ಇದೇ ಅಕ್ಟೋಬರ್ 3 ರಂದು ನಾಡಿನ ಹಿರಿಯ ಕಲಾವಿದರಾದ ಬಾಬು ಜತ್ತಕರ್ ಅವರು ಉದ್ಘಾಟಿಸಿದ್ದಾರೆ. ತಂತ್ರದೊಂದಿಗೆ ಏಕಾಗ್ರತೆಗೆ ಸಂಬಂಧಿಸಿದ ಕೃತಿಗಳಿಂದ ಹಿಡಿದು ಹಲವು ಆಕಾರಗಳ, ಹಲವು ಶೈಲಿಯ, ವಿಭಿನ್ನ ಕುಸುರಿಕಲೆಯ, ಯಥಾವತ್ತಾದ ನಿಸರ್ಗಚಿತ್ರಗಳ, ಕಾಲ್ಪನಿಕ ಲೋಕದೊಳಗೆ ಒಯ್ಯುವ ಹಲವು ವೈವಿದ್ಯತೆಯ ಕಲಾಕೃತಿಗಳನ್ನು ಮೆಚ್ಚಿ, ವಿಮರ್ಶಿಸಿ ಸಲಹೆ-ಸೂಚನೆಗಳನ್ನೂ ಕೊಟ್ಟಿದ್ದಾರೆ. ಅಲ್ಲದೇ ಕೆಲವು ಶೈಲಿಯ ಚಿತ್ರಗಳು ಸರಣಿ ಚಿತ್ರಗಳಿಗೂ ಸೂಕ್ತ ಎಂದಿದ್ದಾರೆ.

ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ರಿಜ್ವಾನ್ ಅರ್ಷದ್ ಅವರು ಈ ಕಲಾಪ್ರದರ್ಶನಕ್ಜೆ ಭೇಟಿ ಕೊಟ್ಟು ಕಲಾಕೃತಿಗಳನ್ನು ವೀಕ್ಷಿಸಿದರು. ನಂತರ ಅಂಜಲಿ ಅವರ ಕಲಾಕೃತಿಯನ್ನು ಕೊಂಡು ಪ್ರೋತ್ಸಾಹಿಸಿದರು.
ಶಿರಸಿ ಮೂಲದ ಭಾರತಿ ದರ್ಶನ್, ದೆಹಲಿ ವಿಶ್ವವಿದ್ಯಾಲಯದಲ್ಲಿ ಟೆಕ್ಸಟೈಲ್ ವಿನ್ಯಾಸದಲ್ಲಿ ಪದವೀಧರೆಯಾಗಿರುವ ಅಂಜಲಿ ಹರ್ಲಾಲ್ಕಾ, ವಾಣಿಜ್ಯ ಪದವೀಧರೆಯಾದ ಫರ್ಹಾನಾ ಖಾನ್ ಹೀಗೆ ಈ ಮೂವರು ಬೇರೆ ಬೇರೆ ಊರಿನವರಾದರೂ ಕಲೆಯನ್ನು ರೂಢಿಸಿಕೊಳ್ಳುವ ನಿಟ್ಟಿನಲ್ಲಿ ಒಂದಾಗಿ ಒಟ್ಟಿಗೆ ಕಲಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

ಈ ಮೂವರೂ ಕಲಾವಿದೆಯರೂ ಒಂದು ದಶಕದಿಂದ ಒಟ್ಟಾಗಿ ಕಲಿತು, ಕಲೆತು, ಚರ್ಚಿಸಿ, ಹೊಸ ವಿಧಾನಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ತಮ್ಮದೇ ವಿಭಿನ್ನ ದೃಷ್ಟಿಕೋನಗಳ, ಅನುಭವ, ಅನುಭಾವಗಳ ಕಲಾತ್ಮಕತೆಯನ್ನು ಅಭಿವ್ಯಕ್ತಿಸಿದ್ದಾರೆ. ಅವುಗಳಲ್ಲಿ ಆಯ್ದ ಕೃತಿಗಳನ್ನು ಇಲ್ಲಿ ಪ್ರದರ್ಶಿಸಿದ್ದಾರೆ. ಇದು ಪ್ರದರ್ಶನಕ್ಕಿಂತ ಹೆಚ್ಚಾಗಿ ಸ್ನೇಹ ಹಾಗೂ ಸೃಜನಶೀಲತೆಯ ಆಚರಣೆಯಾಗಿದೆ ಎನ್ನುತ್ತಾರೆ.
ಹಲವು ಅಳತೆಯ ಹಲವು ಮಾಧ್ಯಮಗಳ ಕಲಾಕೃತಿಗಳು ಆಕರ್ಷಕವಾಗಿವೆ. ನೋಡುಗರನ್ನು ಸೆಳೆಯುತ್ತಿರುವ ಈ ಕಲಾಕೃತಿಗಳು ಕಲಾಸಕ್ತರು ಕೊಳ್ಳಲು ಯೋಗ್ಯವಾಗಿವೆ ಹಾಗೂ ಗೋಡೆಗಳ ಅಂದ ಹೆಚ್ಚಿಸಬಲ್ಲ ಕೃತಿಗಳಾಗಿವೆ.
ಈ ಪ್ರದರ್ಶನವು ಸಾರ್ವಜನಿಕರ ವೀಕ್ಷಣೆಗಾಗಿ ಅಕ್ಟೋಬರ್ 7 ರವರೆಗೂ ತೆರೆದಿರುತ್ತದೆ.

