ಬೆಂಗಳೂರು: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್(Shri Thawar Chand Gehlot) ಅವರು ಬೆಂಗಳೂರಿನಲ್ಲಿ ಶ್ರೀ ಜ್ಞಾನೋದಯ ದಿಗಂಬರ ಜೈನ್ ಟೆಂಪಲ್ ಟ್ರಸ್ಟ್(Shri Gnanodaya Digambara Jain Temple Trust) ವತಿಯಿಂದ ಆಯೋಜಿಸಿದ್ದ ಚಾತುರ್ಮಾಸ ಉತ್ಸವದಲ್ಲಿ ಭಾಗವಹಿಸಿದರು.
ಚಾತುರ್ಮಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಗುರುಗಳು ಹಾಗೂ ಶ್ರೀ ಜ್ಞಾನೋದಯ ದಿಗಂಬರ ಜೈನ್ ಟೆಂಪಲ್ ಟ್ರಸ್ಟ್‌ನ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ ರಾಜ್ಯಪಾಲರು, ಇಂದಿನ ಕಾರ್ಯಕ್ರಮವು ತಮ್ಮ ಆದರ್ಶಮಯ ಜೀವನದ ಮೂಲಕ ಇಡೀ ದೇಶಕ್ಕೆ ಮಾರ್ಗದರ್ಶನ ನೀಡಿದ ಪರಮ ಪೂಜ್ಯ ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜ್ ಅವರ ಸ್ಮರಣೆ ಹಾಗೂ ಸ್ಫೂರ್ತಿಗೆ ಸಮರ್ಪಿತವಾಗಿದೆ ಎಂದು ಹೇಳಿದರು.
“ತಮ್ಮ ಜೀವನದಲ್ಲಿ ಜೈನ ಧರ್ಮದ ಸಂತರ ಹಾಗೂ ಗುರುಗಳ ಮಾರ್ಗದರ್ಶನದಿಂದಾದ ಪ್ರಭಾವವನ್ನು ಸ್ಮರಿಸಿದ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು, ಬಾಲ್ಯದಿಂದಲೇ ಜೈನ ಹಾಗೂ ಬ್ರಾಹ್ಮಣ ಸಮುದಾಯದವರೊಂದಿಗೆ ಬೆಳೆದಿರುವುದಾಗಿ ತಿಳಿಸಿದರು. ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ಭಾರತೀಯ ಜನತಾ ಪಕ್ಷದೊಂದಿಗೆ ತಮ್ಮ ಸಾರ್ವಜನಿಕ ಜೀವನವನ್ನು ಮುಂದುವರಿಸಿದ ಸಂದರ್ಭದಲ್ಲಿ ಮಧ್ಯಪ್ರದೇಶದಲ್ಲಿ ಜೈನ ಸಮಾಜದ ಹಲವು ಸಂತರು ಹಾಗೂ ಗುರುಗಳ ಸಾನ್ನಿಧ್ಯ ಮತ್ತು ಮಾರ್ಗದರ್ಶನ ದೊರೆತಿದ್ದು, ಅದು ತಮ್ಮ ಜೀವನದಲ್ಲಿ ಹಲವು ಸಕಾರಾತ್ಮಕ ಬದಲಾವಣೆಗಳನ್ನು ತಂದಿರುವುದಾಗಿ, ತಾವು ಸಸ್ಯಾಹಾರಿ ಜೀವನಶೈಲಿಯನ್ನು ಅನುಸರಿಸುತ್ತಿದ್ದು, ವ್ಯಸನಮುಕ್ತರಾಗಿರುವುದಾಗಿ” ತಿಳಿಸಿದರು.
