ಬಳ್ಳಾರಿ: ರಾಜ್ಯ ಸರ್ಕಾರದ ಭ್ರಷ್ಟಾಚಾರ, ಆಡಳಿತ ವೈಫಲ್ಯ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(B.Y.Vijayendra) ಅವರ ನೇತೃತ್ವದಲ್ಲಿ ನಡೆದ ‘ಬಳ್ಳಾರಿ ಚಲೋ’(Ballary Chalo) ಪಾದಯಾತ್ರೆ ನಾಳೆ ಅಂತಿಮ ಘಟ್ಟ ತಲುಪಲಿದೆ. ಮಾಧ್ಯಮಗಳ ಸಹಕಾರ, ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಬೆಂಬಲದಿಂದ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ವಿಜಯೇಂದ್ರ ಹೇಳಿದರು.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಸುಮಾರು 9 ಕಿಲೋಮೀಟರ್ ಪಾದಯಾತ್ರೆ ನಡೆಸಿ ವಾಲ್ಮೀಕಿ ವೃತ್ತ ತಲುಪಲಿದ್ದೇವೆ. ನಾಳೆ ಬೆಳಗ್ಗೆ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ, ಮಧ್ಯಾಹ್ನ ವಾಲ್ಮೀಕಿ ವೃತ್ತದಿಂದ ಸಮಾವೇಶದ ಸ್ಥಳದತ್ತ ಪಾದಯಾತ್ರೆ ಮುಂದುವರಿಯಲಿದೆ. ಸಂಜೆ 4.30ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ ಎಂದು ತಿಳಿಸಿದರು.
ನಾಳಿನ ಬೃಹತ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
‘10 ದಿನಗಳ ಪಾದಯಾತ್ರೆ ನಾಳೆಗೆ ಮುಕ್ತಾಯವಾಗಲಿದೆ. ಆದರೆ ಇದು ನಮ್ಮ ಹೋರಾಟದ ಅಂತ್ಯವಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧದ ಮೊದಲ ಹಂತದ ಹೋರಾಟ ಮಾತ್ರ ನಾಳೆಗೆ ಮುಕ್ತಾಯವಾಗಲಿದೆ. ಜನಪರ ಹೋರಾಟ ನಿರಂತರವಾಗಿ ಮುಂದುವರಿಯಲಿದೆ’ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ಈ ಪಾದಯಾತ್ರೆ ನಾಡಿನ ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿಗಳನ್ನೇ ಮುಂದಿಟ್ಟುಕೊಂಡು ಹೋಗುತ್ತಿರುವ ಸರ್ಕಾರದಿಂದ ಅಭಿವೃದ್ಧಿ ಶೂನ್ಯವಾಗಿದೆ. ಸರ್ಕಾರ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ. ಜನವಿರೋಧಿ ಸರ್ಕಾರವನ್ನು ಅತಿ ಶೀಘ್ರದಲ್ಲಿ ತೊಲಗಿಸಿ, ಬಡವರು, ರೈತರು, ಮಹಿಳೆಯರು, ದೀನದಲಿತರು ಹಾಗೂ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವ ಸರ್ಕಾರವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಭಾವನೆ ಜನರಲ್ಲಿ ಮೂಡಿದೆ ಎಂದು ಅವರು ಹೇಳಿದರು.
‘ಈ ಪಾದಯಾತ್ರೆ ನನ್ನ ರಾಜಕೀಯ ಜೀವನದ ಮಹತ್ತರ ತಿರುವು. ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಹೋರಾಟ ಇದು. ಮಹಿಳೆಯರು, ಅಲೆಮಾರಿ ಸಮುದಾಯದವರು, ರೈತರು ಹಾಗೂ ಯುವಕರೊಂದಿಗೆ ಸಂವಾದ ನಡೆಸಿದ್ದೇನೆ. ಅವರ ಬದುಕು, ನೋವು-ನಲಿವುಗಳನ್ನು ಹತ್ತಿರದಿಂದ ಅರಿಯಲು ಸಾಧ್ಯವಾಗಿದ್ದು ನನಗೆ ಆತ್ಮತೃಪ್ತಿ ತಂದಿದೆ. ನನ್ನ ರಾಜಕೀಯ ಜೀವನಕ್ಕೆ ಭದ್ರ ಬುನಾದಿ ಹಾಕಿದ ಹೋರಾಟ ಇದಾಗಿದೆ’ ಎಂದು ವಿಜಯೇಂದ್ರ ಭಾವುಕರಾಗಿ ಹೇಳಿದರು.

