣದ ಏರಿಕೆ ಕಂಡುಬಂದಿದ್ದು, ಒಟ್ಟು 346.83 ಲಕ್ಷ ಕೇಸ್ ಬಾಕ್ಸ್ಗಳು ಮಾರಾಟವಾಗಿವೆ. ಆದರೆ ಐ.ಎಂ.ಎಲ್ ನಿಂದ ಬಂದ ರಾಜಸ್ವ ಸಂಗ್ರಹವು ಶೇ. 13.32 ರಷ್ಟು ಪ್ರಗತಿ ಸಾಧಿಸಿದ್ದು, ಒಟ್ಟು ರೂ. 17,424.57 ಕೋಟಿ ರಾಜಸ್ವ ಹರಿದುಬಂದಿದ್ದು, ಕಳೆದ ವರ್ಷ ₹15,376.22 ಕೋಟಿ ಸಂಗ್ರಹವಾಗಿತ್ತು.
ತ್ರೈಮಾಸಿಕವಾರು ವಿವರ:
ಮೊದಲ ತ್ರೈಮಾಸಿಕ (ಏಪ್ರಿಲ್ – ಜೂನ್ 2026): ಒಟ್ಟು ರೂ. 10,595.75 ಕೋಟಿ ರಾಜಸ್ವ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕಿಂತ ಶೇ. 14.35 ರಷ್ಟು ಏರಿಕೆ ದಾಖಲಾಗಿದೆ.
ಎರಡನೇ ತ್ರೈಮಾಸಿಕ (ಜುಲೈ – ಸೆಪ್ಟೆಂಬರ್ 2026): ಒಟ್ಟು ರೂ. 11,595.88 ಕೋಟಿ ರಾಜಸ್ವ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕಿಂತ ಶೇ. 12.54 ರಷ್ಟು ಪ್ರಗತಿ ಕಂಡುಬಂದಿದೆ.
ಇತರ ಮೂಲಗಳಿಂದ (ಲೈಸೆನ್ಸ್ ಶುಲ್ಕ, ದಂಡ ಇತ್ಯಾದಿ) ಅರ್ಧವಾರ್ಷಿಕ ಅವಧಿಯಲ್ಲಿ ಒಟ್ಟು ರೂ. 1,389.18 ಕೋಟಿ ರಾಜಸ್ವ ಸಂಗ್ರಹವಾಗಿದೆ ಎಂದು ಅಬಕಾರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಮುಟ್ಟಿನ ರಜೆ ‘ಕರ್ತವ್ಯ’ ಆ್ಯಪ್ ಮೂಲಕ ಸ್ವಯಂಚಾಲಿತವಾಗಿ ಮಂಜೂರು