ಜೈನ ಸಂತರ ಜೀವನವು ನಿಜವಾದ ಶ್ರೇಷ್ಠತೆ ಸ್ಥಾನಮಾನದಿಂದಲ್ಲ, ಬದಲಾಗಿ ತ್ಯಾಗ, ಶಿಸ್ತು ಮತ್ತು ಸತ್ಚಾರಿತ್ರ್ಯದಿಂದ ಮೂಡಿಬರುತ್ತದೆ ಎಂಬುದನ್ನು ತೋರಿಸುತ್ತದೆ. ಆತ್ಮಸಂಯಮ, ಅಹಿಂಸೆ, ಕರುಣೆ ಹಾಗೂ ಸಮಾಜ ಮತ್ತು ರಾಷ್ಟ್ರದ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿರುವ ಜೈನ ಸಂತರು ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ. ಜೈನ ಸಂತರ ಮಾರ್ಗದರ್ಶನವು ವ್ಯಕ್ತಿಯು ತನ್ನ ಕುಟುಂಬ, ಸಮಾಜ ಹಾಗೂ ದೇಶದ ಹಿತಕ್ಕಾಗಿ ಕಾರ್ಯನಿರ್ವಹಿಸಲು ದಾರಿದೀಪವಾಗುತ್ತದೆ. ಅವರ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ವ್ಯಕ್ತಿಯ ಆತ್ಮವಿಕಾಸದ ಜೊತೆಗೆ ಸಮಾಜದಲ್ಲಿ ಸುಧಾರಣೆ ಸಾಧ್ಯವಾಗುತ್ತದೆ ಮತ್ತು ಮುಂದಿನ ಪೀಳಿಗೆಗಳು ಸದ್ಮಾರ್ಗದಲ್ಲಿ ಸಾಗಲು ಪ್ರೇರಣೆ ದೊರೆಯುತ್ತದೆ ಎಂದು ಅವರು ಹೇಳಿದರು.
ಮುನಿ ಶ್ರೀ ವೀರ ಸಾಗರ ಮಹಾರಾಜ್ ಅವರ ಕುರಿತು ಮಾತನಾಡಿದ ರಾಜ್ಯಪಾಲರು, ಅವರು “ಉನ್ನತ ಮಟ್ಟದ ವ್ಯಾಸಂಗ ಮಾಡಿದ್ದರೂ, ಲೌಕಿಕ ಸೌಲಭ್ಯಗಳನ್ನು ತ್ಯಜಿಸಿ ವೈರಾಗ್ಯದ ಮಾರ್ಗವನ್ನು ಅಳವಡಿಸಿಕೊಂಡು ಸಮಾಜ ಹಾಗೂ ವಿಶ್ವದ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದಾರೆ. ಮಾನವೀಯತೆ, ಶಾಂತಿ, ಕರುಣೆ ಮತ್ತು ಸಾಮಾಜಿಕ ಜಾಗೃತಿಗೆ ದೈವಿಕ ಸ್ಫೂರ್ತಿ. ಅವರ ಇಡೀ ಜೀವನವು ತ್ಯಾಗ, ತಪಸ್ಸು, ಧ್ಯಾನ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಮೀಸಲಾಗಿದೆ. ಸಮಾಜಕ್ಕೆ ಆಧ್ಯಾತ್ಮಿಕ ನಿರ್ದೇಶನವನ್ನು ನೀಡುವುದರ ಜೊತೆಗೆ, ಅವರು ಶಿಕ್ಷಣ, ಸೇವೆ ಮತ್ತು ಸಂಸ್ಕೃತಿಯ ಮೂಲಕ ಬಲವಾದ ಮತ್ತು ಜಾಗೃತ ಭಾರತವನ್ನು ನಿರ್ಮಿಸುವ ಸಂದೇಶವನ್ನು ನೀಡಿದ್ದಾರೆ” ಎಂದು ಶ್ಲಾಘಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಮಾನವೀಯ ಸೇವೆಗೆ ಸದಾ ಮಹತ್ವ ನೀಡಲಾಗಿದೆ ಎಂದು ತಿಳಿಸಿದ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು, “ಪರೋಪಕಾರ ಹಾಗೂ ನಿಸ್ವಾರ್ಥ ಸೇವೆ ನಮ್ಮ ಸಂಸ್ಕೃತಿಯ ಪ್ರಮುಖ ಮೌಲ್ಯಗಳಾಗಿವೆ. ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಮಾಡುವ ಸೇವೆಯು ಭಗವಂತನಿಗೆ ಸಲ್ಲಿಸುವ ಸೇವೆಯಂತಿದೆ. ಆದ್ದರಿಂದ ಪ್ರತಿಯೊಬ್ಬರೂ ಮಾನವೀಯ ಕಾರ್ಯಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ, ತಮ್ಮ ಕೈಲಾದ ರೀತಿಯಲ್ಲಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
