ಸರ್ವೋಚ್ಚ ನ್ಯಾಯಾಲಯದ(Supreme Court) ನಿರ್ದೇಶನಗಳು ಹಾಗೂ ಕೇಂದ್ರ ಸರ್ಕಾರ(Central Government) ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರಗಳ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್(Kasthuri Rangan) ವರದಿ ಜಾರಿಗೆ ಏಳನೇ ಕರಡು ಅಧಿಸೂಚನೆ ಹೊರಬಿದ್ದಿದೆ. ಕೇವಲ ರಾಜಕೀಯ ವಿರೋಧ ಮಾಡುವ ಬದಲು, ಕೇರಳ ರಾಜ್ಯದ ಮಾದರಿಯಲ್ಲಿ ರಾಜ್ಯದ ಪಶ್ಚಿಮ ಘಟ್ಟಗಳ ಸ್ಥಳೀಯ ನಿವಾಸಿ ಜನರ ಆತಂಕಗಳನ್ನು ಸಂಪೂರ್ಣವಾಗಿ ನಿವಾರಿಸುವ, ನಿಜವಾದ ಪರಿಸರ ಸಂರಕ್ಷಣೆಗೆ ಪೂರಕವಾಗುವಂತಹ ಸ್ಪಷ್ಟ ಹಾಗೂ ಪ್ರಾಯೋಗಿಕ ಪರ್ಯಾಯ ಪ್ರಸ್ತಾಪಗಳನ್ನು ಸಿದ್ದಪಡಿಸಲು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸುವ ಜೊತೆಗೆ, ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಪರಿಣಾಮಕಾರಿ ಒತ್ತಡ ಹಾಕುವಂತೆ ರಾಜ್ಯ ಸರ್ಕಾರವನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ.
ಜುಲೈ 27, 2026 ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಈ ಕರಡು ಅಧಿಸೂಚನೆ ಪ್ರಕಾರ ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಕೊಡಗು, ಚಾಮರಾಜನಗರ, ಮೈಸೂರು, ಹಾಸನ ಜಿಲ್ಲೆಗಳ 39 ತಾಲ್ಲೂಕುಗಳ 1449 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶಗಳಾಗಿದ್ದು ಇಲ್ಲಿನ ರೈತರು, ಅದಿವಾಸಿಗಳು ಮುಂತಾದ ಜನರ ಜೀವನೋಪಾಯಕ್ಕೆ ಯಾವುದೇ ಧಕ್ಕೆ ಯಾಗದಂತೆ ಸೂಕ್ತ ವಿನಾಯಿತಿಯನ್ನು ಪಡೆದುಕೊಳ್ಳಲು ಸೆಪ್ಟೆಂಬರ್ 21 ರಂದು ಪ್ರಾರಂಭವಾಗುವ ವಿಶೇಷ ವಿಧಾನಸಭೆ ಅಧಿವೇಶನವನ್ನು ಸದ್ಬಳಕೆ ಮಾಡಿಕೊಳ್ಳಲು ಆಡಳಿತ ಹಾಗೂ ವಿರೋಧ ಪಕ್ಷಗಳ ಶಾಸಕರನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS ) ಒತ್ತಾಯಿಸುತ್ತದೆ.
ಕೇರಳದ ಈ ಹಿಂದಿನ ಎಲ್.ಡಿ.ಎಫ್. ಸರ್ಕಾರ ಸ್ಥಳೀಯ ಜನರ ಜೀವನೋಪಾಯ ಹಾಗೂ ಪರಿಸರ ಸಂರಕ್ಷಣೆ ಎರಡನ್ನೂ ಬಹಳ ಯಶಸ್ವಿಯಾಗಿ ಸಮತೋಲನ ಮಾಡುವಂತಹ ಸ್ಪಷ್ಟ ಹಾಗೂ ಪ್ರಾಯೋಗಿಕ ಪರ್ಯಾಯ ಪ್ರಸ್ತಾಪಗಳನ್ನು ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ಹಾಗೂ ನ್ಯಾಯಲಯಗಳಿಗೆ ಸಲ್ಲಿಸಿದ್ದರಿಂದಾಗಿ ಕಸ್ತೂರಿ ರಂಗನ್ ವರದಿ ಜಾರಿಯಿಂದ ಜನ ವಸತಿ ಪ್ರದೇಶಗಳು, ಕೃಷಿ ಭೂಮಿ, ಕೃಷಿ ಸಂಬಂಧಿತ ಇತರ ಚಟುವಟಿಕೆ ಗಳಿಗೆ ಸೂಕ್ಷ್ಮ ವಲಯದ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗುಳಿಯುವಂತಹ ವಿನಾಯಿತಿ ಪಡೆಯಲು ಯಶಸ್ವಿಯಾಗಿದೆ. ಕರ್ನಾಟಕ ಸರ್ಕಾರವು ಕೇವಲ ರಾಜಕೀಯ ಹೇಳಿಕೆಗಳಿಗೆ ಸೀಮಿತವಾಗದೇ ಪರ್ಯಾಯ ಪ್ರಸ್ತಾಪಗಳನ್ನು ಪಶ್ಚಿಮ ಘಟ್ಟದ ಜನರು ಹಾಗೂ ಜನ ಸಂಘಟನೆಗಳ ಜೊತೆ ಸಮಾಲೋಚಿಸಿ ಸಿದ್ದಪಡಿಸಬೇಕು. ಪರಿಸರಕ್ಕೆ ಮಾರಕವಾದ ಬೃಹತ್ ಕ್ವಾರಿ, ಗಣಿಗಾರಿಕೆ ಮತ್ತು ಪರಿಸರ ನಾಶಕ ಯೋಜನೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ.
ಲೋಕಭವನದಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿದ ರಾಜ್ಯಪಾಲರು
