ಬೆಂಗಳೂರು: ವಿಧಾನಸೌಧದ(Vidhanasoudha) ಬಳಿ ಶಾಸಕರ ಭವನದ ಮುಂಭಾಗದಲ್ಲಿ ವಾಲ್ಮೀಕಿ ಪ್ರತಿಮೆ(Valmeeki Statue) ಇರುವ ಜಾಗವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ. ರಘುಮೂರ್ತಿ(T.Raghumurthy) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಲೋಕೋಪಯೋಗಿ, ಪೊಲೀಸ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಶನಿವಾರ ನಡೆದ ಸಭೆ ನಡೆಸಿದ ನಂತರ ಈ ವಿಷಯ ತಿಳಿಸಿದರು.
ಶಾಸಕರ ಭವನದ ಬಳಿ ವಾಲ್ಮೀಕಿ ಪ್ರತಿಮೆ ಇದೆ. ಈ ಎರಡು ಎಕರೆ ಜಾಗವನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಹಂಪಿಯ ಹಜಾರ ರಾಮಸ್ವಾಮಿ ದೇವಾಲಯ ಮಾದರಿ
ವಾಲ್ಮೀಕಿ, ರಾಮಾಯಣದ ಪರಿಕಲ್ಪನೆಯಡಿ ಕಲ್ಲಿನ ಕೆತ್ತನೆಯನ್ನು ಇಡೀ ಪ್ರದೇಶದಲ್ಲಿ ಅಳವಡಿಸಲಾಗುವುದು. ಇದರ ಜೊತೆಗೆ ಧ್ವನಿವರ್ಧಕ, ವಿದ್ಯುತ್ ದೀಪಾಲಂಕಾರದೊಂದಿಗೆ ಕಂಗೊಳಿಸುವಂತೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಈ ತಪೋವನವನ್ನು ಹಂಪಿಯ ಹಜಾರ ರಾಮಸ್ವಾಮಿ ದೇವಾಲಯದ ಮಾದರಿಯಲ್ಲಿ ನಿರ್ಮಾಣ ಮಾಡಲಾಗುವುದು. ವಿಶೇಷವಾಗಿ ಲ್ಯಾಂಡ್ ಸ್ಕೇಪ್ ರೂಪಿಸಲಾಗುವುದು. ಈ ಸಂಬಂಧ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ ಎಂದು ರಘುಮೂರ್ತಿ ಮಾಹಿತಿ ನೀಡಿದರು.
ಸ್ಥಳ ಪರಿಶೀಲನೆ ನಡೆಸಿದ ಸಚಿವರು
ಸಭೆಯ ನಂತರ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಒಂದು ಗಂಟೆಗೂ ಹೆಚ್ಚು ಕಾಲ ಸ್ಥಳ ಪರಿಶೀಲನೆ ನಡೆಸಿದರು. ಇಡೀ ಪ್ರದೇಶದಲ್ಲಿ ಏನೇನು ಬರಬೇಕು ಎಂಬ ಬಗ್ಗೆಯೂ ಇದೇ ಸಂದರ್ಭದಲ್ಲಿ ಚರ್ಚಿಸಲಾಯಿತು.
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಎಂ. ಕನಗವಲ್ಲಿ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ದುಡಗಂಟಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಅಶೋಕ್ ಡಿ.ಆರ್, ಹಿರಿಯ ಅಧಿಕಾರಿಗಳಾದ ಕೆ.ಆರ್. ರಾಜಕುಮಾರ್, ಎಚ್. ಷಡಕ್ಷರಯ್ಯ, ಮುಖ್ಯ ಆರ್ಕಿಟೆಕ್ಟ್ ರಾಜೇಶ್ವರಿ ಬಸೂರು, ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು, ಪೊಲೀಸ್ ಇಲಾಖೆಯ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಇತರರು ಹಾಜರಿದ್ದರು.
ಸಾರ್ವಜನಿಕರಿಗೆ ಮುಕ್ತ ಪ್ರವೇಶ ಬಗ್ಗೆ ಪರಿಶೀಲನೆ
ಶಾಸಕರ ಭವನದ ಮುಂದಿರುವ ವಾಲ್ಮೀಕಿ ಪ್ರತಿಮೆ ಇರುವ ಜಾಗಕ್ಕೆ ಇದುವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರಲಿಲ್ಲ. ಆದರೆ ಈಗ ಇದಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವ ರಘುಮೂರ್ತಿ ತಿಳಿಸಿದರು.
ಭದ್ರತೆ ದೃಷ್ಟಿಯಿಂದ ವಿಧಾಸನಭೆ ಹಾಗೂ ಪರಿಷತ್‌ನ ಸೆಕ್ರೇಟರಿಯೇಟ್ ಅನುಮತಿ ನೀಡಬೇಕು ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದರು. ಈ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡುವ ಕುರಿತು ಅತಿ ಶೀಘ್ರದಲ್ಲೇ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು. ಒಂದು ವೇಳೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದ ನಂತರ 24/7 ಭದ್ರತೆ ಒದಗಿಸುವ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