2014ರಿಂದ 2021ರವರೆಗೆ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸಿದ ಅವಧಿಯನ್ನು ಸ್ಮರಿಸಿದ ರಾಜ್ಯಪಾಲರು, “ಅಂಗವಿಕಲ ವ್ಯಕ್ತಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳಲು ಮತ್ತು ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಲು ಭಾರತ ಸರ್ಕಾರವು ‘ವಿಕಲಾಂಗ’ ಎಂಬ ಪದದ ಬದಲಿಗೆ ‘ದಿವ್ಯಾಂಗ’ ಎಂಬ ಪದವನ್ನು ಬಳಸಲು ಅಧಿಕೃತವಾಗಿ ಆದೇಶಿಸಲಾಯಿತು. ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ, 2016ರ ಮೂಲಕ ಅಂಗವೈಕಲ್ಯದ ವರ್ಗಗಳನ್ನು 7ರಿಂದ 21ಕ್ಕೆ ಹೆಚ್ಚಿಸಲಾಗಿದ್ದು, ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿಯನ್ನು ಶೇ.3ರಿಂದ ಶೇ.4ಕ್ಕೆ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಮೀಸಲಾತಿಯನ್ನು ಶೇ.4ರಿಂದ ಶೇ.5ಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ದಿವ್ಯಾಂಗಜನರ ಸಬಲೀಕರಣಕ್ಕಾಗಿ ಹಲವು ನವೀನ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿತ್ತು ಎಂದು ತಿಳಿಸಿದರು. ಈ ಅವಧಿಯಲ್ಲಿ ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಇಲಾಖೆಯು 10 ಗಿನ್ನೆಸ್ ವಿಶ್ವ ದಾಖಲೆಗಳನ್ನು ಸ್ಥಾಪಿಸಿರುವುದು ಗಮನಾರ್ಹ ಸಾಧನೆಯಾಗಿದೆ ಎಂದು ಹೇಳಿದರು.
“ಮಾನಸಿಕ ಆರೋಗ್ಯ ಪುನರ್ವಸತಿ ಸೇವೆಗಳನ್ನು ಉತ್ತೇಜಿಸುವುದು, ಸಂಶೋಧನೆ ಹಾಗೂ ನೀತಿ ರೂಪಿಸುವ ಉದ್ದೇಶದಿಂದ ಮಧ್ಯಪ್ರದೇಶದ ಸೀಹೋರ್‌ನಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಪುನರ್ವಸತಿ ಸಂಸ್ಥೆ ಸ್ಥಾಪಿಸಲಾಗಿದೆ ಎಂದು ರಾಜ್ಯಪಾಲರು ತಿಳಿಸಿದರು. ದಿವ್ಯಾಂಗ ಕ್ರೀಡಾಪಟುಗಳು ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡುತ್ತಿದ್ದು, ರಾಷ್ಟ್ರಕ್ಕೆ ಹೆಮ್ಮೆ ತರುತ್ತಿದ್ದಾರೆ. ಅವರ ಪ್ರತಿಭೆಯನ್ನು ಉತ್ತೇಜಿಸಲು ಹಾಗೂ ಅತ್ಯುತ್ತಮ ತರಬೇತಿ ಮತ್ತು ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ದಿವ್ಯಾಂಗ ಕ್ರೀಡಾ ಕೇಂದ್ರ ಸ್ಥಾಪಿಸಲಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುನಿ ಶ್ರೀ 108 ವೀರ ಸಾಗರ ಮಹಾರಾಜ್, ಮುನಿ ಶ್ರೀ ವಿಶಾಲ ಸಾಗರ ಮಹಾರಾಜ್, ಮುನಿ ಶ್ರೀ ಧವಳ ಸಾಗರ ಮಹಾರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಟ್ರಸ್ಟಿಗಳಾದ ಶ್ರೀ ರಾಕೇಶ್ ಬಾರ್ಯ, ಶ್ರೀ ಮುಖೇಶ್ ಭಾಜಿ ಹಾಗೂ ಶ್ರೀ ಅಶೋಕ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರದ ಬಿಜೆಪಿ ಸರ್ಕಾರದಿಂದ ಕೋಮುವಾದ ಹೆಚ್ಚಳ – ಬಿ.ಕೆ. ಹರಿಪ್ರಸಾದ್

